ರೈತರ ಹಿತಕ್ಕಾಗಿ ಅಧಿಕಾರ ನೀಡಿ

7

ರೈತರ ಹಿತಕ್ಕಾಗಿ ಅಧಿಕಾರ ನೀಡಿ

Published:
Updated:

ಶಿರಾ: ಬಡಜನರು ಹಾಗೂ ರೈತರ ಹಿತಕ್ಕಾಗಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಜೆಡಿಎಸ್ ಮುಖಂಡ, ಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಜೆಡಿಎಸ್ ಕಚೇರಿ ಬಳಿ ಶುಕ್ರವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಹತ್ತು ವರ್ಷದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಆದರೆ ಅವರಿಗೆ ರೈತರು, ಶೋಷಿತ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದರಿಂದ ಜನತೆ ಸಂಕಷ್ಟ ಪಡುವಂತಾಗಿದೆ ಎಂದರು.

ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳಿಂದಾಗಿ ಜನರು ಇಂದು ಸಹ ನೆನಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ಜಾರಿಗೆ ಬರದಂತೆ ಎಚ್ಚರ ವಹಿಸಿ ಇಲ್ಲಿ ಬಿ.ಸತ್ಯನಾರಾಯಣ ಅವರಿಗೆ ಮತ ನೀಡಿದರೆ ಅದು ಕುಮಾರಸ್ವಾಮಿಗೆ ನೀಡಿದಂತೆ ಎಂದರು.

ರಾಜ್ಯದಲ್ಲಿ ಸಾಲ ಬಾಧೆಯಿಂದ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ರಾಜ್ಯದಲ್ಲಿ ಜೆಡಿಎಸ್  ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವ ಮೂಲಕ ನಿಮ್ಮ ಹಿತಕಾಯಲಿದೆ ಎಂದರು.

ರೋಡ್ ಶೋ: ನಗರದ ಕಸ್ತೂರಿ ರಂಗಪ್ಪನಾಯಕನ ಕೋಟೆ ಬಳಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡ ಜೆಡಿಎಸ್ ಅಭಿಮಾನಿಗಳು ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಲಕ ಜೆಡಿಎಸ್ ಕಚೇರಿಗೆ ಕರೆ ತರಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry