ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ರೂಡ್ರೈವರ್ ಕೆಳಗಿಟ್ಟು; ಉಳಿ–ಸುತ್ತಿಗೆ ಹಿಡಿದು...

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಯಲು ಸೀಮೆ ಎಂದರೆ ಬಿಸಿಲು, ಕಡಿಮೆ ಮಳೆ, ಗುಳೆ ಎನ್ನುವ ಹಲವು ಸಂಗತಿಗಳು ನೆನಪಾಗುತ್ತವೆ. ಆದರೆ ಸಮಸ್ಯೆಗಳು ಮಾತ್ರವಲ್ಲದೇ ಕೆಲವು ವಿಶೇಷಗಳೂ ಗಮನ ಸೆಳೆಯುತ್ತವೆ. ಅದರಲ್ಲಿ, ಯುವಶಿಲ್ಪಿ ವಿ.ಬಿ.ಧನುಷ್‍ಕುಮಾರ್ ಅವರ ಶಿಲ್ಪಕಲೆಯೂ ಸೇರಿದೆ.

ನಾಯಕನಹಟ್ಟಿ ಗ್ರಾಮದ ಧನುಷ್‍ಕುಮಾರ್, ಚಿಕ್ಕಂದಿನಿಂದ ಕುಟುಂಬದ ಮೂಲ ಕಸುಬಾಗಿದ್ದ ಬಡಗಿ ವೃತ್ತಿಯನ್ನು ನೋಡುತ್ತಾ ಬೆಳೆದ ಯುವಕ. ಐಟಿಐ ಅಭ್ಯಾಸ ಮಾಡಿ ನಂತರ ಓದಿಗೆ ವಿದಾಯ ಹೇಳಿದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಯಾಂತ್ರಿಕ ಬದುಕಿಗೆ ಬೇಸರಗೊಂಡು ಪುನಃ ಗ್ರಾಮಕ್ಕೆ ಮರಳಿ ಬಂದರು. ನಂತರ ಕಲೆಯ ಮೇಲೆ ಆಸಕ್ತಿ ತಳೆದು ಬಡಗಿ ವೃತ್ತಿಯಲ್ಲಿ ತೊಡಗಿ ಹೊಸ ಪ್ರಯೋಗಗಳನ್ನು ಮಾಡಲು ಮುಂದಾದರು.

ಗ್ರಾಮದಲ್ಲಿ ಸಣ್ಣಪುಟ್ಟ ವಿಗ್ರಹಗಳ ಕೆತ್ತನೆಯಲ್ಲಿ ಕಾಲ ಕಳೆಯುತ್ತಿದ್ದ ಧನುಷ್ ಅವರು, ಸ್ನೇಹಿತರ ಸಹಕಾರದೊಂದಿಗೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕರಕುಶಲ ತರಬೇತಿ ಸಂಸ್ಥೆಗೆ ಸೇರಿದರು. ಅಲ್ಲಿ ಸುಮಾರು 18 ತಿಂಗಳ ತರಬೇತಿ ಪೂರೈಸಿದರು. ಶಿಲ್ಪಕಲೆಯ ಎಲ್ಲಾ ಮಟ್ಟುಗಳು, ಸೂಕ್ಷ್ಮತೆಗಳನ್ನು ಕಲಿತು ಶಾಸ್ತ್ರೋಕ್ತವಾಗಿ ಶಿಲೆ, ಕಾಷ್ಠ, ಲೋಹ ಸೇರಿದಂತೆ ಎಲ್ಲಾ ತರಹದ ಕೆತ್ತನೆಯ ಶಿಲ್ಪಕಲೆಯನ್ನು ಕರಗತ ಮಾಡಿಕೊಂಡರು ಮತ್ತು ಈಗ ರಥಗಳ ನಿರ್ಮಾಣದಲ್ಲೂ ಶಿಲ್ಪ ಕೆತ್ತನೆಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.

‘ಶಿಲ್ಪಕಲೆಯಲ್ಲಿ ಶಿಲಾಶಿಲ್ಪ, ಕಾಷ್ಠಶಿಲ್ಪ, ಲೋಹಶಿಲ್ಪ, ಮಣ್ಣಿನ ಶಿಲ್ಪ, ಸಿಮೆಂಟ್‍ಸಿದ್ಧ ಮಾದರಿ ಶಿಲ್ಪ ಹೀಗೆ ಹಲವು ವಿಧಗಳಿವೆ. ಈ ಎಲ್ಲಾ ಮಾದರಿಗಳು ನಮ್ಮ ರಾಜ್ಯದಲ್ಲಿ ಪ್ರಚಲಿತದಲ್ಲಿವೆ. ಜಿಲ್ಲೆಯಲ್ಲಿ ಈ ಎಲ್ಲಾ ಮಾದರಿಯ ಕಲೆಯನ್ನು ಕರಗತ ಮಾಡಿಕೊಂಡ ಶಿಲ್ಪಿಗಳು ಕಡಿಮೆ. ಹಾಗಾಗಿ ಈ ಎಲ್ಲಾ ಮಾದರಿಗಳನ್ನು ಕಲಿಯಬೇಕು ಎನ್ನುವ ಹಂಬಲದಿಂದ ಕಲಿತೆ’ ಎನ್ನುತ್ತಾರೆ ಧನುಷ್‍ಕುಮಾರ್.

ರಾಜ್ಯದಲ್ಲಿರುವ ಹಲವು ದೇವಾಲಯಗಳು ಹಾಗೂ ಅವುಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹಗಳು ಚಾಲುಕ್ಯ ಶೈಲಿ, ಹೊಯ್ಸಳ ಶೈಲಿ, ಚೋಳ ಶೈಲಿ, ಚೇರಾ ಶೈಲಿಗಳಲ್ಲಿವೆ. ಈ ಎಲ್ಲಾ ಶೈಲಿಗಳಲ್ಲೂ ವಿಗ್ರಹ ಕೆತ್ತನೆ ಮಾಡುವುದರಲ್ಲಿ ನೈಪುಣ್ಯ ಹೊಂದುವ ಹಾದಿಯಲ್ಲಿದ್ದಾರೆ. ‘ಭಾರತೀಯ ಶಿಲ್ಪಶಾಸ್ತ್ರದ ಕಾಶ್ಯಪ ಶಿಲ್ಪಶಾಸ್ತ್ರ, ಬ್ರಾಹ್ಮೀಯ ಚಿತ್ರಕರ್ಮಶಾಸ್ತ್ರದ ಪ್ರಕಾರ ವಿಗ್ರಹಗಳ ಕೆತ್ತನೆಯನ್ನು ಮಾಡಲಾಗುತ್ತದೆ. ಜತೆಗೆ ಪಂಚತಾಳ, ನವತಾಳ, ದಶತಾಳದ ಹಿನ್ನೆಲೆಯಲ್ಲಿ ದೇವರ ವಿಗ್ರಹಗಳು ರೂಪುಗೊಳ್ಳುತ್ತವೆ. ಪ್ರತಿಯೊಂದು ದೇವರ ವಿಗ್ರಹಗಳ ಕೆತ್ತನೆಯು ಅದರದೇ ಆದ ತಾಳಮಾನವನ್ನು ಹೊಂದಿವೆ. ಹಾಗೂ ದೇವರು ಬಳಸುವ ಆಯುಧಗಳು ಮತ್ತು ಅವುಗಳು ವ್ಯಕ್ತಪಡಿಸುವ ಭಾವಗಳು ಪ್ರಮುಖವಾಗುತ್ತವೆ’ ಎಂದು ವಿವರಿಸುತ್ತಾರೆ ಅವರು.

ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೆ ಶಿಲಾಶಿಲ್ಪಗಳೇ ಶ್ರೇಷ್ಟ. ಈ ಶಿಲಾಶಿಲ್ಪಗಳ ಕೆತ್ತನೆಗೆ ಬಳಸುವ ಕಲ್ಲುಗಳು, ಮೈಸೂರು ಜಿಲ್ಲೆಯಲ್ಲಿ ದೊರೆಯುವ ಕೃಷ್ಣಶಿಲೆ, ಬಾಗಲಕೋಟೆ ಜಿಲ್ಲೆಯ ಶೆಲಿಕೆರಿ ಶಿಲೆ, ತಮಿಳುನಾಡಿನ ಕಪ್ಪುಶಿಲೆಗಳು. ಇವು ದೇವಾಲಯದ ಗರ್ಭಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಯೋಗ್ಯವಾಗುತ್ತವೆ. ಹಾಗೇ ಉತ್ಸವಮೂರ್ತಿಗೆ ಹೊನ್ನೆ, ತೇಗದ ಮರಮುಟ್ಟುಗಳಿಂದ ಕೆತ್ತನೆ ಮಾಡಲಾದ ಕಾಷ್ಠಶಿಲ್ಪಗಳು ಮತ್ತು ಪಂಚಲೋಹ, ಹಿತ್ತಾಳೆಯಿಂದ ರಚಿಸುವ ವಿಗ್ರಹಗಳು ಕಂಡುಬರುತ್ತವೆ. ಅದರಂತೆ ಬೇಡಿಕೆಗಳಿಗೆ ಅನುಗುಣವಾಗಿ ವಿಗ್ರಹಗಳನ್ನು ರಚಿಸಿಕೊಡುತ್ತಾ ಇದ್ದಾರೆ.

ಕೆತ್ತನೆಗೂ ಮೊದಲು ನಿಯಮಗಳಂತೆ ವಿಗ್ರಹದ ರೇಖಾಚಿತ್ರವನ್ನು ಬರೆದುಕೊಳ್ಳುತ್ತಾರೆ. ನಂತರ ಶಿಲ್ಪಕೆತ್ತನೆಗೆ ಮುಂದಾಗಿ ವಿಗ್ರಹಗಳ ಅಳತೆಯನ್ನು ಆಧರಿಸಿ ನಿರಂತರವಾಗಿ ಎರಡು ತಿಂಗಳುಗಳ ಕಾಲ ಹಗಲಿರುಳು ಕೆಲಸ ಮಾಡುತ್ತಾರೆ. ಉದ್ಯೋಗ, ಹವ್ಯಾಸ ಎರಡಾಗಿಯೂ ಶಿಲ್ಪಕಲೆಯನ್ನೇ ನೆಚ್ಚಿಕೊಂಡಿರುವ ಧನುಷ್‍ಕುಮಾರ್ ಅವರಿಗೆ ಇನ್ನಷ್ಟು ಪ್ರಯೋಗಗಳನ್ನು ಮಾಡುವ ಆಸೆ.

– ವಿ.ಧನಂಜಯ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT