ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ, ಬಡ್ಡಿ ಮತ್ತು ಬೋರಾಪುರ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಾಲದ ಮಾಧುರ್ಯ ಮತ್ತು ‌ಅದರ ಮೇಲಿನ ಬಡ್ಡಿಯ ಅಮರತ್ವವನ್ನು ಹೇಳುವ, ಜೊತೆಯಲ್ಲೇ ಹಳ್ಳಿಯ ಸೊಗಡಿನ ಕಥೆ ಹೊಂದಿರುವ ‘ಡೇಯ್ಸ್ ಆಫ್‌ ಬೋರಾಪುರ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.

‘ಸುಭಿಕ್ಷವಾಗಿದ್ದ ಒಂದು ಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಆದ ಬದಲಾವಣೆಗಳು ಏನು’ ಎನ್ನುವುದು ಈ ಸಿನಿಮಾದ ಕಥಾಹಂದರ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದಿತ್ಯ ಕುಣಿಗಲ್ ಇದರ ನಿರ್ದೇಶಕ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ 35 ದಿನಗಳ ಅವಧಿಯಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ.

‘ಇದು ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಇರುವ ಸಿನಿಮಾ. 10 ದಿನಗಳ ಹಿಂದೆ ನಾವು ಇದರ ಒಂದು ಟ್ರೇಲರ್‌ ಬಿಡುಗಡೆ ಮಾಡಿದ್ದೆವು. ಅದಕ್ಕೆ ಸಿನಿಮಾ ಪ್ರಿಯರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ. ಈ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗನ ಪಾತ್ರ’ ಎಂದರು ನಾಯಕ ಸೂರ್ಯ. ಮತ್ತೊಬ್ಬ ನಾಯಕ ಪ್ರಶಾಂತ್ ಅವರು ಇದರಲ್ಲಿ ಭಗ್ನ ಪ್ರೇಮಿಯೊಬ್ಬನ ಪಾತ್ರ ನಿಭಾಯಿಸಿದ್ದಾರೆ. ಅವರು ಇಡೀ ಸಿನಿಮಾದಲ್ಲಿ ನಾಯಕಿಯನ್ನು ಒಮ್ಮೆ ಕೂಡ ಸ್ಪರ್ಶಿಸುವುದೂ ಇಲ್ಲವಂತೆ!

ಅಮಿತಾ ರಂಗನಾಥ್ ಅವರದ್ದು ಇದರಲ್ಲಿ ಪ್ರಬುದ್ಧ ಮನಸ್ಸಿನ ಹೆಣ್ಣುಮಗಳ ಪಾತ್ರ. ಆಕೆ ವಿದ್ಯಾವಂತೆ ಕೂಡ ಹೌದು. ‘ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣ ಬದಲಾಗುತ್ತದೆ’ ಎಂದರು ಅಮಿತಾ. ಅನಿತಾ ಭಟ್ ಅವರು ಇದರಲ್ಲಿ ನಾಟಕ ಕಲಾವಿದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕೃತಿ ಅವರು, ಲಕ್ಷ್ಮಿ ಎಂಬ ಹೆಸರಿನ ಮುಗ್ಧ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರು ಈ ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾರೆ. ಮಧು ಬಸವರಾಜ್ ಮತ್ತು ಅಜಿತ್‍ ಕುಮಾರ್ ಸೇರಿ ಇದರ ನಿರ್ಮಾಣ ಮಾಡಿದ್ದಾರೆ. ‘ನಾವು ಅನುಭವಿ ನಿರ್ಮಾಪಕರಲ್ಲ. ಆದರೆ, ಒಳ್ಳೆಯ ಸಿನಿಮಾ ಕೊಡಬೇಕು ಎನ್ನುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ಒಬ್ಬ ವೀಕ್ಷಕನಿಗೆ ಯಾವ ಬಗೆಯ ಸಿನಿಮಾ ಬೇಕು ಎಂದು ಅನಿಸುತ್ತದೆಯೋ, ಅಂತಹ ಸಿನಿಮಾವನ್ನು ನಿರ್ಮಾಪಕರಾಗಿ ನಾವು ಕೊಟ್ಟಿದ್ದೇವೆ’ ಎಂದರು ಮಧು ಬಸವರಾಜ್. ಅರವತ್ತು ಚಿತ್ರಮಂದಿರಗಳಲ್ಲಿ ಇದು ಬಿಡುಗಡೆ ಆಗಲಿದೆಯಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT