ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದವರು ಯಾರು? ಗೆಲುವು ಯಾರದು?

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಳೆಯ ನೆನಪುಗಳು ಕೆಲವೊಮ್ಮೆ ನಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ನಾವು ಎಂದೋ ನಕ್ಕ ಒಂದು ಕ್ಷಣ ಇಂದು ಕಣ್ಣೀರು ತರಿಸುತ್ತದೆ; ನಾವೆಂದೋ ಅತ್ತ ಒಂದು ಕ್ಷಣ ನೆನಪಾದಾಗ ನಗು ಉಕ್ಕಿ ಬರುತ್ತದೆ.

ನಾನು ನನ್ನ ಅಮ್ಮ ಇಬ್ಬರೂ ಸೇರಿ ಮನಸಾರೆ ನಕ್ಕ ಒಂದು ಘಟನೆ ನೆನಪಾಗುತ್ತಿದೆ...

ನನಗೆ ವಿಷವುಣಿಸಿ ಕೊಲ್ಲಲು ಯತ್ನಿಸಿದ್ದಳಂತೆ ಒಮ್ಮೆ. ಕೆಲವು ವರ್ಷಗಳ ಹಿಂದೆ ಈ ನಿಜವನ್ನು ಅಳುತ್ತಲೇ ಹೇಳಿದಳು ಅಮ್ಮ. ಅವಳು ಅಳುತ್ತಿರಲು ನಾನು ನಗುತ್ತಿರಲು, ನನ್ನ ನಗೆಗೆ ಅವಳು ಇನ್ನಷ್ಟು ಅಳುತ್ತಿರಲು, ನಾನು ಅದನ್ನು ಕಂಡು ಇನ್ನೂ ಜೋರಾಗಿ ನಗುತ್ತಿರಲು, ಕ್ರಮೇಣ ನನ್ನೊಡಗೂಡಿ ಅವಳೂ ನಗಲು ಆರಂಭಿಸಿದ ಆ ಕ್ಷಣಗಳು... ಆಹಾ!

ಎಲ್ಲರಿಗೂ ಅಮ್ಮನೇ ಮೊದಲ ದೇವತೆ. ಅವಳೆಂದರೇ ಹಾಗೆ. ಕೆಲವು ವರ್ಷಗಳ ಹಿಂದೆ ಅಮ್ಮ ತೀವ್ರ ಅನಾರೋಗ್ಯದಿಂದ ಬಳಲಿದಳು. ಮಿದುಳಿಗೆ ಹೋಗುವ ನರವೊಂದರಲ್ಲಿ ಸಮಸ್ಯೆ. ಅವಳ ನೋವನ್ನೂ ವೇದನೆಯನ್ನೂ ನೋಡಲಾಗುತ್ತಿಲ್ಲ.

ತಕ್ಷಣವೇ ಆಪರೇಷನ್ ಮಾಡಬೇಕಾಗಿತ್ತು. ಸ್ವಲ್ಪ ರಿಸ್ಕ್‌ ಇರುವ ಆಪರೇಷನ್. ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದೆವು. ಆ ದಿನಗಳಲ್ಲಿ ನಾನು ತೆಲುಗು ಸಿನಿಮಾಗಳಲ್ಲಿ ಬಿಡುವಿಲ್ಲದ ಚಿತ್ರೀಕರಣದಲ್ಲಿ ತೊಡಗಿದ್ದೆ. ಅಮ್ಮನನ್ನು ನೋಡಿಕೊಳ್ಳಲು ಸಾಕಷ್ಟು ಸಂಬಂಧಿಗಳು ಇದ್ದರೂ ಹೆತ್ತ ಮಕ್ಕಳು ಜೊತೆಗಿದ್ದು ನೋಡಿಕೊಳ್ಳುವುದೇ ಸರಿ ತಾನೆ? ನನ್ನ ತಂಗಿ ಬೆಂಗಳೂರಿನಿಂದ ಎಲ್ಲ ಕೆಲಸ ಬಿಟ್ಟು ಓಡಿಬಂದಳು.

ನನ್ನದು ನೈಟ್ ಶಿಫ್ಟ್. ಹೈದರಾಬಾದ್‌ನಲ್ಲಿ ದಿನದ ಶೂಟಿಂಗ್ ಮುಗಿಸಿ ರಾತ್ರಿಯ ಫ್ಲೈಟ್‌ ಹಿಡಿದು ಓಡಿ ಬರುತ್ತಿದ್ದೆ. ರಾತ್ರಿಯೆಲ್ಲ ಅಮ್ಮನೊಂದಿಗೆ. ಮತ್ತೆ ಬೆಳಿಗ್ಗೆ ಎದ್ದು ಹೈದರಾಬಾದ್‌ನ ಫ್ಲೈಟ್‌ ಹಿಡಿದು ಕೆಲಸಕ್ಕೆ ಹೋಗುತ್ತಿದ್ದೆ. ದಿನವೆಲ್ಲ ಅಮ್ಮನೊಂದಿಗೆ ತಂಗಿ ಇರುತ್ತಿದ್ದಳು. ಹೀಗೆ ಹಲವು ದಿನಗಳು ಓಡಿದವು. ಅಮ್ಮನಿಗೋ ತುಂಬ ಸಂತೋಷ. ತನ್ನ ಕೊನೆಯ ಕಾಲದಲ್ಲಿ, ತಾನು ಹೆತ್ತ ಮಕ್ಕಳು ಪಕ್ಕದಲ್ಲಿದ್ದಾರೆಂದುಕೊಂಡಳೋ ಏನೋ. ಜತೆಯೇ ಇದ್ದ ಮಕ್ಕಳೊಂದಿಗೆ, ತಾನು ಬದುಕಿದ ಬದುಕಿನೊಂದಿಗೆ ಮಾತನಾಡತೊಡಗಿದಳು. ನೋವುಗಳನ್ನೂ, ವೇದನೆಯನ್ನೂ ಕಷ್ಟಗಳನ್ನೂ, ಅವಮಾನಗಳನ್ನೂ, ಹೋರಾಟಗಳನ್ನೂ ಒಂದೊಂದಾಗಿ ಬಿಚ್ಚಿಟ್ಟಳು.

ಸಣ್ಣ ವಯಸ್ಸಿನಿಂದಲೇ ಅನಾಥಾಶ್ರಮವೊಂದರಲ್ಲಿ ಓದಿ ಬೆಳೆದವಳು ಅಮ್ಮ. ಬೆಳಗಾವಿಯ ‘ಡಿವೈನ್‌ ಪ್ರಾವಿಡೆನ್ಸ್‌’ ಎನ್ನುವ ಕ್ರೈಸ್ತರ ಆಶ್ರಮದಲ್ಲಿ ಅವಳಿಗೆ ಸಿಕ್ಕ ಪ್ರೀತಿ, ಆರೈಕೆ ತಾನು ಅನಾಥಳೆಂಬ ಭಾವನೆಯನ್ನು ಇಲ್ಲವಾಗಿಸಿತ್ತು. ಓದಿ ವಿದ್ಯಾವಂತಳಾಗಿ ಬೆಂಗಳೂರಿನ ಮಾರ್ಥಾಸ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡತೊಡಗಿದಳು.

ಯಾವ ಗಂಡಿನ ಪರಿಚಯವೂ ಇಲ್ಲದೇ ತಾನು, ತನ್ನ ಧರ್ಮ, ತನ್ನ ಸೇವೆ ಎಂದು ಬದುಕಿದ್ದವಳ ಬದುಕಿನಲ್ಲಿ ಕಾಲಿಟ್ಟಿದ್ದು ನನ್ನ ತಂದೆ. ಟೈಫಾಯ್ಡ್‌ ಜ್ವರ ಎಂದು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆದ ಅವರು, ಅಮ್ಮನನ್ನು ಪ್ರೀತಿಸಿದ್ದಾರೆ. ಮನಸ್ಸು ಬೇಡ ಬೇಡವೆಂದು ದೂರ ಹೋದರೂ ತೀವ್ರವಾಗಿ ಪ್ರೀತಿಸುವ ಮಾತುಗಳಿಗೆ ಕೊನೆಗೂ ಶರಣಾಗಿದ್ದಾಳೆ. ಜಾತಿ, ಮತಗಳ ಎಲ್ಲ ಬೇಲಿಗಳನ್ನೂ ಗಾಳಿಗೆ ತೂರಿತ್ತು ಅವಳ ಪ್ರೇಮ. ಆದರೆ ಅದು ಅಷ್ಟು ಒಳ್ಳೆಯ ಅನುಭವವಾಗಿ ಉಳಿಯಲಿಲ್ಲ. ದೊಡ್ಡ ಕನಸುಗಳಿಲ್ಲದ, ಗೊತ್ತು ಗುರಿ ಇಲ್ಲದ, ಸ್ವಲ್ಪ ಬೇಜವಾಬ್ದಾರಿತನದ ಸಾಮಾನ್ಯ ಮನುಷ್ಯ ನನ್ನ ತಂದೆ. ಹಲವು ವಿರೋಧಗಳ ನಡುವೆಯೂ ಪ್ರೇಮವನ್ನೂ ದೇವರನ್ನೂ ನಂಬಿ ಅವನನ್ನು ಮದುವೆಯಾಗಿದ್ದಳು. ಆದರೆ ಸಂಸಾರದ ಭಾರವನ್ನೂ ಜವಾಬ್ದಾರಿಯನ್ನೂ ಭರಿಸಲಾರದೆ, ತಂದೆ ಆಗಾಗ ದಿಢೀರೆಂದು ಕಾಣೆಯಾಗತೊಡಗಿದರು.

ಮನೆಯನ್ನು ತಾನೊಬ್ಬಳೇ ನಡೆಸಬೇಕಾದ ಭಾರ ಅಮ್ಮನಿಗೆ. ಹೊಟ್ಟೆಯಲ್ಲಿ ನನ್ನನ್ನೂ, ಮನಸ್ಸಿನಲ್ಲಿ ಅವರನ್ನೂ ಹೊತ್ತು ಸಾಕಷ್ಟು ಅವಮಾನಗಳನ್ನು ಸಹಿಸುತ್ತಾ ಬದುಕಿದ್ದಾಳೆ. ನಾನು ಹುಟ್ಟಿದಾಗ ಯಾವುದೋ ಗೊತ್ತಿಲ್ಲದ ಊರಿನಲ್ಲಿದ್ದರಂತೆ ಅಪ್ಪ. ನನ್ನ ತಾಯಿ ಸುಂದರಿ, ಗುಣವಂತೆ. ಅವಳನ್ನು ಮದುವೆಯಾಗಲು ಸಂಬಂಧಿಗಳಲ್ಲಿ ಸಾಕಷ್ಟು ಜನ ಮುಂದೆ ಬಂದಿದ್ದರೂ ನಿರಾಕರಿಸಿದ್ದಳಂತೆ. ಆದರೀಗ ಅವರೆಲ್ಲರ ಮುಂದೆ ಒಂದು ಮಗುವಿನ ತಾಯಿಯಾಗಿ ಒಂಟಿಯಾಗಿ ನಿಂತಿದ್ದಾಳೆ. ತನ್ನಿಂದ ನಿರಾಕರಿಸಲ್ಪಟ್ಟವರ ಅನುತಾಪವನ್ನು ಎದುರುಗೊಳ್ಳುವಂಥ ವೇದನೆ ಇನ್ನೊಂದಿರಲು ಸಾಧ್ಯವೇ ಇಲ್ಲ. ಅದು ಅನುತಾಪದ ವೇಷದಲ್ಲಿರುವ ಒಬ್ಬನ ದಾಹವಾದರೆ?

ಆಸರೆಯಿಲ್ಲದ ಒಬ್ಬ ಹೆಣ್ಣುಮಗಳು ಬಾಳಲಾಗದ ಸಮಾಜ ಇದು. ಬೇರೆ ಬೇರೆ ರೀತಿಯ ನೋಟಗಳನ್ನು ಪ್ರತಿದಿನ, ಪ್ರತಿಕ್ಷಣ ಸಂಧಿಸುವ ಯಾತನೆಯನ್ನೂ ಅದಕ್ಕೆ ತನ್ನ ಪಕ್ವತೆ ಇಲ್ಲದ ನಿರ್ಧಾರಗಳೇ ಕಾರಣವೆಂಬ ನಿಜವನ್ನು ಅಮ್ಮನಿಂದ ತಡೆದುಕೊಳ್ಳಲಾಗಲಿಲ್ಲ. ಆಗ ನಾನು ಕೈಗೂಸು. ನಾಳೆ ಬೆಳೆದು ದೊಡ್ಡವನಾದಮೇಲೆ ‘ಯಾಕಮ್ಮ ಹೀಗೆ ಮಾಡಿದೆ’ ಎಂದು ಪ್ರಶ್ನಿಸಿದರೆ ಏನೆಂದು ಉತ್ತರಿಸುವುದೆಂದು ಅನಿಸಿದೆ ಅವಳಿಗೆ.

ಅವಳಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಅವಳೇ ಉತ್ತರಿಸಲಾಗದೆ ಸತ್ತುಹೋಗಬೇಕೆಂದುಕೊಂಡಿದ್ದಾಳೆ. ತಾನು ಮಾತ್ರ ಸತ್ತರೆ ತನ್ನಂತೆ ತನ್ನ ಮಗನೂ ಈ ಪ್ರಪಂಚದಲ್ಲಿ ಯಾವುದೋ ಒಂದು ಅನಾಥಾಶ್ರಮದ ಕರುಣೆಯಲ್ಲಿ ಬೆಳೆಯಬೇಕಾಗುತ್ತದಲ್ಲ ಎಂದು ಯೋಚಿಸಿದ್ದಾಳೆ. ಅವಳ ಅಳು ಇನ್ನೂ ಹೆಚ್ಚಾಗಿ ತನ್ನೊಂದಿಗೆ ಮಗನನ್ನೂ ಕೊಲ್ಲುವುದೆಂದು ನಿರ್ಧರಿಸಿದ್ದಾಳೆ.

ಯಾವುದೋ ಒಂದು ಇಲಿ ಪಾಷಾಣದಂಥ ವಿಷವನ್ನು ಕೊಂಡುತಂದು ನನಗೆ ಕುಡಿಸಲು ಬಂದಿದ್ದಾಳೆ. ಅವಳ ಕೈ ನಡುಗುತ್ತಿದ್ದಂತೆ, ಮನಸ್ಸು ಸಂಕಟಪಡುತ್ತಿದ್ದಂತೆ, ಕಣ್ಣೀರು ಹರಿಯುತ್ತಿದ್ದಂತೆ ಅವಳು ನನಗೆ ವಿಷವುಣಿಸುವ ಆ ಕ್ಷಣದಲ್ಲಿ ನಾನು ನಕ್ಕೆನಂತೆ! ಅವಳ ಅಳು ಜೋರಾಗುತ್ತಿದ್ದಷ್ಟೂ ನಾನು ನಗುತ್ತಲೇ ಇದ್ದೆನಂತೆ. ಪ್ರಪಂಚವನ್ನು ಅರಿಯದ ಒಂದು ಮಗುವಿಗೆ ಮರಣ ತನ್ನತ್ತ ಬರುತ್ತಿದೆ ಎಂದು ಗೊತ್ತಿಲ್ಲವಲ್ಲ. ನನ್ನನ್ನು ಈ ಭೂಮಿಗೆ ತಂದವಳೇ ಮತ್ತೆ ನನ್ನನ್ನು ಭೂಮಿಯಲ್ಲಿ ಹೂತುಹಾಕುವಳು ಎಂದು ಅರಿವು ಮೂಡಲು ಸಾಧ್ಯವಿಲ್ಲವಲ್ಲ. ನಗುತ್ತಲೇ ಇದ್ದೆನಂತೆ...

ಆ ನಗು ಅಮ್ಮನನ್ನು ಎತ್ತಿಹಾಕಿದೆ. ಸಾಯಬೇಕೆಂದು ನಿರ್ಧರಿಸುವ ಮುಂಚೆಯೂ ದೇವರಲ್ಲಿ ಪ್ರಾರ್ಥಿಸಿದ್ದಾಳೆ ಆಕೆ. ‘ಆ ದೇವರು ನನಗೆ ಕೊಟ್ಟ ನನ್ನ ಪ್ರಾಣವನ್ನೇ ಕೊಲ್ಲುವ ಹಕ್ಕಿಲ್ಲದಿರುವಾಗ ನನ್ನ ಮೂಲಕ ಹುಟ್ಟಿದ ನಿನ್ನ ಪ್ರಾಣವನ್ನು ತೆಗೆಯುವ ಹಕ್ಕು ನನಗೆಲ್ಲಿದೆ ಚಿನ್ನಾ?’ ಎಂದು ಒಂದು ಕ್ಷಣ ಅವಳಿಗನಿಸಿದೆ. ಮರುಕ್ಷಣ ವಿಷದ ಪಾತ್ರೆಯನ್ನು ದೂರ ಎಸೆದು ನನ್ನನ್ನು ತನ್ನೆದೆಗೆ ಬಾಚಿ ತಬ್ಬಿಕೊಂಡಳಂತೆ. ಆಗಲೂ ನಾನು ನಗುತ್ತಿದ್ದೆನಂತೆ...

ಆ ಕ್ಷಣದ ನಗುವಿನಿಂದಾಗಿ ನಾನು, ಅಮ್ಮ ಇನ್ನೂ ಬದುಕಿ ಉಳಿದಿದ್ದೇವೆ. ‘ನಿನ್ನನ್ನು ಕೊಲ್ಲಬೇಕೆಂದುಕೊಂಡಿದ್ದೆ ಮಗನೆ, ಆದರೆ ಆಗಲೂ ನೀನು ನನ್ನನ್ನು ಕಾಪಾಡಿದೆ’ ಎಂದು ಆಸ್ಪತ್ರೆಯ ಕೋಣೆಯಲ್ಲಿ ಅವಳು ಅಳುತ್ತಿದ್ದಾಳೆ. ಮಗುವಿನ ನಗುವಿನಲ್ಲಿನ ಬದುಕಿಸುವ ನಂಬಿಕೆಯನ್ನೂ ಸ್ಪರ್ಶಿಸಿದವಳು ನನ್ನ ಅಮ್ಮ. ಸಾಯಲು ಪ್ರತಿಯೊಬ್ಬರಿಗೂ ಸಾವಿರ ಕಾರಣಗಳಿದ್ದರೂ ಬದುಕಿಸಲು ಒಂದು ಕಾರಣ ನಮ್ಮೊಳಗೇ, ನಮ್ಮ ಮುಂದೆಯೇ ಇರುತ್ತದೆಂದು ಕಂಡುಕೊಂಡವಳು ನನ್ನಮ್ಮ. ಆ ನಗುವನ್ನು ಅವಳು ನೋಡದೇ ಇದ್ದಿದ್ದರೆ, ಇಂದು ಈ ಪ್ರಕಾಶ್‌ ಇರುತ್ತಿರಲಿಲ್ಲ. ಈ ಪ್ರಪಂಚಕ್ಕೆ ಬಂದ ಸುದ್ದಿಯೇ ಇಲ್ಲದೆ ಸಣ್ಣ ಮಗುವಾಗಿಯೇ ಸತ್ತುಹೋಗಿರುತ್ತಿದ್ದೆ. ಹುಟ್ಟಿನ ಕಾರಣವೂ ನಾನು ಬದುಕಿದ ಬದುಕಿನ ಕಾರಣವೂ ಗೊತ್ತಿಲ್ಲದೇ ಹೋಗುತ್ತಿತ್ತು. ನನ್ನನ್ನು ಹೆತ್ತವಳ ತೀರದ ಕಣ್ಣೀರನ್ನು ನನ್ನ ನಗು ಗೆದ್ದಿತ್ತು.

ಇಂದು, ಅಮ್ಮ ತಾನು ಕೊಲ್ಲಬೇಕೆಂದುಕೊಂಡಿದ್ದ ಮಗನ ಮುಂಗುರುಳನ್ನು ತೀಡುತ್ತ ನಗುತ್ತಿದ್ದಾಳೆ. ಹಾಸಿಗೆಯಲ್ಲಿ ಮಲಗಿರುವ ಆ ತಾಯಿಗೆ ಮಗ ಔಷಧಿಯನ್ನು ಕೊಡುತ್ತಿದ್ದಾನೆ. ಒಬ್ಬ ನರ್ಸ್‌ ಆಗಿ ನೂರಾರು ಹುಟ್ಟುಗಳನ್ನೂ ಸಾವುಗಳನ್ನೂ ನೇರವಾಗಿ ನೋಡಿರುವವಳಿಗೆ, ‘ಇದು ತುಂಬ ಸಾಧಾರಣ ಆಪರೇಷನ್‌ ಅಮ್ಮಾ’ ಎಂದು ನನ್ನಂಥವನು ಹೇಳುತ್ತಿದ್ದರೆ ನಗು ಬರುವುದಿಲ್ಲವೇ?

ಅವಳು ನಕ್ಕಳು. ಆದರೆ ಆ ನಗು ಕಣ್ಣೀರನ್ನು ಹೆಪ್ಪುಗಟ್ಟಿಸಿ ಸಂತೋಷವನ್ನು ಮಾತ್ರವೇ ಸೂಸುವ ನಗು. ಗೆದ್ದದ್ದು ನಾನು; ಆದರೆ ಗೆಲುವು ಅವಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT