ಆರ್‌ಟಿಇ: ಲಾಟರಿ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ

7

ಆರ್‌ಟಿಇ: ಲಾಟರಿ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ

Published:
Updated:
ಆರ್‌ಟಿಇ: ಲಾಟರಿ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯಲು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಸಲ್ಲಿಸಿದ ಅರ್ಜಿಗಳಲ್ಲಿ 2,33,242 ಅರ್ಜಿಗಳು ಅರ್ಹತೆ ಪಡೆದುಕೊಂಡಿವೆ.

ಇವುಗಳಲ್ಲಿ 1,52,117 ಸೀಟ್‌ಗಳು ಲಭ್ಯವಿವೆ. ಆರ್‌ಟಿಇ ಅಡಿ ಬರುವ 14,107 ಶಾಲೆಗಳಲ್ಲಿ, 79,685 ಎಲ್‌ಕೆಜಿ ಸೀಟ್‌ಗಳು, 74,232 ಒಂದನೇ ತರಗತಿ ಸೀಟ್‌ಗಳಾಗಿವೆ. ಲಾಟರಿ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗೆ ಶುಕ್ರವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಚಾಲನೆ ನೀಡಿದರು.

ವಿಶೇಷ ವರ್ಗದ ಅಡಿಯಲ್ಲಿ ಈ ಬಾರಿ 1,905 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 418 ಅರ್ಜಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದು, ಉಳಿದವುಗಳನ್ನು ಸಾಮಾನ್ಯ ವರ್ಗಕ್ಕೆ ಇಲಾಖೆಯೇ ವರ್ಗಾಯಿಸಿದೆ.

ಅನಾಥ, ವಲಸೆ, ಎಚ್‌ಐವಿ ಸೋಂಕಿತ ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರ ಮಕ್ಕಳಿಗಾಗಿ ನೀಡುವ ಸೀಟುಗಳಿಗೆ 533 ಅರ್ಜಿಗಳು ಅರ್ಹತೆ ಪಡೆದಿವೆ. ಇದೇ ಮೊದಲ ಬಾರಿಗೆ ಅನುದಾನಿತ ಶಾಲೆಗಳನ್ನು ಆರ್‌ಟಿಇ ವ್ಯಾಪ್ತಿಗೆ ತರಲಾಗಿದ್ದು 50 ಸಾವಿರ ಸೀಟ್‌ಗಳು ಏರಿಕೆಯಾಗಿವೆ.

ಶಾಲೆಗಳೇ ಶುಲ್ಕ ಭರಿಸಬೇಕು: ‘ಆರ್‌ಟಿಇ ಪ್ರಕಾರ ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡುತ್ತದೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಾಲೆಯವರೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಖರೀದಿಸಿ ನೀಡಬೇಕು’ ಎಂದು ಶಾಲಿನಿ ರಜನೀಶ್‌ ತಿಳಿಸಿದರು.

ಈಗಾಗಲೇ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ನಿಗದಿ ಮಾಡಿ ಕರಡು ಪ್ರತಿ ರೂಪಿಸಿದ್ದೇವೆ. ಇದಕ್ಕೆ ಕಾನೂನು ಇಲಾಖೆಯಿಂದ ಒಪ್ಪಿಗೆ ಸಹ ಪಡೆದಿದ್ದೇವೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಆದೇಶ ಹೊರಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ನಿಯಮ 2018-19ನೇ ಸಾಲಿನಿಂದಲೇ ಜಾರಿಗೆ ಬರಲಿದೆ. ಸದ್ಯದಲ್ಲೇ ಆದೇಶ ಹೊರಡಿಸಲಿದ್ದೇವೆ’ ಎಂದು ಹೇಳಿದರು.

ಆರ್‌ಟಿಇ ಜಾರಿ ಲೋಪಕ್ಕೆ ಆಕ್ರೋಶ

ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವ ಸಲುವಾಗಿ, ಪೋಷಕರಿಗೆ ಮಾಹಿತಿ ಸರಿಯಾಗಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿದ್ದಾರೆ ಎಂದು ಆರ್‌ಟಿಇ ಕಾರ್ಯಕರ್ತ ನಾಗಸಿಂಹ ಜಿ. ರಾವ್‌ ಆರೋಪಿಸಿದರು.

ಈ ಪ್ರಕ್ರಿಯೆ ಮಾರ್ಚ್‌ ಒಳಗೆ ಪೂರ್ಣಗೊಂಡಿದ್ದರೆ ಅನುಕೂಲವಾಗುತ್ತಿತ್ತು. ಹೆಚ್ಚಿನ ಶಾಲೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ. ಆರ್‌ಟಿಐ ಅಡಿ ಸೀಟು ಸಿಗದಿರುವ ಮಕ್ಕಳ ಪಾಲಕರಿಗೆ ತುಂಬಾ ತೊಂದರೆ ಆಗುತ್ತದೆ ಎಂದರು.

ಲಾಟರಿ ಪ್ರಕ್ರಿಯೆ ಎನ್ನುವುದು ಅದೃಷ್ಟದ ಆಟ ಇದ್ದ ಹಾಗೆ. ಹೀಗಾಗಿ ಈ ಪ್ರಕ್ರಿಯೆಯನ್ನು ಬದಲಾಯಿಸಬೇಕು ಎಂದು ಆರ್‌ಟಿಇ ಕಾರ್ಯಪಡೆ ಮಕ್ಕಳ ಹಕ್ಕುಗಳ ಆಯೋಗಕ್ಕೂ ಮನವಿ ಸಲ್ಲಿಸಿದೆ ಎಂದು ತಿಳಿಸಿದರು.

ಒಟ್ಟು ಶಾಲೆಗಳು

ಅನುದಾನಿತ: 2,058

ಅನುದಾನ ರಹಿತ: 12,049

ಅರ್ಜಿಗಳು: 2,38,724

ಅರ್ಹತೆ ಪಡೆದ ಅರ್ಜಿಗಳು: 2,33,242

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry