ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ ನೆಟ್ ಎಂಬ ಸಾವಿಲ್ಲದ ಜಾಗ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅವಳಿಗೆ ಜನ ಬೇಕಿಲ್ಲ. ಬೇಕಿಲ್ಲವೆಂದರೆ ಬೇಡ. ಮೌನವಾಗಿ ಇದ್ದುಬಿಡೋಣ ಅಂದ್ರೆ ಹಾಗೂ ಅಲ್ಲ. ಜನ ಬೇಕು, ಆದರೆ ಮಾತು ಬೇಡ. ಅದಕ್ಕಾಗಿ ಅವಳಿಗೆ ಸಿಕ್ಕಿರುವ ಒಂದು ಅದ್ಭುತ ಜಾಗ ಅಂದರೆ ಇಂಟರ್ನೆಟ್. ಅದರಲ್ಲೂ ಮುಖ್ಯವಾಗಿ ಫೇಸ್ ಬುಕ್ಕು. 
ಈಗೀಗ ಹುಷಾರಿಲ್ಲವೆಂದರೂ ಡಾಕ್ಟ್ರ ಹತ್ತಿರ ಹೋಗೋದು ಲೇಟ್ ಮಾಡಬಹುದು ಜನ, ಆದರೆ ಅದನ್ನ ಫೇಸ್ ಬುಕ್ಕಿಗೆ ಹಾಕಿ ಸ್ನೇಹಿತರ ಗಮನಕ್ಕೆ ತರೋದು ಮಾತ್ರ ಮರೆಯಲ್ಲ. ಇನ್ನು ಟ್ವಿಟ್ಟರ್ ಅಭಿಮಾನಿಗಳು ಆಗಾಗ ಟ್ವೀಟ್ ಗಳನ್ನು ಹಾಕೋಕೆ ಅಥವಾ ಚೆಕ್ ಮಾಡೋಕೆ ಮರೆಯಲ್ಲ.
ಇಂಟರ್ನೆಟ್ ಎನ್ನುವ ಮಾಯಾಜಾಲದಲ್ಲಿ ಸಿಕ್ಕಿಕೊಂಡ ಎಲ್ಲರ ಜೀವನವೂ ’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎನ್ನುವಂತಾಗಿದೆ. ಎಲ್ಲರೂ ಹೀಗೇ ಅಂತ ಹೇಳುತ್ತಿಲ್ಲ ನಾನು. ಆದರೆ ’ಬಹುತೇಕ’ ಜನ ಹೀಗಿರಬಹುದು ಎನ್ನುವುದು ನಮಗೆ ಕಾಣುವ ಸತ್ಯ.

ಉಣ್ಣುವ ತಾಟಿನ ಫೋಟೋ ತೆಗೆಯುವುದು...ಅದನ್ನು ಅಪ್ಲೋಡ್ ಮಾಡಿ ಲೈಕುಗಳಿಗಾಗಿ ಕಾಯುವುದು. ಕುಡಿಯುವ ಪೇಯದ ಫೋಟೋ ತೆಗೆದು ’ಮೈ ಡ್ರಿಂಕ್’ ಎಂದು ಇಂಟರ್ನೆಟ್ಟಲ್ಲಿ ಹರಿಬಿಟ್ಟು ಮಜಾ ನೋಡುವುದು. ಅಡಿಗೆ ಮಾಡಿದ್ರೆ, ಪ್ರವಾಸ ಹೋದರೆ, ಡಯಟ್ಟು ಶುರು ಮಾಡಿದ್ರೆ, ಜಿಮ್ಮಿಗೆ ಹೋದ್ರೆ ಎಲ್ಲಾ ಸಂದರ್ಭಕ್ಕೂ ಒಂದು ಫೇಸ್ ಬುಕ್ ಅಪ್ಡೇಟು ಇಲ್ಲದೆ ಹೋದರೆ ಜೀವನವೇ ವ್ಯರ್ಥ ಅನ್ನುವಂತಾಗಿದೆ.
’ನಂಗೆ ಫ಼ೇಸ್ ಬುಕ್ ನೋಡಲಿಲ್ಲಾಂದ್ರೆ ಕಷ್ಟ ಕಣೇ’ ಅನ್ನುತ್ತಾಳೆ ಸ್ನೇಹಿತೆ. ಯಾಕೆ ಹೀಗಾಗಿದೆ ಎಂದು ಯೋಚಿಸಿದರೆ ಒಂದೇ ಬಾರಿಗೆ ನೂರಾರು ಜನ ಭೇಟಿಯಾಗುವ ತಾಣ ಇದೊಂದೇ ಎನ್ನುವ ಸತ್ಯ ಕಾಣುತ್ತದೆ. ಇಲ್ಲಿ ಇದ್ದ ಹಾಗೆ ಇದ್ದು, ಇಲ್ಲದ ಹಾಗೂ ಇರಬಹುದು. ಬೇಕಾದಾಗ ಲಾಗಿನ್, ಬೇಡವಾದಾಗ ಲಾಗೌಟ್.

ಅನುಕೂಲಕರ ಸಂಬಂಧ ನಮ್ಮದು ಈ ಜಾಲತಾಣಗಳ ಜೊತೆ. ಈವತ್ತು ಯಾರಿಗಾದರೂ ಸಾವಿನ ಬಗ್ಗೆ ಹೆದರಿಕೆ ಇದೆಯೋ ಇಲ್ಲವೋ ಕಾಣೆ. ಆದರೆ ಅರ್ಧ ತಾಸು ಫ್ರೀ ಟೈಂ ಇದೆ, ಆ ಸಮಯದಲ್ಲಿ ಫೋನ್ ಇಲ್ಲ, ಗೇಮ್ಸ್ ಇಲ್ಲ, ಇಂಟರ್ನೆಟ್ ಕೆಲಸ ಮಾಡಲ್ಲ ಎನ್ನುವ ಸಂದರ್ಭ ಸೃಷ್ಟಿ ಆಗಿಬಿಟ್ಟರೆ ಸತ್ತೇ ಹೋಗಿಬಿಡುತ್ತೇವೇನೋ.
ಅಂತವಳಿಗೆ ಫೇಸ್ ಬುಕ್ ಮೊನ್ನೆ ಭೂತ ಬಿಡಿಸಿಬಿಟ್ಟಿತು. ನನ್ನ ಸ್ನೇಹಿತೆಯ ಸಂಬಂಧಿಯೊಬ್ಬರು ತೀರಿ ಹೋದರು. ಇವಳಿಗೆ ವಿಚಾರ ಗೊತ್ತಾದ ಕೂಡಲೇ ’ರಿಪ್’ (ರೆಸ್ಟ್ ಇನ್ ಪೀಸ್) ಮಾಡಿ ಸುಮ್ಮನಾದಳು. ತೀರಿ ಹೋದವರ ಫೇಸ್ ಬುಕ್ ಅಕೌಂಟಿಗೆ ಯಾರೋ ಪಾರ್ಥೀವ ಶರೀರದ ಫೋಟೋ ಅಪ್ಲೋಡ್ ಮಾಡಿಬಿಟ್ಟರು. ಇವಳು ನೋಡಿದಾಗ ಹತ್ತಿರತ್ತಿರ ಮಧ್ಯರಾತ್ರಿ ಆಗಿದ್ದಿರಬೇಕು. ಅಪರಾತ್ರಿಯ ತಂಪಿನಲ್ಲೂ ಬೆವರು ಕಿತ್ತು ಬಂದು. ಕಣ್ಣು ಮುಚ್ಚಿ ಮೂಗಿಗಲ್ಲಿ ಹತ್ತಿ ತುಂಬಿಸಿಕೊಂಡ ಊದಿದ ಮುಖ, ಬಾಯ ಹತ್ತಿರ ಎಳ್ಳು. ಅವರೇನೋ ರೆಸ್ಟ್ ಇನ್ ಪೀಸ್ ಆಗಿದ್ದರೆನ್ನಿ. ಇವಳು ರೆಸ್ಟ್ ಲೆಸ್ ಆಗಿ ಗಂಡನನ್ನು ಎಬ್ಬಿಸಿ ತನ್ನ ಅಂಜಿಕೆ ಹೇಳಲು ಹೋಗಿ ಬೈಸಿಕೊಂಡಳು.

’ಸಿನಿಮಾದಲ್ಲಿ ಹಾರರ್ ಸೀನ್ ತೋರಿಸೋ ಥರ ಆಗಿಬಿಡ್ತು ಕಣೆ...ನನ್ನ ಬೆಡ್ ಲ್ಯಾಂಪು, ಆ ಜ಼ೀರೋ ಕ್ಯಾಂಡಲ್ಲಿನ ಮಂದ ಬೆಳಕು ಎಲ್ಲವೂ ಯಾರೋ ಕೊಲೆಗಾರನನ್ನು ಬಚ್ಚಿಟ್ಟುಕೊಂಡಿವೆ ಅನ್ನಿಸಿತು...’ ಎಂದಳು.
ಅಂದಹಾಗೆ, ಫೇಸ್ ಬುಕ್ ಅವಳ ಕೈಗೆ ಸಿಗಲಿಕ್ಕೆ ಮೊದಲು ಅವಳಿಗೆ ಸಿನಿಮಾ ಹುಚ್ಚಿತ್ತು. ಈಗ ಅಲ್ಲಿಗೇ ವಾಪಾಸಾಗಿದ್ದಾಳೆ ಅನ್ನಿಸಿತು. ಏನಾದರಾಗಲಿ, ಮನುಷ್ಯರಾಗಿ ಹುಟ್ಟಿದ ಮೇಲೆ ಒಂದು ಹುಚ್ಚಿರಬಾರದೇನು? ಯಾವ ತಂತ್ರಜ್ಞಾನ ಆದರೇನಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT