ಜಿಲ್ಲೆಯಲ್ಲಿ ಎಂಟು ನಾಮಪತ್ರ ಸಲ್ಲಿಕೆ

7
l ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರಡ್ಡಿ l ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ l ಜೆಡಿಎಸ್‌ನ ಎ.ಸಿ. ಕಾಡ್ಲೂರ

ಜಿಲ್ಲೆಯಲ್ಲಿ ಎಂಟು ನಾಮಪತ್ರ ಸಲ್ಲಿಕೆ

Published:
Updated:

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಎಂಟು ನಾಮಪತ್ರ ಸಲ್ಲಿಕೆಯಾಗಿವೆ.ನಗರದಲ್ಲಿ ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರಡ್ಡಿ, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ, ಜೆಡಿಎಸ್ ನ ಎ.ಸಿ. ಕಾಡ್ಲೂರ, ಯಾದಗಿರಿ ಕ್ಷೇತ್ರದಲ್ಲಿ ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕೃಷ್ಣ , ಭಾರತೀಯ ಜನತಾ ಪಾರ್ಟಿ ಯಿಂದ ಅಬ್ದುಲ್ ನಬಿ, ಗುರುಮಠಕಲ್‌ನಲ್ಲಿ ಎಸ್‌ಯುಸಿಐ (ಸಿ)ನಿಂದ ಕೆ. ಸೋಮಶೇಖರ್ ಹಾಗೂ ಶಹಾಪುರದಲ್ಲಿ ಬಿಜೆಪಿಯ ಗುರುಪಾಟೀಲ ಶಿರವಾಳ ಎರಡು ನಾಮಪತ್ರ ಸಲ್ಲಿಸಿದ್ದಾರೆ.

ನಗರದಲ್ಲಿ ಬೆಳಿಗ್ಗೆ 11.30ಕ್ಕೆ ಕಾಂಗ್ರೆಸ್‌ನ ಜಿಲ್ಲಾ ಕಚೇರಿಯಿಂದ ಡಾ.ಎ.ಬಿ.ಮಾಲಕರಡ್ಡಿ ಭಾರೀ ಬೆಂಬಲಿಗರ ಜತೆ ಮೆರವಣಿಗೆಯೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ದರು. ಈ ಸಂದರ್ಭದಲ್ಲಿ ಹಳೆ ಡಿಸಿ ಕಚೇರಿ ರಸ್ತೆ ಭಾರಿ ಬೆಂಬಲಿಗರಿಂದ ತುಂಬಿ ಸಂಚಾರದಲ್ಲಿ ವ್ಯತ್ಯಯ ಉಂಟಾ ಯಿತು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಬೆಂಬಲಿಗರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಶ್ರೀನಿವಾಸ ಕಂದಕೂರ, ಸ್ಯಾಮಸನ್‌ ಮಾಳಿಕೇರಿ, ಸುಭಾಷ್ ಕರಣಿ ಮುಖಂಡರೊಂದಿಗೆ ಚುನಾವಣಾ ಧಿಕಾರಿ ಕಚೇರಿ ಪ್ರವೇಶಿಸಿದ ಮಾಲಕರಡ್ಡಿ ಮತಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಲಕರಡ್ಡಿ ನಾಮಪತ್ರ ಸಲ್ಲಿಕೆಗೆ ಅರ್ಧಗಂಟೆ ತೆಗೆದುಕೊಂಡರು. ಇದರಿಂದ ಅವರಿಗಾಗಿ ನೂರಾರು ಬೆಂಗಲಿಗರು ಸುಡುಬಿಸಿಲಿನಲ್ಲಿ ಕಾದು ಕುಳಿತಿತ್ತು.

ನಾಮಪತ್ರ ಸಲ್ಲಿಸಿ ಹೊರಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮತ್ತೆ ಚುನಾವಣೆಯಲ್ಲಿ ಗೆಲುವು ನಮ್ಮದೆ. ಪ್ರಣಾಳಿಕೆಯಲ್ಲಿ ಪಕ್ಷ ಘೋಷಿಸಿರುವ ಭರವಸೆಯನ್ನು ಈಡೇರಿಸಲು ಶ್ರಮಿಸುತ್ತೇನೆ. ಈ ಅವಧಿಯಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಅವಧಿಯಲ್ಲಿ ಪೂರ್ಣಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.

ಚುನಾವಣಾ ಕಚೇರಿಯಿಂದ ಮಾಲಕರಡ್ಡಿ ಹೊರಬರುತ್ತಿದ್ದಂತೆ ಭಾರಿ ಜನಸ್ತೋಮ ಅವರನ್ನು ಸುತ್ತುವರಿದು ಶುಭಾಶಯ ಕೋರಿತು. ಮಾಲಕರಡ್ಡಿ ಅವರು ಮುಂದೆ ಕೆಲ ಕಾರ್ಯಕರ್ತರು ತೆಂಗಿನಕಾಯಿ ಒಡೆಯಲು ಮುಂದಾದರು. ಆದರೆ, ಮುಖಂಡರು ಅದನ್ನು ತಡೆದರು. ನಂತರ ಮಹಿಳೆಯರು ಆರತಿ ಬೆಳಗಿ ಮಾಲಕರಡ್ಡಿ ಅವರಿಗೆ ತಿಲಕ ಇಟ್ಟರು.

ನಂತರ ತೆರೆದ ಕಾರಿನಲ್ಲಿ ನಿಂತು ನೆರೆದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮಾಲಕರಡ್ಡಿ ವಿಜಯದ ಸಂಕೇತ ತೋರಿ ಕೈ ಮುಗಿದರು. ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಬಿಸಿಲಲ್ಲಿ ತೆರೆದ ಕಾರಿನಲ್ಲಿ ನಿಂತಿದ್ದ ಡಾ.ಎ.ಬಿ.ಮಾಲಕರಡ್ಡಿ ಅವರಿಗೆ ಕಾರ್ಯಕರ್ತರೊಬ್ಬರು ಕಾರು ಏರಿ ಛತ್ರಿ ಹಿಡಿದು ನೆರಳು ಮಾಡಿದರು.

ನೂರಾರು ಕಾರ್ಯಕರ್ತರು ಮಾಲಕರಡ್ಡಿ ಅವರಿಗೆ ಹಸ್ತಲಾಘವ ನೀಡಲು ಮುಂದಾದರು. ಬಿಸಿಲಿಗೆ ಬಳಲಿದಂತೆ ಕಂಡರೂ 84 ಇಳಿ ವಯಸ್ಸಿನ ಮಾಲಕರಡ್ಡಿ ಕಾರ್ಯಕರ್ತರಿಗೆ ಉತ್ಸಾಹದಿಂದಲೇ ಹಸ್ತಲಾಘವ ನೀಡಿ ಖುಷಿಪಡಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾ ಕಚೇರಿ ಆವರಣ ಖಾಲಿ ಮಾಡುವುದನ್ನು ಕಾಯುತ್ತಿದ್ದ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ 12.35 ನಿಮಿಷಕ್ಕೆ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಲು 15 ನಿಮಿಷ ಸಮಯ ತೆಗೆದುಕೊಂಡರು. ಅವರ ಹಿಂದೆ ಕಾಂಗ್ರೆಸ್‌ನಂತೆ ಬೆಂಬಲಿಗರು ಆಗಮಿಸಿರಲಿಲ್ಲ.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ವೆಂಟಕರಡ್ಡಿ ಮುದ್ನಾಳ,‘ಈ ಸಲ ಯಾದಗಿರಿ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಮಾಡಿರುವ ಲೋಪಗಳೇ ಬಿಜೆಪಿ ವರವಾಗಲಿದೆ. ಟಿಕೆಟ್‌ ವಂಚಿತರು ಅಸಮಾಧಾನಿಗಳಿರಬಹುದು. ಆದರೆ, ಕಾರ್ಯಕರ್ತರಲ್ಲಿ ಅಸಮಾಧಾನ ಇಲ್ಲ. ಅಸಮಾಧಾನಗೊಂಡಿರುವ ಮುಖಂಡರನ್ನು ಸಂಪರ್ಕಿಸಿ ಬೆಂಬಲಿಸು ವಂತೆ ಕೋರಿದ್ದೇನೆ’ ಎಂದು ಅವರು ತಿಳಿಸಿದರು.

ಕೆಲವೇ ಮುಖಂಡರೊಂದಿಗೆ ಮಧ್ಯಾಹ್ನ 2.45ಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಎ.ಸಿ.ಕಾಡ್ಲೂರ ನಾಮಪತ್ರ ಸಲ್ಲಿಸಿದರು. ಆದರೆ, ಆಸ್ತಿ ವಿವರ ಸಲ್ಲಿಸಿಲ್ಲ ಎಂಬುದಾಗಿ ಯಾದಗಿರಿ ಮತಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದರು.

ಗುರುಮಠಕಲ್ ವರದಿ: ವಿಧಾನಸಭಾ ಕ್ಷೇತ್ರದ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂ ನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಕೆ.ಸೋಮಶೇಖರ್ ಶುಕ್ರವಾರ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಪಟ್ಟಣದ ಸಿಹಿನೀರ ಬಾವಿಯಿಂದ ಚುನಾವಣಾಧಿಕಾರಿಗಳ ಕಾರ್ಯಾಲಯದವರೆಗೆ ಮೆರವಣಿಗೆಯ ಮೂಲಕ ತೆರಳಿ ಚುನಾವಣಾಧಿಕಾರಿ ಡಾ.ಪರಮೇಶ್ವರ ನಾಯಕ್‌ಗೆ ನಾಮಪತ್ರ ಸಲ್ಲಿಸಿದರು.

ಆಸ್ತಿ ವಿವರ:  ಕೆ.ಸೋಮಶೇಖರ ಅವರ ಎಸ್.ಬಿ.ಐ ಯಾದಗಿರಿ ಬ್ಯಾಂಕಿನ ಖಾತೆಯಲ್ಲಿ ₹ 4.57 ಲಕ್ಷಗಳು ಹಾಗೂ ಅವರ ಮಗಳು ಕೆ.ಚೇತನಾ ಅವರ ಎಸ್.ಬಿ.ಐ ಖಾತೆಯಲ್ಲಿ ₹ 1.07 ಲಕ್ಷ ಹೊಂದಿದ್ದಾರೆ.

ಅಭ್ಯರ್ಥಿಯ ಹೆಸರಿನಲ್ಲಿ ಯಾವುದೇ ಸ್ಥಿರ ಹಾಗೂ ಚರಾಸ್ತಿಗಳಿಲ್ಲ, ಅವರ ಪತ್ನಿ ಡಿ.ಉಮಾದೇವಿ ಅವರ ಹೆಸರಲ್ಲಿ ಯಾದಗಿರಿ ಜಿಲ್ಲೆ ಸೈದಾಪೂರದಲ್ಲಿ  ₹ 1 ಲಕ್ಷ ಮೌಲ್ಯದ 405 ಚದರ ಅಡಿ ವಿಸ್ತೀರ್ಣದ ನಿವೇಶನವಿದೆ (ಸಂ:591/40), ತಮಗೆ ಯಾವುದೇ ಸಾಲ ಹಾಗೂ ಯಾವುದೇ ಪ್ರಕರಣಗಳು ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

**

ಜೆಡಿಎಸ್‌ನ ಎ.ಸಿ. ಕಾಡ್ಲೂರ ಅವರು ನಾಮಪತ್ರ ಸಲ್ಲಿಸಿ ದ್ದಾರೆ. ಆದರೆ, ಆಸ್ತಿ ವಿವರ ಸಲ್ಲಿಸಿಲ್ಲ. ಕೊನೆ ದಿನದೊಳಗಾಗಿ ಆಸ್ತಿ ವಿವರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ – ಮಂಜುನಾಥ್, ಯಾದಗಿರಿ ಮತಕ್ಷೇತ್ರ ಚುನಾವಣಾಧಿಕಾರಿ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry