ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

Last Updated 23 ಏಪ್ರಿಲ್ 2018, 20:26 IST
ಅಕ್ಷರ ಗಾತ್ರ

ಮಂ‌ಗಳೂರು ಅಥವಾ ಮೂಡುಬಿದಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದಲ್ಲಿ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಒಂಟಿಯಾಗಿ ನಿಂತಿರುವ ಬೃಹತ್ ಕರಿದಾದ ಬೆಟ್ಟವೊಂದು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಅದೇ ಇತಿಹಾಸ ಪ್ರಸಿದ್ಧ ಬೆಟ್ಟದ ಕೋಟೆ ‘ಗಡಾಯಿಕಲ್ಲು’.

‘ಕುದುರೆಮುಖ’ ಪರ್ವತ ಶ್ರೇಣಿಯ ಭಾಗದಲ್ಲಿರುವ ಇದು, ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿದೆ. ಪ್ರಾದೇಶಿಕವಾಗಿ ಇಲ್ಲಿನ ಜನರು ಈ ಕೋಟೆಯನ್ನು ‘ಗಡಾಯಿಕಲ್ಲು’, ‘ಜಮಲಾಬಾದ್’, ‘ಜಮಲಾಗದ್ದ’ ಮತ್ತು ‘ನರಸಿಂಹಗಡ’ ಎಂದು ಕರೆಯುತ್ತಾರೆ. ಟಿಪ್ಪು ಸುಲ್ತಾನನು ಕ್ರಿ.ಶ 1794ರಲ್ಲಿ ತನ್ನ ತಾಯಿಯಾದ ‘ಜಮಲಾಬಿ’ಯ ಮರಣಾನಂತರ ಆಕೆಯ ನೆನಪಿಗಾಗಿ ಕಟ್ಟಿಸಿದ ಕೋಟೆ ಇದಾಗಿದೆ. ಈ ಕೋಟೆಯನ್ನು ಟಿಪ್ಪುವಿನೊಂದಿಗಿದ್ದ ಫ್ರೆಂಚ್ ಎಂಜಿನಿಯರ್‌ಗಳು ನಿರ್ಮಿಸಿರುವುದರಿಂದ ಮುಸ್ಲಿಂ ವಾಸ್ತುಶಿಲ್ಪ ಶೈಲಿ ಹಾಗೂ ಫ್ರೆಂಚ್ ಮಾದರಿ ಎರಡೂ ಮೇಳೈಸಿವೆ.

ಪ್ರಾರಂಭದಲ್ಲಿ ಕಾಡಿನ ಕಡಿದಾದ ದಾರಿ, ನಂತರ ಕಲ್ಲಿನ ಮೆಟ್ಟಿಲು ಏರಿದ ಮೇಲೆ, ಕೊನೆಗೆ ಕಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿಯ ಮಧ್ಯದಲ್ಲಿ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿಯ ಸ್ಥಳಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಕೋಟೆಯ ತಳವು ಸುಮಾರು 4 ರಿಂದ 5 ಕಿ.ಮೀನಷ್ಟು ವ್ಯಾಪ್ತಿಯಲ್ಲಿ ಹರಡಿ ಕೊಂಡಿದ್ದು, ಕೋಟೆಯ ಮೇಲ್ಭಾಗ ಸುಮಾರು ಒಂದರಿಂದ ಎರಡು ಎಕರೆಯಷ್ಟು ವಿಶಾಲವಾಗಿದೆ. ಈ ಜಾಗವು ಬೃಹತ್ ಗಾತ್ರದ ಮರಗಳು ಹಾಗೂ ಕುರುಚಲು ಗಿಡಗಳಿಂದ ಕೂಡಿದೆ. ಬೆಟ್ಟದ ಮಧ್ಯದಲ್ಲಿ ಕಲ್ಲಿನಲ್ಲೇ ನಿರ್ಮಾಣಗೊಂಡ ಕೆರೆಯೊಂದಿದ್ದು, ಎಂತಹ ಬೇಸಿಗೆಯಲ್ಲೂ ಈ ಕೆರೆಯು ಬತ್ತದೇ ತನ್ನೊಡಲಲ್ಲಿ ನೀರನ್ನು ಉಳಿಸಿಕೊಳ್ಳುವುದು ವಿಶೇಷ.

ಕೋಟೆಯ ಕೊನೆಯ ಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆಯೊಂದಿದ್ದು, ಇದು ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿಯೇ ಟಿಪ್ಪು ಸುಲ್ತಾನನ ಸೈನಿಕರು ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರೆಂದು ಹೇಳಲಾಗಿದೆ.

ಈ ಕೋಟೆಗೆ ಬರಲು ಕೇವಲ ಒಂದೇ ಕಡಿದಾದ ದಾರಿಯಿದ್ದು ಮೇಲ್ಗಡೆಯಿಂದ ಅತ್ಯಂತ ಸಣ್ಣ ಸೈನ್ಯದ ಸಹಾಯದಿಂದ ಕೋಟೆಯ ಮೇಲೇರಿ ಬರುವ ಬೃಹತ್ ಸೈನ್ಯವನ್ನು ಸುಲಭವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿತ್ತು ಎಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಈ ಕೋಟೆಯು ಕ್ರಿ.ಶ 1799ರ ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಶವಾಯಿತೆಂದು ಹೇಳಲಾಗಿದೆ. ಈ ಕೋಟೆಯಲ್ಲಿ ಅತ್ಯಂತ ಕಡಿದಾದ ಫಾಸಿ ಸ್ಥಳವೊಂದಿದ್ದು, ಇದು ತೀರಾ ಕಡಿದಾದ ಕೊರಕಲು ಕಂದಕವಾಗಿರುವುದರಿಂದ ಯುದ್ಧ ಕೈದಿಗಳನ್ನು ಮತ್ತು ಅಪರಾಧಿಗಳನ್ನು ಈ ಕೊರಕಲಿಗೆ ತಲೆ ಕೆಳಗಾಗಿ ಎಸೆದು ಕೊಲ್ಲುತ್ತಿದ್ದರಂತೆ (ಇದನ್ನೇ ಟಿಪ್ಪು ಡ್ರಾಪ್ ಎಂದು ಕರೆಯಲಾಗುತ್ತದೆ). ಪ್ರವೇಶ ದ್ವಾರದಿಂದ ಕೋಟೆಯ ತುದಿಯನ್ನು ತಲುಪುವವರೆಗಿನ ಎಲ್ಲಾ ದಾರಿಗಳನ್ನೂ ಆಯಕಟ್ಟಿನ ಸ್ಥಳದಲ್ಲಿ ನಿಂತು ವೀಕ್ಷಿಸಬಹುದಾದ ಕಾರಣ ಟಿಪ್ಪು ಸುಲ್ತಾನ್ ಕೋಟೆಯ ಮೇಲಿ ನಿಂದಲೇ ವೈರಿಗಳನ್ನು ಬಹುತೇಕವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದ ಎಂದು ಹೇಳಲಾಗಿದೆ. ಇಲ್ಲಿನ ಕೋಣೆಗಳನ್ನು ಗಮನಿಸಿದಾಗ ಇವುಗಳು ಗುಲಾಮರನ್ನು ಹಾಗೂ ಯುದ್ಧ ಕೈದಿಗಳನ್ನು ಬಂಧಿಸಿಡುವ ಕೋಣೆಗಳಾಗಿ ಗೋಚರಿಸುತ್ತವೆ.

ಗಡಾಯಿಕಲ್ಲು ಒಂದು ಅತ್ಯುತ್ತಮವಾದ ಚಾರಣ ಬೆಟ್ಟವಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯೊಳಗೆ ತಲಾ ₹ 20ರಂತೆ ಪ್ರವೇಶ ಶುಲ್ಕವನ್ನು ಪಾವತಿಸಿ ಚಾರಣ ನಡೆಸಬಹುದಾಗಿದೆ.

ಬೆಳಿಗ್ಗೆ ಬೇಗನೇ ಸೂರ್ಯನ ಬಿಸಿಲು ಏರುವುದಕ್ಕೆ ಮೊದಲೇ ಚಾರಣವನ್ನು ಪ್ರಾರಂಭಿಸಿ ಎರಡು ಮೂರು ಗಂಟೆಗಳಲ್ಲಿ ತುದಿಯನ್ನು ತಲುಪಬಹುದು. ಕೋಟೆಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯ ಗೇಟ್ ಇದ್ದು, ಸೂರ್ಯನ ಬೇಗೆಯು ತಣಿಯುತ್ತಿದ್ದಂತೆಯೇ ಗೇಟ್ ಮುಚ್ಚುವ ಮುಂಚಿತವಾಗಿ ಅಲ್ಲಿಂದ ವಾಪಸ್ ಬರಬೇಕು. ಸಂಜೆ ನಾಲ್ಕು ಗಂಟೆಯ ನಂತರ ಚಾರಣಕ್ಕೆ ಅವಕಾಶವಿಲ್ಲ. ಕೋಟೆಯ ಮೇಲ್ಭಾಗದಲ್ಲಿ ಸದಾ ತುಂಬಿರುವ ಕೆರೆಯೇನೋ ಇದೆ, ಆದರೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲವಾದ್ದರಿಂದ ಅವಶ್ಯವಿರುವ ನೀರು ಹಾಗೂ ಆಹಾರವನ್ನು ಪಾರ್ಸೆಲ್ ತೆಗೆದುಕೊಂಡು ಹೋಗುವುದು ಸೂಕ್ತ. ಮಳೆಗಾಲದಲ್ಲಿ ಇಲ್ಲಿನ ಕಲ್ಲಿನ ಮೆಟ್ಟಿಲುಗಳು ಪಾಚಿಗಟ್ಟಿಕೊಂಡು ವಿಪರೀತ ಜಾರುವುದರಿಂದ ಅತ್ಯಂತ ಅಪಾಯಕಾರಿ.

ವಿವರಗಳಿಗೆ ಅರಣ್ಯ ಇಲಾಖೆಯ ಬೆಳ್ತಂಗಡಿ ವಿಭಾಗ: 08256-233189

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT