ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರವಾಹ: ಪುನರ್ವಸತಿ ಕೇಂದ್ರಗಳ ಸ್ವಚ್ಛತೆ ಕಾಪಾಡಲು ಬೆಂಗಳೂರು ಟೆಕಿ ನೆರವು

Last Updated 23 ಆಗಸ್ಟ್ 2018, 8:29 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳ ಪ್ರವಾಹ ಪರಿಸ್ಥಿತಿ ಕಂಡು ಮನಕರಗಿದ ಸಹೃದಯರು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಲಾರಿಗಟ್ಟಲೆ ಕಳಿಸಿಕೊಡುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಬಳಸುವ ರಟ್ಟಿನ ಡಬ್ಬಗಳು, ಪೇಪರ್,ರ‍್ಯಾ‍ಪರ್‌ಗಳು, ಅಲ್ಯುಮಿನಿಯಮ್ ಹಾಳೆಗಳು, ಪ್ಲಾಸ್ಟಿಕ್ ಬ್ಯಾಗ್‌ಗಳು ಬಳಿಕ ಏನಾಗುತ್ತವೆ ಎಂದು ಯೋಚಿಸಿದ್ದೀರಾ?

ಈ ಕುರಿತು ಯೋಚಿಸಿದಾಗ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಟೆಕಿ ವಿ.ಕೆ.ರೋಶನ್ ಅವರಿಗೆ ‘ರಿಸೈಕಲ್ ಕೇರಳ’ ಐಡಿಯಾ ಹೊಳೆಯಿತು. ಕೇರಳದ ವಿವಿಧೆಡೆ ಇರುವ ಪುನರ್ವಸತಿ ಶಿಬಿರಗಳನ್ನು ಸಂಪರ್ಕಿಸಿದ ಅವರು, ಸರಕು ಹೊತ್ತು ತಂದ ಲಾರಿಗಳಲ್ಲಿಯೇ ಪ್ಯಾಕ್ ಮಾಡಲು ಬಳಸಿದ ವಸ್ತುಗಳನ್ನು ವಾಪಸ್ ಕಳಿಸುವಂತೆ ವಿನಂತಿಸಿದರು.

‘ಎರ್ನಾಕುಲಂ ಜಿಲ್ಲೆಯಲ್ಲಿ ಮಲಯತ್ತೂರ್-ಕೊಡನಾಡ್ ಸೇತುವೆಯ ಮೇಲೆ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಅಧಿಕಾರಿಗಳು ಮರಳಿ ನದಿಗೆ ಎಸೆದರು. ಈ ವಿಡಿಯೊ ನೋಡಿದ ನಂತರ ಬೇಸರವಾಯಿತು. ನದಿಯನ್ನು ಸ್ವಚ್ಛಗೊಳಿಸಲು ದೊರೆತಿದ್ದ ಒಂದು ಅವಕಾಶವನ್ನು ಅವರು ಕಳೆದುಕೊಂಡರು ಎನಿಸಿತು. ಕೇರಳಕ್ಕೆ ಹೋಗುವ ಪ್ಯಾಕಿಂಗ್ ವಸ್ತುಗಳನ್ನು ಸಂಸ್ಕರಣೆ ಮಾಡಬೇಕು ಎನ್ನುವ ಆಲೋಚನೆ ಆಗ ಹೊಳೆಯಿತು’ ಎನ್ನುತ್ತಾರೆ ಅವರು.

‘ಕೇರಳದ ಪುನರ್ವಸತಿ ಶಿಬಿರಗಳಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಗ್‌ಗಳು ಬಿದ್ದಿವೆ. ಅವನ್ನು ತೆರವುಗೊಳಿಸುವ ಸ್ಥಿತಿಯಲ್ಲಿ ಅಲ್ಲಿನ ಸ್ಥಳೀಯ ಅಡಳಿತ ಇಲ್ಲ. ಇದನ್ನು ಮನಗಂಡ ನಾನು ಫೇಸ್‌ಬುಕ್ ಆರಂಭಿಸಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿರುವ ಸ್ವಯಂಸೇವಕರ ನೆರವಿನಿಂದ ವಾಟ್ಸ್ಯಾಪ್ ಗ್ರೂಪ್ ಶುರುಮಾಡಿದೆ. ಸರಕು ಹೊತ್ತುತರುವ ಟ್ರಕ್‌ಗಳಲ್ಲಿಯೇ ತ್ಯಾಜ್ಯವನ್ನು ವಾಪಸ್ ಕಳಿಸುವಂತೆ ವಿನಂತಿಸಿದೆ’ ಎಂದು ವಿವರಿಸುತ್ತಾರೆ.

ಟ್ರಕ್ ಚಾಲಕರು ಮತ್ತು ಬೆಂಗಳೂರಿನಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳ ಜೊತೆಗೆ ಚರ್ಚಿಸಿದೆ. ಅವರು ಈ ಕೆಲಸದಲ್ಲಿ ಕೈ ಜೋಡಿಸಲು ಒಪ್ಪಿಕೊಂಡರು. ಕೇರಳದ ಗಡಿಯಲ್ಲಿರುವ ಘಟಕಗಳ ಜೊತೆಗೆ ಜಿಗಣಿ ಮತ್ತು ಯಲಹಂಕದಲ್ಲಿರುವ ತ್ಯಾಜ್ಯ ಸಂಸ್ಕರಣೆ ಘಟಕಗಳು ಈಗ ನೆರವಾಗುತ್ತಿವೆ.

ಪರಿಹಾರ ಸಾಮಗ್ರಿಗಳ ತ್ಯಾಜ್ಯ ಹೊತ್ತ ಮೊದಲ ಟ್ರಕ್ ಇಂದು (ಗುರುವಾರ) ಕೇರಳದಿಂದ ಹೊರಡುತ್ತಿದೆ. ಸದ್ಯ ಕೇರಳಕ್ಕೆ ಮಾತ್ರ ಸೀಮಿತವಾಗಿರುವ ಈ ಸೇವೆಯನ್ನು, ಸ್ಥಳೀಯರ ಸಹಕಾರ ಸಿಕ್ಕರೆ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಗೂ ವಿಸ್ತರಿಸುವ ಆಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT