ಕ್ಯಾತಮಾರನಹಳ್ಳಿ ಉದ್ವಿಗ್ನ: ನಿಷೇಧಾಜ್ಞೆ ಜಾರಿ

7
ಮೀನಾ ಬಜಾರ್, ಮಂಡಿ ಮೊಹಲ್ಲಾ, ಉದಯಗಿರಿ ಅಘೋಷಿತ ಬಂದ್

ಕ್ಯಾತಮಾರನಹಳ್ಳಿ ಉದ್ವಿಗ್ನ: ನಿಷೇಧಾಜ್ಞೆ ಜಾರಿ

Published:
Updated:
ಕ್ಯಾತಮಾರನಹಳ್ಳಿ ಉದ್ವಿಗ್ನ: ನಿಷೇಧಾಜ್ಞೆ ಜಾರಿ

ಮೈಸೂರು: ಇಲ್ಲಿನ ಕ್ಯಾತಮಾರನಹಳ್ಳಿಯಲ್ಲಿ ಶುಕ್ರವಾರ ಗುಂಪು ಘರ್ಷಣೆ ಉಂಟಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಎರಡು ಬಾರಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮುಸ್ಲಿಂ ಯುವಕರ ಒತ್ತಾಯಕ್ಕೆ ಮಣಿದ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ಮುಚ್ಚಿದ್ದರಿಂದ ಮೀನಾ ಬಜಾರ್‌, ಮಂಡಿ ಮೊಹಲ್ಲಾ, ಉದಯ ಗಿರಿ ಸೇರಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯ ಬಳಿಕ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯನ್ನು ಖಂಡಿಸಿ ಸಂಸದ ಪ್ರತಾಪಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸಂದೇಶಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪೊಲೀಸ್ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ 48 ಗಂಟೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅರೆಸೇನಾ ಪಡೆ ಸೇರಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅತ್ಯಾಚಾರ, ಕೊಲೆಗೆ ಖಂಡನೆ: ಜಮ್ಮುವಿನ ಕಠುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮುಸ್ಲಿಂ ಯುವಕರು ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸಂತ್ರಸ್ತ ಬಾಲಕಿಯ ಭಾವಚಿತ್ರ ಹಿಡಿದ ಪ್ರತಿಭಟನಾಕಾರರು ದ್ವಿಚಕ್ರ ವಾಹನದಲ್ಲಿ ಜಾಥಾ ನಡೆಸಿದ್ದಾರೆ. ಮೀನಾ ಬಜಾರ್‌, ಮಂಡಿ ಮೊಹಲ್ಲಾ, ಅಶೋಕ ರಸ್ತೆಯಲ್ಲಿ ಸಂಚರಿಸಿ ಅಂಗಡಿಗಳ ಬಾಗಿಲುಗಳನ್ನು ಮುಚ್ಚಿಸಿದ್ದಾರೆ. ಸಾಡೆ ರಸ್ತೆ, ಪುಲಕೇಶಿ ರಸ್ತೆ ಹಾಗೂ ಮಿಷನ್‌ ಆಸ್ಪತ್ರೆಯ ರಸ್ತೆಯಲ್ಲಿಯೂ ವಾಣಿಜ್ಯ ವಹಿವಾಟು ಸ್ಥಗಿಗೊಂಡಿತ್ತು.

ಗಾಯತ್ರಿಪುರಂ ಮೂಲಕ ಕ್ಯಾತ ಮಾರನಹಳ್ಳಿಗೆ ಧಾವಿಸಿದ ಜಾಥಾ ಟೆಂಟ್‌ ವೃತ್ತದಲ್ಲಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಪ್ರತಿಭಟನಾಕಾರರು ವೆಂಕಟೇಶ್ವರ ಪ್ರಾವಿಜನ್‌ ಸ್ಟೋರ್‌’ಗೆ ನುಗ್ಗಿ ಸಾಮಗ್ರಿಗಳನ್ನು ರಸ್ತೆಗೆ ಚೆಲ್ಲಿದ್ದಾರೆ. ಸ್ಟೋರ್‌ ಮಾಲೀಕ ಮಧು ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಶ್ರುವಾಯು, ಲಾಠಿ ಪ್ರಹಾರ: ಗಲಾಟೆಯಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನಾಕಾರರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭೀತಿಗೊಂಡ ಯುವಕರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಅನುಮತಿ ಇಲ್ಲದೆ ಜಾಥಾ ನಡೆಸುತ್ತಿರುವುದನ್ನು ಕ್ಯಾತಮಾರನಹಳ್ಳಿ ಗ್ರಾಮಸ್ಥರು ಪೊಲೀಸ್‌ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಉದಯಗಿರಿಯ ಮುಖ್ಯರಸ್ತೆಯ ಸಮೀಪ ಗುಂಪನ್ನು ತಡೆಯಲು ಇನ್‌ಸ್ಪೆಕ್ಟರ್‌ ಅನಿಲ್‌ಕುಮಾರ್ ಹಾಗೂ ಸಿಬ್ಬಂದಿ ಮುಂದಾದಾಗ ಕಲ್ಲು ತೂರಾಟ ನಡೆದಿದೆ. ತಲೆಗೆ ಪೆಟ್ಟುಬಿದ್ದ ಪರಿಣಾಮ ಅನಿಲ್‌ಕುಮಾರ್‌ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಐವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ.

ಪ್ರತಾಪಸಿಂಹ ಧರಣಿ: ಕ್ಯಾತಮಾರನಹಳ್ಳಿಯ ಟೆಂಟ್‌ ವೃತ್ತಕ್ಕೆ ಧಾವಿಸಿದ ಸಂಸದ ಪ್ರತಾಪ ಸಿಂಹ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌.ಆರ್‌.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ ಸ್ವಾಮಿ ಸೇರಿದಂತೆ ಸಂಘ ಪರಿವಾರದ ಮುಖಂಡರ ಜೊತೆಗೆ ಧರಣಿ ನಡೆಸಿದ್ದಾರೆ.

‘ಬೈಕಿನಲ್ಲಿ ಧಾವಿಸಿದ ಯುವಕರು ದಿನವಿಡೀ ಕಿರುಕುಳ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಹಲವರಿಗೆ ಎಚ್ಚರಿಕೆ ನೀಡಿದ್ದೆವು. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮತ್ತೆ ಗಲಾಟೆ ನಡೆಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲು ತೂರಾಟ, ಉದ್ವಿಗ್ನ: ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಸಂಘ ಪರಿವಾರದ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆಯಿತು. ಮುಖಂಡರು ಸ್ಥಳದಿಂದ ಮರಳುತ್ತಿದ್ದಂತೆ ಕಲ್ಲು ತೂರಾಟ ಆರಂಭವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮತ್ತೆ ಲಾಠಿ ಪ್ರಹಾರ ನಡೆಸಿದರು.

ಎಸ್‌ಡಿಪಿಐ ಕುಮ್ಮಕ್ಕು; ಆರೋಪ

ಗುಂಪು ಘರ್ಷಣೆ ಹಾಗೂ ಕಲ್ಲು ತೂರಾಟದ ಹಿಂದೆ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಕೈವಾಡವಿದೆ ಎಂದು ಸಂಸದ ಪ್ರತಾಪಸಿಂಹ ಆರೋಪಿಸಿದ್ದಾರೆ.

‘ಆರ್‌ಎಸ್ಎಸ್‌ ಕಾರ್ಯಕರ್ತ ರಾಜು ಅವರನ್ನು ಕೊಲೆಗೈದ ಪ್ರಮುಖ ಆರೋಪಿ ಹಬೀಬ್‌ ಪಾಷಾ ಉದಯಗಿರಿಯಲ್ಲಿ ನೆಲೆಸಿದ್ದಾನೆ. ಚುನಾವಣಾ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾನೆ. ಕೋಮು ಗಲಭೆಗಳಲ್ಲಿ ಭಾಗಿಯಾಗಿದ್ದ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಟ್ಟಿರುವುದೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry