ಕಾಂಗ್ರೆಸ್‌ ಮಾತ್ರ ಈ ದೇಶದ ಶಕ್ತಿ: ಡಿ.ಕೆ.ಶಿ

7
ಚಲುವರಾಯಸ್ವಾಮಿ ಉಮೇದುವಾರಿಕೆ ಸಲ್ಲಿಕೆ

ಕಾಂಗ್ರೆಸ್‌ ಮಾತ್ರ ಈ ದೇಶದ ಶಕ್ತಿ: ಡಿ.ಕೆ.ಶಿ

Published:
Updated:

ನಾಗಮಂಗಲ: ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿದರೆ ಬಿಜೆಪಿಗೆ ನೀಡಿದಂತೆ. ಇದು ದೊಡ್ಡ ಅಪಾಯ, ಹಾಗಾಗಿ ಅಲ್ಪಸಂಖ್ಯಾತರು ಎಚ್ಚರಿಕೆಯಿಂದಿರಿ ಎಂದು ಇಂಧನ ಸಚಿನ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ನಡೆದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

‘ಜೆಡಿಎಸ್ ಪಕ್ಷದಿಂದ ಲೋಕಸಭಾ ಸದಸ್ಯರಾದವರು ಮತ್ತು ಮಂತ್ರಿಗಳಾದವರು ಒಬ್ಬರೂ ಆ ಪಕ್ಷದಲ್ಲಿ ಉಳಿದಿಲ್ಲ. ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಚಲುವರಾಯಸ್ವಾಮಿ ಮತ್ತು ಜಮೀರ್ ಅಹ್ಮದ್ ಖಾನ್ ಸ್ನೇಹಿತರು ಒತ್ತಾಯಿಸಿದರೆ ಅವರನ್ನು ಪಕ್ಷದಿಂದ ಅಮಾನತುಗೊಳಿಸುತ್ತಾರೆ. ಅದೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಯಾಕೆ ಅಮಾನತುಗೊಳಿಸಲಿಲ್ಲ. ಇದು ಜೆಡಿಎಸ್ ಪಕ್ಷದ ನೀತಿ’ ಎಂದು ಟೀಕಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ ನಂತರ ₹ 60 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದರು. ರಾಜ್ಯದ ಅರ್ಧಕ್ಕೂ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಗಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ರೈತನ ಬದುಕಿಗಾಗಿ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ. ಅದಕ್ಕಾಗಿ ₹ 50 ಸಾವಿರ ಸಾಲ ಮನ್ನಾ ಮಾಡಿದೆ. ಈ ಕೆಲಸವನ್ನು ಎಚ್.ಡಿ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

‘ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಗೆಲ್ಲಬಹುದು ಆದರೆ ಅಧಿಕಾರಕ್ಕೆ ಬರುವುದಿಲ್ಲ. ನಾವು 130 ಸೀಟುಗಳನ್ನು ಗೆಲ್ಲುವುದು ಖಂಡಿತ ಎಂದರು. ನಾವು ಒಕ್ಕಲಿಗರೇ, ನಾವು ಮುಖ್ಯಮಂತ್ರಿಯಾಗಲ್ಲ ಅಂದಿದ್ದೇವೆಯೇ’ ಎಂದು ಪ್ರಶ್ನಿಸಿದರು.

ಎನ್. ಚಲುವರಾಯಸ್ವಾಮಿ ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿದ ನಂತರ ₹ 2 ಸಾವಿರ ಕೋಟಿಯಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅವರು ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಮತ್ತು ಶಾಸಕರಾಗಿ ಕ್ಷೇತ್ರದ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

‘ಕ್ಷೇತ್ರದ ಮಾಜಿ ಶಾಸಕ ಸ್ವಿಚ್ಡ್‌ ಆಫ್ ಸುರೇಶ್ ಗೌಡ ಸರಿಯಾಗಿ ಕೆಲಸ ಮಾಡಿದ್ದರೆ ಈ ಸ್ಥಿತಿ ಬರುತ್ತಿತ್ತೇ. ಮಹಾನ್ ಸುಳ್ಳುಗಾರ ಎಲ್.ಆರ್.ಶಿವರಾಮೇಗೌಡರೂ ಒಂದಾಗಿದ್ದಾರೆ’ ಎಂದು ಲೇವಡಿ ಮಾಡಿದರು.

ಎನ್. ಚಲುವರಾಯಸ್ವಾಮಿ ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಸ್ಥಾನದಲ್ಲಿ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ನಂತರ, ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು ಮಿನಿವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವಾಗ ಪತ್ನಿ ಧನಲಕ್ಷ್ಮಿ, ಅಮರ್ ಉಲ್ ಹಮ್ಜಾ, ನಾಗರಾಜಯ್ಯ, ಭದ್ರೇಗೌಡ ಹಾಜರಿದ್ದರು.ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಾದಸ್ವರ ವಾದನ, ತಮಟೆ ಸದ್ದಿನೊಂದಿಗೆ 15ಕ್ಕೂ ಹೆಚ್ಚಿನ ಎತ್ತಿನಗಾಡಿಗಳು ಭಾಗವಹಿಸಿದ್ದವು. ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry