ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಾಂಶ ಪಡೆಯುವುದು ಹೇಗೆ?

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಿಚ್ಛೇದನದ ಸಂದರ್ಭದಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಮಹಿಳೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದರೆ, ಆಗ ಆಕೆಗೆ ತನ್ನ ಪತಿಯಿಂದ ಜೀವನಾಂಶದ ಅಗತ್ಯ ಇರಬಹುದು. ಪರ್ಯಾಯ ಕಾನೂನು ವೇದಿಕೆಯಲ್ಲಿ ವಕೀಲರಾಗಿರುವ ದೀಪ್ತಾ ರಾವ್, ಜೀವನಾಂಶ ಹಕ್ಕು ಪಡೆಯಲು ಇರುವ ಕಾನೂನು ಆಯ್ಕೆಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ.

ಪ್ರಶ್ನೆ: ಜೀವನಾಂಶ ಪಡೆಯಲು ಮಹಿಳೆಯರು ಯಾವ ಕಾನೂನುಗಳನ್ನು ಬಳಸಬಹುದು?

ಉತ್ತರ: ಹಿಂದು ವಿವಾಹ ಕಾಯಿದೆಯಂತಹ ವೈಯಕ್ತಿಕ ಕಾನೂನುಗಳಲ್ಲಿ (ಮತ್ತು ರಿಜಿಸ್ಚ್ರಾರ್ ಮದುವೆಯಾಗಿದ್ದಲ್ಲಿ, ವಿಶೇಷ ವಿವಾಹ ಕಾಯ್ದೆ) ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲು ಅವಕಾಶವಿದೆ. ಸಿ ಆರ್ ಪಿ ಸಿ ಸೆಕ್ಷನ್ 125 ಅನ್ನು ಬಳಸುವುದು ಮತ್ತೊಂದು ಆಯ್ಕೆಯಾಗಿದೆ. ಇದರಲ್ಲಿ ಜೀವನಾಂಶಕ್ಕಾಗಿಯೇ ಪ್ರತ್ಯೇಕ ವಿಭಾಗವಿದೆ. ಪಿ ಡಬ್ಲ್ಯೂ ಡಿ ವಿ ( ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ) ಕಾಯ್ದೆ ಸಹ ಜೀವನಾಂಶ / ಪರಿಹಾರ ನಿಬಂಧನೆಗಳನ್ನು ಹೊಂದಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲೂ  ಜೀವನಾಂಶ ಪಡೆಯಲು ಈ ಎಲ್ಲಾ ಕಾನೂನುಗಳು ಅವಕಾಶ ನೀಡುತ್ತವೆ.

ಈ ಎಲ್ಲಾ ನಿಯಮಗಳಲ್ಲಿ, ಜೀವನಾಂಶ ಪಡೆಯಲು ಇರುವ ಮುಖ್ಯ ಅಂಶಗಳು / ನಿಯಮಗಳೆಂದರೆ:
-  ಗಂಡನಿಗೆ ತನ್ನನ್ನು ಮತ್ತು ಹೆಂಡತಿಯನ್ನು (ಮತ್ತು ಮಕ್ಕಳಿದ್ದರೆ ಅವರನ್ನು) ಸಾಕಲು ಆರ್ಥಿಕ ಸಾಮರ್ಥ್ಯ ಇರಬೇಕು.
-  ಆತ ಆಕೆಯ ಅಗತ್ಯಗಳನ್ನು ನಿರ್ಲಕ್ಷಿಸುತ್ತಿದ್ದರೆ
-  ಸರಿಯಾದ ಕೆಲಸ ಇಲ್ಲದಿರುವುದು, ಕೆಲಸ ಮಾಡುವುದಕ್ಕೆ ಸಾಧ್ಯವಾಗದಿರುವುದು ಮುಂತಾದ ಕೆಲವು ಕಾರಣಗಳಿಂದ ಮಹಿಳೆಗೆ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಲು  ಸಾಧ್ಯವಾಗದಿದ್ದರೆ.

ಪ್ರಶ್ನೆ: ಈ ಕಾನೂನುಗಳು ಎಂತಹ ಸಂದರ್ಭಗಳಲ್ಲಿ ಬಳಸಲ್ಪಡುತ್ತವೆ?

ಉತ್ತರ: ವಿಚ್ಛೇದನ, ಮಕ್ಕಳ ಸುಪರ್ದಿ ಇತ್ಯಾದಿ ಸಂದರ್ಭಗಳಲ್ಲಿ  ವೈಯಕ್ತಿಕ ಕಾನೂನುಗಳನ್ನು ಬಳಸಲಾಗುತ್ತದೆ; ಅದರೊಂದಿಗೆ ಜೀವನಾಂಶಕ್ಕೂ ಅರ್ಜಿ ಸಲ್ಲಿಸಬಹುದು. ಇದಕ್ಕೆ ಬದಲಾಗಿ, ಸಂಬಂಧ ಮುರಿದು ಹೋಗಿರದಿದ್ದರೂ ಸಹ ಸಿ ಆರ್ ಪಿ ಸಿ ಸೆಕ್ಷನ್ 125 ಅನ್ನು ಬಳಸಬಹುದು; ಮದುವೆಯನ್ನು ಕಾಪಾಡಿಕೊಳ್ಳುತ್ತಲೇ ತನಗೆ ಹಣಕಾಸಿನ ಬೆಂಬಲದ ಅಗತ್ಯವಿದೆ ಎಂದು ಪತ್ನಿ ಸಮರ್ಥಿಸಿಕೊಳ್ಳಬಹುದು.

ವೈಯಕ್ತಿಕ ಕಾನೂನಿನ ಅಡಿಯಲ್ಲಿ ನೀವು ಈಗಾಗಲೇ ಪಡೆದುಕೊಂಡಿರುವ ಜೀವನಾಂಶ ಕಡಿಮೆಯಾಗಿದ್ದರೂ ಸಹ, ನೀವು ಸೆಕ್ಷನ್ 125 ಅನ್ನು ಬಳಸಬಹುದು. ಉದಾಹರಣೆಗೆ, ನೀವು ವೈಯಕ್ತಿಕ ಕಾನೂನಿನ ಅಡಿಯಲ್ಲಿ 10,000 ರೂಪಾಯಿಗಳ ಮಾಸಿಕ ಜೀವನಾಂಶ ಕೇಳಿರುತ್ತೀರಿ, ಆದರೆ ಕೇವಲ 5000 ರೂ. ಮಾತ್ರ ನೀಡಲಾಗಿರುತ್ತದೆ. ಆಗ ನೀವು ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅಥವಾ ನೀವು ಮತ್ತೆ 5000 ರೂಪಾಯಿ ಅಥವಾ ಬೇರೆ ಮೊತ್ತಕ್ಕೆ CRPC ಸೆಕ್ಷನ್ 125 ಅಡಿಯಲ್ಲಿ ಜೀವನಾಂಶಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಇದು ಪ್ರತ್ಯೇಕ ಅರ್ಜಿಯಾಗಿರುವ ಕಾರಣ, ನಿಮ್ಮ ಹಿಂದಿನ ಪ್ರಕರಣದ ಕುರಿತು ನೀವು ಮಾತನಾಡಬೇಕಾಗಿಲ್ಲ.

ಸೆಕ್ಷನ್ 125 ನ್ನು ಬಳಸಲು ಮೂರು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
-  ಆಕೆ ವ್ಯಭಿಚಾರದ ಜೀವನ ನಡೆಸುತ್ತಿರಬಾರದು
-  ತನ್ನ ಪತಿಯಿಂದ ದೂರ ಉಳಿಯಲು ಮಹಿಳೆಗೆ ಸಾಕಷ್ಟು ಕಾರಣಗಳು ಇರಬೇಕು
-  ಅವರು ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿ ಜೀವಿಸುತ್ತಿರಬಾರದು

ಆರ್ಥಿಕ ದುರುಪಯೋಗದ ಸಂದರ್ಭದಲ್ಲಿ ಪಿ ಡಬ್ಲ್ಯೂಡಿ ವಿ ಕಾಯ್ದೆಯನ್ನು ಪತ್ನಿ ಅಥವಾ ಸಂಗಾತಿ ಬಳಸಬಹುದು. ಸಾಧ್ಯವಿದ್ದರೆ,  ಸೆಕ್ಷನ್ 125ರ ಅಡಿಯಲ್ಲಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಬಹುದು. ನೀವು ಯಾವ ಕಾನೂನನ್ನು ಬಳಸಬೇಕು ಎಂಬುದು ಕಾನೂನಿನ ದೃಷ್ಟಿಯಲ್ಲಿ ನೀವು ಯಾವ ಸ್ಥಾನದಲ್ಲಿದ್ದೀರಿ ಮತ್ತು ನಿಮಗೆ ಯಾವ ರೀತಿಯ ಪರಿಹಾರ ಬೇಕಿದೆ ಎಂಬುದನ್ನು ಅವಲಂಬಿಸಿರುತ್ತದೆ.

ಕೆಲವೊಮ್ಮೆ ನೀವು ಏಕಕಾಲದಲ್ಲಿ ಎಲ್ಲಾ ಮೂರು ಕಾನೂನುಗಳನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ, ಆಗ ಪ್ರಕರಣದ ವಿಚಾರಣೆಗಳು ಮೂರು ಪ್ರತ್ಯೇಕ ನ್ಯಾಯಾಲಯಗಳಲ್ಲಿ ನಡೆಯುತ್ತವೆ ಮತ್ತು ಪ್ರತಿ ಸಂದರ್ಭದಲ್ಲೂ ಹಾಜರಾಗುವುದು ಮತ್ತು ಅದಕ್ಕಾಗಿ ತಯಾರಿ ನಡೆಸುವುದು ದೊಡ್ಡ ತೊಂದರೆಯಾಗುತ್ತದೆ. ಮತ್ತು ಮಹಿಳೆ ಕೇವಲ ಹಣ ಪಡೆಯಲು ಮಾತ್ರ ಯತ್ನಿಸುತ್ತಿದ್ದಾಳೆ ಎಂಬ ವಾದವನ್ನು ಪ್ರತಿವಾದಿ ಬಳಸಬಹುದು. ಆ ಮೂಲಕ ಈಗಾಗಲೇ ಪುರುಷ ಪ್ರಧಾನವಾಗಿರುವ ನ್ಯಾಯಾಂಗವನ್ನು ಮತ್ತಷ್ಚು ಪ್ರಭಾವಿಸಬಹುದು.


ಪ್ರಶ್ನೆ: ಜೀವನಾಂಶದ ಪ್ರಮಾಣ ನಿರ್ಧರಿಸುವ ಮಾನದಂಡ ಯಾವುದು?

ಉತ್ತರ: ಮಹಿಳೆ ಆ ಸಂಬಂಧದಲ್ಲಿ ಯಾವ ರೀತಿಯ ಜೀವನ ಶೈಲಿಯನ್ನು ಅಭ್ಯಾಸ ಮಾಡಿಕೊಂಡಿದ್ದಳು ಮತ್ತು ಜೀವನಾಂಶದ ಮೊತ್ತವು ಅವಳಿಗೆ ಅದೇ ರೀತಿಯ ಜೀವನಶೈಲಿಯನ್ನು  ಕೊಡಬಲ್ಲದೇ ಎಂಬುದು ಮುಖ್ಯ ಮಾನದಂಡವಾಗಿದೆ. ಜನರನ್ನು ಹಣಕಾಸಿನ ತೊಂದರೆಗೆ ತಳ್ಳುವುದನ್ನು ಅಥವಾ ದುರ್ಬಳಕೆ ತಡೆಗಟ್ಟುವುದು ಜೀವನಾಂಶ ಆದೇಶದ ಪ್ರಮುಖ ಉದ್ದೇಶವಾಗಿದೆ. ಆದೇಶವು, ನ್ಯಾಯಾಧೀಶರು ಸಾಮಾಜಿಕ-ಮನಸ್ಥಿತಿಯವರೇ ಎಂಬುದನ್ನು ಸಹಾ ಅವಲಂಬಿಸಿರುತ್ತದೆ.

ಪ್ರಶ್ನೆ: ಸಾಕಾಗುವಷ್ಟು ಜೀವನಾಂಶ ಮೊತ್ತ ಪಡೆಯುವಲ್ಲಿ ಎದುರಾಗುವ ಸವಾಲುಗಳು ಯಾವುವು?

ಉತ್ತರ : ಪುರುಷ ತನ್ನನ್ನು ಮತ್ತು ಮಹಿಳೆಯನ್ನು ಸಾಕಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ತೋರಿಸುವುದೇ ಅತಿದೊಡ್ಡ ಸವಾಲು. ಇದಕ್ಕೆ ಗಣನೀಯ ಪ್ರಮಾಣದ ದಾಖಲೆಗಳ, ಸಾಕ್ಷ್ಯಗಳ ಅಗತ್ಯವಿದೆ. ನಾವು ಅವರ ಉದ್ಯೋಗ ಪ್ರಮಾಣಪತ್ರ, ವೇತನ ಪತ್ರ, ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ ದಾಖಲೆಗಳು ಇತ್ಯಾದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ ಮಹಿಳೆಯ ಮೇಲೆ ವಿಪರೀತ ದಾಳಿಯಾದಾಗ ಮತ್ತು ಆಕೆ ಆ ಸಂಬಂಧದಿಂದ ಹೊರಗೆ ಓಡಿ ಬರಬೇಕಾದ ಸಂದರ್ಭಗಳಲ್ಲಿ, ಅವಳು ಈ ದಾಖಲೆಗಳನ್ನು ತನ್ನೊಂದಿಗೆ ತೆಗೆದುಕೊಂಡು ಬಂದು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಬೇಕೆಂದು ನಿರೀಕ್ಷಿಸುವುದು ಸರಿಯೇ?

ಆ ದಾಖಲೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗೆ ಸೂಚಿಸುವಂತೆ ನ್ಯಾಯಾಲಯವನ್ನೇ ಕೇಳುವ ಮೂಲಕ ನೀವು ಇದನ್ನು ಸಾಧಿಸಬಹುದು. ಆದರೆ ಮದುವೆಯ ಉದ್ದಕ್ಕೂ ಗಂಡ ತನ್ನ ಹಣಕಾಸು ಸ್ಥಿತಿಯನ್ನು ಹೆಂಡತಿಯಿಂದ ರಹಸ್ಯವಾಗಿ ಇಟ್ಟಿದ್ದರೆ, ಆಗ ತನ್ನ ಬಳಿ ಕಡಿಮೆ ಹಣ ಇದೆ ಅಥವಾ ಕೆಲಸ ಕಳೆದುಕೊಂಡಿದ್ದೇನೆ ಎಂದು ತೋರಿಸುವುದು ಆತನಿಗೆ ಸುಲಭವಾಗುತ್ತದೆ.

ಪ್ರಶ್ನೆ: ಇಂತಹ ಪರಿಸ್ಥಿತಿಯನ್ನು ತಡೆಗಟ್ಟುವುದು ಹೇಗೆ?
ವಿವಾಹದಲ್ಲಿ ಅಥವಾ ಸಂಬಂಧದಲ್ಲಿ ನೀವು ಆರ್ಥಿಕವಾಗಿ ಸ್ವತಂತ್ರವಾಗಿರುವಂತೆ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಗೃಹಿಣಿಯರಿಗೆ ಅಥವಾ ಅನೌಪಚಾರಿಕ ಉದ್ಯೋಗ ಮಾಡುವವರಿಗಿಂತ, ಔಪಚಾರಿಕ ಉದ್ಯೋಗ ಹೊಂದಿರುವ ಮಹಿಳೆಯರಿಗೆ ಇದು ಸುಲಭವಾಗಿದೆ. ನಿಮ್ಮ ಸ್ವಂತ ಹಣದ ಮೇಲೆ ನಿಮ್ಮ ಹಿಡಿತವಿರುವಂತೆ ಜಂಟಿ ಖಾತೆಗಳನ್ನು ಹೊಂದಿರಿ. ನಿಮ್ಮ ಸಂಗಾತಿ ಹೇಳುವ ಎಲ್ಲಾ ದಾಖಲೆಗಳಿಗೂ ಕುರುಡಾಗಿ ಸಹಿ ಮಾಡಬೇಡಿ. ಇಬ್ಬರೂ, ಅವರ ಗಳಿಕೆ, ಸಾಲ ಮುಂತಾದ ಮಾಹಿತಿಗಳ ಬಗ್ಗೆ ಮುಕ್ತವಾಗಿರಬೇಕು. ಇಂತಹ ಪ್ರಕರಣಗಳಲ್ಲಿ ನಾವು ಉದ್ದಕ್ಕೂ ನೋಡುತ್ತಾ ಬಂದಿರುವುದೇನೆಂದರೆ, ಗಂಡಂದಿರು ತಾವು ಎಷ್ಟು ಸಂಪಾದಿಸುತ್ತೇವೆ ಅಥವಾ ಎಲ್ಲಿ ಕೆಲಸ ಮಾಡುತ್ತೇವೆ ಎಂಬುದನ್ನು ಕೂಡ ಬಹಿರಂಗಪಡಿಸುವುದಿಲ್ಲ.

ಹೀಗಿದ್ದೂ, ನಾನು ಒತ್ತಿ ಹೇಳುವುದೇನೆಂದರೆ ಜೀವನಾಂಶ ಪ್ರಕರಣವನ್ನು ಸಲ್ಲಿಸಲು ದಾಖಲೆಗಳ ಅಗತ್ಯವಿಲ್ಲ. ಮಹಿಳೆಗೆ ಆಕೆಯ ಗಂಡನ ಹಣಕಾಸು ಸ್ಥಿತಿ, ಆತನ ಕೆಲಸದ ಸ್ಥಳ ಇತ್ಯಾದಿಗಳ ಬಗ್ಗೆ ತಿಳಿದಿದ್ದರೆ ಸಾಕು. ಅದನ್ನು ನ್ಯಾಯಾಲಯದಲ್ಲಿ ಹೇಳಿದರೆ ಅದು ಸಹಾಯವಾಗುತ್ತದೆ. ನಂತರ ನೀವು ನ್ಯಾಯಾಧೀಶರ ಮೂಲಕ ದಾಖಲೆಗಳನ್ನು ನೀಡುವಂತೆ ಕೇಳಬಹುದು.

ಪ್ರಕರಣದ ಯಶಸ್ಸು ನೀವು ಹೊಂದಿರುವ ದಾಖಲೆಗಳು / ಮಾಹಿತಿಯನ್ನು ಅವಲಂಬಿಸಿರುತ್ತದೆ. ಮತ್ತು ನೀವು ಸರಿಯಾದ ಮತ್ತು ಅವಶ್ಯಕತೆ-ಆಧಾರಿತ ಜೀವನಾಂಶದ ಮೊತ್ತವನ್ನು ಕೇಳುತ್ತಿದ್ದೀರೇ ಎಂಬುದನ್ನು ಅವಲಂಬಿಸಿರುತ್ತದೆ.. ಉದಾಹರಣೆಗೆ, ಪತಿ ರೂ 25,000 ಗಳಿಸುತ್ತಿದ್ದು, ನೀವು 20,000 ರೂ. ಕೇಳಿದರೆ, ಅದು ನಿಮ್ಮ ವಿರುದ್ಧ ನ್ಯಾಯಾಧೀಶರು ಪೂರ್ವಾಗ್ರಹ ಹೊಂದುವಂತೆ ಮಾಡಬಹುದು.

ನಿಮ್ಮ ಮಾಸಿಕ ಖರ್ಚುಗಳ ಬಿಲ್ ಅಥವಾ ಇತರ ದಾಖಲಾತಿಗಳನ್ನು ನೀವು ನೀಡಿದರೆ ಅದು ನಿಮ್ಮ ಪ್ರಕರಣವನ್ನು ಮತ್ತಷ್ಚು ಬಲಪಡಿಸುತ್ತದೆ. ಆದರೆ, ಇದು ಅತ್ಯಗತ್ಯವೇನಲ್ಲ. ಕೆಲವು ಮಹಿಳೆಯರಿಗೆ( ಮನೆಗೆಲಸದ ಸಹಾಯಕಿಯರಿಗೆ) ತಮ್ಮ ಖರ್ಚುಗಳ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಇವರ ವೆಚ್ಚಗಳು ಹೆಚ್ಚಾಗಿರುತ್ತವೆ ಮತ್ತು ಕೈ ಸಾಲಗಳು ಇರುತ್ತವೆ ಎಂಬ ಅಂಶದ ಹೊರತಾಗಿಯೂ ದಾಖಲೆಗಳು ಇರುವುದಿಲ್ಲ. ಆದರೆ ನಿಮ್ಮ ಬಳಿ ಇದು ಇದ್ದರೆ, ಪ್ರಕರಣಕ್ಕೆ ಸಹಾಯವಾಗುತ್ತದೆ.

ಪ್ರಶ್ನೆ: ಸಾಮಾನ್ಯವಾಗಿ ಮಹಿಳೆಯರಿಗೆ ಎಷ್ಟು ಹಣ ಸಿಗುತ್ತದೆ?

ಉತ್ತರ: ಇದು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ. ಆದರೆ ಮಕ್ಕಳಿರುವ ಮಹಿಳೆಗೆ ಪತಿಯ ಮಾಸಿಕ ಸಂಬಳದ 40% ದರೆಗೂ ದೊರಕಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.

ಪ್ರಶ್ನೆ: ಕೋರ್ಟ್ ಆದೇಶದ ನಂತರವೂ ಗಂಡ ಹಣ ಪಾವತಿಸದಿದ್ದರೆ ಏನಾಗುತ್ತದೆ?
ಉತ್ತರ :ಆಗ ಮಹಿಳೆ ಮತ್ತೆ ನ್ಯಾಯಾಲಯಕ್ಕೆ ಹೋಗಿ ಆದೇಶವನ್ನು ಕಾರ್ಯಗತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯವು ಆಗ ವಾರೆಂಟ್ ನೀಡಬಹುದು ಮತ್ತು ವ್ಯಕ್ತಿಯನ್ನು ಬಂಧಿಸಲೂಬಹುದು. ಈ ನಿಬಂಧನೆ ಎಲ್ಲಾ ಜೀವನಾಂಶ ಕಾನೂನುಗಳಲ್ಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT