ಮೈಗನಸು

7

ಮೈಗನಸು

Published:
Updated:
ಮೈಗನಸು

ಕೊಬ್ಬಿದ ಕನಸೊಂದು ಏರಿ ಬಂದು
ಮಬ್ಬಿನ ಬೆಳಕನ್ನು ಸುಲಿದು ಮೇಯ್ದು
ನಿಬ್ಬೆರಗಿನ ಸುಳಿವುಗೊಡದೆ ಹೆಬ್ಬಿರುಳಿಗೆ ಜಾರಿತು!

ಉಬ್ಬಿಲ್ಲದ ದಾರಿಯೊಳು ಕೊಂಬಿಲ್ಲದ ಹೋರಿ
ತನ್ನ ತಾನೇ ಗುಮ್ಮುತ್ತಾ ಬಂದಿತು
ಗೊರಸು ಕಾಲಿನಿಂದ ಮಿಂಚೊಂದ ಗೀರುತ್ತಾ
ಬಿರುಸು ಬಯಕೆಗಳನ್ನುಕ್ಕಿಸಿ ಗಾಳಿಗೆ ಹಾರಿತು!

ಇಬ್ಬಾಗಿಲುಗಳು ಒಮ್ಮೆಲೇ ತೆರೆದವು
ಕೆನ್ನಾಲಿಗೆಗಳು ತಂತಾನೇ ಚಾಚಿಕೊಂಡವು
ಬಾವುಲಿಗಳು ಬೆಳ್ಳಗಾದವು; ಉರಿಗದ್ದುಗೆಗಳು ತಣ್ಣಗಾದವು
ಹೆಬ್ಬಾವುಗಳ ಉಸಿರುಘಮಲಿಗೆ ಬಿರಿದವು ಹೂವುಗಳು!

ಒಬ್ಬೊಬ್ಬರಾಗಿ ಬಂದವರು ಇಬ್ಬಿಬ್ಬರಾಗಿ ಕಂಡರು
ಉಗುರು ಎಬ್ಬಿರುವ ಕೈಗಳಲಿ ನೀರು ಮೊಗೆದರು
ರಕ್ತಗಂಪಿನ ನೀರು; ಹಸಿರು ಕಳಚಿದ ಪೈರು
ರೈತರು ತರುಗಳಾದರು, ತರಗೆಲೆಗಳಾದರು,
ಕಿಕ್ಕಿರಿದರು, ಕಿರಿದಾದರು, ಕುರುಹುಗಳನ್ನೇ ಕಳಕೊಂಡರು!

ನಂಬಿದ ದ್ಯಾವರೇ ಕೊಂಬೆಯ ಕಡಿದಂತೆ
ತುಂಬಿದ ಹೊಳೆಯೊಳು ದಾವುರ ಉಕ್ಕಿದಂತೆ
ತಬ್ಬಿಬ್ಬು ಚಿಟ್ಟೆಯ ರೆಕ್ಕೆ ಸಪ್ಪಳಕ್ಕೆ ಮುಗಿಲು ಕಳಚಿದಂತೆ
ಅವನಿವಳಾದಳು; ಇವಳವನಾದನು 
ಹಿಮಬೆಟ್ಟದೊಳು ಧ್ಯಾನಕ್ಕೆ ಕುಂತವನು
ಧಗೆಯಿಂದ ಸತ್ತನು!

ಕವುಚಿಟ್ಟ ಕೋಳಿಗಳ ಕೂಗಿಗೆ ಪಂಜರ ಬೆಚ್ಚಿದ್ದು
ನೋವುಗಳ ನೇಯ್ದ ಲಾಳಿಗಳು ತೊಳಲಾಡಿದ್ದು
ಗೆಬರಲು ಬಂದ ರಣಹದ್ದುಗಳನ್ನೇ 
ಬೇಟೆಯಾಡಿದ ಗುಬ್ಬಚ್ಚಿಗಳು ಆಗಸಕೆ ರೆಕ್ಕೆ ಬಡಿದದ್ದು
ಎಲ್ಲೆಲ್ಲೂ ಸದ್ದು ಸದ್ದು; ಅದೆಂತಹ ಮಹಾ ಘನ ಸದ್ದೆಂದರೆ
ಹಸಿ ಮಡಕೆಯ ಮಣ್ಣು ಚಿಗುರುವ ಸದ್ದು!

ಎದುರಿದ್ದ ದಾರಿ ಹಿಂದುಮುಂದಾಯಿತು
ಕಣ್ಣೆವೆಗೆ ತಾಗಿದ ಗುರಿ ಮುಗ್ಗರಿಸಿ ಬಿದ್ದಿತು
ನೋಟ ನೆಟ್ಟಷ್ಟೂ ಬಟಾಬಯಲು ಮರುಹುಟ್ಟು ಹಾಕಿತು
ಕುಲ ಹೊಲ ಸಕಲ ಕೆಟ್ಟಷ್ಟೂ ಹೊಸ ಸೃಷ್ಟಿಯಾಯಿತು
ಹೀಗಾಯಿತು ಹಾಗಾಯಿತು ಲಗಾಯತ್ತಿನಿಂದಲೂ
ಕನಸುಗಳು ಎತ್ತರಕ್ಕೆ ಜಿಗಿದು ಧುತ್ತರಕ್ಕೆ ಇಳಿದು
ಇಲ್ಲದಂತೆಯೇ ಇದ್ದು ಇರುವಂತೆಯೇ ಇಲ್ಲವಾಯಿತು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry