ಭಾನುವಾರ, ಮೇ 9, 2021
24 °C

ಶನಿವಾರ, 27–4–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಕ್ಕುಬಾಧ್ಯತಾ ಸೂಚನೆ ತಿರಸ್ಕೃತ 

ನವದೆಹಲಿ, ಏ. 26– ಕೇಂದ್ರ ಕೈಗಾರಿಕಾ ಅಭಿವೃದ್ಧಿ ಶಾಖೆ ಸಚಿವ ಶ್ರೀ ಫಕ್ರುದ್ದಿನ್ ಆಲಿ ಅಹ್ಮದ್ ಅವರ ವಿರುದ್ಧ ಇಂದು ಲೋಕಸಭೆಯಲ್ಲಿ ಮಂಡಿಸಲ್ಪಟ್ಟ ಹಕ್ಕುಬಾಧ್ಯತಾ ಸೂಚನೆ 145–78 ಮತಗಳಿಂದ ತಿರಸ್ಕೃತವಾಯಿತು.

ಇತ್ತೀಚಿನವರೆಗೆ ಕೈಗಾರಿಕಾ ಲೈಸೆನ್ಸ್ ನೀಡಿಕೆ ತನಿಖೆ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಎಂ.ಎಸ್. ಥ್ಯಾಕರ್‌ ಅವರು ಬ್ಯಾಂಕೊಂದರ ಡೈರೆಕ್ಟರ್ ಹುದ್ದೆಯನ್ನು ಅಂಗೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀ ಫಕ್ರುದ್ದಿನ್ ಆಲಿ ಅಹ್ಮದ್‌ರವರು ಸಭೆಯನ್ನು ತಪ್ಪುದಾರಿಗೆಳೆಯುವಂಥ ಹೇಳಿಕೆಯನ್ನು ನೀಡಿದ್ದಾರೆಂದು ಆಪಾದಿಸಿ ಸಂಯಕ್ತ ಸಮಾಜವಾದಿ ಪಕ್ಷದ ಶ್ರೀ ರಬಿ ರೇ ಅವರು ಇಂದು ಹಕ್ಕು ಬಾಧ್ಯತಾ ಸೂಚನೆಯನ್ನು ಮಂಡಿಸಿದರು.

ಸಚಿವ ಚನ್ನಾರಡ್ಡಿ ಆಯ್ಕೆ ರದ್ದುಗೊಳಿಸಿ ತೀರ್ಪು 

ಹೈದರಾಬಾದ್, ಏ. 26– ತಂಡೂರ್ ವಿಧಾನಸಭಾ ಕ್ಷೇತ್ರದಿಂದ ಕೇಂದ್ರ ಉಕ್ಕು ಮತ್ತು ಗಣಿ ಸಚಿವ ಡಾ. ಎಂ. ಚನ್ನಾರೆಡ್ಡಿ ಅವರ ಚುನಾವಣೆ ನ್ಯಾಯಬಾಹಿರ ಎಂದು ಆಂಧ್ರ ಪ್ರದೇಶ್ ಹೈಕೋರ್ಟ್ ಇಂದು ತೀರ್ಪಿತ್ತಿತು.

ವೋಟರುಗಳ ಮೇಲೆ ಚುನಾವಣೆ ಕಾಲದಲ್ಲಿ ಅವರು ಜಾತಿ ಮತ್ತು ಪಂಗಡಗಳ ಹೆಸರಿನಲ್ಲಿ ಅಸೂಕ್ತ ಪ್ರಭಾವ ತಂದರೆಂದು ಆಪಾದನೆಯನ್ನು ಕೋರ್ಟು ಒಪ್ಪಿಕೊಂಡಿತು. ಅರ್ಜಿದಾರ ಶ್ರೀ ವಂದೇಮಾತರಂ ರಾಮಚಂದ್ರರಾವ್ (ಪಕ್ಷರಹಿತ) ಹೊರಿಸಿದ್ದ ಭ್ರಷ್ಟಾಚಾರದ ಆಪಾದನೆಗಳೂ ರುಜುವಾಗಿದೆಯೆಂದು ನ್ಯಾಯಾಲಯ ನಿರ್ಧರಿಸಿತು.

ಕಛ್ ಸತ್ಯಾಗ್ರಹಕ್ಕೆ ಪುರಿ ಶ್ರೀಗಳು

ಬರೋಡ, ಏ. 26– ಕಛ್ ವಿರೋಧಿ ಸಮಿತಿಯು ಚಳವಳಿ ಕಾರ್ಯಕ್ರಮಗಳನ್ನು ಕುರಿತು ತಮ್ಮೊಡನೆ  ಸಮಾಲೋಚಿಸಿದಲ್ಲಿ ಕಛ್ ಸತ್ಯಾಗ್ರಹದಲ್ಲಿ ಭಾಗವಹಿಸಲು ಪುರಿ ಜಗದ್ಗುರು ಶಂಕರಾಚಾರ್ಯ ಅವರು ಮುಂದೆ ಬಂದಿದ್ದಾರೆ.

ಇನ್ನು ಸಾಕು ಕಾಂಗ್ರೆಸ್ಸಿನ ಸೋಗು 

ನವದೆಹಲಿ, ಏ. 26– ನ್ಯೂಜಿಲೆಂಡಿನಲ್ಲಿ ಭಾರತದ ಹೈಕಮಿಷನರ್ ಆಗಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವಗೊಂಡ ಶ್ರೀ ಪಿ.ಎನ್. ನಾಸ್ಟರ್ ಅವರನ್ನು ನೇಮಿಸಿ, ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳಿಗೆ ಉನ್ನತ ಪದವಿಯನ್ನು ದೊರಕಿಸಿ ಕೊಡುವುದಿಲ್ಲವೆನ್ನುವ ಕೇಂದ್ರ ಕಾಂಗ್ರೆಸ್ ನಾಯಕತ್ವ ತನ್ನ ಘೋಷಿತ ನೀತಿಯನ್ನು ಪ್ರಾಮಾಣಿಕವಾಗಿ ಆಚರಣೆಯಲ್ಲಿ ತಂದಿದೆ ಎಂದು ನಟಿಸಲು ಸಾಧ್ಯವಿಲ್ಲದಂತಾಗಿದೆ.

ಆಹಾರ ಮತ್ತು ಕೃಷಿ ಖಾತೆಯ ಸ್ಟೇಟ್‌ ಸಚಿವ ಎ.ಎಂ. ಥಾಮಸ್‌ ಕ್ಯಾನ್‌ಬೆರದಲ್ಲಿ ನಮ್ಮ ಹೈಕಮಿಷನರ್‌, ರಾಜಸ್ಥಾನದಲ್ಲಿ ಭಾರಿ ಸೋಲನುಭವಿಸಿದ ವಾರ್ತಾ ಖಾತೆ ಮಾಜಿ ಸಚಿವ ರಾಜಬಹದ್ದೂರ್‌ ಕಠಮಂಡುವಿನಲ್ಲಿ ನಮ್ಮ ರಾಯಭಾರಿ. ಡಿ.ಎಂ.ಕೆ. ಅಭ್ಯರ್ಥಿಗೆ ಸೋಲೊಪ್ಪಿದ ಓ.ವಿ. ಅಳಗೇಶನ್‌ ಸದ್ಯದಲ್ಲೇ ಎಥಿಯೋಪಿಯಾಗೆ ನಮ್ಮ ರಾಯಭಾರಿಯಾಗಿ ತೆರಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.