‘ಜನಾರ್ದನ ರೆಡ್ಡಿಯಿಂದ ಆನೆ ಬಲ’

7

‘ಜನಾರ್ದನ ರೆಡ್ಡಿಯಿಂದ ಆನೆ ಬಲ’

Published:
Updated:
‘ಜನಾರ್ದನ ರೆಡ್ಡಿಯಿಂದ ಆನೆ ಬಲ’

ಮೊಳಕಾಲ್ಮುರು: ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದಲ್ಲಿ ಮತ್ತೆ ಗುರುತಿಸಿಕೊಳ್ಳುತ್ತಿರುವುದು ಹತ್ತು ಆನೆಯಷ್ಟು ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಅಂಗವಾಗಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

10 ವರ್ಷಗಳಿಂದ ಜನಾರ್ದನ ರೆಡ್ಡಿ ಪಕ್ಷದಿಂದ ದೂರವಾಗಿದ್ದರು. ಮೊಳಕಾಲ್ಮುರಿನಲ್ಲಿ ಶ್ರೀರಾಮುಲು ಗೆಲುವಿಗಾಗಿ ಮತ್ತೆ ಪಕ್ಷದೊಂದಿಗೆ ಗುರುತಿಸಿಕೊಂಡ ಪರಿಣಾಮ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪಕ್ಷ ಗೆಲ್ಲಲು ಅನುಕೂಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಳವಾರ ಹಾಗೂ ಪರಿವಾರ ಜನಾಂಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಶ್ರೀರಾಮುಲು ಪಾತ್ರ ಮುಖ್ಯವಾಗಿದೆ. ಈ ಚುನಾವಣೆಯಲ್ಲಿ ಹಿಂದುಳಿದ ಪಂಗಡಗಳು ಬಿಜೆಪಿ ಕೈಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನಾರ್ದನ ರೆಡ್ಡಿ ಮಾತನಾಡಿ, ‘ದುರಾಡಳಿತ ಮೂಲಕ ಸಿದ್ದರಾಮಯ್ಯ ‘ಸಿದ್ದರಾವಣ’ನಾಗಿ ಹೊರಹೊಮ್ಮಿದ್ದಾರೆ. ಇವರ ಸಂಹಾರವನ್ನು ಶ್ರೀರಾಮುಲು ಮಾಡಲಿದ್ದು, ಇದಕ್ಕೆ ಮೊಳಕಾಲ್ಮುರಿನ ಮತದಾರರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಅವರ ಕುರ್ಚಿ ಬಳಿಯೇ ‘ಲಕ್ಷ್ಮಿ’ ಇದ್ದಳು. ಇದರಿಂದ ಹತ್ತಾರು ಯೋಜನೆಗಳಿಗೆ ಜೀವ ಸಿಕ್ಕಿತು ಎಂದು ಹೇಳಿದರು.

‘ರೈತರ ಜೀವಕ್ಕೆ ಬೆಲೆ ಕಟ್ಟಿದ ಸಿದ್ದರಾಮಯ್ಯ’

‘ಕಾಂಗ್ರೆಸ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರೈತರ ₹ 1 ಲಕ್ಷವರೆಗಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜೀವಕ್ಕೆ ಬೆಲೆ ಕಟ್ಟಿದ್ದಾರೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಆರೋಪಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ‘ಸರಳ ವ್ಯಕ್ತಿ ಎಂಬ ಮುಖವಾಡ ಹಾಕಿಕೊಂಡಿರುವ ಸಿದ್ದರಾಮಯ್ಯ ಅವರು ತ‌ಮ್ಮ ಕೈಯಲ್ಲಿರುವ ₹ 60 ಲಕ್ಷದ ದುಬಾರಿ ವಾಚು ಎಲ್ಲಿಂದ ಬಂದಿತು ಎಂದು ಹೇಳಲಿಲ್ಲ. ಕಾಂಗ್ರೆಸ್‌ ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿ ಹೊರಹೊಮ್ಮಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ದೇಶದ ನಂ.1 ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry