ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಡೆಗೂ ಬಂತು ಕಿಮ್ಮತ್ತು

Last Updated 23 ಏಪ್ರಿಲ್ 2018, 20:27 IST
ಅಕ್ಷರ ಗಾತ್ರ

‘ಕವಡೆ ಕಿಮ್ಮತ್ತಿಲ್ಲ’ ಎನ್ನುವವರನ್ನು ಕಂಡಿದ್ದೇವೆ. ಆದರೆ ಕವಡೆಯಿಂದಲೇ ಕಿಮ್ಮತ್ತು ಗಳಿಸಿಕೊಂಡವರು ಈ ಜೈಬುನಬಿ. ಕವಡೆಯಿಂದ ಹಾರ ಮಾಡುವುದನ್ನು ಕಲಿತು, ಅದರಿಂದ ಹಣ ಸಂಪಾದಿಸುತ್ತಿರುವ ಅವರ ಕೈಗಳಿಗೆ ಈ ಕಲೆ ಒಲಿದು ಆರು ವರ್ಷಕ್ಕೂ ಮೇಲಾಗಿದೆ.

ಇತ್ತೀಚೆಗೆ ಸವದತ್ತಿ ಎಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಕೆಲ ಮಹಿಳೆಯರು ತೊಟ್ಟಿದ್ದ ಕವಡೆಯ ಸರಗಳನ್ನು ನೋಡಿ ಕುತೂಹಲ ಹುಟ್ಟಿಕೊಂಡಿತ್ತು. ಈ ಹಾರದ ಹಿಂದಿನ ಕೈಗಳನ್ನು ಹುಡುಕುತ್ತಾ ಹೊರಟಾಗ ಸಿಕ್ಕಿದ್ದೇ, ಸವದತ್ತಿಯ ನೂರಾನಿ ನಗರದ ಜೈಬುನಬಿ.

ಎಲ್ಲಮ್ಮ ಸರ್ವಧರ್ಮೀಯರ ಆರಾಧ್ಯ ದೇವತೆ. ಈ ದೇವತೆಗೆ ಹರಕೆ ಹೊತ್ತ ಮಹಿಳೆಯರು ಒಂದು ವರ್ಷ ಕವಡೆ ಸರವನ್ನು ಕೊರಳಲ್ಲಿ ಹಾಕಿ, ವ್ರತ ಪಾಲಿಸಿ, ನಂತರ ಇಲ್ಲಿಗೆ ಬಂದು ಕೊರಳಲ್ಲಿದ್ದ ಮಾಲೆಯನ್ನು ದೇವಿಗೆ ಸಮರ್ಪಿಸಿ ತಮ್ಮ ಹರಕೆ ಪೂರೈಸಿಕೊಳ್ಳುವ ಸಂಪ್ರದಾಯ ಇಂದಿಗೂ ಇದೆ. ಇಲ್ಲಿನ ಕವಡೆ ಸರಗಳ ಮುಕ್ಕಾಲುಪಾಲು ಬೇಡಿಕೆಯನ್ನು ತೀರಿಸುತ್ತಿರುವುದು ಜೈಬುನಬಿ ಅವರೇ.

ಜೈಬುನಬಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಸಹಾರ’ ಸ್ವಸಹಾಯ ಸಂಘವನ್ನು ಆರು ವರ್ಷದ ಹಿಂದೆ ಸೇರಿಕೊಂಡರು. ಯೋಜನೆಯ ಸಹಾಯದಿಂದ ಬ್ಯಾಂಕ್‍ನಿಂದ ಸಾಲ ಪಡೆದು ಈ ಪುಟ್ಟ ಉದ್ಯೋಗವನ್ನೇ ವಿಸ್ತರಿಸಿಕೊಂಡರು.

ದಿನ ಬೆಳಗಾದರೆ ಇಲ್ಲಿ ಕವಡೆಗಳ ಟನ್ ಟನ್ ಶಬ್ದ ಕಿವಿಗಪ್ಪಳಿಸುತ್ತದೆ. ಸರದ ತಯಾರಿಗೆ ಗುಣಮಟ್ಟದ ದಾರವನ್ನು ಮಹಾರಾಷ್ಟ್ರದಿಂದ ಖರೀದಿಸಿ ತರುತ್ತಾರೆ. ಕೆ.ಜಿ.ಗೆ ₹ 40ರಿಂದ ₹60ರಷ್ಟು ದರವಿದೆ. ಕವಡೆ ಸಮುದ್ರದಿಂದ ನೇರವಾಗಿ ಬೆಳಗಾವಿಯ ಅಂಗಡಿಗಳಿಗೆ ಬರುತ್ತದೆ. ಅಲ್ಲಿಂದ ಕವಡೆಗಳನ್ನು ಖರೀದಿಸಿ ತರಲಾಗುತ್ತದೆ. ಎಲ್ಲಮ್ಮನ ದೇವಸ್ಥಾನದಲ್ಲಿ ವರ್ಷದಲ್ಲೊಮ್ಮೆ ಕವಡೆಗಳನ್ನು ಮಾರಾಟ ಮಾಡುತ್ತಾರೆ. ಅಲ್ಲಿಂದಲೂ ಖರೀದಿಸುವುದಿದೆ. 100 ಕೆ.ಜಿ. ಕವಡೆಗೆ ₹1800 ದರ.

ಸ್ಥಳೀಯವಾಗಿ ದೊರೆಯುವ ಒಣ ಹುಲ್ಲಿನ ದಾರ ಮತ್ತು ಮಹಾರಾಷ್ಟ್ರದಿಂದ ತರುವ ಬಿಳಿ ದಾರದಿಂದ ಮಾಲೆ ತಯಾರಿಸಲಾಗುತ್ತದೆ. ಬಿಳಿ ದಾರವನ್ನು ನೇರವಾಗಿ ಬಳಸುವಂತಿಲ್ಲ. ಮೊದಲು ಅದನ್ನು ಸುತ್ತಿಟ್ಟುಕೊಳ್ಳಬೇಕು. ಅಂದರೆ ಮಾಲೆ ತಯಾರಿಗೆ ಬೇಕಾದ ಗಾತ್ರಕ್ಕೆ ಸಣ್ಣ ದಾರಗಳನ್ನು ಜೊತೆಯಾಗಿಸುವುದು. ಸ್ಥಳೀಯ ಮಹಿಳೆಯರಿಂದ ಈ ಕೆಲಸವನ್ನು ಮಾಡಿಸುತ್ತಾರೆ.

ಹಾರ ತಯಾರಿಗೆ ಈವರೆಗೆ ಯಾವುದೇ ಯಂತ್ರಗಳು ಬಂದಿಲ್ಲ. ತಾವೂ ತಯಾರಿಸುವುದರೊಂದಿಗೆ ಊರಿನ ಇತರ ಇಪ್ಪತ್ತೈದು ಮಂದಿ ಮಹಿಳೆಯರನ್ನು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೂರು ಸರ ತಯಾರಿಸಿಕೊಟ್ಟರೆ ₹350 ಸಂಬಳ. ಬಿಡುವಿನ ವೇಳೆಯಲ್ಲಿ ಒಬ್ಬರು ದಿನಕ್ಕೆ 25ರಿಂದ 30 ಮಾಲೆ ತಯಾರಿಸಬಹುದು. ಪ್ರತಿ ಮಾಲೆಯಲ್ಲೂ 21 ಕವಡೆಗಳಿರಬೇಕು.

‘ಕವಡೆಯೊಳಗೆ ಎರಡು ಬದಿಯಿಂದ ಹಗ್ಗವನ್ನು ಮಾಡಿ ಮಾಲೆ ತಯಾರಿಸುವುದು ನಿಪುಣತೆ ಬಯಸುವ ಕೆಲಸ. ಒಂದೆರಡು ಬಾರಿ ನೋಡಿದರೆ ಕಲಿತುಕೊಳ್ಳುವುದು ಕಷ್ಟ’ ಎನ್ನುತ್ತಾರೆ ಜೈಬುನಬಿ.

ಒಂದು ಕ್ವಿಂಟಲ್ ಕವಡೆಯಿಂದ ಎರಡು ಸಾವಿರ ಸರಗಳು ತಯಾರಾಗುತ್ತವೆ. ಮಾಲೆಗೆ ₹ 24 ಬೆಲೆ. ಇವರಿಂದ ಖರೀದಿಸಿದ ಅಂಗಡಿ ಮಾಲೀಕರು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲಮ್ಮನ ಬೆಟ್ಟದಲ್ಲಿರುವ ಅಂಗಡಿಗಳಲ್ಲಿ ಇವರು ತಯಾರಿಸಿದ ಮಾಲೆಗಳೇ ಇರುತ್ತವೆ.

ಸಮಾಜ, ಧರ್ಮದ ಹೆಸರಿನಲ್ಲಿ ಇಬ್ಭಾಗವಾಗುತ್ತಿರುವ ಈ ದಿನಗಳಲ್ಲಿ ಸಾಮರಸ್ಯವನ್ನು ಸಾರುವಂತಹ ಹತ್ತಾರು ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ಇದಕ್ಕೆ ಜೈಬುನಬಿಯವರ ಕಾಯಕವೂ ಉದಾಹರಣೆಯಾಗಬಲ್ಲದು.

ಸಂಪರ್ಕಕ್ಕೆ: 7259658572. (ರಾತ್ರಿ ಗಂಟೆ 7ರಿಂದ 8).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT