ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್‌ ಪಡೆಯಲು ಎನ್‌.ಶಿವಣ್ಣ ಸಫಲ

‘ಬಿ’ ಫಾರಂ ಜೊತೆಯಲ್ಲೇ ಮಂಡ್ಯಕ್ಕೆ ಬಂದ ಮುಖಂಡ, ಮಂಗಳವಾರ ನಾಮಪತ್ರ ಸಲ್ಲಿಕೆ
Last Updated 23 ಏಪ್ರಿಲ್ 2018, 10:53 IST
ಅಕ್ಷರ ಗಾತ್ರ

ಮಂಡ್ಯ: ಬಿಜೆಪಿ ಟಿಕೆಟ್‌ ವಂಚಿತರಾಗಿದ್ದ ಚಂದಗಾಲು ಎನ್‌.ಶಿವಣ್ಣ ಭಾನುವಾರ ಬಿಜೆಪಿ ವರಿಷ್ಠರನ್ನು ಮನವೊಲಿಸಲು ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಅವರು ಬಿ ಫಾರಂ ಜೊತೆ ನಗರಕ್ಕೆ ಬಂದಿದ್ದು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಜೆಡಿಎಸ್‌ ತ್ಯಜಿಸಿ ಈಚೆಗಷ್ಟೇ ಶಿವಣ್ಣ ಬಿಜೆಪಿ ಸೇರಿದ್ದರು. ಮಂಡ್ಯ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ನೀಡುವಂತೆ ಪಕ್ಷದ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ವರಿಷ್ಠರಿಗೆ ಪತ್ರ ಬರೆದಿದ್ದರು. ಜೊತೆಗೆ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹಾಗೂ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಶಿವಣ್ಣ ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಶುಕ್ರವಾರ ಬಿಡುಗಡೆ ಮಾಡಿದ ಬಿಜೆಪಿ ಪಟ್ಟಿಯಲ್ಲಿ ಶಿವಣ್ಣ ಬದಲಿಗೆ ಮುಡಾ ಮಾಜಿ ಅಧ್ಯಕ್ಷ ಬಿ.ಬಸವೇಗೌಡ ಅವರಿಗೆ ಟಿಕೆಟ್‌ ನೀಡಲಾಗಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ಶಿವಣ್ಣ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಮೂಲಕ ಪಕ್ಷದ ವರಿಷ್ಠರನ್ನು ಸಂಪರ್ಕಿಸಲು ಯತ್ನಿಸಿದ್ದರು. ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮನವೊಲಿಸುವಲ್ಲಿ ಯಶಸ್ವಿಯಾದರು. ಶಿವಣ್ಣಗೆ ಟಿಕೆಟ್‌ ನೀಡಲು ಅಮಿತ್‌ ಶಾ ಒಪ್ಪಿದ್ದು ಭಾನುವಾರ ಸಂಜೆ ಬಿ.ಎಸ್.ಯಡಿಯೂರಪ್ಪ ಬಿ.ಫಾರಂ ವಿತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪಟ್ಟಿಯನ್ನು ತಿದ್ದುಪಡಿ ಮಾಡಿ ನನಗೆ ಟಿಕೆಟ್‌ ನೀಡಲು ಅಮಿತ್‌ ಶಾ ಅವರು ಒಪ್ಪಿದ್ದಾರೆ. ಎಲ್ಲರ ಸಹಕಾರದಿಂದ ಟಿಕೆಟ್‌ ಪಡೆಯಲು ಯಶಸ್ವಿಯಾಗಿದ್ದೇನೆ. ಅಪಾರ ಬೆಂಬಲಿಗರೊಂದಿಗೆ, ಬಿಜೆಪಿ ಮುಖಂಡರ ಜೊತೆ ಮಂಗಳವಾರ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಎನ್‌.ಶಿವಣ್ಣ ಹೇಳಿದರು.

ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿರುವ ಬಿ.ಬಸವೇಗೌಡರಿಗೆ ಟಿಕೆಟ್‌ ನಿಡಿರುವುದನ್ನು ಸ್ಥಳೀಯ ಬಿಜೆಪಿ ಮುಖಂಡರು ವಿರೋಧಿಸಿದ್ದರು. ಬಿಜೆಪಿ ಕಚೇರಿಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ್ದರು. ಸೂಕ್ತ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ 50ಕ್ಕೂ ಹೆಚ್ಚು ಮುಖಂಡರು ಬಸ್‌ನಲ್ಲಿ ಬೆಂಗಳೂರಿಗೆ ತೆರಳಿ ಶಿವಣ್ಣ ಅಥವಾ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದರು.

ಎನ್‌.ಶಿವಣ್ಣ ಅವರಿಗೆ ಟಿಕೆಟ್‌ ನೀಡಿದರೆ ಮಾತ್ರ ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನಿಡುತ್ತೇವೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಬೆದರಿಕೆ ಹಾಕಿದ್ದರು. ಆದರೆ ಈಗ ಮತ್ತೆ ಶಿವಣ್ಣ ಅವರಿಗೆ ಮಣೆ ಹಾಕಿರುವ ಕಾರಣ ಅವರು ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ.

‘ಮಂಡ್ಯ ಕ್ಷೇತ್ರದಿಂದ ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಶಿವಣ್ಣ ಅವರನ್ನು ಜೆಡಿಎಸ್‌ನಿಂದ ಕರೆತಂದು ಮೋಸ ಮಾಡುವುದು ಸರಿಯಲ್ಲ. ಅವರಿಗೆ ಟಿಕೆಟ್‌ ನಿಡಿದರೆ ಮಾತ್ರ ನಾವು ಕೆಲಸ ಮಾಡುವುದಾಗಿ ವರಿಷ್ಠರಿಗೆ ತಿಳಿಸಿದೆವು. ನಮ್ಮ ಒತ್ತಾಯಕ್ಕೆ ಮಣಿದ ಮುಖಂಡರು ಶಿವಣ್ಣ ಅವರಿಗೆ ಟಿಕೆಟ್‌ ನೀಡಲು ಒಪ್ಪಿದ್ದಾರೆ. ಹೀಗಾಗಿ ನಾವೆಲ್ಲರೂ ಶಿವಣ್ಣ ಅವರ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್‌ ತಿಳಿಸಿದರು.

ಮದ್ದೂರು ಟಿಕೆಟ್‌ ಬದಲಾವಣೆ ಇಲ್ಲ

ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ್‌ ಕುಮಾರ್‌ಗೆ ಟಿಕೆಟ್‌ ನಿರೀಕ್ಷಿಸಲಾಗಿತ್ತು. ಆದರೆ ಹೊಸ ಮುಖ ಸತೀಶ್‌ಗೆ ಟಿಕೆಟ್‌ ಘೋಷಣೆ ಮಾಡಿದ ಕಾರಣ ಸ್ಥಳೀಯ ಮುಖಂಡರು ಮದ್ದೂರು ಕ್ಷೇತ್ರದಲ್ಲೂ ಹೆಸರು ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ಯಾವುದೇ ಕಾರಣಕ್ಕೂ ಮದ್ದೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡುವುದಿಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮದ್ದೂರು ಕ್ಷೇತ್ರದಲ್ಲಿ ನಮ್ಮ ಪಕ್ಷದ ಮುಖಂಡರು ಜೆಡಿಎಸ್‌ ವರಿಷ್ಠರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಅಭ್ಯರ್ಥಿಯನ್ನು ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ನಾವು ಸತೀಶ್‌ ಪರ ಕೆಲಸ ಮಾಡುವುದಿಲ್ಲ. ಟಿಕೆಟ್‌ ನಿರೀಕ್ಷಿಸಿದ್ದ ಲಕ್ಷ್ಮಣ್‌ ಕುಮಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ’ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT