ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬಿಜೆಪಿ ಭಾರಿ ಮೆರವಣಿಗೆ

ಹಾರಾಡಿದ ಪಕ್ಷದ ಬಾವುಟಗಳು, ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ
Last Updated 21 ಏಪ್ರಿಲ್ 2018, 11:41 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಜಿ.ಜ್ಯೋತಿ ಗಣೇಶ್ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶ್‌ಗೌಡ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 2.30ಕ್ಕೆ ತುಮಕೂರು ನಗರ ವಿಧಾಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ಅವರು ಸಂಸದ ಎಸ್.‍ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಂಚಮಾರಯ್ಯ, ಪಕ್ಷದ ಮುಖಂಡ ಟಿ.ಎಸ್.ನಿರಂಜನ್ ಅವರೊಂದಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು.

ಬೆಳಿಗ್ಗೆ ನಗರದ ಬಿ.ಎಚ್.ರಸ್ತೆಯ ವಿನಾಯಕನಗರದಲ್ಲಿ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು ಪೂಜೆ ಸಲ್ಲಿಸಿದರು. ನಂತರ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಪುಷ್ಪಗಳಿಂದ ಅಲಂಕೃತ ವಾಹನದಲ್ಲಿ ಇಬ್ಬರೂ ಅಭ್ಯರ್ಥಿಗಳು ಭಾರಿ ಬೆಂಬಲಿಗರೊಂದಿಗೆ ಸುಮಾರು ಮೂರು ತಾಸು ಮೆರವಣಿಗೆಯಲ್ಲಿ ಸಾಗಿ ಬಂದಿರು. ಮೆರವಣಿಗೆಯಲ್ಲಿ ಪಕ್ಷದ ಬಾವುಟಗಳು, ಕೇಸರಿ ಬಾವುಟಗಳು ಹಾರಾಡಿದವು.

ಧ್ವನಿವರ್ಧಕಗಳಲ್ಲಿ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳನ್ನು ಬೆಂಬಲಿಸಿ, ಪಕ್ಷದ ಪರ ಘೋಷಣೆ ಕೂಗಿದರು. ಒಬ್ಬ ಅಭಿಮಾನಿ ಪೇಟ, ಕೇಸರಿ ಶಾಲು, ಕಪ್ಪು ಕನ್ನಡಕವನ್ನು ಹಾಕಿಕೊಂಡು ಮೆರವಣಿಗೆಯುದ್ಧಕ್ಕೂ ಗಮನ ಸೆಳೆದರು.

ಅಭ್ಯರ್ಥಿಗಳೊಂದಿಗೆ ಪಕ್ಷದ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಉಪಾ
ಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಜಣ್ಣ, ಗುಳೂರು ಶಿವಕುಮಾರ್, ಪಕ್ಷದ ಮುಖಂಡ ನರಸಿಂಹಮೂರ್ತಿ ಇದ್ದರು.

ಜಿಲ್ಲಾಡಳಿತ ಕಚೇರಿ ಬಳಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬರುತ್ತಿದ್ದಂತೆಯೇ ನೂಕುನುಗ್ಗಲು ಉಂಟಾಯಿತು. ಬ್ಯಾರಿಕೇಡ್ ದಾಟಿ ನುಸುಳಿ ಬರುತ್ತಿದ್ದವರನ್ನು ಪೊಲೀಸರು ಕತ್ತು ಹಿಡಿದು ಆಚೆ ಹಾಕಿದರು.

ಜಿಲ್ಲಾ ಚುನಾವಣಾಧಿಕಾರಿ ಸಿಡಿಮಿಡಿ

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಹೊರ ಬರುತ್ತಿದ್ದಂತೆಯೇ ಜಿಲ್ಲಾಡಳಿತ ಕಚೇರಿ ಆವರಣದಲ್ಲಿಯೇ ಮಾಧ್ಯಮದವರೊಂದಿಗೆ ಮಾತನಾಡಲು ಮುಂದಾಗಿದ್ದನ್ನು ಕಂಡ ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ವಿಶಾಲ್‌ ಅವರು ಸಿಡಿಮಿಡಿಗೊಂಡರು.

ಅಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿ ಏಕೆ ಮಾತನಾಡಲು ಅವಕಾಶ ಕೊಟ್ಟಿದ್ದು? ಆಚೆ ಕಳಿಸಿ. ಇಲ್ಲದೇ ಇದ್ದರೆ ಚೆನ್ನಾಗಿರಲ್ಲ ನೋಡಿ. ಏನ್ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು. ಬಳಿಕ ರಸ್ತೆಯಲ್ಲಿ ಅಭ್ಯರ್ಥಿಗಳು ಮಾಧ್ಯಮದವರೊಂದಿಗೆ ಮಾತನಾಡಲು ಮುಂದಾದರೂ ಬೆಂಬಲಿಗರ ಕೇಕೆ, ಗದ್ದಲದಲ್ಲಿ ಮಾತನಾಡದೇ ತೆರಳಿದರು. ಪೊಲೀಸರು ಹೊರಗಡೆ ಕಳಿಸಿದ್ದನ್ನು ವಿರೋಧಿಸಿ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಧರಣಿ ನಡೆಸಿದರು. ಬಳಿಕ ಕಚೇರಿ ಪೊಲೀಸರು ಚುನಾವಣಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ಕೊಟ್ಟ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT