ಟಿಕೆಟ್‌ ಹಂಚಿಕೆಯಲ್ಲಿ ನನ್ನ ಕೈವಾಡವಿಲ್ಲ: ಸಂಸದ ನಳಿನ್‌ಕುಮಾರ್ ಕಟೀಲ್

7

ಟಿಕೆಟ್‌ ಹಂಚಿಕೆಯಲ್ಲಿ ನನ್ನ ಕೈವಾಡವಿಲ್ಲ: ಸಂಸದ ನಳಿನ್‌ಕುಮಾರ್ ಕಟೀಲ್

Published:
Updated:
ಟಿಕೆಟ್‌ ಹಂಚಿಕೆಯಲ್ಲಿ ನನ್ನ ಕೈವಾಡವಿಲ್ಲ: ಸಂಸದ ನಳಿನ್‌ಕುಮಾರ್ ಕಟೀಲ್

ಮಂಗಳೂರು: ‘ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ನಾನು ಯಾವುದೇ ಪಾತ್ರವನ್ನೂ ನಿರ್ವಹಿಸಿಲ್ಲ. ಹಿರಿಯ ಮುಖಂಡ ಕೃಷ್ಣ ಪಾಲೇಮಾರ್‌ ಅವರು ನೋವಿನಿಂದ ನನ್ನ ಹೆಸರು ಹೇಳಿರಬಹುದು’ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.

ಪಾಲೇಮಾರ್‌ ಮಾಡಿರುವ ಆರೋಪ ಕುರಿತು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ನಾನು ಯಾವುದೇ ಆಕಾಂಕ್ಷಿಗಳ ಪರ ಲಾಬಿ ಮಾಡಿಲ್ಲ. ಯಾವ ಹಂತದಲ್ಲೂ ಯಾರ ಹೆಸರನ್ನೂ ನಾನು ಹೇಳಿಲ್ಲ’ ಎಂದರು.

ಪಾಲೇಮಾರ್‌ ಹಿರಿಯ ನಾಯಕರು. ಜಿಲ್ಲೆಯಲ್ಲಿ ಎರಡು ಬಾರಿ ಶಾಸಕರಾಗಿ ಸಚಿವರಾಗಿ ಒಳ್ಳೆಯ ಅಭಿವೃದ್ಧಿ ಕಾರ್ಯ ಮಾಡಿದವರು. ಅವರ ಮೇಲೆ ತಮಗೆ ಬಹಳ ಗೌರವ ಇದೆ. ಅವರು ಈ ಬಾರಿ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಈ ಬಾರಿ ಸೀಟು ಹಂಚಿಕೆ ನೇರ ರಾಷ್ಟ್ರೀಯ ಅಧ್ಯಕ್ಷರ ಮೂಲಕ ನಡೆದಿದೆ. ರಾಷ್ಟ್ರೀಯ ಅಧ್ಯಕ್ಷರೇ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.

‘ಟಿಕೆಟ್‌ ಕೈತಪ್ಪಿರುವುದರಿಂದ ಅವರಿಗೆ ಸಹಜವಾಗಿಯೇ ನೋವಾಗಿದೆ. ನನ್ನ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ನಾನು ಯಾರ ಪರವಾಗಿಯೂ ಲಾಬಿ ಮಾಡಿಲ್ಲ. ಯಾರಿಗೂ ಟಿಕೆಟ್‌ ಹಂಚಿಕೆ ಮಾಡುವ ಅಥವಾ ಕೇಳುವ ಹಕ್ಕು ನನಗಿಲ್ಲ. ಸಂಸದನಾಗಿ ನಾನು ಪಕ್ಷದ ಒಬ್ಬ ಕಾರ್ಯಕರ್ತನಷ್ಟೆ. ಕ್ಷೇತ್ರದಿಂದ ಬಂದಿರುವ ಎಲ್ಲ ಹೆಸರುಗಳನ್ನೂ ರವಾನೆ ಮಾಡಿದ್ದೇವೆ. ಶಿಫಾರಸು ಮಾಡುವಾಗ ಎಲ್ಲರೂ ಇದ್ದರು. ನೋವಿನಿಂದ ನನ್ನ ಹೆಸರು ಹೇಳಿರಬಹುದು. ಇಲ್ಲವೇ ಪ್ರೀತಿಯಿಂದಲೂ ಹೇಳಿರಬಹುದು. ಅವರೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದರು.

ಸತ್ಯಜಿತ್‌ ಸುರತ್ಕಲ್‌ ಕೂಡ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಕೇಳಿದಾಗ, ‘ಸತ್ಯಜಿತ್‌ ಕೂಡ ಹಲವು ವರ್ಷಗಳಿಂದ ಪಕ್ಷದ ಕೆಲಸ ಮಾಡಿದ್ದಾರೆ. ಟಿಕೆಟ್‌ ಕೇಳುವ ಹಕ್ಕು ಅವರಿಗೆ ಇದೆ. ಸಿಗದೇ ಇದ್ದಾಗ ನೋವಿನಲ್ಲಿ ಏನಾದರೂ ಹೇಳಿರಬಹುದು. ಎಲ್ಲ ವಿಚಾರಗಳನ್ನು ರಾಜ್ಯ ಮತ್ತು ರಾಷ್ಟ್ರದ ಹಿರಿಯ ನಾಯಕರ ಗಮನಕ್ಕೆ ತರುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ನೀಡುವ ಭರವಸೆ ನೀಡಿ, ಒಟ್ಟಿಗೆ ಕೊಂಡೊಯ್ಯುತ್ತೇವೆ. ಹಿಂದೂ ಸಮಾಜದ ಪರ ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕಿರುವುದು ಅನಿವಾರ್ಯ’ ಎಂದು ಉತ್ತರಿಸಿದರು.

‘ಪಾಲೇಮಾರ್‌ ಮತ್ತು ಸತ್ಯಜಿತ್‌ ಸುರತ್ಕಲ್‌ ನನಗಿಂತ ಎತ್ತರದ ಸ್ಥಾನದಲ್ಲಿ ಇರುವವರು. ಪಾಲೇಮಾರ್‌ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಸತ್ಯಜಿತ್‌ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ. ಅವರೊಂದಿಗೆ ಹಿರಿಯ ನಾಯಕರು ಮಾತುಕತೆ ನಡೆಸುತ್ತಾರೆ’ ಎಂದರು.

ಅಭ್ಯರ್ಥಿಗಳಲ್ಲಿ ಬದಲಾವಣೆ ಆಗುವುದೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಮಾಹಿತಿ ತಮಗೆ ಇಲ್ಲ. ಇಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನೂ ಹಿರಿಯ ನಾಯಕರ ಗಮನಕ್ಕೆ ತರಲಾಗಿದೆ. ಮುಂದೆ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry