3

ವಲಸೆ, ವೈವಿಧ್ಯ ಹೂರಣದ ಸಮೋಸಾ

Published:
Updated:
ವಲಸೆ, ವೈವಿಧ್ಯ ಹೂರಣದ ಸಮೋಸಾ

ಭಾರತವನ್ನು ಅರೆಕ್ಷಣದಲ್ಲಿ ಆಂಗ್ಲರ ಮುಂದೆ ತಂದು ನಿಲ್ಲಿಸುವ ಸಾಮರ್ಥ್ಯ ಇರುವ ಕೆಲವು ಭಾರತೀಯ ಊರುಗಳಿವೆ. ಸ್ಮಾರಕಗಳಿವೆ. ಶಬ್ದಗಳಿವೆ. ಅಂತಹ ವಿಶೇಷ ಶಕ್ತಿಯ ಶಬ್ದಗಳಲ್ಲೊಂದು ‘ಸಮೋಸಾ’. ಸಮೋಸಾ ಎನ್ನುವ ಶಬ್ದಕ್ಕೆ ಕಿವಿ ನಿಮಿರಿ, ಕಣ್ಣುಗಳು ಹುಡುಕಾಡಿ, ಬಾಯಿಯಲ್ಲಿ ನೀರೂರುವ ಜನರು ಬ್ರಿಟಿಷರು. ಬ್ರಿಟಿಷರ ಬಾಯಲ್ಲೂ,  ಇಂಗ್ಲಿಷ್ ನಿಘಂಟುಗಳಲ್ಲೂ ಸಮೋಸಾ ಎಂದೇ ಕರೆಯಲ್ಪಡುವ ‘ಭಾರತೀಯ ಸಮೋಸಾ’ ಬ್ರಿಟನ್ನಿನ ಅತಿ ಜನಪ್ರಿಯ ತಿಂಡಿಗಳಲ್ಲೊಂದು.

ಸಮೋಸಾದ ಹುಟ್ಟು ಎಲ್ಲೇ ಆಗಿದ್ದರೂ ಇಂದು ಬ್ರಿಟನ್ನಿನಲ್ಲಿ ಮನೆಮಾತಾಗಿರುವ ಸಮೋಸಾ ಭಾರತದಿಂದಲೇ ಬ್ರಿಟನ್ನಿಗೆ ಪ್ರಯಾಣ ಮಾಡಿದ್ದು ಮತ್ತೆ ಅಲ್ಲಿ ಮನೆ ಮಾಡಿದ್ದು, ಆಮೇಲೆ ಮನೆಮಾತಾದದ್ದು. ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಬ್ರಿಟಿಷರು ಕಲಿತ ಅದೆಷ್ಟೋ ಭಾರತೀಯ ಸ್ಥಳೀಯ ಸೊಲ್ಲುಗಳು ಅವರ ಶಬ್ದಭಂಡಾರ ಸೇರುವಾಗ ಅವರ ನಾಲಿಗೆಯಲ್ಲಿ ಉರುಳುವಾಗ ಬೇರೆ ಬೇರೆ ರೂಪ ಆಕಾರ ವಿಕಾರ  ಪಡೆದದ್ದು ನಾವು ನೋಡಿದ್ದೇವೆ, ಕೇಳಿದ್ದೇವೆ. ಈಗ ಬ್ರಿಟನ್ನಿನ ಯಾವ ಪ್ರಾಂತ್ಯ, ಯಾವ ಮೂಲೆಗೆ ಹೋದರೂ ‌ಸಮೋಸಾದ ಹೆಸರು ನಾವು ನೀವು ಕರೆಯುವಂತೆ ಸಮೋಸಾವೇ.

ಇಲ್ಲಿನ ಶಾಲೆಯ ಮಕ್ಕಳಿಗೆ ಪಾಠ ಹೇಳುವಾಗ ಮಾಸ್ತರ ಮಾಸ್ತರಿಣಿಯರು ಮೂರು ಮೂಲೆಯ ಆಕೃತಿಗೋ, ತ್ರಿಕೋನಾಕಾರಕ್ಕೋ ಉದಾಹರಣೆಯಾಗಿ ಸಮೋಸಾವನ್ನು ಹೆಸರಿಸಿದ ಘಟನೆಗಳೂ ಇವೆ. ಹಾಗಾಗಿಯೇ ಬ್ರಿಟಿಷರ ಮಟ್ಟಿಗೆ ಸಮೋಸಾ ಎಂದರೆ ಒಂದು ಸಾಮಾನ್ಯ ಬೀದಿ ತಿಂಡಿಯಲ್ಲ. ಬದಲಿಗೆ ತಮ್ಮ ರುಚಿಪ್ರಜ್ಞೆಯನ್ನು ಬಡಿದೆಬ್ಬಿಸುವ, ವಿಶೇಷ ಕೂಟಗಳಿಗೆ ಕಳೆ ಕೊಡುವ, ಮತ್ತೆ ಇತಿಹಾಸದ ಕುತೂಹಲಿಗಳಿಗೆ ಜಗತ್ತಿನ ಸಂಸ್ಕೃತಿ, ವಲಸೆ, ವಿಕಾಸ, ಪರಿವರ್ತನೆಗಳ ಕಥೆಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡ ಅಸಾಮಾನ್ಯ ಖಾದ್ಯ.

ಸಮೋಸಾದ ಹುಟ್ಟಾ ಹೆಸರು ಸಮೋಸಾ ಅಲ್ಲ. ಮತ್ತೆ ಅದರ ಮೂಲ ಸ್ವರೂಪ, ರುಚಿ ಈಗ ನಾವು ನೋಡುವ, ತಿನ್ನುವ ಹಾಗಿರಲಿಲ್ಲ. ಮುಂದೊಂದು ದಿನ  ಹೇಗಿರುತ್ತದೋ ಗೊತ್ತಿಲ್ಲ. ಸಮೋಸಾದ ಹುಟ್ಟು, ಬೆಳವಣಿಗೆ, ವಲಸೆ ಎಲ್ಲಿ ಹೇಗೆ ಯಾವಾಗ ಆಗಿರಬಹುದು ಎಂದು ಹುಡುಕುತ್ತ ಹೊರಟರೆ, ಕಥೆ, ಕಟ್ಟುಕಥೆ ಆಲಿಸುತ್ತ ನಡೆದರೆ ಮಧ್ಯಪ್ರಾಚ್ಯದ ಕಡೆಗೆ ಹೋಗಬೇಕಾಗುತ್ತದೆ. ಸಮೋಸಾಕ್ಕೆ ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇದೆ. ಒಂದನೆಯ ಶತಮಾನದ ಇರಾನಿನ ಚರಿತ್ರೆಯಲ್ಲಿ ಸಮೋಸಾದಂತಹ ತಿನಿಸಿನ ವಿಚಾರ ಇದೆ.

11ನೇಯ ಶತಮಾನದ ಪರ್ಷಿಯಾ ಸಾಹಿತ್ಯದಲ್ಲಿ ಸಮೋಸಾದ ಬಗ್ಗೆ ಬರೆದವರಿದ್ದಾರೆ. ಅಂದಿನ ಅಲ್ಲಿನ ರಾಜಮಹಾರಾಜರ ದರ್ಬಾರಿನಲ್ಲಿ ಮಾಂಸದ ತುಣುಕುಗಳಿಂದ, ಒಣಗಿಸಿದ ಹಣ್ಣುಗಳಿಂದ, ಬೀಜದ ಪುಡಿಗಳಿಂದ ತುಂಬಿದ ಸಮೋಸಾ ವಿತರಿಸುತ್ತಿದ್ದ ವರ್ಣನೆಯಿದೆ. ಅದು ಸಮೋಸಾದ ದೀರ್ಘ ಚರಿತ್ರೆಯ ಒಂದು ಕಾಲಘಟ್ಟ ಅಷ್ಟೇ. ಸಮೋಸಾದ ಬಗ್ಗೆ ಆ ಕಾಲಕ್ಕಿಂತ ಹಿಂದೆಯೂ ಮುಂದೆಯೂ ಉದ್ದುದ್ದ ಕಥೆಗಳು, ಪಿಸುಮಾತುಗಳು, ಗಾಳಿಸುದ್ದಿಗಳು ಇವೆ. ಒಂದಾನೊಂದು ಕಾಲದಲ್ಲಿ ಪರ್ಷಿಯಾದಲ್ಲಿ  'ಸಂಬೋಸಾಗ್'  ಎಂದು ಕರೆಯಲ್ಪಡುತ್ತಿದ್ದ ತಿಂಡಿ ಅಲ್ಲಿನ ವರ್ತಕರ ಜೊತೆ ಅವರು ಹೋದಲ್ಲೆಲ್ಲ ಹೋಯಿತು. ಎಣ್ಣೆಯಲ್ಲಿ ಕರಿದ ಗಟ್ಟಿ ಹೊರಕವಚದ ‘ಸಂಬೋಸಾಗ್’ ದೂರಪಯಣಿ ವರ್ತಕರ ಚೀಲಗಳಲ್ಲಿ ಹಾಯಾಗಿ ಹಾಳಾಗದೆ ಇರುವುದರಿಂದ ವರ್ತಕರ ಸಂಚಾರಸ್ನೇಹಿ ಆಹಾರವಾಯಿತು. ತನ್ನನ್ನು ಹೊತ್ತೊಯ್ದವರ ಜೊತೆ ಪಯಣಿಸಿದ ತಿರುಗಾಡಿದ ಸಮೋಸಾ ಹೋದಲ್ಲೆಲ್ಲ ಪ್ರೀತಿಗಳಿಸಿ ಅಲ್ಲೆಲ್ಲ ತನ್ನ ವಾಸ್ತವ್ಯ ಹೂಡಿತು.

ಹೋದಲ್ಲಿನ ಸಂಸ್ಕೃತಿ, ಭಾಷೆಯಲ್ಲಿ ಬೆರೆತು ಅಲ್ಲಲ್ಲೇ ಹೊಂದಿಕೊಂಡು ತನ್ನ ಪ್ರಕೃತಿಯನ್ನೂ ಹೆಸರನ್ನೂ ಮಾರ್ಪಡಿಸಿಕೊಂಡಿತು. ಇರಾನ್, ಮೊರೊಕ್ಕೊ, ಗ್ರೀಸ್, ಆಫ್ಘಾನಿಸ್ತಾನ, ತಜಿಕಿಸ್ತಾನ್, ಚೈನಾ, ಹಿಂದೂಸ್ತಾನ ಹೀಗೆ ಇಂದಿನ ಸಮೋಸಾದ ಹಳೇ ಬೇರುಗಳು, ಟೊಂಗೆಗಳು, ಟಿಸಿಲುಗಳು, ಹೊಸ ಚಿಗುರುಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಹಬ್ಬಿದವು. ಒಂದಾನೊಂದು ಕಾಲದಲ್ಲಿ ಸಮೋಸಾ ಆಸ್ಥಾನದ ರಸಭೋಜನದ ಭಾಗವೂ ಆಗಿತ್ತು. ಮುಂದೆ ನೂರು, ಸಾವಿರ ವರ್ಷಗಳನ್ನು ದಾಟಿ, ಪ್ರಾಂತ್ಯ ದೇಶಗಳನ್ನು ಮೀರಿ ಬೆಳೆಯುವಾಗ, ಬಾಳುವಾಗ ಅದು ವಿಶೇಷ ಔತಣಗಳ ಭಾಗವಾಗಿಯೂ ದಿನನಿತ್ಯದ ಜನಪ್ರಿಯ ಅಗ್ಗದ ಬೀದಿ ತಿಂಡಿಗಳ ಪ್ರತಿನಿಧಿಯಾಗಿಯೂ ಕಾಣಿಸಿಕೊಂಡಿತು.ಸಮೋಸಾದ ಹುಟ್ಟು, ಬೆಳವಣಿಗೆ, ವಲಸೆ, ರೂಪಾಂತರಗಳು ಇತಿಹಾಸ ಅನ್ವೇಷಕರಿಗೆ ಜಗತ್ತಿನ ಪ್ರಾಚೀನ ಸಂಸ್ಕೃತಿಗಳ, ಅವುಗಳ ಹರಿವಿನ, ತಿರುವಿನ, ಬಳುಕಿನ ತೊರೆಯಾಗಿಯೂ ಕಂಡೀತು. ಪರ್ಷಿಯಾ ದೇಶಗಳಲ್ಲಿ ಹುಟ್ಟಿದ ತಿನಿಸು ಕೊಲ್ಲಿ ಖಾರಿ ಪರ್ವತ ಕಂದರಗಳನ್ನು ದಾಟಿ ದಕ್ಷಿಣ ಏಷ್ಯಾಕ್ಕೆ ಬಂದ ಮೇಲೆ ಹಿಂದೂಸ್ತಾನದಲ್ಲಿಯೇ ಹುಟ್ಟಿದ್ದೋ ಏನೋ ಎನ್ನುವಷ್ಟು ಆಳವಾಗಿ ಬೇರುಬಿಟ್ಟಿತು. ಹದಿನಾಲ್ಕನೆಯ ಶತಮಾನದಲ್ಲಿ ದೆಹಲಿಯಲ್ಲಿದ್ದ ಕವಿ ಅಮೀರ್ ಖುಸ್ರೊನ ಕಾವ್ಯದಲ್ಲೂ, ಆಫ್ರಿಕಾದ ಇಬ್ನ ಬಟೂಟ್‌ನ ಪ್ರವಾಸಿ ಕಥೆಯಲ್ಲೂ ಸಮೋಸಾದ ಉಲ್ಲೇಖವಾಗಿದೆ. ಭಾರತೀಯ ಬಾಣಸಿಗರ ಕೈಯ ಹದ, ನಾವೀನ್ಯ, ಸೃಜನಶೀಲತೆಯಲ್ಲಿ ಬೇಯಿಸಿಕೊಂಡು, ಕರಿಸಿಕೊಂಡು, ಹುರಿದುಕೊಂಡು ಈಗ ನಾವೆಲ್ಲಾ ನೋಡುವ ರೂಪಕ್ಕೆ ಮಾರ್ಪಾಡಾಯಿತು. ಆಲೂಗಡ್ಡೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬಟಾಣಿ, ನೀರುಳ್ಳಿ, ದೇಸಿ ಮಸಾಲೆಗಳ ಪಾಕದ ಹೂರಣದಲ್ಲಿ ಸಮೋಸಾ ಭಾರತದಲ್ಲಿ ಮರುಹುಟ್ಟು ಪಡೆಯಿತು. ಮತ್ತೆ ಬ್ರಿಟಿಷರ ಇನ್ನೂರು ವರ್ಷಗಳ ಭಾರತ ವಾಸದಲ್ಲಿ ಅವರನ್ನು ತೀವ್ರವಾಗಿ ಕಾಡುತ್ತ ಅವರೊಡನೆ ಬ್ರಿಟನ್ನಿಗೂ ಕಾಲಿಟ್ಟಿತು.

ಬ್ರಿಟಿಷರು ಇಂದು ತಿನ್ನುವ ಸಮೋಸಾಗಳು ಭಾರತದಲ್ಲಿ ಮಾರ್ಪಾಡು ಹೊಂದಿದ ಅಥವಾ ಮರುಹುಟ್ಟು ಪಡೆದ ಸಮೋಸಾಗಳೇ ಆದ್ದರಿಂದ ಬ್ರಿಟಿಷ್ ಸಮೋಸಾಗಳ ಜನಕರು ಭಾರತೀಯರೇ ಎಂದು ವಾದಿಸಲು ಅಡ್ಡಿಯಿಲ್ಲ. ಮತ್ತೆ ಈ ಕಾಲದಲ್ಲಿ ಸಿಗುವ ಬಗೆ ಬಗೆಯ ರುಚಿ ರುಚಿಯ ಸಮೋಸಾಗಳಲ್ಲಿ ಒಂದಾದ ಸಸ್ಯಾಹಾರಿ ಸಮೋಸಾದ ನಿರ್ಮಾತೃಗಳು ಭಾರತೀಯರೇ.

ಬ್ರಿಟಿಷರು ತಮ್ಮ ದೇಶದಲ್ಲಿ ಮಾತ್ರವಲ್ಲದೇ ತಿರುಗಲು ಹೋದಲ್ಲೂ ಸಮೋಸಾ ಸಿಕ್ಕಿದರೆ ತಮ್ಮ ಪರಿಚಯಸ್ಥರೊ ನೆಂಟರೋ ಸಿಕ್ಕಂತೆ ಆತ್ಮೀಯವಾಗುತ್ತಾರೆ. ಭಾರತವನ್ನು ಸುತ್ತಿ ಬಂದ ಕೆಲ ಬ್ರಿಟಿಷರು ಭಾರತದ ಯಾವ ಊರಲ್ಲಿ ಎಂತಹ ಸಮೋಸಾ ಸಿಗುತ್ತದೆ ಎಂದು ಹೇಳಬಲ್ಲರು. ಅಮೃತಸರದ ಸಮೋಸಾ ವಾರಣಾಸಿಯ ಸಮೋಸಾಕ್ಕಿಂತ ಹೇಗೆ ಭಿನ್ನ ಮತ್ತೆ ಇವೆರಡಕ್ಕಿಂತ ಜೈಪುರದ ಅಲ್ಲದಿದ್ದರೆ ಹೈದರಾಬಾದಿನ ಸಮೋಸಾ ಯಾಕೆ ಬೇರೆ ಎಂದೂ ವಿವವರಿಸಬಲ್ಲರು.

2016ರಲ್ಲಿ ‘ಸಮೋಸಾದ ಮೂಲಕ ಹೇಳಿದ ಭಾರತದ ಕಥೆ’ ಎನ್ನುವ ಹೊಸ ನೋಟದ ಬರಹವನ್ನು ಬಿ.ಬಿ.ಸಿ. ಸುದ್ದಿ ಮಾಧ್ಯಮ ಪ್ರಕಟಿಸಿತ್ತು. ಭಾರತವನ್ನೂ ಸಮೋಸಾವನ್ನೂ ಚೆನ್ನಾಗಿ ಅರಿತವರು ಭಾರತದ ಊರೂರಿನ ವೈವಿಧ್ಯಕ್ಕೆ ಕನ್ನಡಿಯಾಗಿ, ಭಾಷೆ ರಾಜ್ಯಗಳ ಸಹಜೀವನವೇ ಮಸಾಲೆಗಳ ಸಾಮರಸ್ಯವಾಗಿ ಸಮೋಸಾದಲ್ಲೂ ಕಾಣುತ್ತದೆ ಎಂದು ಉಪಮೆ ನೀಡಬಲ್ಲರು; ರೂಪಕ ಕಲ್ಪಿಸಬಲ್ಲರು. ಬ್ರಿಟಿಷರ ಮನಸ್ಸಿನಲ್ಲಿ ಮಾತ್ರವಲ್ಲ ಮನೆಯ ಸಂತೋಷ ಕೂಟಗಳಲ್ಲೂ ಮೋಜಿನ ಊಟಗಳಲ್ಲೂ ಸಮೋಸಾಕ್ಕೆ ವಿಶೇಷ ಸ್ಥಾನ. ಇಲ್ಲಿನ ಎಲ್ಲ ಭಾರತೀಯ ಹೋಟೆಲ್‌ಗಳಲ್ಲಿನ ತಿಂಡಿಗಳ ಪಟ್ಟಿಯಲ್ಲೂ ಸಮೋಸಾ ಇರಲೇಬೇಕು. ಇಲ್ಲಿನ ಪಬ್‌ಗಳು, ಶುದ್ಧ ಬ್ರಿಟಿಷ್ ರೆಸ್ಟೋರೆಂಟ್‌ಗಳು ಕೂಡ ತಮ್ಮ ತಿಂಡಿಗಳ ಪಟ್ಟಿಗೆ ಸಮೋಸಾವನ್ನು ಸೇರಿಸುತ್ತಿವೆ. ಇಲ್ಲವೇ ವಾರದಲ್ಲೊಂದೆರಡು ಬಾರಿ ಸಮೋಸಾ ಕರಿದು ಬಡಿಸುವುದುಂಟು.

ಸೂಪರ್ ಮಾರ್ಕೆಟ್‌ಗಳಲ್ಲೂ ಶೀಥಲೀಕರಿಸಿದ ಸಮೋಸಾಗಳು ಸಿಗುತ್ತವೆ. ಮನೆಗೆ ಕೊಂಡುಹೋಗಿ ಕರಿದು ತಿನ್ನುವ ಚಪಲ ಮತ್ತು ಸಿದ್ಧಿ ಇರುವವರಿಗೆ. ಕಚೇರಿಯ ಒಳಗೆ ಸಮೋಸಾ ತಂದಿಟ್ಟು ತಮ್ಮ ಖುಷಿ ಹಂಚಿಕೊಳ್ಳುವವರೂ ಇದ್ದಾರೆ. ಯಾವುದೊ ಉದಾತ್ತ ಕಾರಣಕ್ಕೆ, ಕ್ಯಾನ್ಸರ್ ಸಂಶೋಧನೆಗೆ ಸಮೋಸಾಗಳನ್ನು ಮಾರಿ ದೇಣಿಗೆ ಸಂಗ್ರಹಿಸುವುದೂ ಇದೆ. ಬ್ರಿಟನ್‌ನಲ್ಲಿ ಸಂತೋಷದ ಕೂಟಗಳಲ್ಲದೆ ನಿಧಿ ಸಂಗ್ರಹದ ಕಾಯಕದಲ್ಲೂ ನೆರವಾಗುವುದು ಸಮೋಸಾದ ಬಹುಮುಖಿ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸಮೋಸಾ ಸಪ್ತಾಹದಲ್ಲಿ ಪಾಲ್ಗೊಂಡಿದ್ದ ಬ್ರಿಟಿಷ್‌ ಪ್ರಜೆಗಳು

ಕಚೇರಿಯಲ್ಲಿ ನಾನೊಮ್ಮೆ ಹೀಗೆ ಯಾರೋ ತಂದಿಟ್ಟ ಸಮೋಸಾಗಳನ್ನು ಪ್ಲೇಟಿಗೆ ಹಾಕಿ ಜೊತೆಗೆ ನಂಜಿಕೊಳ್ಳಲು ಟೊಮೆಟೊ ಕೆಚಪ್ ಎಲ್ಲಿ ಎಂದು ಹುಡುಕುವಾಗ ಆಂಗ್ಲ ಸಹೋದ್ಯೋಗಿಯೊಬ್ಬ ಸಮೋಸಾ ತಿನ್ನುವುದಾದರೆ ಹುಣಿಸೆ ಹಣ್ಣಿನ ‘ಹುಳಿಸಿಹಿ ಚಟ್ನಿ’ಯಲ್ಲೇ ತಿನ್ನಬೇಕು ಎಂದು ನನಗೆ ಬುದ್ಧಿವಾದ ಹೇಳಿದ್ದ. ಮತ್ತೆ ತಿಂದ ಮೇಲೆ ಕೈಗೆ ಅಂಟಿದ ಚಟ್ನಿಯನ್ನು ಚೀಪಿ ನೆಕ್ಕಿ ಚಪ್ಪರಿಸಿಯೇ ಚೊಕ್ಕಗೊಳಿಸಬೇಕು ಎಂದೂ ತನ್ನ ವಿಶಾಲ ಅನುಭವದಿಂದ ತಿಳಿಸಿದ್ದ. ಇಂಗ್ಲಿಷ್ ಮಕ್ಕಳ ಬಾಯಿ ರುಚಿ ಹಾಳು ಮಾಡಿದ್ದೇ ಈ ಅಮೆರಿಕದ ಕೆಚಪ್‌ಗಳು ಎಂದು ದೂರಿದ್ದ! ಸಮೋಸಾವನ್ನು ಇಷ್ಟ ಪಟ್ಟುತಿನ್ನುವುದು ಮಾತ್ರವಲ್ಲದೆ ಹೇಗೆ ತಿನ್ನಬೇಕು ಎಂದು ಹೇಳಿಕೊಡುವಷ್ಟು ಸಮೋಸಾವನ್ನು ಆತ್ಮೀಯವಾಗಿ ಬ್ರಿಟಿಷರು ಸ್ವೀಕರಿಸಿದ್ದಾರೆ. ತಮ್ಮ ಬದುಕಿನ ಹಲವು ಆಯಾಮಗಳಲ್ಲಿ ತುಂಬಿಸಿಕೊಂಡಿದ್ದಾರೆ.

ಇಲ್ಲಿನ ಭಾರತೀಯ ತಿಂಡಿಗಳಲ್ಲಿಯೇ ಅತ್ಯಂತ ಹೆಚ್ಚು ಮಾನ್ಯತೆ ಪಡೆದಿರುವ ಸಮೋಸಾಕ್ಕೆ, ಆಂಗ್ಲರ ಊಟದ ಕೂಟದ ಬದುಕನ್ನು ಶತಮಾನಗಳಿಂದ ಆವರಿಸಿರುವ ಸಮೋಸಾಕ್ಕೆ ಇಲ್ಲಿ ಈಗೊಂದು ಸಂಸ್ಮರಣೆಯ ಗರಿಯೂ ಸಿಕ್ಕಿದೆ. ಮೊನ್ನೆ ಮೊನ್ನೆ ಇದೇ ತಿಂಗಳ 9ರಿಂದ 13ರರ ತನಕ ಬ್ರಿಟನ್ನಿನ ಕೆಲ ನಗರಗಳಲ್ಲಿ ‘ರಾಷ್ಟ್ರೀಯ ಸಮೋಸಾ ಸಪ್ತಾಹ’ ಆಚರಣೆ ನಡೆಯಿತು. ದೇಶ, ಭಾಷೆ, ಸಂಸ್ಕೃತಿ ಮೀರಿ ಬೆಳೆದ ಸಮೋಸಾಕ್ಕೆ ಇಂತಹ ಆಚರಣೆಯ ಗೌರವ ಹಾಗೂ ಸಂಭ್ರಮ ದೊರೆತಿರುವುದು ಇದೇ ಮೊದಲು. ಪ್ರತಿವರ್ಷವೂ ಬಿಯರ್ ಹಬ್ಬ, ಕೇಕ್ ದಿನ ಬರ್ಗರ್ ಸಪ್ತಾಹ ಮಾಡುವ ಈ ದೇಶದಲ್ಲಿ ಈ ವರ್ಷ ಸಮೋಸಾಕ್ಕೂ ಒಂದು ಅರ್ಹ ಕಿರೀಟ ಸಿಕ್ಕಿದೆ.

ಇಲ್ಲಿನ ಪಂಜಾಬಿ ಮೂಲದ ರೊಮೈಲ್ ಗುಲ್ಜಾರ, ‘ಪುಕಾರ ಪತ್ರಿಕೆ’ಯ ಸಂಪಾದಕ ತಾವು ಅದಮ್ಯವಾಗಿ ಪ್ರೀತಿಸುವ, ದಿನನಿತ್ಯ ತಿನ್ನುವ ಸಮೋಸಾಕ್ಕೊಂದು ರಾಷ್ಟ್ರಮಟ್ಟದ ಸಂಸ್ಮರಣೆ, ಆಚರಣೆ ನಡೆಯಬೇಕೆಂದು ಮೊದಲ ರಾಷ್ಟ್ರೀಯ ಸಮೋಸಾ ಸಪ್ತಾಹವನ್ನು ಸಂಘಟಿಸಿದರು. ಇದೇ ನೆಪದಲ್ಲಿ ಸಮೋಸಾದ ಚರಿತ್ರೆ, ಅದರ ವಲಸೆ, ಮಾರ್ಪಾಡುಗಳನ್ನು ಮತ್ತೊಮ್ಮೆ ಮೆಲುಕು ಹಾಕಲಾಯಿತು. ಮನೆಗಳಲ್ಲಿ ಸಮೋಸ ಮಾಡಲು ಕಲಿಯಿರಿ, ಬಗೆ ಬಗೆಯ ಸಮೋಸ ತಿನ್ನಿರಿ ಎಂದು ಸಪ್ತಾಹದ ಸಂಘಟಕರು ಕರೆ ಇತ್ತರು.

ಸಮೋಸಾ ಮಾಡುವ, ತಿನ್ನುವ ಸ್ಪರ್ಧೆಗಳು ಆಯೋಜಿಸಲ್ಪಟ್ಟವು. ಸಮೋಸಾ ತಯಾರಿ ಕಲಿಯುವವರಿಗೆ ಪ್ರಾತ್ಯಕ್ಷಿಕೆಗಳು ನಡೆದವು. ಸ್ಥಳದಲ್ಲೇ ಸಮೋಸಾ ಮಾಡಲು ಪ್ರಯತ್ನಪಟ್ಟ ಕೆಲವು ಬ್ರಿಟಿಷರು ಸಮೋಸಾ ಮಾಡುವುದು ತೀರಾ ಕಷ್ಟವೇನಲ್ಲ. ತಾವೂ ಮನೆಯಲ್ಲಿ ಮಾಡುವೆವು ಎಂದರು. ಈ ಆಚರಣೆಯ ಭಾಗವಾಗಿ ಉದಾತ್ತ ಉದ್ದೇಶಗಳಿಗೆ ಚಂದಾ ಎತ್ತಲು, ದಾನ ಪಡೆಯಲು ಸಾವಿರಗಟ್ಟಲೆ ಸಮೋಸಾಗಳನ್ನು ಮಾರಾಟ ಮಾಡಿದರು. ಸಮೋಸಾದ ನೆಪದಲ್ಲಿ ಲಕ್ಷಗಟ್ಟಲೆ ನಿಧಿ ಸಂಗ್ರಹಿಸಿದರು. ಮತ್ತೆ ಹೀಗೆ ಸಂಗ್ರಹಿಸಿದ ನಿಧಿಯನ್ನು ಮಾನಸಿಕ ಅಸ್ವಸ್ಥ್ಯತೆಯಿಂದ ಬಳಲುವವರ ಶುಶ್ರೂಷೆಯಲ್ಲಿ ತೊಡಗಿಸಿಕೊಂಡ, ಸೇವೆಯಲ್ಲಿರುವಾಗ ಜೀವ ಕಳೆದುಕೊಂಡ ಪೊಲೀಸರ ಕುಟುಂಬಗಳಿಗೆ ಆಸರೆ ನೀಡುವ ಸಂಸ್ಥೆಗಳಿಗೆ ನೀಡಲಾಯಿತು.ಸಪ್ತಾಹದಲ್ಲಿ ಸಮೋಸಾ ತಯಾರಿಸುತ್ತಿರುವುದು

ಬ್ರಿಟನ್ನಿನ ಬೇರೆ ಬೇರೆ ಪ್ರಾಂತ್ಯಗಳಿಂದ ಸಮೋಸಾ ಸಪ್ತಾಹಕ್ಕೆ ಬೆಂಬಲ ಸಿಕ್ಕಿತು. ಮನೆಗಳಲ್ಲಿ ಹೋಟೆಲ್‌, ಕಚೇರಿಗಳಲ್ಲಿ ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಕ್ಕೆ ನಾವು ಸವಿಯುವ ಸಮೋಸಾಕ್ಕೆ ಇವೆಲ್ಲವನ್ನೂ ಮೀರಿದ ವ್ಯಕ್ತಿತ್ವ, ಕಥೆ, ಇತಿಹಾಸ ಇರುವುದನ್ನು ಮತ್ತೆ ನೆನಪಿಸುವಲ್ಲಿ ಈ ಸಪ್ತಾಹ ಸಹಕಾರಿಯಾಯಿತು. ಮೊದಲ ರಾಷ್ಟ್ರೀಯ ಸಮೋಸಾ ಸಪ್ತಾಹ ಈಗ ಮುಗಿದಿದ್ದರೂ ಮುಂದಿನ ವರ್ಷದ ಸಪ್ತಾಹ ಬ್ರಿಟನ್ನಿನಲ್ಲಿ ಇನ್ನೂ ಹೆಚ್ಚು ಕುತೂಹಲ ಮತ್ತು ಆಕರ್ಷಣೆ ಪಡೆಯಲಿದೆ ಎಂದು ರೊಮೈಲ್ ಗುಲ್ಜಾರ ಹೇಳುತ್ತಾರೆ.

ಶತಮಾನಗಳಿಂದ ಪ್ರಯಾಣ ಮಾಡುತ್ತಾ ಊರು, ಕೇರಿ, ರಾಜ್ಯ, ದೇಶ– ಖಂಡಗಳನ್ನು ದಾಟಿ, ಹೋದಲ್ಲಿ ನಿಂತಲ್ಲಿ ಸಂಸ್ಕೃತಿಗಳನ್ನು ಬೆಸೆದ ಸಮೋಸಾ ಇದೀಗ ತನ್ನ ಹೆಸರಲ್ಲಿ ಮುಗಿದ ಆಚರಣೆಯನ್ನು ನೆನೆಯುತ್ತ ಖುಷಿಯಲ್ಲಿರಬೇಕು. ಬಾಯಿ ಚಪಲವನ್ನು, ಸಂಜೆಯ ಹಸಿವನ್ನು ನೀಗಿಸುತ್ತ ಬದುಕಿದ ಸಮೋಸಾ ಬ್ರಿಟನ್ನಿನಲ್ಲಿ ಉದ್ದಾಮ ಕಾರಣಗಳಿಗೆ ನಿಧಿ ಸಂಗ್ರಹಿಸಲು ಸಹ ನೆರವಾಗುತ್ತಿರುವುದು ಸಮೋಸಾದ ದೀರ್ಘ ಚಲನಶೀಲ ಕಥೆಯಲ್ಲಿ ಮೆರುಗಿನ ಪುಟವಾಗಿ ದಾಖಲಾಗಿದೆ. ತನ್ನ ಹೆಸರು ಮಾತ್ರದಿಂದಲೇ ಬ್ರಿಟಿಷರಿಗೆ ಭಾರತದ ನೆನಪನ್ನು ಮೂಡಿಸುವ ಸಾಮರ್ಥ್ಯ ಪಡೆದ, ಜಗತ್ತಿನ ಮೊದಲ ಬೀದಿಬದಿ ತಿಂಡಿ ಎಂದು ಬ್ರಿಟಿಷರಿಂದ ಹೊಗಳಿಸಿಕೊಳ್ಳುವ ಸಮೋಸಾ ಇದೀಗ ತಾನೇ ಉತ್ಸವವಾಗಿ ಮೆರೆದಿದೆ.

(ಲೇಖಕರು ಇಂಗ್ಲೆಂಡಿನಲ್ಲಿ ವಿಮಾನ ತಂತ್ರಜ್ಞರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry