7
ತವರಿನಲ್ಲಿ ಕೆಕೆಆರ್‌ಗೆ ನಿರಾಸೆ: ಪಾಯಿಂಟ್ಸ್‌ ಪಟ್ಟಿಯಲ್ಲಿ ಕಿಂಗ್ಸ್‌ ಇಲೆವನ್‌ಗೆ ಅಗ್ರಸ್ಥಾನ

ಈಡನ್‌ ಅಂಗಳದಲ್ಲಿ ರಾಹುಲ್‌–ಗೇಲ್ ಗರ್ಜನೆ

Published:
Updated:
ಈಡನ್‌ ಅಂಗಳದಲ್ಲಿ ರಾಹುಲ್‌–ಗೇಲ್ ಗರ್ಜನೆ

ಕೋಲ್ಕತ್ತ: ಆರಂಭಿಕ ಆಟಗಾರರಾದ ಕೆ.ಎಲ್‌.ರಾಹುಲ್‌ (60; 27ಎ, 9ಬೌಂ, 2ಸಿ) ಮತ್ತು ಕ್ರಿಸ್‌ ಗೇಲ್ (ಔಟಾಗದೆ 62; 38ಎ, 5ಬೌಂ, 6ಸಿ) ಶನಿವಾರ ಭಾರತದ ‘ಕ್ರಿಕೆಟ್‌ ಕಾಶಿ’ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಹರಿಸಿದ ರನ್‌ ಹೊಳೆಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಜಯದ ಕನಸು ಕೊಚ್ಚಿ ಹೋಯಿತು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ದಿನೇಶ್‌ ಕಾರ್ತಿಕ್‌ ಸಾರಥ್ಯದ ನೈಟ್‌ ರೈಡರ್ಸ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 191ರನ್‌ ದಾಖಲಿಸಿತು.

ಈ ಗುರಿ ರವಿಚಂದ್ರನ್‌ ಅಶ್ವಿನ್‌ ನೇತೃತ್ವದ ಕಿಂಗ್ಸ್‌ ಇಲೆವನ್‌ಗೆ ಅಷ್ಟೇನು ಸವಾಲೆನಿಸಲಿಲ್ಲ. ಅಶ್ವಿನ್‌ ಬಳಗ 8.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 96ರನ್‌ ಗಳಿಸಿದ್ದ ವೇಳೆ ಧಾರಾಕಾರ ಮಳೆ ಸುರಿಯಿತು. ವರುಣನ ಆಟ ನಿಂತ ನಂತರ ಕಿಂಗ್ಸ್‌ ಇಲೆವನ್‌ ಜಯಕ್ಕೆ 13 ಓವರ್‌ಗಳಲ್ಲಿ 125ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಇದನ್ನು ತಂಡ 11.1 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸ್ಪೋಟಕ ಆರಂಭ: ಗುರಿ ಬೆನ್ನಟ್ಟಿದ ಕಿಂಗ್ಸ್‌ ಪಡೆಗೆ ಗೇಲ್ ಮತ್ತು ರಾಹುಲ್‌ ಸ್ಫೋಟಕ ಆರಂಭ ನೀಡಿದರು. ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ಮತ್ತು ಶತಕ ಸಿಡಿಸಿ ಮಿಂಚಿದ್ದ ಗೇಲ್, ಈಡನ್‌ ಅಂಗಳದಲ್ಲೂ ಮೋಡಿ ಮಾಡಿದರು. ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಅವರು ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.

ಕರ್ನಾಟಕದ ರಾಹುಲ್‌ ಕೂಡಾ ಕಾರ್ತಿಕ್‌ ಪಡೆಯ ಬೌಲರ್‌ಗಳನ್ನು ಕಾಡಿದರು. ಮೊದಲ ಆರು ಓವರ್‌ಗಳಲ್ಲಿ (ಪವರ್‌ ಪ್ಲೇ) 73 ರನ್‌ ದಾಖಲಿಸಿದ ಈ ಜೋಡಿ ನಂತರವೂ ರನ್‌ ಮಳೆ ಸುರಿಸಿತು. 10ನೇ ಓವರ್‌ನಲ್ಲಿ ರಾಹುಲ್‌, ಸುನಿಲ್‌ ನಾರಾಯಣ್‌ಗೆ ವಿಕೆಟ್‌ ನೀಡಿದರು. ಬಳಿಕ ‘ಯುನಿವರ್ಸಲ್‌ ಬಾಸ್‌’ ಗೇಲ್‌ ಮಿಂಚಿನ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಕೆಕೆಆರ್‌ ತಂಡದ ಕ್ರಿಸ್‌ ಲಿನ್‌ (74; 41ಎ, 6ಬೌಂ, 4ಸಿ) ಮತ್ತು ರಾಬಿನ್‌ ಉತ್ತಪ್ಪ (34; 23ಎ, 5ಬೌಂ, 1ಸಿ) ಅಬ್ಬರಿಸಿದರು. ನಾಯಕ ಕಾರ್ತಿಕ್‌ (43; 28ಎ, 6ಬೌಂ) ಕೂಡ ತೋಳರಳಿಸಿ ಆಡಿದರು. ಹೀಗಾಗಿ ನೈಟ್‌ ರೈಡರ್ಸ್‌ ಬೃಹತ್‌ ಮೊತ್ತ ಪೇರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry