ಗುರುವಾರ , ಆಗಸ್ಟ್ 13, 2020
21 °C

ಅಂಬೇಡ್ಕರ್‌ ಆಡಿದ್ದ ಋಷಿ ಸದೃಶ ಮಾತುಗಳು

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್‌ ಆಡಿದ್ದ ಋಷಿ ಸದೃಶ ಮಾತುಗಳು

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ – 1989ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಒಂದು ತೀರ್ಪು ನೀಡಿದ ನಂತರ ದೇಶದ ಕೆಲವು ಭಾಗಗಳಲ್ಲಿ ಅಹಿತಕರ ಘಟನೆಗಳು ನಡೆದವು. ಇದೇ ವೇಳೆ, ಏಪ್ರಿಲ್‌ 14ರಂದು, ದೇಶ ಅಂಬೇಡ್ಕರ್ ಜಯಂತಿ ಆಚರಿಸಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದೆ. ಆದರೆ, ತೀರ್ಪು ವಿರೋಧಿಸಿ ನಡೆದ ಬಹುಪಾಲು ಪ್ರತಿಭಟನೆಗಳ ಕಿಡಿ ಹೊತ್ತಿಸಿದ್ದು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರೋಧಿಗಳು. ದಲಿತರಲ್ಲಿ ಬಿಜೆಪಿ ಬಗ್ಗೆ ದ್ವೇಷ ಮೂಡಬೇಕು ಎಂಬ ಉದ್ದೇಶದಿಂದ ಈ ತೀರ್ಪಿಗೆ ಬಿಜೆಪಿಯನ್ನು ಹೊಣೆ ಮಾಡುವ ಯತ್ನ ಅವರದಾಗಿತ್ತು.

ನ್ಯಾಯಾಲಯ ನೀಡಿದ ತೀರ್ಪಿಗೆ ರಾಜಕೀಯ ಬಣ್ಣ ಬಳಿದಿದ್ದು ಮತ್ತು ಬೀದಿಗಳಲ್ಲಿ ನಡೆದ ಹಿಂಸಾಚಾರವು ನಿಜಕ್ಕೂ ದುರದೃಷ್ಟಕರ. ಹೀಗಾಗಿದ್ದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ನೀಡಿದ್ದ ಸಲಹೆಗೆ ವಿರುದ್ಧ. ಸಂವಿಧಾನವನ್ನು ಅಂಗೀಕರಿಸಿದ ನಂತರ ಅಂಬೇಡ್ಕರ್ ಅವರು, ‘ತಮ್ಮ ಕೋಪ ವ್ಯಕ್ತಪಡಿಸಲು ಜನ ಅಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಲೇಬಾರದು’ ಎಂದು ಹೇಳಿದ್ದರು.

ಸ್ಥಾಪಿತ ಹಿತಾಸಕ್ತಿಗಳು ರಾಜಕೀಯ ಸಿಟ್ಟು ತೀರಿಸಿಕೊಳ್ಳಲು ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಪ್ರತಿಭಟನೆಗೆ ಕಾರಣವಾದ ತೀರ್ಪಿನಲ್ಲಿ ಕೋರ್ಟ್‌ ಹೇಳಿದೆ. ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳಿಗೆ ಬೆಲೆ ಬರಬೇಕು ಎಂದಾದರೆ ದುರ್ಬಲ ವರ್ಗಗಳ ಜನರನ್ನು ದೌರ್ಜನ್ಯಗಳಿಂದ ರಕ್ಷಿಸಬೇಕು. ಈ ಉದ್ದೇಶವನ್ನು ಈಡೇರಿಸಲಿಕ್ಕಾಗಿಯೇ ದೌರ್ಜನ್ಯ ತಡೆ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ. ‘ಇದೇ ವೇಳೆ, ನೈತಿಕತೆ ಇಲ್ಲದವರು ಅಥವಾ ಪೊಲೀಸರು ಅನ್ಯ ಉದ್ದೇಶಗಳಿಗಾಗಿ ನಾಗರಿಕರನ್ನು ಪೀಡಿಸಲು ಈ ಕಾಯ್ದೆಯು ಅಸ್ತ್ರವಾಗಿ ಬಳಕೆಯಾಗಬಾರದು. ಹೀಗೆ ಬಳಕೆ ಆಗಿರುವುದು ಹಲವು ಸಂದರ್ಭಗಳಲ್ಲಿ ಗಮನಕ್ಕೆ ಬಂದಿದೆ.

ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದ ಮುಗ್ಧರನ್ನು ಕಿರುಕುಳಕ್ಕೆ ಈಡು ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಸಂವಿಧಾನ ಹೇಳಿರುವುದನ್ನು ಜಾರಿಗೆ ತರುವ ಕ್ರಮವನ್ನು ಈ ನ್ಯಾಯಾಲಯ ಕೈಗೊಳ್ಳಬೇಕಾಗುತ್ತದೆ. ಕಾನೂನು ಎನ್ನುವುದು ಜಾತಿಗಳ ನಡುವೆ ದ್ವೇಷಕ್ಕೆ ಕಾರಣವಾಗಬಾರದು. ಸಂವಿಧಾನದ ವ್ಯಾಖ್ಯಾನಕ್ಕೆ ದಾರಿದೀಪದಂತೆ ಇರುವ ಸಂವಿಧಾನದ ಪೀಠಿಕೆಯು ಉದಾರತೆ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒಳಗೊಂಡಿದೆ’ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ‘ಸಾರ್ವಜನಿಕ ಸೇವಕರು ತಾವು ಪ್ರಾಮಾಣಿಕವಾಗಿ ಮಾಡಬೇಕಿರುವ ಕೆಲಸಗಳನ್ನು ಮಾಡದಂತೆ ತಡೆಯುವುದು ಈ ಕಾಯ್ದೆಯ ಉದ್ದೇಶ ಅಲ್ಲ’ ಎಂದೂ ಕೋರ್ಟ್‌ ಹೇಳಿದೆ.

ಮಾರ್ಚ್‌ 20ರಂದು ಕೋರ್ಟ್‌ ಈ ತೀರ್ಪು ನೀಡಿದ ನಂತರ, ಪ್ರತಿಭಟನಾಕಾರರು ಬೀದಿಗೆ ಇಳಿದರು.  ಕಾಯ್ದೆಯನ್ನು ಕೋರ್ಟ್ ತೀರ್ಪು ‘ದುರ್ಬಲಗೊಳಿಸಿದೆ’ ಎಂದು ಹೇಳಿದ ಅವರು, ಇದರ ವಿರುದ್ಧ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದರು. ಈ ತೀರ್ಪು ಕಾಯ್ದೆಯ ಮುಖ್ಯ ಉದ್ದೇಶವೇ ಈಡೇರದಂತೆ ಮಾಡಿಬಿಡುತ್ತದೆ, ಇದು ವಾಸ್ತವದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುವವರನ್ನು ರಕ್ಷಿಸುತ್ತದೆ ಎಂದು ಅವರು ಆರೋಪಿಸಿದರು. ಕಾಯ್ದೆಯ ದುರ್ಬಳಕೆ ಆಗುತ್ತಿದೆ ಎನ್ನುವ ವಾದವನ್ನು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ದುರ್ಬಳಕೆ ಆಗುತ್ತಿದೆ ಎಂಬ ತೀರ್ಮಾನವನ್ನು ಕೋರ್ಟ್‌ ತಪ್ಪಾಗಿ ಕೈಗೊಂಡಿದೆ ಎಂದು ಹೇಳಿದರು. ಶೋಷಣೆಗೆ ಗುರಿಯಾಗಿರುವ, ಇಂದಿಗೂ ಗುರಿಯಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ರಕ್ಷಿಸಲು ದೇಶದ ಪ್ರಭುತ್ವ ನಡೆಸಿದ ಯತ್ನಗಳನ್ನು ಈ ತೀರ್ಪು ಸಂಪೂರ್ಣವಾಗಿ ವಿಫಲಗೊಳಿಸಿಬಿಡುತ್ತದೆ ಎನ್ನುವ ವಾದಗಳೂ ಕೇಳಿಬಂದವು. ಈ ವಾದಗಳು ದೇಶದ ಹಲವೆಡೆ ಪ್ರತಿಧ್ವನಿಸಿದವು.

ಈ ತೀರ್ಪನ್ನು ಪುನರ್‌ ಪರಿಶೀಲನೆಗೆ ಒಳ‍ಪಡಿಸಬೇಕು ಎಂಬ ಕೋರಿಕೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋರ್ಟ್‌ಗೆ ಸಲ್ಲಿಸಿದೆ. ಈ ಕಾಯ್ದೆಯು ವ್ಯಾಖ್ಯಾನಿಸಿರುವ ಅಪರಾಧಗಳು ಹೀನ ಸ್ವರೂಪದವು, ಅಂತಹ ಅಪರಾಧಗಳನ್ನು ಪರಿಶಿಷ್ಟ ಜಾತಿ ಮತ್ತು ಪ‍ರಿಶಿಷ್ಟ ಪಂಗಡಗಳ ಜನರ ಮೇಲೆ ದಬ್ಬಾಳಿಕೆ ನಡೆಸುವ ಉದ್ದೇಶದಿಂದಲೇ ನಡೆಸಲಾಗುತ್ತದೆ ಎನ್ನುವ ನಿಲುವನ್ನು ಸರ್ಕಾರ ತಾಳಿದೆ. ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಗೆ ತಾನು ಬದ್ಧವಾಗಿರುವುದಾಗಿಯೂ, ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತರ್ಕವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲವೆಂದೂ ಸರ್ಕಾರ ಹೇಳಿದೆ.

‘ಈ ತೀರ್ಪಿಗೆ ಮೊದಲು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಪ್ರತಿವಾದಿ ಆಗಿರಲೇ ಇಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಹಾಗಾಗಿ, ಇಡೀ ತೀರ್ಪನ್ನು ಸಮಗ್ರವಾಗಿ ಪುನರ್‌ ಪರಿಶೀಲನೆಗೆ ಒಳಪಡಿಸಬೇಕು ಎನ್ನುವ ಮನವಿ ಸಲ್ಲಿಸಲಾಗಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಕಾಯ್ದೆಯ ಅಡಿ ದಾಖಲಾಗುವ ಪ್ರಕರಣಗಳ ಪೈಕಿ ಶೇಕಡ 25ರಷ್ಟಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿದೆ. ಹಾಗಾಗಿ, ದೌರ್ಜನ್ಯಕ್ಕೆ ಗುರಿಯಾಗುವವರಿಗೆ ನ್ಯಾಯ ಸಿಗುವುದು ಈ ತೀರ್ಪಿನಿಂದಾಗಿ ಇನ್ನಷ್ಟು ವಿಳಂಬ ಆಗುತ್ತದೆ ಎಂದೂ ಸರ್ಕಾರ ಹೇಳಿದೆ.

ದಲಿತರ ವಿಶ್ವಾಸ ತನ್ನ ಮೇಲಿರುವಾಗ, ವಿರೋಧಿಗಳು ತನ್ನ ವಿರುದ್ಧ ಮಾಡಿರುವ ಆರೋಪಗಳು ಆಧಾರವಿಲ್ಲದ್ದು ಎಂಬುದು ಸರ್ಕಾರದ ಅಭಿಮತ. ಬಿಜೆಪಿಯು 2009ರಲ್ಲಿ ದೇಶದ ಶೇಕಡ 12ರಷ್ಟು ದಲಿತರ ಮತಗಳನ್ನು ಪಡೆದಿತ್ತು. ಈ ಪ್ರಮಾಣವು 2014ರ ವೇಳೆಗೆ ಶೇಕಡ 24ಕ್ಕೆ ಏರಿಕೆ ಆಗಿದೆ ಎನ್ನುವುದನ್ನು ಚುನಾವಣಾ ಅಧ್ಯಯನಗಳು ಕಂಡುಕೊಂಡಿವೆ. ಅಲ್ಲದೆ, ದಲಿತರು ಮತ್ತು ಆದಿವಾಸಿಗಳಿಗೆ ಮೀಸಲಾಗಿರುವ ಒಟ್ಟು 131 ಲೋಕಸಭಾ ಕ್ಷೇತ್ರಗಳ ಪೈಕಿ 66ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೀಗೆ ಜಯ ಸಾಧಿಸುವಾಗ ಬಿಜೆಪಿಯು ದಲಿತರ ಪರ ಇರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮತದಾರರ ನೆಲೆಯನ್ನು ಧ್ವಂಸಗೊಳಿಸಿದೆ. ಮೀಸಲು ಕ್ಷೇತ್ರಗಳ ಪೈಕಿ ಒಂದರಲ್ಲೂ ಬಿಎಸ್‌ಪಿಗೆ ಗೆಲುವು ಸಿಕ್ಕಿಲ್ಲ. ಕಾಂಗ್ರೆಸ್ಸಿನ ದಲಿತ ಮತಗಳು ಕೂಡ ಕಡಿಮೆ ಆಗಿವೆ.

ಸಂವಿಧಾನ ರಚನಾ ಸಭೆಯಲ್ಲಿ 1949ರ ನವೆಂಬರ್‌ 25ರಂದು ಮಾತನಾಡಿದ್ದ ಡಾ. ಅಂಬೇಡ್ಕರ್, ದೇಶದ ಪ್ರಜೆಗಳಗೆ ಒಂದು ಎಚ್ಚರಿಕೆಯ ಸಂದೇಶ ನೀಡಿದ್ದರು. ‘ರೂಪದಲ್ಲಿ ಮಾತ್ರವಲ್ಲದೆ, ವಾಸ್ತವದಲ್ಲಿಯೂ’ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯಬೇಕು ಎಂದಾದರೆ ಜನ ಮಾಡಬೇಕಿರುವುದು ಏನು ಎಂಬುದನ್ನು ಅವರು ಹೇಳಿದ್ದರು. ‘ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಈಡೇರಿಸುವ ಪ್ರಕ್ರಿಯೆಯಲ್ಲಿ ನಾವು ಸಾಂವಿಧಾನಿಕ ಮಾರ್ಗವನ್ನು ತೊರೆಯಬಾರದು ಎಂಬುದು ನನ್ನ ಪ್ರಕಾರ ನಾವು ಮಾಡಬೇಕಿರುವ ಮೊದಲ ಕೆಲಸ. ಹಿಂಸೆಯ ಮಾರ್ಗವನ್ನು ನಾವು ತೊರೆಯಬೇಕು ಎನ್ನುವುದು ಇದರ ಅರ್ಥ.

ಸತ್ಯಾಗ್ರಹ, ನಾಗರಿಕ ಅಸಹಕಾರ ಚಳವಳಿಯಂತಹ ಮಾರ್ಗಗಳನ್ನು ನಾವು ಕೈಬಿಡಬೇಕಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಗುರಿಗಳ ಸಾಧನೆಗೆ ಸಾಂವಿಧಾನಿಕ ಮಾರ್ಗಗಳೇ ಇಲ್ಲದಿದ್ದ ಸಂದರ್ಭದಲ್ಲಿ ಅಸಾಂವಿಧಾನಿಕ ಮಾರ್ಗ ತುಳಿದಿದ್ದಕ್ಕೆ ದೊಡ್ಡ ಸಮರ್ಥನೆಗಳು ಇದ್ದವು. ಆದರೆ, ಸಾಂವಿಧಾನಿಕ ಮಾರ್ಗಗಳು ಮುಕ್ತವಾಗಿರುವಾಗ ಇಂತಹ ಅಸಾಂವಿಧಾನಿಕ ವಿಧಾನಗಳಿಗೆ ಸಮರ್ಥನೆಯೇ ಇಲ್ಲ. ಈ ವಿಧಾನಗಳೆಲ್ಲ ಅರಾಜಕತೆಯ ಭಾಷೆಯನ್ನು ಮಾತನಾಡುತ್ತವೆ. ಇಂಥವನ್ನು ನಾವು ಎಷ್ಟು ಬೇಗ ಕೈಬಿಡುತ್ತೇವೆಯೂ ನಮಗೆ ಅಷ್ಟರಮಟ್ಟಿಗೆ ಒಳ್ಳೆಯದು’ ಎಂದು ಅವರು ಹೇಳಿದ್ದರು.

ಈಗ ಕೇಂದ್ರ ಸರ್ಕಾರವು ತಮ್ಮ ಪರವಾಗಿ ಗಟ್ಟಿಯಾದ ವಾದ ಇರುವ ಪುನರ್‌ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿರುವ ಕಾರಣ, ಕೋರ್ಟ್‌ ತೀರ್ಪಿನಿಂದಾಗಿ ಕೋಪಗೊಂಡಿರುವ ದಲಿತ ಮತ್ತು ಆದಿವಾಸಿ ಸಮುದಾಯಗಳು ನ್ಯಾಯಾಂಗದ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು. ಯಾವುದೇ ವಿಚಾರದ ಬಗ್ಗೆ ಯಾವುದೇ ಸಮುದಾಯ ಅಥವಾ ಗುಂಪಿಗೆ ಕೋಪ ಉಂಟಾದಾಗ ಅದು ಅಂಬೇಡ್ಕರ್ ಅವರು ಆಡಿದ್ದ ಋಷಿಸದೃಶ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ, ಅಂಬೇಡ್ಕರ್ ಎಚ್ಚರಿಕೆ ನೀಡಿರುವಂತೆ, ಹಿಂಸಾತ್ಮಕ ಪ್ರತಿಭಟನೆಗಳು ಪ್ರಜಾತಂತ್ರವನ್ನು ಅಪಾಯಕ್ಕೆ ನೂಕಬಲ್ಲವು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.