ಉತ್ತರ, ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ

7
ನಾಗಮಂಗಲದಲ್ಲಿ ಮುಖ್ಯಮಂತ್ರಿ ಸಿದ್ದರಾಯ್ಯ ಅಭಿಮತ

ಉತ್ತರ, ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ

Published:
Updated:

ನಾಗಮಂಗಲ: ‘ಜೆಡಿಎಸ್‌ ಪಕ್ಷ ಹಳೇ ಮೈಸೂರು ಭಾಗದಲ್ಲಿದೆ, ಉತ್ತರ ಕರ್ನಾಟಕದಲ್ಲಿ ಇಲ್ಲ. ಬಿಜೆಪಿ ಉತ್ತರ ಕರ್ನಾಟದಲ್ಲಿ ಇದೆ, ಆದರೆ ಹಳೇ ಮೈಸೂರು ಭಾಗದಲ್ಲಿ ಇಲ್ಲ. ಆದರೆ ಕಾಂಗ್ರೆಸ್‌ ಪಕ್ಷ ಉತ್ತರ, ದಕ್ಷಿಣ ಸೇರಿ ಎಲ್ಲಾ ದಿಕ್ಕುಗಳಲ್ಲಿದೆ. ರಾಜ್ಯದ ಎಲ್ಲಾ ಭಾಗದಲ್ಲಿ ಕಾಂಗ್ರೆಸ್‌ ತನ್ನ ಹಿಡಿತ ಸಾಧಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಈ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹೋರಾಟ ನಡೆಯುತ್ತಿದೆ. ಆದರೆ ನಿಜವಾಗಿ ಮೂರು ತತ್ವಗಳ ವಿರುದ್ಧ ಸಮಯ ನಡೆಯುತ್ತಿದೆ. ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದೆ. ಆದರೆ ಜೆಡಿಎಸ್‌ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದು ಬಿಜೆಪಿ ಕೋಮುವಾದಿ ನೆಲೆಯ ಮೇಲೆ ವೋಟು ಕೇಳುತ್ತಿದೆ. ಈ ಮೂರು ತತ್ವಗಳ ಕುರಿತು ಜನರು ಚರ್ಚೆ ಮಾಡಬೇಕು. ಸಾಮಾನ್ಯ ಜನರ, ಬಡವರ ಪರವಾಗಿ ಕೆಲಸ ಮಾಡುತ್ತಿರು ಕಾಂಗ್ರೆಸ್ ಪಕ್ಷ ಅಭಿವೃದ್ಧಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಹೋರಾಟ ನೀಡುತ್ತಿದೆ’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಲ್ಕೈದು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಅವರು ರಾಜ್ಯದ ಹಿಂದುಳಿದವರ, ದಲಿತರ, ಅಲ್ಪ ಸಂಖ್ಯಾತರ ಪರವಾಗಿ ಮಾತನಾಡುತ್ತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪ ಮಾಡುತ್ತಿಲ್ಲ. ಅದನ್ನು ಬಿಟ್ಟು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ. ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಅವರ ತಂತ್ರ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಇನ್ನು 24 ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಾಗ ರೈತರಿಗೆ ಏನನ್ನೂ ಮಾಡಲಿಲ್ಲ. ಆದರೆ ಈಗ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಅವರು ಭ್ರಮಾಲೋಕದಲ್ಲಿದ್ದಾರೆ. ಇಸ್ರೇಲ್‌ಗೆ ಭೇಟಿ ನೀಡಿದ್ದ ಅವರು ಅದೇ ಮಾದರಿಯಲ್ಲಿ ಕೃಷಿ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ. 20 ತಿಂಗಳ ಅವಧಿಯಲ್ಲಿ ಅವರು ಏನು ಮಾಡಿದರು ಎಂಬುದು ಜನರಿಗೆ ಗೊತ್ತಿದೆ’ ಎಂದು ಟೀಕಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ ‘ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತಹಾಕಿದಂತೆ. ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸೇಡಿನ ರಾಜಕಾರಣ ಮಾಡುತ್ತಿದೆ. ಸ್ವಿಚ್‌ ಆಫ್‌ ಸುರೇಶ್‌ಗೌಡ ಎಂದೇ ಖ್ಯಾತಿಗಸಿರುವ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಈ ಬಾರಿ ನಾಗಮಂಗಲ ಮತದಾರರು ಜೆಡಿಎಸ್‌ ಪಕ್ಷಕ್ಕೆ ಸರಿಯಾದ ಬುದ್ಧಿ ಕಲಿಸುತ್ತಾರೆ. ಪಕ್ಷದ ಇನ್ನೊಬ್ಬ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಜನರಿಗೆ ಸುಳ್ಳು ಭರವಸೆ ನೀಡುವಲ್ಲಿ ನಿಷ್ಣಾತರಾಗಿದ್ದಾರೆ’ ಇಂಥವರನ್ನು ಜನರು ನಂಬುವುದಿಲ್ಲ ಎಂದು ಹೇಳಿದರು.

‘ಗ್ರಾಮಿಣ ಭಾಗದ ಜನರಿಗೆ ನಿತ್ಯ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗಿದೆ. ಈ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಐದು ವರ್ಗಗಳವರೆಗೆ ಶುದ್ಧ, ಸ್ವಚ್ಛ, ಹಗರಣ ಮುಕ್ತ ಆಡಳಿತ ನೀಡಿದೆ. ಆದರೆ ಬಿಜೆಪಿ, ಜೆಡಿಎಸ್‌ ಮುಖಂಡರು ಇಲ್ಲಸಲ್ಲದ ಭರವಸೆ ನಿಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ಹೇಳಿದರು.

ಸಚಿವ ಎಚ್‌.ಸಿ.ಮಹಾದೇವಪ್ಪ, ಮುಖಂಡರಾದ ರಮೇಶ್‌ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಡಾ.ಬಿ.ಎಸ್‌.ಶಿವಣ್ಣ, ಸಿ.ಡಿ.ಗಂಗಾಧರ್‌ ಹಾಜರಿದ್ದರು.

ಕಣ್ಣೀರು ಹಾಕಿದ ಚಲುವರಾಯಸ್ವಾಮಿ

ಪ್ರಚಾರ ಸಭೆಯಲ್ಲಿ ಭಾವುಕರಾದ ಎನ್‌.ಚಲುವರಾಯಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು. ‘ಜನಸೇವೆ ಮಾಡುವುದೇ ನನ್ನ ಉದ್ದೇಶ. ಆದರೆ ಸೇಡು, ದ್ವೇಷ ಯಾವುದೂ ನನಗೆ ಬೇಕಾಗಿಲ್ಲ. ದ್ವೇಷ ಮಾಡಿ ಯಾವ ಉದ್ದೇಶಕ್ಕೆ ರಾಜಕಾರಣ ಮಾಡಬೇಕು? ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆಸೆ, ಆಮಿಷಗಳನ್ನು ಒಡ್ಡುತ್ತಿದ್ದಾರೆ,ಇದೆಲ್ಲಾ ಬೇಕಾ’ ಎಂದು ಕಣ್ಣೀರು ಸುರಿಸಿದರು.

ಜನರಿಂದ ಉಪವಾಸ ವ್ರತ

ಬೆಳಿಗ್ಗೆ 11 ಗಂಟೆಯಿಂದ ಸಂಜೆ 5ಗಂಟೆವರೆಗೆ ಜನರು ಊಟವಿಲ್ಲದೆ ಸಭೆಯಲ್ಲಿ ಕುಳಿತಿದ್ದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವವರೆಗೂ ಯಾರೂ ಹೋಗಬಾರದು. ನಾನೂ ಊಟ ಮಾಡಿಲ್ಲ. ಕಷ್ಟವಾದರೂ, ಹೊಟ್ಟೆ ಹಸಿದರೂ ಸಹಿಸಿಕೊಳ್ಳಿ, ಮುಂದೆ ಯಾವುದೇ ಸಭೆ, ಸಮಾರಂಭಗಳು ನಡೆಯುವುದಿಲ್ಲ. ಹೀಗಾಗಿ ಇದೊಂದು ದಿನ ಸಹಕಾರ ನೀಡಿ’ ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.ಹೀಗಾಗಿ ಜನರು ಊಟವಿಲ್ಲದೆ ಹಸಿದು ಕಾರ್ಯಕ್ರಮದಲ್ಲಿ ಕುಳಿತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry