ಶುಕ್ರವಾರ, ಏಪ್ರಿಲ್ 3, 2020
19 °C

ಜಿಹ್ವೆ ತಣಿಸುವ ಅರೇಬಿಕ್ ಖಾದ್ಯಗಳು...

ಸುಬ್ರಮಣ್ಯ ಎಚ್.ಎಂ Updated:

ಅಕ್ಷರ ಗಾತ್ರ : | |

ಜಿಹ್ವೆ ತಣಿಸುವ ಅರೇಬಿಕ್ ಖಾದ್ಯಗಳು...

ಹೋಟೆಲ್‌ ಒಳಗೆ ಕಾಲಿಟ್ಟೊಡನೇ ಒಳಾಂಗಣ ವಿನ್ಯಾಸ ಕಣ್ಸೆಳೆಯುವಂತಿತ್ತು. ಪಕ್ಕದ ಟೇಬಲ್‌ನಲ್ಲಿ ಆಸೀನರಾಗಿ ಸುತ್ತ ಪರಿಸರವನ್ನು ಗಮನಿಸುತ್ತಿದ್ದಾಗ ಸಪ್ಲೈಯರ್‌ ಕೆಂಪಾದ ಕೆಂಡದ ಮೇಲೆ ಸುಡುವ ಶೆಷತಾವುಕ್ (ಚಿಕನ್‌ ತುಂಡು) ತಂದಿಟ್ಟರು. ಸ್ವಲ್ಪ ಹೊತ್ತು ಬಿಟ್ಟು, ಬಿಸಿ ಬಿಸಿಯಾಗಿ ಬಾಯಿಗೆ ಇಟ್ಟರೆ ಚಿಕನ್‌ ತುಂಡು ಕರಗಿ ಹೋಗುವಂತಿತ್ತು. ರುಚಿಯೂ ಅದ್ಭುತವಾಗಿತ್ತು.

ನಂತರ ಸ್ಪೈಸಿ ಪಂಜಾಬ್‌ ಚಿಕನ್ ಗ್ರೇವಿಯೊಂದಿಗೆ ರೊಟ್ಟಿ ಮೇಲುತ್ತಿದ್ದಂತೆ ಅದರ ಸವಿ ನಾಲಿಗೆ ಹಿತ ನೀಡಿತು. ಇದರೊಂದಿಗೆ ಕೋಲ್ಕತ್ತ ಚಿಕನ್ ಸವಿಯಲು ಮುಂದಾದಾಗ ಸಿಹಿ ಒಗರಿನ ಖಾರ ಮತ್ತೊಂದು ರೀತಿಯ ಹಿತಾನುಭವ ನೀಡಿತು. ಜೋಳದೊಂದಿಗೆ ಬೆರೆಸಿದ ಕಿಚನ್ ಫ್ರೈ ಸೈಡ್‌ ಡಿಶ್ ಊಟದ ಘಮ ಹೆಚ್ಚಿಸಿತು.

ಇನ್ನು ಆಂಧ್ರಶೈಲಿಯ ಖಾರವಾದ ಮಟನ್ ಸಾರಿನೊಂದಿಗೆ ಅನ್ನ ಬೆರೆಸಿ ಪುಷ್ಕಳ ಭೋಜನ ಸವಿದಿದ್ದಾಯಿತು. ಖುದ್ದಾಗಿ ಎಷ್ಟು ಬೇಕಾದರೂ ಬಡಿಸಿಕೊಂಡು ತಿನ್ನಬಹುದು. ಇದರೊಂದಿಗೆ ವೆಜ್ ಸಲಾಡ್, ವಿವಿಧ ರೀತಿಯ ಪುಳಿ, ಒಗರಿನ ಚಟ್ನಿಯೂ ನಾಲಿಗೆ ಊಟಕ್ಕೆ ಸಾಥ್ ನೀಡುತ್ತದೆ. ಇದರೊಂದಿಗೆ ಅರೇಬಿಕ್ ಪಾಕ ಶೈಲಿಯ ಈ ಸ್ವಾದಿಷ್ಟಗಳನ್ನು ಕೋರಮಂಗಲದ ‘ಎಸ್ಎಸ್‌ ಲುಮಿನಾ’ ಹೋಟೆಲ್‌ ಹೊಸ ಬಗೆಯಲ್ಲಿ ಪರಿಚಯಿಸಿದೆ.  ಭಾರತೀಯ ಶೈಲಿಯ ಶಾದಿಕಾ ಬಿರಿಯಾನಿ, ಹೈದರಾಬಾದಿ ಬಿರಿಯಾನಿ, ಬೊಂಬು ಬಿರಿಯಾನಿಯಂತಹ ಸಾಂಪ್ರದಾಯಿಕ ಖಾದ್ಯಗಳು ಸವಿಯಲು ಇಲ್ಲಿ ಲಭ್ಯ.

ನಂತರ ರುಚಿ ನೋಡಿದ್ದು ಹದವಾದ ಮಸಾಲೆ ಭರಿತ ಮಜಬೂಸ್(ಬಿರಿಯಾನಿ). ತಿಂದಷ್ಟು ಹೊಟ್ಟೆ ತಣಿಯುವುದೇ ಇಲ್ಲ. ಮಾಂಸಾಹಾರ ಪ್ರಿಯರಿಗೆ ಯಾವಾಗಲೂ ಬಿರಿಯಾನಿ ಅಚ್ಚುಮೆಚ್ಚು. ಈ ಹೋಟೆಲ್‌ನಲ್ಲಿ ಬಗೆಬಗೆ ಬಿರಿಯಾನಿಗಳು ಲಭ್ಯ. ಬಿರಿಯಾನಿ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಮತ್ತು ಅವುಗಳ ಪ್ರಮಾಣ ಬಹಳ ಮುಖ್ಯ. ಈ ಹೋಟೆಲ್‌ನಲ್ಲಿ  ಸಾಂಪ್ರದಾಯಿಕವಾಗಿ ತಯಾರಿಸುವ ದಂ ಬಿರಿಯಾನಿ (ನಿಧಾನ ಬೆಂಕಿಯಲ್ಲಿ ಬೇಯಿಸುವ ಪರ್ಷಿಯನ್ ವಿಧಾನ) ಜನಪ್ರಿಯ. ಇಲ್ಲಿ ಪದಾರ್ಥಗಳನ್ನು ಪಾತ್ರೆಗೆ ಸೇರಿಸಿ, ಇದ್ದಿಲಿನ ಬೆಂಕಿಯಲ್ಲಿ ಬೇಯಿಸಲಾಗುತ್ತದೆ. ಅರ್ಧ ಬೆಂದ ಮೇಲೆ ಪಾತ್ರೆಯ ಬಾಯಿಯನ್ನು ಹಿಟ್ಟಿನಿಂದ ಮುಚ್ಚಿ, ಮೇಲೆಯೂ ಬೆಂಕಿ ಹಾಕಿ ಬೇಯಿಸಲಾಗುತ್ತದೆ. ಇದರಿಂದ ದಂ(ಹಬೆ) ಒಳಗೆಯೇ ಉಳಿದು, ವಿಶೇಷ ರುಚಿ ನೀಡುತ್ತದೆ ಎನ್ನುತ್ತಾರೆ ಹೋಟೆಲ್‌ ಸಿಬ್ಬಂದಿ.

ಈ ಹೋಟೆಲ್‌ನಲ್ಲಿ ವಿಶೇಷವಾಗಿ ಅರೇಬಿಕ್ ಖಾದ್ಯಗಳನ್ನು ತಯಾರಿಸಲು ಲೆಬನಾನ್‌ನಿಂದ ಪರಿಣತ ಬಾಣಿಸಿಗರನ್ನು ಕರೆ ತರಲಾಗಿದೆ. ಅರೇಬಿಕ್ ಶೈಲಿಯಲ್ಲಿ ತಯಾರಿಸುವ ಜ್ಹಾತ್ರಾ (ಪಿಜ್ಜಾ) ಇಲ್ಲಿನ ಮತ್ತೊಂದು ವಿಶೇಷ. 24 ಗಂಟೆಗಳ ಕಾಫಿಶಾಪ್‌, ರೆಸ್ಟೋರೆಂಟ್‌, 100ರಿಂದ 150 ಜನರಿಗೆ ಸ್ಥಳಾವಕಾಶ ಇರುವ ಬ್ಯಾಂಕ್ವೆಟ್‌ ಹಾಲ್, 15ಜನರಿಗಾಗಿ ಆಸನದ ಬೋರ್ಡ್‌ ರೂಮ್, ಹೊರಾಂಗಣ ಕ್ಯಾಟರಿಂಗ್ ಮತ್ತು ಕಾಂ‍ಪ್ಲಿಮೆಂಟರಿ ವೈಫೈ ಸೌಲಭ್ಯ ಒಳಗೊಂಡಿದೆ.

ಇದರೊಂದಿಗೆ ಕುನಾಫಾ, ಬಾಕ್ಲಾವ್ (ಸಲಾಡ್) ಹೊಸ ರುಚಿಯ ಅನುಭವ ನೀಡುತ್ತದೆ. ಎಲ್ಲಾ ಆಹಾರಗಳು ಅರೇಬಿಕ್‌ ರುಚಿಯನ್ನು ಹೊಂದಿರುವುದು ವಿಶೇಷ. ಹೊಸ ರುಚಿ ತಿನ್ನಲು ಬಯಸುವವರು ಈ ಹೋಟೆಲ್‌ನಲ್ಲಿ ಅರೇಬಿಕ್‌ ಖಾದ್ಯ, ಬಿರಿಯಾನಿಗಳ ರುಚಿ ನೋಡಬಹುದು.

ಇಲ್ಲಿ ಭಾರತೀಯ ಖಾದ್ಯಗಳೂ ಲಭ್ಯ. ವೆಜ್ ಕರಿ, ಪಾಲಕ್‌ ಪನ್ನೀರ್, ವೆಜ್ ಕಡಾಯ್, ಮಲಾಯ್‌ ಕೊಫ್ತಾ, ‍ಪನ್ನೀರ್ ಬಟರ್ ಮಸಾಲಾ, ರೋಟಿ, ದಾಲ್‌ ಕೂಡ ಸವಿಯಬಹುದು.

ಈ ರೆಸ್ಟೋರೆಂಟ್‌ ಬೆಳಿಗ್ಗೆ 11ರಿಂದ ರಾತ್ರಿ11ರವರೆಗೆ ತೆರೆದಿರಲಿದೆ ಎಂದು ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಅಲೂರು ರಾಯಡು ತಿಳಿಸಿದ್ದಾರೆ. 

ಹೋಟೆಲ್‌: ಎಸ್ಎಸ್‌ ಲುಮಿನಾ (ಅರೇಬಿಕ್, ಇಂಡಿಯನ್‌ ಶೈಲಿ)

ಸಮಯ: ಬೆಳಿಗ್ಗೆ11ರಿಂದ ರಾತ್ರಿ 11ರವರೆಗೆ

ಸ್ಥಳ: #4, 20ನೇ ಮುಖ್ಯರಸ್ತೆ, 7ನೇ ಬ್ಲಾಕ್‌, ಸಪ್ನಾ ಬುಕ್ ಸ್ಟೋರ್‌ ಬಳಿ, ಕೋರಮಂಗಲ

ಮಾಹಿತಿಗೆ: 9880249932

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)