7

ವಾಸ್ತವ, ಕಲ್ಪನೆಗಳ ಪಾಕ ‘ಎಟಿಎಂ’

Published:
Updated:
ವಾಸ್ತವ, ಕಲ್ಪನೆಗಳ ಪಾಕ ‘ಎಟಿಎಂ’

ಸಿನಿಮಾ: ಎಟಿಎಂ

ನಿರ್ದೇಶನ: ಅಮರ್

ನಿರ್ಮಾಪಕ: ಎಸ್.ವಿ. ನಾರಾಯಣ್

ತಾರಾಗಣ: ವಿನಯ್ ಗೌಡ, ಚಂದು, ಶೋಭಿತಾ, ಹೇಮಲತಾ, ಸೂರ್ಯ

ನಗದು ಪಡೆದುಕೊಳ್ಳಲು ಬೆಂಗಳೂರಿನ ಒಂದು ಎಟಿಎಂಗೆ ಹೊಕ್ಕಿದ್ದ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಇದು ನಡೆದಿದ್ದು 2013ರಲ್ಲಿ. ಎಟಿಎಂ ಕೇಂದ್ರದಲ್ಲಿ ಇದ್ದ ಸಿಸಿಟಿವಿ ಕ್ಯಾಮೆರಾ ಆತನ ಮುಖವನ್ನು ಸೆರೆಹಿಡಿದಿತ್ತು. ಹೀಗಿದ್ದರೂ, ಈತ ಪೊಲೀಸರ ಕೈಗೆ ಸಿಕ್ಕಿದ್ದು 2017ರಲ್ಲಿ. ಆ ಮನುಷ್ಯ ಈಗ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.

ಹೀಗಿರುವ ಸಂದರ್ಭದಲ್ಲಿ, ನಿರ್ದೇಶಕ ಅಮರ್‌ ಅವರು ಎಟಿಎಂನಲ್ಲಿ ನಡೆದ ಹಲ್ಲೆಯನ್ನು ಆಧಾರವಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ಹೆಸರು ‘ಎಟಿಎಂ’. ಅಂದರೆ ‘ಅಟೆಂಪ್ಟ್‌ ಟು ಮರ್ಡರ್‌.’ ಜ್ಯೋತಿ ಉದಯ್‌ ಅವರ ಮೇಲೆ ನಡೆದ ಹಲ್ಲೆ, ಹಲ್ಲೆಕೋರನ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವು ವರದಿಗಳು ಸೇರಿದಂತೆ ಒಂದೆರಡು ನೈಜ ಕಥೆಯ ಎಳೆಗಳನ್ನು, ಇನ್ನೊಂದಿಷ್ಟು ಕಾಲ್ಪನಿಕ ಕಥೆಯ ಎಳೆಗಳನ್ನು ಒಟ್ಟಾಗಿಸಿ ಮಾಡಿರುವ ಸಿನಿಮಾ ಇದು.

ಸಿನಿಮಾ ಶುರು ಆಗುವುದು ಒಂದು ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಯುವ ದೃಶ್ಯಗಳನ್ನು ತೋರಿಸುವ ಮೂಲಕ. ಇದಾದ ತಕ್ಷಣ ನಿರ್ದೇಶಕರು ಸಿನಿಮಾ ಕಥೆಯನ್ನು ಆರಂಭಿಸಿಬಿಡುತ್ತಾರೆ. ನಾಯಕ, ನಾಯಕಿಯ ಶಕ್ತಿ–ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸುವ ದೃಶ್ಯಾವಳಿಗಳು, ಅವರು ಎಷ್ಟೊಂದು ಒಳ್ಳೆಯವರು ಎಂಬುದನ್ನು ವಿವರಿಸುವ ಸಂದರ್ಭಗಳು ಇದರಲ್ಲಿ ಇಲ್ಲ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಧಾರಿಗಳಿಗೆಂದೇ ಒಂದು ಟ್ರ್ಯಾಕ್‌ ಇರುತ್ತದೆ. ಅದು ಕೂಡ ‘ಎಟಿಎಂ’ನಲ್ಲಿ ಇಲ್ಲ.

ಸಿನಿಮಾದ ಕಥೆ ಆರಂಭದಿಂದಲೇ ಗಂಭೀರ ನೆಲೆಯಲ್ಲಿ ಪಯಣ ಆರಂಭಿಸುತ್ತದೆ. ತನಿಖಾಧಿಕಾರಿ ಅಮರ್‌ (ಈ ಪಾತ್ರ ನಿಭಾಯಿಸಿದವರು ವಿನಯ್ ಗೌಡ) ಹಲ್ಲೆಕೋರ ಯಾರು ಎಂಬುದರ ತನಿಖೆ ಆರಂಭಿಸುತ್ತಾನೆ. ಪತ್ರಕರ್ತೆ ಪ್ರಿಯಾ (ಹೇಮಲತಾ ವಿ.) ಕೂಡ ಈ ಪ್ರಕರಣದ ಬಗ್ಗೆ ತನಗಿದ್ದ ಆಸಕ್ತಿಯ ಕಾರಣದಿಂದಾಗಿ ಹಲ್ಲೆಕೋರ ಯಾರಿರಬಹುದು ಎಂಬುದನ್ನು ಹುಡುಕುವ ಕೆಲಸ ಆರಂಭಿಸಿರುತ್ತಾಳೆ. ಇವೆರಡರ ನಡುವಲ್ಲೇ, ಕ್ಯಾಬ್‌ ಚಾಲಕ ಶಿವು (ಚಂದು ಗೌಡ) ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನ ಪ್ರೇಯಸಿ ರಿಯಾ ಶೆಟ್ಟಿ (ಶೋಭಿತಾ) ಕೂಡ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾಳೆ. ಹಲ್ಲೆಕೋರನನ್ನು ಅಮರ್‌ ಹೇಗೆ ಪತ್ತೆ ಮಾಡುತ್ತಾನೆ, ಶಿವು ಮತ್ತು ರಿಯಾ ಜೋಡಿಯನ್ನು ಅಪಾಯದಿಂದ ಹೇಗೆ ಪಾರುಮಾಡುತ್ತಾನೆ ಎಂಬುದು ಕಥೆಯ ಸಾರರೂಪ.

ಕಥೆಯನ್ನು ಹೇಳಿರುವ ಶೈಲಿ ಮಾಮೂಲಿಯಾಗಿಯೇ ಇದೆ. ಎಲ್ಲರಿಗೂ ಗೊತ್ತಿರುವ ಕಥೆಯೊಂದನ್ನು ಒಂದಿಷ್ಟು ಬದಲಾವಣೆಗಳೊಂದಿಗೆ ಸಿನಿಮಾ ರೂಪದಲ್ಲಿ ಹೇಳಿರುವ ಕಾರಣ, ಮುಂದೇನಾಗುತ್ತದೆ ಎಂಬ ವಿಚಾರದಲ್ಲಿ ದೊಡ್ಡ ಮಟ್ಟಿನ ಸಸ್ಪೆನ್ಸ್‌ ಕಾಯ್ದುಕೊಳ್ಳುವುದು ಸಿನಿತಂಡಕ್ಕೆ ಕಷ್ಟವಾಗಿದೆ. ಆದರೆ, ವಿನಯ್–ಹೇಮಲತಾ, ಚಂದು–ಶೋಭಿತಾ ನಟನೆ ತಾಜಾ ಆಗಿ ಕಾಣುತ್ತದೆ. ತನಿಖೆಯ ಪ್ರಕ್ರಿಯೆಯನ್ನು ಅಬ್ಬರಗಳಿಲ್ಲದೆ, ವಾಸ್ತವಕ್ಕೆ ಹತ್ತಿರವಿರುವಂತೆ ತೋರಿಸಲು ತಂಡ ಯತ್ನಿಸಿದೆ.

ತನಿಖಾಧಿಕಾರಿ ಅಮರ್‌ ಒಬ್ಬ ಚೈನ್‌ ಸ್ಮೋಕರ್‌. ಆ ಪಾತ್ರ ನಿಭಾಯಿಸಿರುವ ವಿನಯ್ ಗೌಡ ಅವರು ಸಿಗರೇಟು ಸೇದಲು ಕಷ್ಟಪಟ್ಟಿರುವುದು ತೆರೆಯ ಮೇಲೆ ಗೋಚರಿಸುತ್ತದೆ! ಆದರೆ ಅವರು ಗತ್ತಿನಿಂದ ಅಭಿನಯಿಸಲು ಮಾಡಿರುವ ಪ್ರಯತ್ನ ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ಚಿತ್ರದ ಒಂದೆರಡು ಹಾಡುಗಳು ಕೂಡ ನೆನಪಿನಲ್ಲಿ ಉಳಿಯುತ್ತವೆ. ಸಿನಿಮಾಕ್ಕೆ ತಾರ್ಕಿಕ ಅಂತ್ಯ ನೀಡದಿರುವುದು ಕೆಲವರಲ್ಲಿ ‘ಯಾಕೆ ಹೀಗೆ’ ಎಂಬ ಪ್ರಶ್ನೆ ಮೂಡಿಸಲೂಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry