ಅಭಿವೃದ್ಧಿ ನಡುವೆ ಕೊಳೆಗೇರಿ ಕಡೆಗಣನೆ

7
ಚಾಮರಾಜ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆದಿದೆ; ಸಮಸ್ಯೆಗಳೂ ಇವೆ

ಅಭಿವೃದ್ಧಿ ನಡುವೆ ಕೊಳೆಗೇರಿ ಕಡೆಗಣನೆ

Published:
Updated:

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಅದರೆ, ಸಮಸ್ಯೆಗಳೂ ಉಳಿದುಕೊಂಡಿವೆ. ಕೊಳೆಗೇರಿಗಳಲ್ಲಿ ವಾಸವಿರುವ ಜನರನ್ನು ಕಡೆಗಣಿಸಿರುವುದು ಪ್ರಮುಖ ಲೋಪವಾಗಿದೆ.

ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಸುಮಾರು ₹ 2 ಸಾವಿರ ಕೋಟಿ ಮೊತ್ತದ ಕೆಲಸಗಳು ನಡೆದಿವೆ ಎಂದು ಶಾಸಕ ವಾಸು ಹೇಳುತ್ತಾರೆ. ಕಾಲೇಜು ಕಟ್ಟಡಗಳು, ಅತ್ಯಾಧುನಿಕ ಆಸ್ಪತ್ರೆಗಳ ನಿರ್ಮಾಣ ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿಯನ್ನು ಅವರು ಬೊಟ್ಟುಮಾಡುತ್ತಾರೆ.

ಶ್ರೀಮಂತರು, ವಿದ್ಯಾವಂತರು ಮತ್ತು ಪ್ರಜ್ಞಾವಂತರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರ ನಡುವೆ ಬಡವರು ಮತ್ತು ಕೊಳೆಗೇರಿ ನಿವಾಸಿಗಳೂ ಇದ್ದಾರೆ. ‘ನಮಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ’ ಎಂಬುದು ಕೊಳೆಗೇರಿ ನಿವಾಸಿಗಳ ದೂರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಚೇ ಗೌಡನಕೊಪ್ಪಲು, ಕುಂಬಾರಕೊಪ್ಪಲು, ಮೇಟಗಳ್ಳಿ, ಬಂಬೂಬಜಾರ್‌, ಮಂಜು ನಾಥಪುರ, ಹೆಬ್ಬಾಳು, ಕೈಲಾಸಪುರಂ, ಬಿ.ಬಿ.ಕೇರಿಯಲ್ಲಿ ಬಡವರು ವಾಸಿಸುತ್ತಿದ್ದಾರೆ.

ಕೊಳೆಗೇರಿ ನಿವಾಸಿಗಳು ಇಂದು ಅಥವಾ ನಾಳೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಮನೆ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಮೂಲಸೌಕರ್ಯವಿಲ್ಲದೆ ಕಷ್ಟಪಡುತ್ತಿ ದ್ದಾರೆ. ಮಳೆಗಾಲದಲ್ಲಿ ಕಷ್ಟ ಇಮ್ಮಡಿ ಯಾಗುತ್ತದೆ. ಸ್ವಚ್ಛತೆಯ ಕೊರತೆಯಿಂದ ಸುಲಭವಾಗಿ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.

ಮಳೆಗಾಲದಲ್ಲಿ ಕೆಲವು ಪ್ರದೇ ಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಸಮಸ್ಯೆ ಸೃಷ್ಟಿಯಾಗಿತ್ತು. ಕೆಲವೆಡೆ ಸಮಸ್ಯೆಗಳನ್ನು ಬಗೆಹರಿಸಲಾ ಗಿದೆ. ಕಳೆದ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ನಗರದಲ್ಲಿ ಸುರಿದಿದ್ದ ಭಾರಿ ಮಳೆಗೆ ಪಡುವಾರಹಳ್ಳಿಯ ಹಲವು ಮನೆಗಳಿಗೆ ನೀರು ನುಗ್ಗಿತ್ತು. ನೀರು ಸರಾಗವಾಗಿ ಹರಿಯದೆ ಇದ್ದುದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸಿದ್ದರು.

ಪಡುವಾರಹಳ್ಳಿಯಿಂದ ಕುಕ್ಕರ ಹಳ್ಳಿ ಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಹುಣಸೂರು ರಸ್ತೆಯಲ್ಲಿ ಮ್ಯಾಜಿಕ್‌ ಬಾಕ್ಸ್‌ ಅಳವಡಿಸಲಾಗಿದೆ. ಆದ್ದರಿಂದ ಇಲ್ಲಿನ ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಶಾಸಕರು ಕೈಗೆ ಸಿಗುತ್ತಿಲ್ಲ: ಶಾಸಕರು ಮನೆಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಇವೆ. ಜನರಿಗೆ ಮುಖ ತೋರಿಸುತ್ತಿಲ್ಲ. ಐದು ವರ್ಷಗಳಲ್ಲಿ ಶಾಸಕರನ್ನು ಒಮ್ಮೆಯೂ ಕಂಡಿಲ್ಲ ಎಂದು ಕೆಲವು ಮತದಾರರು ಹೇಳುತ್ತಾರೆ.

ರಸ್ತೆಗಳ ಅಭಿವೃದ್ಧಿ: ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣ ಮತ್ತು ಕಾಂಕ್ರೀಟೀಕರಣ ಕೆಲಸಗಳು ನಡೆದಿವೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಿಂಗ್‌ ರಸ್ತೆಯನ್ನು ₹ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ₹ 100 ಕೋಟಿ ವೆಚ್ಚದಲ್ಲಿ ಎಲ್ಲ ಬಡಾವಣೆಗಳ ರಸ್ತೆಗಳ ಅಭಿವೃದ್ಧಿ ನಡೆದಿದೆ.

ಮಹಾರಾಣಿ ಕಾಲೇಜಿನಿಂದ ಹುಣಸೂರು ಜಂಕ್ಷನ್‌ವರೆಗಿನ ರಸ್ತೆ, ಚೆಲುವಾಂಬ ಪಾರ್ಕ್‌ ಬಳಿಯ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಈ ರೀತಿಯ ಗುಣಮಟ್ಟದ ರಸ್ತೆ ಇದುವರೆಗೆ ಇರಲಿಲ್ಲ ಎಂಬುದು ವಾಸು ಅವರ ಹೇಳಿಕೆ.

ಗಂಗೋತ್ರಿಯಿಂದ ಕುವೆಂಪು ನಗರದ ವಿಜಯ ಬ್ಯಾಂಕ್‌ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಹುಣಸೂರು ಜಂಕ್ಷನ್‌ವರೆಗೆ ಕೃಷ್ಣರಾಜ ಬುಲೆವಾರ್ಡ್‌ ರಸ್ತೆ ವಿಸ್ತರಿಸಲಾಗಿದೆ. ಮುಡಾದಿಂದ ಬೋಗಾದಿ ಜಂಕ್ಷನ್‌ವರೆಗಿನ ರಸ್ತೆ ಡಾಂಬರೀಕರಣ ನಡೆದಿದೆ. ಕಳೆದ 25 ವರ್ಷಗಳಲ್ಲಿ ಇಂತಹ ಕೆಲಸ ನಡೆದಿಲ್ಲ ಎನ್ನುತ್ತಾರೆ.

ಒಳಭಾಗದಲ್ಲಿ ರಸ್ತೆಯ ದುರವಸ್ಥೆ: ಆದರೆ ಮುಖ್ಯರಸ್ತೆಯಿಂದ ಒಳಭಾಗದ ಪ್ರದೇಶಗಳಿಗೆ ತೆರಳಿದಂತೆ ರಸ್ತೆಯ ದುರವಸ್ಥೆ ಎದ್ದುಕಾಣುತ್ತದೆ. ಗೋಕುಲಂನ ಕೆಲವು ಭಾಗಗಳು, ಕುಂಬಾರಕೊಪ್ಪಲು, ಮಹದೇಶ್ವರ ಬಡಾವಣೆಯಲ್ಲಿ ರಸ್ತೆಗಳ ಅಭಿವೃದ್ಧಿಪಡಿಸಬೇಕಿದೆ. ಮಧ್ಯಮ ವರ್ಗದವರು ಮತ್ತು ಬಡವರೇ ಹೆಚ್ಚಾಗಿರುವ ಕುಂಬಾರಕೊಪ್ಪಲು ಪ್ರದೇಶದಲ್ಲಿ ನೀರಿನ ಪೈಪ್‌ ಮತ್ತು ಒಳಚರಂಡಿ ಕಾಮಗಾರಿಗೆ ರಸ್ತೆಯನ್ನು ಅಗೆಯಲಾಗಿದ್ದು, ಇನ್ನೂ ಸರಿಪಡಿಸಿಲ್ಲ.

ನಿರ್ಮಾಣವಾಗದ ಮಾರುಕಟ್ಟೆ: ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್‌ ಕಟ್ಟಡಗಳನ್ನು ಉರುಳಿಸಿ ಪಾರಂಪರಿಕ ಶೈಲಿಯಲ್ಲಿ ಮರುನಿರ್ಮಾಣ ಮಾಡುವ ಕೆಲಸ ಬಾಕಿ ಉಳಿದುಕೊಂಡಿದೆ. ಮಂಡಿ ಮಾರುಕಟ್ಟೆ ನವೀಕರಣ ಕೆಲಸವೂ ನಡೆದಿಲ್ಲ.

ಜನರ ಅಭಿಪ್ರಾಯಗಳು....

ಅಭಿವೃದ್ಧಿ ಕೆಲಸ ನಡೆದಿದೆ

ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ. ನೀರು, ವಿದ್ಯುತ್‌ ಸಮಸ್ಯೆಯಿಲ್ಲ. ಕುಂಬಾರಕೊಪ್ಪಲು, ಮಹದೇಶ್ವರ ಬಡಾವಣೆಗಳಲ್ಲಿ ರಸ್ತೆಗಳು ಅಭಿವೃದ್ದಿಯಾಗಬೇಕಿದೆ. ಕ್ಷೇತ್ರದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿನ ರಸ್ತೆಗಳು ಉತ್ತಮವಾಗಿಲ್ಲ. ಸ್ವಚ್ಚತೆಗೆ ಇನ್ನಷ್ಟು ಗಮನಹರಿಸಬೇಕಿತ್ತು – ರಾಮಸ್ವಾಮಿ, ಕುಂಬಾರಕೊಪ್ಪಲು

ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ

ಎಲ್ಲ ಕೆಲಸಗಳೂ ನಡೆದಿವೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿರುವುದು ಕಣ್ಣಿಗೆ ಕಾಣುತ್ತದೆ. ಜನರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿದ್ದಾರೆ. ನಾವಿರುವ ಪ್ರದೇಶದಲ್ಲಿ ನೀರು ರಾತ್ರಿಯ ಹೊತ್ತು ಮಾತ್ರ ಬರುತ್ತದೆ. ಹಗಲಿನಲ್ಲೂ ಕೆಲಹೊತ್ತು ನೀರು ಬಿಡುವ ವ್ಯವಸ್ಥೆ ಮಾಡಬೇಕು. ವಾರ್ಡ್‌ ವ್ಯಾಪ್ತಿಯ ರಸ್ತೆಗಳು ಚೆನ್ನಾಗಿವೆ. ಮೂಲಸೌಕರ್ಯ ದೊರೆತಿದೆ – ರುದ್ರಪ್ಪ, ವಿನಾಯಕನಗರ

ಡೊನೇಶನ್‌ ಹಾವಳಿ ತಪ್ಪಿಸಬೇಕು

ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎನ್ನುತ್ತಾರೆ. ಆದರೆ ಕಣ್ಣಿಗೆ ಕಾಣಿಸುತ್ತಿಲ್ಲ. ಶಾಸಕರು ಒಮ್ಮೆಯೂ ಈ ಕಡೆ ತಲೆಹಾಕಿಲ್ಲ. ಬಡವರಿಗೆ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ನಮಗೆ ಉಚಿತವಾಗಿ ಏನೂ ಬೇಡ. ದುಡಿದು ತಿನ್ನುತ್ತೇವೆ. ಇತರ ಮೂಲಸೌಕರ್ಯ ಒದಗಿಸಿಕೊಡಬೇಕು. ಖಾಸಗಿ ಶಾಲೆಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಡೊನೇಷನ್‌ ಹಾವಳಿ ವಿಪರೀತವಾಗಿದೆ – ಶಕುಂತಲಾ, ವಿ.ವಿ.ಪುರಂ.

ಜನರ ಒಡನಾಟ ಇಲ್ಲ

ಶಾಸಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳಿಂದ ಕೆಲಸ ಮಾಡಿಸಿದ್ದಾರೆ. ಕಾಲೇಜು ಕಟ್ಟಡ, ಆಸ್ಪತ್ರೆಗಳು ತಲೆ ಎತ್ತಿವೆ. ಆದರೆ, ಶಾಸಕರು ಜನರೊಂದಿಗೆ ಒಡನಾಟ ಇಟ್ಟುಕೊಂಡಿಲ್ಲ. ಜನರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಮನವಿ ಸಲ್ಲಿಸಲು ತೆರಳಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಐದು ವರ್ಷಗಳಲ್ಲಿ ಕೊಳೆಗೇರಿಗಳ ಅಭಿವೃದ್ಧಿಗೆ ಗಮನ ನೀಡಿಲ್ಲ – ಬಿ.ಜಿ.ಕೇಶವ, ಪಡುವಾರಹಳ್ಳಿ

ಇನ್ನೂ ಅಭಿವೃದ್ಧಿಯಾಗಬೇಕಿದೆ

ಒಟ್ಟಾರೆಯಾಗಿ ಅಭಿವೃದ್ಧಿ ಆಗಿದೆ ಎನ್ನಬಹುದು. ನಾವು ವಾಸವಿರುವ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆಯಿಲ್ಲ. ನೀರಿನ ಕೊರತೆ ಕಂಡುಬಂದಿಲ್ಲ. ರಸ್ತೆಗಳು ಚೆನ್ನಾಗಿವೆ. 20 ವರ್ಷಗಳ ಹಿಂದಿನ ಮೈಸೂರಿಗೂ, ಈಗಿನ ಮೈಸೂರಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ ಇಷ್ಟು ಸಾಲದು. ಇನ್ನೂ ಅಭಿವೃದ್ಧಿಯಾಗಬೇಕು – ಜಿ.ಎಂ.ಪಾಟೀಲ, ಗೋಕುಲಂ 3ನೇ ಹಂತ

ರಸ್ತೆ ವಿಸ್ತರಣೆ ಆಗಿಲ್ಲ

ನಜರಾಬಾದ್‌ ಪೊಲೀಸ್‌ ಠಾಣೆಯಿಂದ ಮೈಸೂರು ಡೇರಿವರೆಗಿನ ರಸ್ತೆಯ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ವಿಸ್ತರಣೆ ಕಾಮಗಾರಿಯನ್ನು ಆದ್ಯತೆಯಿಂದ ಕೈಗೊಳ್ಳಬೇಕಿತ್ತು. ಶಾಸಕರು ಕಣ್ಣಿಗೆ ಸಿಗುತ್ತಿಲ್ಲ – ಮೋಹನಕುಮಾರ್‌, ನಜರಾಬಾದ್‌.

ಸರ್ಕಾರದ ಅನುದಾನದ ಸದ್ಬಳಕೆ

ಸರ್ಕಾರದ ಅನುದಾನದಿಂದ ನಡೆಯಬೇಕಾದ ಎಲ್ಲ ಕೆಲಸಗಳೂ ನಡೆದಿವೆ. ಅನಾಥ ಮಕ್ಕಳಿಗೆ ಹಾಸ್ಟೆಲ್‌ ನಿರ್ಮಿಸಲಾಗಿದೆ. ಆಸ್ಪತ್ರೆಗಳು ನಿರ್ಮಾಣಗೊಂಡಿವೆ. ಶಾಸಕರು ತುಂಬಾ ಕೆಲಸ ಮಾಡಿದ್ದಾರೆ – ಸಿ.ಎಸ್‌.ಮಹದೇವ್‌, ನಜರಾಬಾದ್‌.

ಕ್ಷೇತ್ರದ ವ್ಯಾಪ್ತಿ ಪ್ರದೇಶಗಳು

ಚಾಮರಾಜ ಕ್ಷೇತ್ರವು ಪಾಲಿಕೆಯ 21ರಿಂದ 43ನೇ ವಾರ್ಡ್‌ವರೆಗಿನ ಪ್ರದೇಶಗಳನ್ನು ಒಳಗೊಂಡಿದೆ. ಮುಖ್ಯವಾಗಿ ಮಂಚೇಗೌಡನಕೊಪ್ಪಲು, ಹೆಬ್ಬಾಳ, ವಿಜಯನಗರ, ಭೈರವೇಶ್ವರನಗರ, ಗೋಕುಲಂ, ಕುಂಬಾರಕೊಪ್ಪಲು, ಮೇಟಗಳ್ಳಿ, ಬಿಎಂಶ್ರೀ ನಗರ, ಯಾದವಗಿರಿ, ವಿ.ವಿ.ಮೊಹಲ್ಲಾ, ಒಂಟಿಕೊಪ್ಪಲು, ಜಯಲಕ್ಷ್ಮಿಪುರಂ, ವಿನಾಯಕನಗರ, ಮಂಜುನಾಥಪುರ, ವಾಲ್ಮೀಕಿ ರಸ್ತೆ, ಮಾನಸಗಂಗೋತ್ರಿ, ಸರಸ್ವತಿಪುರಂ, ಮಂಡಿಮೊಹಲ್ಲಾ, ನಜರಾಬಾದ್‌ ಪ್ರದೇಶಗಳು ಸೇರಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry