‘ಉತ್ತರ’ದಲ್ಲಿ ಬಿಜೆಪಿಗೆ ಬಂಡಾಯದ ಆತಂಕ

7
ವರಿಷ್ಠರ ತೀರ್ಮಾನಕ್ಕೆ ಪಾಲೇಮಾರ್‌, ಸತ್ಯಜಿತ್‌ ಅಸಮಾಧಾನ

‘ಉತ್ತರ’ದಲ್ಲಿ ಬಿಜೆಪಿಗೆ ಬಂಡಾಯದ ಆತಂಕ

Published:
Updated:

ಮಂಗಳೂರು: ಮೂರನೇ ಪಟ್ಟಿಯಲ್ಲಿ ಮಂಗಳೂರು ನಗರದ ಮೂರೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಬಿಜೆಪಿ ವರಿಷ್ಠರು ಪಟ್ಟಿ ಪ್ರಕಟಿಸಿ ನಿಟ್ಟುಸಿರು ಬಿಡುವಷ್ಟರಲ್ಲೇ ಮಂಗಳೂರು ಉತ್ತರ ಕ್ಷೇತ್ರ ದಲ್ಲಿ ಡಾ.ಭರತ್‌ ಶೆಟ್ಟಿಗೆ ಟಿಕೆಟ್‌ ನೀಡಿರುವುದಕ್ಕೆ ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್‌ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಸತ್ಯಜಿತ್ ಸುರತ್ಕಲ್‌ ಅಸಮಾಧಾನ ಸ್ಫೋಟಿಸಿದ್ದಾರೆ.

ಮಂಗಳೂರು (ಉಳ್ಳಾಲ) ಮತ್ತು ಮಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಕುರಿತು ಈವರೆಗೆ ಬಹಿರಂಗವಾಗಿ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಆದರೆ, ಮಂಗಳೂರು ಉತ್ತರ ಕ್ಷೇತ್ರ ದಲ್ಲಿ ತಮಗೆ ಟಿಕೆಟ್‌ ತಪ್ಪಿರುವುದಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್‌ ಕೈವಾಡ ಕಾರಣ ಎಂದು ಪಾಲೇಮಾರ್‌ ಆರೋಪ ಮಾಡಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಸತ್ಯಜಿತ್‌ ಮನೆಯಲ್ಲಿ ಬೆಂಬಲಿಗರ ಸಭೆಯೂ ನಡೆದಿದೆ.

ಎರಡು ದಿನಗಳ ಹಿಂದೆ ಪಾಲೇ ಮಾರ್‌ ಅವರನ್ನು ಸಂಪರ್ಕಿಸಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಬಿ.ಫಾರ್ಮ್‌ ಅನ್ನು ತಾವೇ ಕಳಿಸಿಕೊಡುವುದಾಗಿಯೂ ಭರವಸೆ ನೀಡಿದ್ದರು. ಸೋಮವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಬೆಂಬಲಿಗರಿಗೆ ಆಹ್ವಾನ ನೀಡಿ, ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ಕೃಷ್ಣ ಪಾಲೇಮಾರ್‌ ಅವರಿಗೆ ಶುಕ್ರವಾರ ಸಂಜೆ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಭರತ್‌ ಶೆಟ್ಟಿ ಹೆಸರು ಕಂಡು ಆಘಾತವಾಗಿದೆ.

ಹಿಂದುಳಿದ ವರ್ಗಗಳಿಗೆ ಅನ್ಯಾಯ: ಟಿಕೆಟ್‌ ಕೈತಪ್ಪಿರುವುದರಿಂದ ನೋ ವಾಗಿರುವುದನ್ನು ‘ಪ್ರಜಾವಾಣಿ’ ಜೊತೆ ಒಪ್ಪಿಕೊಂಡ ಪಾಲೇಮಾರ್, ‘ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿ ಈಗ ಬೇರೆಯವರಿಗೆ ಟಿಕೆಟ್ ನೀಡಿರುವುದು ನನಗೆ ಮಾಡಿದ ಮೋಸ ಅಲ್ಲವೇ? ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರೇ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿ ಈ ಕೆಲಸ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಪಕ್ಷ ಕಟ್ಟಲು, ಪಕ್ಷ ಮತ್ತು ಸಂಘಟನೆಗಾಗಿ ಪ್ರಾಣ ಕೊಡಲು ಹಿಂದುಳಿದ ವರ್ಗದ ಜನರು ಬೇಕು. ಆದರೆ, ಟಿಕೆಟ್‌ ಹಂಚಿಕೆ ವೇಳೆ ಮೇಲ್ಜಾತಿಯವರಿಗೆ ಆದ್ಯತೆ. ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಒಂದು ಮೀಸಲು ಕ್ಷೇತ್ರ. ಉಳಿದ ಏಳು ಕ್ಷೇತ್ರಗಳಲ್ಲಿ ಆರು ಕಡೆ ಮೇಲ್ಜಾತಿಯವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ. ಒಂದು ಕಡೆ ಮಾತ್ರ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಲಾಗಿದೆ. ಇದು ಪಕ್ಷಕ್ಕಾಗಿ ಎಲ್ಲ ವನ್ನೂ ತ್ಯಾಗ ಮಾಡಿದವರಿಗೆ ಮಾಡುವ ಅನ್ಯಾಯವಲ್ಲವೆ’ ಎಂದು ಪ್ರಶ್ನಿಸಿದರು.

ತಮಗೆ ಟಿಕೆಟ್‌ ಕೊಡಲಿಲ್ಲ ಎಂದು ಆರೋಪ ಮಾಡುತ್ತಿಲ್ಲ. ಪಕ್ಷದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಯ ಹಿತವನ್ನು ಬಲಿಕೊಡುತ್ತಿದ್ದಾರೆ. ಈಗ ಕೈಗೊಂಡಿರುವ ನಿರ್ಧಾರದಿಂದ ವಿರೋಧ ಪಕ್ಷಕ್ಕೆ ಅನುಕೂಲ ಆಗುತ್ತದೆ. ಅವರೇ ಮುಂದೆ ಪಕ್ಷ ಕಟ್ಟಿ, ಬೆಳೆಸಲಿ ಎಂದು ಬೇಸರದಿಂದ ಹೇಳಿದರು.

ಸಂತೋಷ್‌ ಕೈ ಮೇಲಾಯಿತೇ?

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನಡುವೆ ಪೈಪೋಟಿ ಆರಂಭವಾಗಿತ್ತು.

ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಸಂತೋಷ್‌ ಮೂಲಕ ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸಲು ಯತ್ನಿಸುತ್ತಿದ್ದರು. ಶುಕ್ರವಾರ ಪ್ರಕಟವಾದ ಪಟ್ಟಿಯಲ್ಲಿ ಸಂತೋಷ್‌ ಮತ್ತು ನಳಿನ್‌ ಕೈ ಮೇಲಾಗಿದೆ ಎಂಬ ಸುದ್ದಿ ಪಕ್ಷದೊಳಗೆ ಹರಿದಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry