ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ದಂಡನೆ ನಿಲುವಳಿ ಅಂಗೀಕಾರ ಸಾಧ್ಯತೆ ಇಲ್ಲ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ಆರು ವಿರೋಧ ಪಕ್ಷಗಳು ಶುಕ್ರವಾರ ಸಲ್ಲಿಸಿರುವ ನಿಲುವಳಿ ಸೂಚನೆಯನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅಂಗೀಕರಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ವಿರೋಧಪಕ್ಷಗಳು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ನಿಲುವಳಿ ಸೂಚನೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಇದರಿಂದ ಇದಕ್ಕೆ ಹೆಚ್ಚಿನ ಪ್ರಚಾರ ದೊರೆತಿತ್ತು. ಆ ಮೂಲಕ ನಿಲುವಳಿ ಸೂಚನೆಯ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿದೆ. ಇದು ಸಂಸತ್‌ನ ನಡವಳಿಕೆ ಮತ್ತು ನಿಯಮಾವಳಿ 334ರ ಸ್ಪಷ್ಟ ಉಲ್ಲಂಘನೆ. ಇದೇ ಕಾರಣಕ್ಕೆ ಈ ನಿಲುವಳಿ ಸೂಚನೆ ಅಂಗೀಕರಿಸದೆ ಇರುವ ಸಾಧ್ಯತೆ ಇದೆ.

ರಾಜ್ಯಸಭಾ ಸದಸ್ಯರ ಕೈಪಿಡಿಯ ಪ್ರಕಾರ, ನಿಲುವಳಿ ಸೂಚನೆಯನ್ನು ಸಭಾಪತಿ ಅಂಗೀಕರಿಸುವವರೆಗೆ ಆ ಕುರಿತು ಪ್ರಚಾರ ನೀಡಬಾರದು.

ವಾಗ್ದಂಡನೆ ನಿಲುವಳಿ ಸೂಚನೆಯನ್ನು ಸಭಾಪತಿ ಸ್ವೀಕರಿಸಿದ ನಂತರ ಅದನ್ನು ರಾಜ್ಯಸಭೆ ಕಾರ್ಯಾಲಯದ ಅಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಈ ಸಂಬಂಧ ಕಡತ ಸಿದ್ಧಪಡಿಸುತ್ತಾರೆ. ಅಲ್ಲದೆ, ನಿಲುವಳಿ ಸೂಚನೆ ಸಲ್ಲಿಸಿರುವ ಕುರಿತು ಮತ್ತು ಸಭಾಪತಿ ಅವಗಾಹನೆಯಲ್ಲಿರುವ ಕುರಿತು ದೂರುವಂತಿಲ್ಲ ಎಂದು ಕೈಪಿಡಿಯಲ್ಲಿದೆ.

ನಿಲುವಳಿ ಸೂಚನೆ ಅಂಗೀಕಾರವಾಗಿ, ಅದನ್ನು ಎಲ್ಲ ಸದಸ್ಯರ ಗಮನಕ್ಕೆ ತರುವವರೆಗೆ ಈ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಪ್ರಚಾರ ಮಾಡಬಾರದು ಎಂದು ಕೈಪಿಡಿಯಲ್ಲಿ ತಿಳಿಸಲಾಗಿದೆ.

ವಾಗ್ದಂಡನೆ ಪ್ರಕ್ರಿಯೆಯ ಅನುಸಾರ, ವಾಗ್ದಂಡನೆ ಕುರಿತ ನಿರ್ಣಯದ ಸಾಧಕ ಬಾಧಕಗಳ ಕುರಿತು ಸಭಾಪತಿಗೆ ಮೊದಲು ಮನವರಿಕೆ ಆಗಬೇಕು. ಅನುಚಿತ ವರ್ತನೆ ತೋರಿದ್ದಾರೆ ಎಂಬುದು ಸಾಬೀತಾಗಿರಬೇಕು. ಕಾನೂನು ಪರಿಣತರ ಸಲಹೆ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು.

ಅಲ್ಲದೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿ ಇನ್ನು ಆರು ತಿಂಗಳು ಮಾತ್ರವಿದ್ದು, ಅಕ್ಟೋಬರ್ 2ಕ್ಕೆ ಮುಗಿಯಲಿದೆ. ಹೀಗಿರುವಾಗ ವಾಗ್ದಂಡನೆ ಪ್ರಕ್ರಿಯೆ ನಡೆಸುವುದು ಕಾರ್ಯಸಾಧುವಲ್ಲ ಎಂದು ನಾಯ್ಡು ಯೋಚಿಸಬಹದು.

ಸಹಿ ಮಾಡಲು ನಕಾರ: ಡಿಎಂಕೆ ಮತ್ತು ಟಿಎಂಸಿ ಪಕ್ಷಗಳು ವಾಗ್ದಂಡನೆ ನೋಟಿಸ್‌ಗೆ ಸಹಿ ಹಾಕಲು ನಿರಾಕರಿಸಿವೆ. ಕಾಂಗ್ರೆಸ್‌ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ ಎಂದು ಆ ಪಕ್ಷಗಳು ಹೇಳಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT