ನ್ಯಾಯಾಂಗದ ಆತ್ಮಾವಲೋಕನಕ್ಕೆ ಸಕಾಲ

7

ನ್ಯಾಯಾಂಗದ ಆತ್ಮಾವಲೋಕನಕ್ಕೆ ಸಕಾಲ

ಶೇಖರ್‌ ಗುಪ್ತ
Published:
Updated:

ಬಸು ಭಟ್ಟಾಚಾರ್ಯ ಅವರು 1971ರಲ್ಲಿ ನಿರ್ಮಿಸಿದ್ದ, ಕೌಟುಂಬಿಕ ಜಗಳದ ಕಥಾವಸ್ತುವನ್ನು ಒಳಗೊಂಡ ‘ಅನುಭವ್‌’ ಚಿತ್ರದಲ್ಲಿ ಸಂಜೀವ್‌ ಕುಮಾರ್‌ ಅವರು ಪತ್ರಿಕಾ ಸಂಪಾದಕನಾಗಿ ಮತ್ತು ತನುಜಾ, ಅವರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದ ದೃಶ್ಯವೊಂದರಲ್ಲಿ ದಂಪತಿ ಮಧ್ಯೆ ನಡೆಯುವ ಸಂಭಾಷಣೆ ಗಮನ ಸೆಳೆಯುತ್ತದೆ. ‘ನೀವು ಪ್ರತಿಯೊಬ್ಬರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಸಂಪಾದಕೀಯ ಬರೆಯುವಿರಲ್ಲ, ನಮ್ಮ ಸಮಸ್ಯೆಗಳ ಬಗ್ಗೆಯೂ ಒಂದು ಬಾರಿ ಏಕೆ ಬರೆಯಬಾರದು’ ಎಂದು ಪತ್ನಿ ಗಂಡನನ್ನು ಪ್ರಶ್ನಿಸುತ್ತಾಳೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳೂ ಈಗ ಇದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಬೂಟಾಟಿಕೆ ಇಲ್ಲದ ಮತ್ತು ಭಾವೋದ್ವೇಗಕ್ಕೆ ಒಳಗಾದ ಅಪರೂಪದ ಸ್ಪಷ್ಟತೆ ಇರುವ ತೀರ್ಪು ನೀಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ನ್ಯಾಯಮೂರ್ತಿ ಬಿ.ಎಚ್‌. ಲೋಯಾ ಅವರು ನಾಗಪುರದಲ್ಲಿ ಸಾವನ್ನಪ್ಪಿದ ಘಟನೆ ಕುರಿತು ಸ್ವತಂತ್ರ ತನಿಖೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆ ನಡೆಸಿದ ಸು‍ಪ್ರೀಂ ಕೋರ್ಟ್‌ ಪೀಠವು ಈ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಕೀಳುಮಟ್ಟದ ಆರೋಪಗಳನ್ನು ಮಾಡಿರುವ ಅವಮಾನಕರವಾದ ದೂರು ನೀಡಿದ್ದ ಅರ್ಜಿದಾರರು ಮತ್ತು ಅವರ ಪರವಾಗಿ ವಾದ ಮಂಡಿಸಿದ್ದ ವಕೀಲರ ನಿಲುವನ್ನು ಪೀಠವು ಕಟು ಶಬ್ದಗಳಲ್ಲಿ ಟೀಕಿಸಿದೆ. ‘ಈ ಪ್ರಕರಣದಲ್ಲಿ ಇಡೀ ನ್ಯಾಯಾಂಗವನ್ನೇ ಹಗುರವಾಗಿ ಪರಿಗಣಿಸಲಾಗಿದೆ’ ಎಂದೂ ತೀಕ್ಷ್ಣವಾಗಿ ಟೀಕಿಸಲಾಗಿದೆ.

ಪಿಐಎಲ್‌ಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದರ ಜತೆಗೆ, ನ್ಯಾಯಾಂಗವನ್ನು ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಾಧ್ಯಮಗಳಿಂದ ರಕ್ಷಿಸಿಕೊಳ್ಳಬೇಕಾದ ಆಕ್ರೋಶವೂ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ. ಇದನ್ನೆಲ್ಲ ನೋಡಿದಾಗ, ಪ್ರತಿಯೊಬ್ಬರೂ ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರೆಲ್ಲರ ವಿರುದ್ಧ ನ್ಯಾಯಾಂಗವು ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ ಎಂಬ ಭಾವನೆ ಮೂಡಿಸಿದೆ.

ಅನುಭವ್‌ ಚಿತ್ರದಲ್ಲಿ ನಟಿ ತನುಜಾ ಪ್ರಶ್ನಿಸುವಂತೆ, ನಾವು ಕೂಡ ನ್ಯಾಯಮೂರ್ತಿಗಳಿಗೆ ಒಂದು ಸರಳ ಪ್ರಶ್ನೆ ಕೇಳಬಹುದಲ್ಲ; ‘ಇತರರಿಂದ ನ್ಯಾಯಾಂಗವನ್ನು ರಕ್ಷಿಸಿಕೊಳ್ಳಲು ಎಲ್ಲ ಕಾಲಕ್ಕೂ ನೀವು ತೀರ್ಪು ನೀಡುತ್ತಲೇ ಬಂದಿರುವಿರಲ್ಲ, ಇತರ ನ್ಯಾಯಮೂರ್ತಿಗಳಿಂದ ನ್ಯಾಯಾಂಗವನ್ನೂ ರಕ್ಷಿಸಿಕೊಳ್ಳುವ ಬಗ್ಗೆ ತೀರ್ಪು ನೀಡಲು ನಿಮ್ಮಿಂದ ಸಾಧ್ಯವಿಲ್ಲ ಏಕೆ?’

ಇಂತಹ ವಾದ ಮಂಡಿಸುವ ವಿಷಯದಲ್ಲಿ ನಾನು ಸಾಕಷ್ಟು ಎಚ್ಚರಿಕೆ ವಹಿಸಿದ್ದೇನೆ. ಲೋಯಾ ಸಾವು ಪ್ರಕರಣದಲ್ಲಿ ವಾದ ಮಂಡಿಸಿದ ವಕೀಲರು ಮತ್ತು ಅರ್ಜಿದಾರರ ಮೇಲೆ ನ್ಯಾಯಾಂಗ ನಿಂದನೆಯ ಕ್ರಿಮಿನಲ್‌ ಆರೋಪ ಹೊರಿಸದೆ ಕನಿಕರ ತೋರಿಸಿ ತಾವು ವಿಶಾಲ ಹೃದಯದವರಾಗಿದ್ದೇವೆ ಎಂದೂ ನ್ಯಾಯಮೂರ್ತಿಗಳು ಹೇಳಿಕೊಂಡಿದ್ದಾರೆ. ನ್ಯಾಯಾಂಗದ ಮುಂದೆ ಮಂಡಿಸಿರುವ ವಾಸ್ತವಾಂಶಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ.

ತೀರ್ಪಿನ ಅರ್ಹತೆಯನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಾರೇ ಆಗಲಿ ಈ ತೀರ್ಪಿನ ಬಗ್ಗೆ ತಳೆಯುವ ನಿಲುವು, ಅವರು ತಳೆದಿರುವ ಸೈದ್ಧಾಂತಿಕ ನಿಲುವು ಮತ್ತು ರಾಜಕೀಯ ಒಲವುಗಳನ್ನು ಆಧರಿಸಿರುತ್ತದೆ.

‘ಎರಡು ವಿಭಿನ್ನ ನೆಲೆಗಳಲ್ಲಿ ಇರುವ ಟೀಕಾಕಾರರಲ್ಲಿ ಒಂದು ಬಣದವರು ಭಟ್ಟಂಗಿಗಳು ಮತ್ತು ಇನ್ನೊಂದು ಬಣದವರು ಕಾರ್ಯಕರ್ತರು’ ಎಂದು ಪತ್ರಕರ್ತೆ ಬರ್ಕಾ ದತ್‌ ಅವರು ಬಣ್ಣಿಸಿದ್ದಾರೆ. ತೀರ್ಪಿನ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವವರನ್ನು ಎರಡೂ ಬಣದವರು ದೂಷಿಸುತ್ತಾರೆ. ಉನ್ನತ ನ್ಯಾಯಾಂಗವೂ ಈ ಬಗ್ಗೆ ಇದೇ ಬಗೆಯ ನಿಲುವು ತಳೆದು ಅದೇ ಅರ್ಥದಲ್ಲಿ ಮಾತನಾಡಿದಾಗ ಅದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಇದು ನ್ಯಾಯಾಂಗದ ಒಳಗೇ ಇರುವ ನಿಜವಾದ ಬೆದರಿಕೆಯಾಗಿದೆ. ಇದೇ ಕಾರಣಕ್ಕೆ ನ್ಯಾಯಮೂರ್ತಿಗಳು ಈ ಬಗ್ಗೆ ಆಕ್ರೋಶ ಹೊಂದಿದ್ದಾರೆ. ನ್ಯಾಯಾಂಗವನ್ನು ನ್ಯಾಯಮೂರ್ತಿಗಳಿಂದ ರಕ್ಷಿಸಬೇಕಾದ ಅಗತ್ಯವನ್ನೂ ಇದು ಒತ್ತಿ ಹೇಳುತ್ತದೆ. ಇಲ್ಲಿ ವ್ಯಕ್ತಿಗತ ನೆಲೆಯಲ್ಲಿ ಯಾರೊಬ್ಬರೂ ಖಳನಾಯಕರಲ್ಲ. ಬಾಹ್ಯ ವೈರಾಣುವನ್ನು ಅದು ಹೊಡೆದೋಡಿಸಲು ಪ್ರಯತ್ನಿಸುತ್ತಿದೆ. ನ್ಯಾಯಾಂಗ ವ್ಯವಸ್ಥೆಯು ಸ್ವಯಂ ಕಾಯಿಲೆಗೆ ತುತ್ತಾಗಿದೆ. ದೇಹವು ತನ್ನನ್ನೇ ತಾನು ಭಕ್ಷಿಸಲು ಆರಂಭಿಸಿದಾಗ ಏನಾಗಲಿದೆ ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ.

ಪೀಠದ ಆದೇಶದ ಬಗ್ಗೆ ನಿಮ್ಮ ನಿಲುವು ಏನೇ ಇರಲಿ, ಪಿಐಎಲ್‌ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಜನರು ರಾಜಕೀಯ, ವೈಯಕ್ತಿಕ ಮತ್ತು ಸೈದ್ಧಾಂತಿಕ ಹೋರಾಟದ ಮೂಲಕ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ನಿಲುವು ತಳೆದಿರುವ ನ್ಯಾಯಮೂರ್ತಿಗಳು, ಇದರಿಂದಾಗಿ ನ್ಯಾಯದಾನ ವಿಳಂಬ ಆಗುತ್ತಿದೆ ಎಂದೂ ದೂರುತ್ತಾರೆ. ಒಬ್ಬ ವ್ಯಕ್ತಿ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತಾನೆ ಎನ್ನುವುದು ಅಸಾಧ್ಯದ ಮಾತು.

ಇಲ್ಲಿ, ಕೆಲ ವಾಸ್ತವ ಸಂಗತಿಗಳನ್ನು ಪರಿಶೀಲಿಸೋಣ. ಈ ತೀರ್ಪು ಪ್ರಕಟವಾಗುವ ದಿನ, ಐಪಿಎಲ್‌ ಪಂದ್ಯಗಳಿಗೆ ನೀರಿನ ಬಳಕೆ ಮೇಲೆ ನಿರ್ಬಂಧ ವಿಧಿಸಿ ನೀಡಿದ ತೀರ್ಪಿನ ವಿವರಗಳನ್ನು ಪತ್ರಿಕೆಗಳು ಪ್ರಕಟಿಸಿದ್ದವು. ಮಹಾರಾಷ್ಟ್ರದಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳಿಗಾಗಿ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲು ಆಗುತ್ತಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್‌ಗಳ ಬಗ್ಗೆ ಬಾಂಬೆ ಹೈಕೋರ್ಟ್‌ ತೀರ್ಪು ನೀಡಿತ್ತು.

ಕ್ರಿಕೆಟ್ ಮೈದಾನಕ್ಕೆ ನೀರಿನ ಬಳಕೆ ಮೇಲೆ ಮಿತಿ ವಿಧಿಸುವ ಮೂಲಕ ರೈತರಿಗಾಗಿ ನೀರನ್ನು ಉಳಿತಾಯ ಮಾಡಿದ ಮಹತ್ವವನ್ನು ಬದಿಗಿರಿಸಿ ನೋಡಿದರೆ, ಹಲವಾರು ಮಹತ್ವದ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗ ಕ್ರಿಕೆಟ್‌ ಪಂದ್ಯಗಳ ಬಗೆಗಿನ ಪಿಐಎಲ್‌ ಬಗ್ಗೆ ತೀರ್ಪು ಪ್ರಕಟಿಸುವುದು ಗೌರವಾನ್ವಿತ ಕೋರ್ಟ್‌ಗೆ ಅಷ್ಟು ಮಹತ್ವದ್ದಾಗಿತ್ತೇ ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ. ನ್ಯಾಯಮೂರ್ತಿಗಳ ಬುದ್ಧಿವಂತಿಕೆ ಬಗ್ಗೆ ನೀವು ಪ್ರಶ್ನಿಸುವಂತಿದ್ದರೂ, ಅವರು ಕೈಗೊಂಡ ಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ನೀವು ಯಾವತ್ತೂ ದೋಷಾರೋಪಣೆ ಮಾಡುವಂತಿಲ್ಲ.

ಜನರು ಪ್ರಚಾರ ಗಿಟ್ಟಿಸಲು ಪಿಐಎಲ್‌ ದಾಖಲಿಸುತ್ತಿದ್ದಾರೆ ಎಂದು ಪೀಠವು ಲೋಯಾ ಪ್ರಕರಣದಲ್ಲಿ ತೀರ್ಪು ನೀಡಿದೆ. ನ್ಯಾಯಮೂರ್ತಿಗಳು ಕನ್ನಡಿಯಲ್ಲಿ ನೋಡಿಕೊಂಡು ತಮ್ಮಲ್ಲಿಯೂ ಪ್ರಚಾರದ ಗೀಳು ಇದೆಯೇ ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳಬಹುದಲ್ಲ?

ಉನ್ನತ ನ್ಯಾಯಾಂಗದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ನನ್ನ ಸಹೋದ್ಯೋಗಿ ಮನೀಷ್‌ ಛಿಬ್ಬರ್‌ ಅವರು, ಕೆಲ ಆಸಕ್ತಿದಾಯಕ ಪ್ರಕರಣಗಳ ಮಾಹಿತಿ ಕಲೆ ಹಾಕಲು ನನಗೆ ನೆರವಾಗಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ದೇಶಿ ಕ್ರಿಕೆಟ್‌ ನಿರ್ವಹಣೆಯ ಹೊಣೆಯನ್ನು ಸುಪ್ರೀಂ ಕೋರ್ಟ್‌ನ ಸುಪರ್ದಿಗೆ ಬಿಟ್ಟುಕೊಟ್ಟು ಒಂದು ವರ್ಷದ ಮೇಲಾಯಿತು. ಈಗಲೂ ಈ ಬಿಕ್ಕಟ್ಟಿಗೆ ಪರಿಹಾರ ದೊರೆತಿಲ್ಲ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಕ್ರಿಕೆಟ್‌ ಪೀಠದ ಮುಖ್ಯಸ್ಥರಾಗಿ ಮುಂದುವರೆದಿದ್ದಾರೆ. ಪ್ರಜಾಪ್ರಭುತ್ವ ಇರುವ ಯಾವುದೇ ದೇಶದಲ್ಲಿ ಇಂತಹ ನಿದರ್ಶನ ಕಂಡು ಬಂದಿಲ್ಲ. ಕ್ರೀಡೆಯಲ್ಲಿ ಬೆಟ್ಟಿಂಗ್‌ ಮತ್ತು ಜೂಜಾಟಕ್ಕೆ ಅವಕಾಶ ಮಾಡಿಕೊಡಲು ಕೋರಿ ಸಲ್ಲಿಸಿರುವ ಪಿಐಎಲ್‌ ಅನ್ನು ಇದೇ ಪೀಠವು ವಿಚಾರಣೆಗೆ ಅಂಗೀಕರಿಸಿದೆ.

ಸಿನಿಮಾ ಮಂದಿರಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ನುಡಿಸಬೇಕು ಎಂದು ದೀಪಕ್‌ ಮಿಶ್ರಾ ಅವರು, ಸಿಜೆಐ ಆಗಿ ನೇಮಕಗೊಳ್ಳುವ ಮುಂಚೆ 2016ರ ನವೆಂಬರ್‌ 30ರಂದು ಆದೇಶ ನೀಡಿದ್ದರು. ಆನಂತರ ಆ ಆದೇಶವನ್ನು ವಾಪಸ್‌ ತೆಗೆದುಕೊಂಡಿದ್ದರು. ಈ ಎಲ್ಲ ಪಿಐಎಲ್‌ಗಳು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದ್ದವು. ಈ ಪಿಐಎಲ್‌ ಸಲ್ಲಿಸಿದವರ ಹೆಸರನ್ನು ಯಾರೊಬ್ಬರೂ ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಹಾಗಿದ್ದರೆ ಅವರಿಗೆಲ್ಲ ಪ್ರಚಾರ ಪ್ರಿಯರು ಎಂದು ಹಣೆಪಟ್ಟಿ ಹಚ್ಚುವುದು ಏಕೆ. ಲೋಯಾ ತೀರ್ಪು ಪ್ರಕಟವಾದ ನಂತರವೂ, ಸಿಜೆಐ ಮುಂದಿರುವ 43 ಪ್ರಕರಣಗಳ ಪೈಕಿ 12 ಪಿಐಎಲ್‌ಗಳಿವೆ.

ಇಂತಹ ಪಿಐಎಲ್‌ಗಳ ಸಾಲಿಗೆ ಇನ್ನೂ ಕೆಲ ಪ್ರಕರಣಗಳು ಸೇರಲಿವೆ. ಬ್ರಿಟನ್‌ನಿಂದ ಕೊಹಿನೂರ್‌ ವಜ್ರ ಮರಳಿ ತರುವ, ಸಂತಾ– ಬಂತಾ ಜೋಕುಗಳನ್ನು ನಿಷೇಧಿಸುವ, ಅಂತರ್ಜಾಲ ತಾಣದಲ್ಲಿ ಅಶ್ಲೀಲ ತಾಣಗಳನ್ನು ವೀಕ್ಷಿಸುವುದನ್ನು ಅಪರಾಧ ಎಂದು ಪರಿಗಣಿಸುವ (ಈ ಪ್ರಕರಣ 2013 ರಿಂದ ಕೋರ್ಟ್‌ನ ಸಮಯ ವ್ಯರ್ಥ ಮಾಡುತ್ತಿದೆ), ಶಾಲೆಗಳಲ್ಲಿ ಯೋಗ ಕಡ್ಡಾಯ ಮಾಡುವುದು... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳಲ್ಲಿ ಕೆಲವನ್ನು ಅಂತಿಮವಾಗಿ ವಜಾ ಮಾಡಲಾಗಿದೆ.

ಹಲವಾರು ನಾಗರಿಕರು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಬಹಳ ದಿನಗಳಿಂದ ನ್ಯಾಯದಾನವನ್ನು ಎದುರು ನೋಡುತ್ತಿದ್ದಾರೆ. ಇತರ ಅಸಂಖ್ಯ ಪ್ರಕರಣಗಳು ಬಾಕಿ ಇವೆ. ವಸ್ತುಸ್ಥಿತಿ ಹೀಗಿರುವಾಗ ಅನೇಕ ಪಿಐಎಲ್‌ ಗಳನ್ನು ಯಾವ ಕಾರಣಗಳಿಗೆ ವಿಚಾರಣೆಗೆ ಸ್ವೀಕರಿಸಲಾಗಿದೆ ಎಂದೂ ನಾವು ಪ್ರಶ್ನಿಸಬಹುದಾಗಿದೆ.

ನಾಗರಿಕರು ತಮ್ಮ ಅಹವಾಲುಗಳ ಈಡೇರಿಕೆಗಾಗಿ ಅಂತಿಮವಾಗಿ ಕೋರ್ಟ್‌ ಮೊರೆ ಹೋಗಲು ಅವಕಾಶ ಮಾಡಿಕೊಡುವ ಪಿಐಎಲ್‌, ಒಂದು ಶ್ರೇಷ್ಠ ಚಿಂತನೆಯಾಗಿದೆ. ಇದನ್ನು 1980ರ ದಶಕದ ಮಧ್ಯಭಾಗದಿಂದ ಜಾರಿಗೆ ತರಲಾಗಿದೆ. ಹಲವಾರು ನ್ಯಾಯಮೂರ್ತಿಗಳು ತಮ್ಮ ಅಧಿಕಾರ ಮತ್ತು ಕಾರ್ಯವ್ಯಾಪ್ತಿ ಬಳಸಿಕೊಂಡು ಇದರ

ಪ್ರಯೋಜನವನ್ನು ವಿಸ್ತರಿಸಿದ್ದಾರೆ.

ದೇಶದ ರಾಜಧಾನಿ ದೆಹಲಿಯಲ್ಲಿ, ಗಾಳಿಯ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಕೋರ್ಟ್‌, 20 ವರ್ಷಗಳ ಹಿಂದೆಯೇ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ಈಗಲೂ ಅಸ್ತಿತ್ವದಲ್ಲಿ ಇದೆ. ಈ ಅವಧಿಯಲ್ಲಿ 18 ಮಂದಿ ಸಿಜೆಐಗಳು ಸೇವಾ ನಿವೃತ್ತರಾಗಿದ್ದಾರೆ.

ರಾಜಧಾನಿಯಲ್ಲಿನ ಅಕ್ರಮ ಕಟ್ಟಡಗಳು ಮತ್ತು ಅತಿಕ್ರಮಣದ ಬಗ್ಗೆ ವರದಿ ನೀಡಲು ಕೋರ್ಟ್‌ ಸಮಿತಿಯೊಂದನ್ನು ರಚಿಸಿದೆ. ಈ ಎರಡೂ ಪ್ರಕರಣಗಳಲ್ಲಿ ಕೋರ್ಟ್‌ ತನ್ನ ವೈಫಲ್ಯವನ್ನು ಇದುವರೆಗೂ ಒಪ್ಪಿಕೊಂಡಿಲ್ಲ. ಸಾರ್ವಜನಿಕರು ಇದಕ್ಕೆ ಜನಪ್ರತಿನಿಧಿಗಳನ್ನು ದೂಷಿಸದೇ ನ್ಯಾಯಾಂಗವನ್ನು ಟೀಕಿಸುತ್ತಿದ್ದಾರೆ. ಈ ಸಂಬಂಧ ಸಲ್ಲಿಸಲಾಗಿರುವ ಹಲವಾರು ಪಿಐಎಲ್‌ಗಳನ್ನು ಪ್ರಚಾರ ಬಯಸುವ ಹೋರಾಟಗಾರರಿಂದಷ್ಟೇ ಸಲ್ಲಿಸಲಾಗಿಲ್ಲ. ನ್ಯಾಯಮೂರ್ತಿಗಳೂ ಈ ಸಮಸ್ಯೆಯ ಭಾಗವಾಗಿದ್ದಾರೆ.

ನ್ಯಾಯಮೂರ್ತಿಗಳು ಸುಳ್ಳು ಹೇಳುವುದಿಲ್ಲ ಎನ್ನುವುದನ್ನೂ ನಾವಿಲ್ಲಿ ಪರಿಗಣಿಸಬಹುದಾಗಿದೆ. ಎಲ್ಲ ನಾಲ್ಕು ಮಂದಿ ಹಿರಿಯ ಜಿಲ್ಲಾ ನ್ಯಾಯಾಧೀಶರು ಒಟ್ಟಾಗಿ ಸುಳ್ಳು ಹೇಳಿರಲಿಕ್ಕಿಲ್ಲ. ನ್ಯಾಯಾಂಗದ ಆಡಳಿತದ ಬಗ್ಗೆ ಅಪಸ್ವರ ಎತ್ತಿರುವ ಇತರ ನ್ಯಾಯಮೂರ್ತಿಗಳ ಬಗ್ಗೆಯೂ ಇದೇ ತತ್ವ ಅನ್ವಯಗೊಳ್ಳುವುದಿಲ್ಲವೇ? ಮಹಾರಾಷ್ಟ್ರದ ಜಿಲ್ಲಾ ನ್ಯಾಯಾಧೀಶರ ನಿಲುವನ್ನು ನಾವು ಅನುಮೋದಿಸುವಾಗ, ಸುಪ್ರೀಂ ಕೋರ್ಟ್‌ನ ಕೆಲ ನ್ಯಾಯಮೂರ್ತಿಗಳು ಎತ್ತಿರುವ ಆಕ್ಷೇಪಗಳು ಉದ್ದೇಶಪೂರ್ವಕ ಎಂದು ಕಡೆಗಣಿಸಬಹುದೇ? ಅವರ ಕಾಳಜಿಯನ್ನು ವಜಾ ಮಾಡಬಹುದೇ? ಜಿಲ್ಲಾ ನ್ಯಾಯಾಧೀಶರು ಸುಳ್ಳು ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ತಿಳಿಸುವಷ್ಟು ಹೆಡ್ಡ ನಾನಲ್ಲ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹೇಳಿಕೆಗಳ ಬಗ್ಗೆ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರ ನೀಡಬೇಕಾಗಿದೆ. ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಜತೆಗೆ, ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕಾಗಿದೆ.

ನ್ಯಾಯಾಂಗದ ಕಾರ್ಯವ್ಯಾಪ್ತಿಯನ್ನು ನಿರಂತರವಾಗಿ ಹಿಗ್ಗಿಸುವುದು, ಪಿಐಎಲ್‌ಗಳ ಕಾರಣಕ್ಕಾಗಿಯೇ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುವ ನ್ಯಾಯಾಂಗದ ಪ್ರವೃತ್ತಿಯು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ತಮ್ಮ ಮನೆಯನ್ನು ಸರಿಪಡಿಸಿಕೊಳ್ಳುವುದರಲ್ಲಿ ನ್ಯಾಯಮೂರ್ತಿಗಳಲ್ಲಿ ಕಂಡು ಬರುತ್ತಿರುವ ಅಸಾಮರ್ಥ್ಯದ ಕಾರಣಕ್ಕೆ ನ್ಯಾಯಾಂಗವು ದುರ್ಬಲಗೊಳ್ಳುತ್ತಿದೆ. ಇದಕ್ಕೆ ಹೊರಗಿನವರನ್ನು ದೂಷಿಸುವಂತಿಲ್ಲ. ನ್ಯಾಯಮೂರ್ತಿಗಳಲ್ಲಿ ಬಣಗಳಾದಾಗ ವ್ಯಾಜ್ಯ ಹೂಡುವವರು ಮತ್ತು ವಕೀಲರು ಒಂದು ಕೋರ್ಟ್‌ನಿಂದ ಇನ್ನೊಂದು ಕೋರ್ಟ್‌ಗೆ ಅಲೆಯುತ್ತಲೇ ಇರುತ್ತಾರೆ.

ಕೆಲಮಟ್ಟಿಗಿನ ಉದ್ವಿಗ್ನತೆಯು ಆರೋಗ್ಯಕರವಾಗಿರುತ್ತದೆ. ಒಂದು ವೇಳೆ ಸಂಸ್ಥೆಯೊಂದು ತುಂಬ ದುರ್ಬಲಗೊಂಡರೆ ಇನ್ನೊಂದು ಸಂಸ್ಥೆ ತನ್ನ ಬಲ ಪ್ರದರ್ಶನಕ್ಕೆ ಮುಂದಾಗುತ್ತದೆ. ದೇಶಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸದ್ಯಕ್ಕೆ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಉನ್ನತ ಹುದ್ದೆಯಲ್ಲಿ ಇರುವ ನ್ಯಾಯಮೂರ್ತಿಗಳು ಪರಸ್ಪರ ಕಚ್ಚಾಡುತ್ತಿದ್ದರೆ, ಇದನ್ನೆಲ್ಲ ಕಂಡು ರಾಜಕಾರಣಿಗಳು ನಗುತ್ತಿದ್ದಾರೆ.

‘ವ್ಯಕ್ತಿಯೊಬ್ಬ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾನೆ’ ಎಂದು ಅಸಂಬದ್ಧವಾಗಿ ಹೇಳುವುದು ಲೋಯಾ ತೀರ್ಪಿನಲ್ಲಿನ ಮೂರನೇ ಪ್ರಮುಖ ಅಂಶವಾಗಿದೆ. ತಾತ್ವಿಕವಾಗಿ ಯಾರೊಬ್ಬರೂ ಈ ಬಗ್ಗೆ ಆಕ್ಷೇಪಿಸುವಂತಿಲ್ಲ. ವಾಸ್ತವದಲ್ಲಿ ಈ ಹಿಂದೆ ಇಂತಹ ಘಟನೆ ನಡೆದಿದೆ. ಆದರೆ ಆ ವ್ಯಕ್ತಿ ಪುರುಷನಾಗಿರಲಿಲ್ಲ. ಇಂದಿರಾ ಗಾಂಧಿ ಅವರಲ್ಲಿ ಅಂತಹ ವಿಶೇಷ ಗುಣ ಕಾಣಬಹುದಾಗಿತ್ತು. ಒಬ್ಬ ಶ್ರೇಷ್ಠ ನ್ಯಾಯಮೂರ್ತಿ ಎಚ್‌.ಆರ್‌. ಖನ್ನಾ, ಭಾರತವನ್ನು ದುರಾಡಳಿತದಿಂದ ಪಾರು ಮಾಡುವಂತಹ ಮಹತ್ವದ ತೀರ್ಪು ನೀಡಿದ್ದರು.

2018ರಲ್ಲಿಯೂ ಇಂತಹ ದಿಟ್ಟನ್ಯಾಯಮೂರ್ತಿಗಳ ಅಗತ್ಯ ಇದೆ. ನ್ಯಾಯಾಂಗಕ್ಕೆ ಬಾಹ್ಯ ಬೆದರಿಕೆಗಿಂತ ಆಂತರಿಕ ಭೀತಿಯೇ ಇರುವ ಸದ್ಯದ ದಿನಗಳಲ್ಲಿ ಖನ್ನಾ ಅವರಂತಹ ದಿಟ್ಟ ನಡೆಯ ಹಲವಾರು ನ್ಯಾಯಮೂರ್ತಿಗಳ ಅಗತ್ಯ ಇದೆ.

(ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry