ಶ್ರೀನಾಥ್‌ ಇಚ್ಛೆಗೇ ಮಣಿದ ವರಿಷ್ಠರು

7
ಜೆಡಿಎಸ್‌; ಗಂಗಾವತಿ, ಕೊಪ್ಪಳ ಕ್ಷೇತ್ರದ ಅಭ್ಯರ್ಥಿಗಳು ಪ್ರಕಟ

ಶ್ರೀನಾಥ್‌ ಇಚ್ಛೆಗೇ ಮಣಿದ ವರಿಷ್ಠರು

Published:
Updated:

ಕೊಪ್ಪಳ: ಜೆಡಿಎಸ್‌ನ ಎರಡನೇ ಪಟ್ಟಿಯಲ್ಲಿ ಗಂಗಾವತಿ ಮತ್ತು ಕೊಪ್ಪಳದ ಅಭ್ಯರ್ಥಿಗಳನ್ನು ಶುಕ್ರವಾರ ಘೋಷಣೆ ಮಾಡಲಾಗಿದ್ದು ನಿರೀಕ್ಷೆಯಂತೆ ಗಂಗಾವತಿಯಿಂದ ಕರಿಯಣ್ಣ ಸಂಗಟಿ ಮತ್ತು ಕೊಪ್ಪಳದಿಂದ ಕೆ.ಎಂ. ಸೈಯದ್‌ ಅವರ ಹೆಸರು ಘೋಷಣೆಯಾಗಿದೆ.

‘ಕೊಪ್ಪಳದಿಂದ ಕರಿಯಪ್ಪ ಮೇಟಿ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಗಂಗಾವತಿಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಆರ್‌.ಶ್ರೀನಾಥ್‌ ಜೆಡಿಎಸ್‌ ಪ್ರವೇಶಿಸಿದ ಬಳಿಕ ಪಕ್ಷದೊಳಗಿನ ಚಿತ್ರಣವೇ ಬದಲಾಯಿತು. ಸೈಯದ್‌ ಅವರ ಸತತ ಪ್ರಯತ್ನ ಹಾಗೂ ಒತ್ತಡದ ಫಲವಾಗಿ ಅವರಿಗೆ ಬಿ.ಫಾರಂ ಲಭಿಸಿದೆ. ಎರಡೂ ಕಡೆ ಶ್ರೀನಾಥ್‌ ಅವರ ಇಚ್ಛೆಯೇ ಕೆಲಸ ಮಾಡಿದೆ’ ಎಂದು ಪಕ್ಷದ ಹಿರಿಯ ಕಾರ್ಯಕರ್ತರು ಹೇಳಿದರು.

ಮೊದಲಿನ ಯೋಜನೆ ಪ್ರಕಾರ ಗಂಗಾವತಿಯಲ್ಲಿ ಅಲ್ಪಸಂಖ್ಯಾತರಿಗೂ ಕೊಪ್ಪಳದಲ್ಲಿ ಮುಂದುವರಿದ ಸಮುದಾಯದವರಿಗೂ ಟಿಕೆಟ್‌ ಕೊಡಬೇಕು. ಗಂಗಾವತಿಯಲ್ಲಿ ಅನ್ಸಾರಿ ಅವರನ್ನು ಎದುರಿಸಲು ಅಲ್ಪಸಂಖ್ಯಾತರೇ ಮುಂದಾದರೆ ತಮ್ಮ ಹಾದಿ ಸುಗಮವಾಗಲಿದೆ ಎಂದು ಪಕ್ಷದ ಪದಾಧಿಕಾರಿಗಳು ಚಿಂತನೆ ನಡೆಸಿದ್ದರು.

‘ಪಕ್ಷದ ಹೈಕಮಾಂಡ್‌ ತನ್ನದೇ ಆದ ಲೆಕ್ಕಾಚಾರ ಹಾಕಿ ಟಿಕೆಟ್‌ ಘೋಷಣೆ ಮಾಡಿದೆ. ಯಾರೇ ಸ್ಪರ್ಧಿಸಿದರೂ ನಾವು ಅವರ ಗೆಲುವಿಗಾಗಿ ದುಡಿಯಲೇಬೇಕು. ಈ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಹೇಳಿದರು.

ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಸೈಯದ್‌ ಪ್ರತಿಕ್ರಿಯಿಸಿ, ‘ಹಿರಿಯರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಣಕ್ಕಿಳಿ

ದಿದ್ದೇನೆ. ಈಗಾಗಲೇ ಒಂದು ಸುತ್ತಿನ ಪ್ರಚಾರವೂ ಮುಗಿದಿದೆ. ಜನ ಬೆಂಬಲಿಸುವ ವಿಶ್ವಾಸ ಇದೆ’ ಎಂದರು.

ಪಂಚ ಕ್ಷೇತ್ರಗಳಲ್ಲಿ ಅಳೆದು ತೂಗಿ ‘ಅಹಿಂದ’ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಹೀಗಾದಾಗ ಬಹುಸಂಖ್ಯೆಯ ಮತದಾರ ಗುಂಪನ್ನು ಸೆಳೆಯುವುದು ಸುಲಭ ಎಂಬುದು ಪಕ್ಷದ ಲೆಕ್ಕಾಚಾರ. ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಬಗೆಹರಿಯದ ಗೊಂದಲ ನೋಡಿದರೆ ಕಾಂಗ್ರೆಸ್‌ – ಜೆಡಿಎಸ್‌ ನಡುವೆ ಹೋರಾಟ ನಡೆಯುವ ಸಾಧ್ಯತೆಗಳೇ ದಟ್ಟವಾಗಿವೆ ಎಂಬುವುದು ಮತದಾರರ ಅನಿಸಿಕೆ. ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸೈಯದ್‌, ವಿಧಾನ ಪರಿಷತ್‌ ಸದಸ್ಯರಾಗಿದ್ದ ಅನುಭವಿ ರಾಜಕಾರಣಿ ಕರಿಯಪ್ಪ ಮೇಟಿ ಅವರ ಪ್ರಯತ್ನಕ್ಕೆ ಮತದಾರನ ಸ್ಪಂದನ ಏನಿದೆ ಎಂಬ ಕುತೂಹಲ ಉಳಿದಿದೆ. ಇಬ್ಬರಿಗೂ ಈ ಎರಡೂ ಕ್ಷೇತ್ರಗಳು ಕಠಿಣ ಸವಾಲಿನಿಂದ ಕೂಡಿವೆ ಎಂಬುದನ್ನು ಪಕ್ಷದ ಪದಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಮಹಾಪ್ರವಾಹದ ವಿರುದ್ಧ ಈಜಿ ದಡ ಸೇರುವ ಪಂಥಾಹ್ವಾನ ಇವರ ಮೇಲಿದೆ.

**

ಪಕ್ಷದ ಹಿರಿಯರು ಲೆಕ್ಕಾಚಾರ ಹಾಕಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬದ್ಧತೆಯಿಂದ ದುಡಿಯುವುದು ನಮ್ಮ ಕರ್ತವ್ಯ – ಅಮರೇಗೌಡ ಪಾಟೀಲ,ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry