ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಅಭಿವೃದ್ಧಿ ಕುಂಠಿತ: ಸಚಿವ ಧರ್ಮೇಂದ್ರ ಪ್ರಧಾನ್

7

ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಅಭಿವೃದ್ಧಿ ಕುಂಠಿತ: ಸಚಿವ ಧರ್ಮೇಂದ್ರ ಪ್ರಧಾನ್

Published:
Updated:
ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಅಭಿವೃದ್ಧಿ ಕುಂಠಿತ: ಸಚಿವ ಧರ್ಮೇಂದ್ರ ಪ್ರಧಾನ್

ಮಂಗಳೂರು: ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಓಲೈಕೆ ರಾಜಕಾರಣದಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಓಲೈಕೆ ರಾಜಕಾರಣವೇ ಈ ವಿಧಾನಸಭಾ ಚುನಾವಣೆಯಲ್ಲಿ ಚರ್ಚೆ ಆಗಲಿರುವ ಪ್ರಮುಖ ವಿಚಾರಗಳು. ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಜನರನ್ನು ಕೋರಲಾಗುವುದು’ ಎಂದರು.

'ಐದು ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಲಾಗಿದೆ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಲಭ್ಯವಾದ ಸಾವಿರಾರು ಕೋಟಿ ರೂಪಾಯಿ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ದೂರದೃಷ್ಟಿ ಮತ್ತು ಬದ್ಧತೆಯ ಕೊರತೆಯಿಂದ ಅನುದಾನ ವ್ಯರ್ಥವಾಗಿದೆ’ ಎಂದು ಟೀಕಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಬಲ ಸರ್ಕಾರ ಅಧಿಕಾರದಲ್ಲಿದೆ. ಅಂತಹುದೇ ಆಡಳಿತ ಕರ್ನಾಟಕಕ್ಕೂ ಬೇಕಿದೆ. ಅದಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರಂತಹ ‍ಪ್ರಬಲ ನಾಯಕನನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮೋದಿ ಮತ್ತು ಯಡಿಯೂರಪ್ಪ ಜೋಡಿಯು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತುಹಾಕುವುದು ನಿಶ್ಚಿತ. ಕರ್ನಾಟಕವನ್ನು ಸುವರ್ಣಯುಗಕ್ಕೆ ಕೊಂಡೊಯ್ಯುವುದು ಬಿಜೆಪಿಯ ಗುರಿ ಎಂದರು.

ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟು ರದ್ಧತಿ ವಿಚಾರಗಳು ರಾಜ್ಯದ ಚುನಾವಣೆಯಲ್ಲಿ ಗಣನೆಗೆ ಬರುವುದಿಲ್ಲ. ಈ ಎರಡೂ ವಿಷಯಗಳಲ್ಲಿ ದೇಶದ ಜನರು ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದಾರೆ. ಈಗ ವಿರೋಧ ಪಕ್ಷದವರು ಆರೋಪ ಮಾಡುವುದಕ್ಕಾಗಿ ಮತ್ತೆ ಮತ್ತೆ ಇದೇ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಜನರು ಈ ಬಗ್ಗೆ ವಿರೋಧ ಪಕ್ಷದ ಮಾತನ್ನು ನಂಬುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ರಾಂತಿಕಾರಿ ಹೆಜ್ಜೆ

ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಆರೋಪದ ಕುರಿತು ‍ಪ್ರತಿಕ್ರಿಯಿಸಿದ ಸಚಿವರು, ‘12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣ ದಂಡನೆ ವಿಧಿಸುವಂತಹ ಕಾನೂನನ್ನು ಜಾರಿಗೆ ತರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಶನಿವಾರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದು, ಇದೊಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಹೆಜ್ಜೆ’ ಎಂದರು.

ಗೆಲುವಿಗಾಗಿ ಕಾರ್ಯತಂತ್ರ

ಇದೇ 28ರಿಂದ ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಚುರುಕಾಗಲಿದೆ. ಪ್ರಧಾನಿಯವರು ಪ್ರಚಾರಕ್ಕೆ ಮತ್ತೊಮ್ಮೆ ರಾಜ್ಯಕ್ಕೆ ಬರುವರು. ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಡಾ.ಮಹೇಂದ್ರ ಸಿಂಗ್‌ ಮತ್ತು ಬಿಜೆಪಿ ಹಿರಿಯ ನಾಯಕ ಓಂಪ್ರಕಾಶ್ ಮಾಥುರ್‌ ಅವರನ್ನು ಕರಾವಳಿ ಕರ್ನಾಟಕದ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರೂ ಕರಾವಳಿಯಲ್ಲೇ ಇದ್ದು, ಪ್ರಚಾರದ ಕುರಿತು ನಿಯಮಿತವಾಗಿ ಪರಾಮರ್ಶೆ ನಡೆಸುವರು ಎಂದು ತಿಳಿಸಿದರು.

ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಸಿದ್ಧತೆಗಳು ನಡೆದಿವೆ. ರಾಜ್ಯ ಸರ್ಕಾರದ ವೈಫಲ್ಯಗಳು ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಎಲ್ಲ ಮತದಾರರಿಗೆ ಮನವರಿಕೆ ಮಾಡಿಕೊಡಲು ಪರಿಕರಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಡಾ.ಮಹೇಂದ್ರ ಸಿಂಗ್‌, ಸಂಸದ ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಸಮಿತಿ ಸಂಚಾಲಕ ಮೋನಪ್ಪ ಭಂಡಾರಿ, ವಿಧಾನ ಪರಿಷತ್‌ ಸದಸ್ಯ ಗಣೇಶ್ ಕಾರ್ಣಿಕ್‌, ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry