ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಜ್ಞ: ನಿತ್ಯದ ಸೃಷ್ಟಿಚಕ್ರ

Last Updated 27 ಏಪ್ರಿಲ್ 2018, 19:32 IST
ಅಕ್ಷರ ಗಾತ್ರ

ದಶರಥ ಮಾಡಲು ಹೊರಟಿರುವ ಅಶ್ವಮೇಧಯಾಗದ ಹಿನ್ನೆಲೆಯಲ್ಲಿ ಯಜ್ಞತತ್ತ್ವದ ವಿವರಗಳನ್ನು ನೋಡುತ್ತಿದ್ದೇವೆ. ಯಜ್ಞದ ಪರಿಕಲ್ಪನೆ ಸ್ಪಷ್ಟವಾಗದ ಹೊರತು ಪ್ರಾಚೀನ ಭಾರತೀಯ ಸಂಸ್ಕೃತಿಯ ನಾಡಿಯನ್ನು ಹಿಡಿಯಲು ಆಗದು. ಇಂದು ನಮಗೆ ಯಜ್ಞ–ಯಾಗ ಎಂದ ಕೂಡಲೇ ಏಕಮುಖವಾದ ಅಭಿಪ್ರಾಯವೊಂದು ಮೂಡೀತಷ್ಟೆ. ಆದರೆ ಇಂಥ ಪರಿಕಲ್ಪನೆಗಳನ್ನು ಮೂರು ನೆಲೆಗಳಲ್ಲಿ ನೋಡಬೇಕೆಂದು ಪರಂಪರೆ ಒತ್ತಾಯಿಸುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಅಶ್ವಮೇಧಯಾಗದ ಸಿದ್ಧತೆಯನ್ನು ನಡೆಸಬೇಕೆಂದು ವಸಿಷ್ಠರು ಜನರನ್ನು ಉದ್ದೇಶಿಸಿ ಹೇಳುವ ಮಾತುಗಳಲ್ಲಿ ಯಜ್ಞತತ್ತ್ವದ ಒಂದು ಆಯಾಮವನ್ನು ನೋಡಬಹುದು. ಸಮಾಜದ ಎಲ್ಲ ಅಂಗಗಳೂ ಸಾರ್ವಜನಿಕವಾಗಿ ಪರಸ್ಪರ ಸೌಹಾರ್ದದಿಂದ ಒಂದಾಗಿ ನಡೆಸುವ ಉತ್ಸವ – ಎಂಬ ಸಂದೇಶವನ್ನು ಅಲ್ಲಿ ನೋಡಬಹುದಾಗಿದೆ.

ಯಜ್ಞ ಎಂದರೇನು?
ಯಜ್ಞ – ಎಂಬ ಶಬ್ದವು ‘ಯಜ್‌’ ಎಂಬ ಧಾತುವಿನಿಂದ ಹುಟ್ಟಿದೆ; ಈ ಧಾತುವಿಗೆ ದೇವಪೂಜೆ ಮುಂತಾದ ಅರ್ಥಗಳಿವೆ (ಯಜ – ದೇವಪೂಜಾಸಂಗತಿಕರಣದಾನೇಷು). ದೇವತೆಗಳನ್ನು ಸಂತೋಷಪಡಿಸುವಿಕೆಯ ಕ್ರಿಯೆಯನ್ನು ‘ಯಜ್ಞ’ ಎನ್ನಬಹುದು.

ಯಜ್ಞ ಮತ್ತು ಯಾಗ – ಇವೆರಡು ಪದಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ.

ಯಜ್ಞದ ಪರಿಕಲ್ಪನೆಯ ಎಲ್ಲ ಆಯಾಮಗಳನ್ನೂ ಏಕಕಾಲದಲ್ಲಿ ಗ್ರಹಿಸುವುದಕ್ಕೆ ಸಾಧ್ಯವಿಲ್ಲ. ವೇದದಲ್ಲಿಯೇ ಅದು ವಿವಿಧ ಸ್ತರಗಳಲ್ಲಿ ಕಾಣಿಸಿಕೊಂಡಿದೆ. ಭಗವದ್ಗೀತೆಯಲ್ಲಿ ಅದರ ಮತ್ತೂ ವೈಶಾಲ್ಯವನ್ನು ಸ್ಪಷ್ಟವಾಗಿ ಕಾಣಿಸಲಾಗಿದೆ.

‘ಯಜ್ಞೋ ವೈ ವಿಷ್ಣುಃ’ ಎಂಬ ಮಾತು ಶ್ರುತಿಯಲ್ಲಿಯೇ ಬಂದಿದೆ (ತೈತ್ತಿರೀಯಸಂಹಿತಾ); ‘ಯಜ್ಞವೇ ವಿಷ್ಣು’ ಎಂಬುದು ಇದರ ಅರ್ಥ. ವಿಷ್ಣು ಎಂದರೆ ಎಲ್ಲೆಲ್ಲೂ ವ್ಯಾಪಿಸಿರುವ ಮಹಾತತ್ತ್ವ – ಎಂದು ತಿಳಿದಾಗ ಯಜ್ಞದ ವೈಶಾಲ್ಯ ಸ್ವಲ್ಪವಾದರೂ ನಮ್ಮ ಗಮನಕ್ಕೆ ಬರಬಹುದು. ‘ಯಜ್ಞಂ ತಪಃ’ (ತೈತ್ತಿರೀಯ ಆರಣ್ಯಕ) – ಎಂಬ ಮಾತು ಕೂಡ ವೈದಿಕ ವಾಙ್ಮಯಕ್ಕೆ ಸೇರಿದ ಮಾತು. ‘ತಪಸ್ಸೇ ಯಜ್ಞ’ ಎಂಬ ಈ ಮಾತನ್ನು ಮನನ ಮಾಡಿದಾಗ ನಮ್ಮ ಸಂಕುಚಿತ ಅರ್ಥ ಮಾಯವಾಗದಿರದು. ಅಗ್ನಿಯಲ್ಲಿ ಕೆಲವೊಂದು ಪದಾರ್ಥಗಳನ್ನು ಹಾಕಿ, ನಾಲ್ಕಾರು ಮಂತ್ರಗಳನ್ನು ಪಠಿಸಿ, ದೇವತೆಗಳನ್ನು ಉದ್ದೇಶಿಸಿ ‘ಅದು ಕೊಡು, ಇದು ಕೊಡು’ ಎಂದು ಬೇಡಿಕೊಳ್ಳುವುದೇ ಯಜ್ಞ ಎಂಬ ನಿಲುವು ನಮ್ಮಲ್ಲಿ ಗಟ್ಟಿಯಾಗಿದೆಯಷ್ಟೆ. ಆದರೆ ಇದು ಸರಿಯಾದುದಲ್ಲವೆನ್ನುವುದು ಆ ಪರಿಕಲ್ಪನೆಯ ಜಾಡನ್ನು ಹಿಡಿದು ವಿಶ್ಲೇಷಿಸಲು ಹೊರಟಾಗ ಮನದಟ್ಟಾಗುತ್ತದೆ. ಯಜ್ಞತತ್ತ್ವವು ಪ್ರಧಾನವಾಗಿ ದ್ವಿಮುಖತತ್ತ್ವವನ್ನು ಎತ್ತಿಹಿಡಿಯುತ್ತದೆ; ಇದು ಬಹಿರ್ಮುಖದಲ್ಲಿ ದಾನಶೀಲತೆ ಎಂಬ ಬೆಳಕಾಗಿಯೂ, ಅಂತರ್ಮುಖದಲ್ಲಿ ತಪಸ್ಸು ಎಂಬ ಕಾವಾಗಿಯೂ ಪ್ರವೃತ್ತಿ–ನಿವೃತ್ತಿಮಾರ್ಗಗಳೆರಡಕ್ಕೂ ಸಾಧನವಾಗಿದೆ.

‘ದೇವತೋದ್ದೇಶಪೂರ್ವಕದ್ರವ್ಯತ್ಯಾಗೋ ಯಾಗಃ’ ಎಂಬ ಮಾತಿದೆ. ದೇವತೆಗಳನ್ನು ಉದ್ದೇಶಿಸಿ ದ್ರವ್ಯವನ್ನು, ಎಂದರೆ ವಸ್ತುಗಳನ್ನು, ಅರ್ಪಿಸುವುದು, ಎಂದರೆ ತ್ಯಾಗ ಮಾಡುವುದು – ಅದೇ ‘ಯಾಗ’ ಎಂದೆನಿಸಿಕೊಳ್ಳುತ್ತದೆ. ‘ಯಜ್ಞೇನ ಯಜ್ಞಮಯಜಂತ ದೇವಾಃ’ (ದೇವತೆಗಳು ಯಜ್ಞದಿಂದ ಯಜ್ಞವನ್ನು ಮಾಡಿದರು) ಎಂಬುದನ್ನು ನೋಡಿದೆವು. ಯಜ್ಞಗಳ ಒಡೆಯನಾದ ವಿರಾಟ್‌ ಪುರುಷನನ್ನು ದೇವತೆಗಳು ಪೂಜಿಸಿದರು (= ಯಜ್ಞ ಮಾಡಿದರು) – ಎಂದು ಇದರ ಅರ್ಥ. ಯಾವುದರಿಂದ ಯಜ್ಞ ಮಾಡಿದರು? ಇಡಿಯ ಸೃಷ್ಟಿಯೇ ಆ ವಿರಾಟ್‌ ಪುರುಷನ ಶರೀರವಾಗಿರುವಾಗ ಅವನನ್ನು ಯಾವುದರಿಂದ ಪೂಜಿಸಲಾದೀತು? ಅವನ ಪಾಲಿಗೆ ಸೃಷ್ಟಿಯೇ ಒಂದು ಯಜ್ಞವಲ್ಲವೆ? ಹೀಗಾಗಿ ಯಜ್ಞದಿಂದಲೇ ಪೂಜಿಸಬೇಕಷ್ಟೆ! ಇಡಿಯ ಸೃಷ್ಟಿಯೇ ಯಜ್ಞವಾಗಿರುವುದರಿಂದ ಯಾವುದರಿಂದಲಾದರೂ ಪೂಜಿಸಬಹುದು; ಅಷ್ಟೇ ಅಲ್ಲ, ದೇವತೆಗಳು ಅವನನ್ನು ಯಾವುದರಿಂದ ಪೂಜಿಸಿದರೂ ಕೊನೆಗೆ ಅದು ‘ಕೆರೆಯ ನೀರನು ಕೆರೆಗೆ ಚೆಲ್ಲಿ ...’ ಎಂಬಂತಾಗುತ್ತದೆ. ಯಜ್ಞಕಲಾಪದಲ್ಲಿ ಹವಿಸ್ಸನ್ನು ಅಗ್ನಿಗೆ ಸಮರ್ಪಿಸುವಾಗ ‘ನ ಮಮ’ (ನನ್ನದಲ್ಲ) ಎಂದು ಹೇಳುವುದು ಮನನೀಯವಾಗಿದೆ. ಸೃಷ್ಟಿಯ ಯಾವುದೇ ದ್ರವ್ಯವು ನನ್ನದಲ್ಲ – ಎಂಬ ತ್ಯಾಗಬುದ್ಧಿಯೇ ಪ್ರಧಾನವಾಗಿ ಯಜ್ಞತತ್ತ್ವದ ಹಿಂದಿರುವ ಶ್ರದ್ಧೆ. ‘ ಯಜ್ಞದಲ್ಲಿ ಉಳಿದುದನ್ನು ತಿನ್ನುವವರು ಎಲ್ಲ ಪಾಪಗಳಿಂದಲೂ ಮುಕ್ತರಾಗುತ್ತಾರೆ – ಎನ್ನುತ್ತದೆ, ಗೀತೆ. ‘ಈಶಾವಾಸ್ಯಮಿದಂ ಸರ್ವಂ’ (ಎಲ್ಲವೂ ಪರಮಾತ್ಮನಿಗೆ ಸೇರಿದ್ದು); ಹೀಗಾಗಿ ಸೃಷ್ಟಿಯಲ್ಲಿರುವ ವಸ್ತುಗಳನ್ನು ‘ತ್ಯಾಗದಿಂದ ಅನುಭವಿಸತಕ್ಕದ್ದು’ (ತೇನ ತ್ಯಕ್ತೇನ ಭುಂಜೀಥಾಃ) – ಎಂಬ ಉಪನಿಷತ್ತಿನ ಮಾತುಗಳು ಇಡಿಯ ನಮ್ಮ ಜೀವನಶೈಲಿಯನ್ನೇ ಹೇಗೆ ನಿತ್ಯಯಜ್ಞವನ್ನಾಗಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸುವಂತಿದೆ. ಆಚಾರ್ಯ ಶಂಕರರ ಹೆಸರಿನಲ್ಲಿರುವ ದೇವೀಸ್ತ್ರೋತ್ರದ ಗುಚ್ಛವೇ ‘ಸೌಂದರ್ಯಲಹರೀ’. ಅದರ ಕೊನೆಯ ಪದ್ಯ ತುಂಬ ಮಾರ್ಮಿಕವಾಗಿದೆ; ಶಂಕರಾಚಾರ್ಯರು ನೂರು ಪದ್ಯಗಳಲ್ಲಿ ಮಾತೃಶಕ್ತಿಯನ್ನು ಸ್ತುತಿಸಿದ್ದಾರೆ; ಹೀಗೆ ಸ್ತುತಿಸಿರುವುದು ಹೇಗಿದೆ ಎಂದರೆ, ಅವರೇ ಹೇಳುವಂತೆ:

ಪ್ರದೀಪಜ್ವಾಲಾಭಿ-ರ್ದಿವಸಕರ-ನೀರಾಜನವಿಧಿಃ
ಸುಧಾಸೂತೇ-ಶ್ಚಂದ್ರೋಪಲ-ಜಲಲವೈ-ರರ್ಘ್ಯರಚನಾ |
ಸ್ವಕೀಯೈರಂಭೋಭಿಃ ಸಲಿಲ-ನಿಧಿ-ಸೌಹಿತ್ಯಕರಣಂ 
ತ್ವದೀಯಾಭಿ-ರ್ವಾಗ್ಭಿ-ಸ್ತವ ಜನನಿ ವಾಚಾಂ ಸ್ತುತಿರಿಯಮ್ ||

ಇದರ ತಾತ್ಪರ್ಯ: ‘ಎಲೈ ತಾಯಿ! ಇದುವರೆಗೂ ನಾನು ನಿನ್ನನ್ನು ಮಾತುಗಳಿಂದ ಸ್ತುತಿಸಿರುವೆ; ಈ ವಾಕ್‌ಶಕ್ತಿಯನ್ನು ಕೊಟ್ಟಿರುವವಳೇ ನೀನಲ್ಲವೆ? ಹೀಗಾಗಿ ನನ್ನ ಈ ಸ್ತುತಿ ಹೇಗಿದೆಯೆಂದರೆ – ಸೂರ್ಯನಿಗೆ ಎತ್ತಿದ ಆರತಿಯಂತಿದೆ; ಚಂದ್ರಕಾಂತಶಿಲೆಯಿಂದ ಒಸರಿದ ನೀರಿನ ಮೂಲಕ ಚಂದ್ರನಿಗೆ ಕೊಟ್ಟ ಅರ್ಘ್ಯದಂತಿದೆ; ಬೊಗಸೆಯಲ್ಲಿ ಸಾಗರಕ್ಕೆ ನೀರನ್ನು ಅರ್ಪಿಸಿ ಅದನ್ನು ಸಂತೋಷಪಡಿಸುವಂತಿದೆ.’

ಹೀಗೆ ‘ನನ್ನದು’ ಎಂಬ ಭಾವವನ್ನು ಕಳಚಿಕೊಂಡು ಮಾಡಿದ ಎಲ್ಲ ಕಾರ್ಯಗಳೂ ಯಜ್ಞ ಎನಿಸಿಕೊಳ್ಳುತ್ತವೆ. ಸಾಮಾಜಿಕವಾಗಿ ನಡೆಸುವ ವಿತರಣಶೀಲತೆ, ಕೌಟುಂಬಿಕವಾಗಿ ನಡೆಸುವ ದಾನಶೀಲತೆ, ವೈಯಕ್ತಿಕವಾಗಿರುವ ತ್ಯಾಗಶೀಲತೆ ಮತ್ತು ಸ್ವಾರ್ಥರಾಹಿತ್ಯಗಳು ಯಜ್ಞದ ಮೂಲದ್ರವ್ಯಗಳೇ ಹೌದು. ಹೀಗಾಗಿಯೇ ಎಲ್ಲ ಯಜ್ಞಗಳ ಶಿಖರವಾಗಿ ಆತ್ಮಯಜ್ಞವನ್ನೇ ಶ್ರುತಿಪರಂಪರೆ ಎತ್ತಿಹೇಳಿದೆ; ‘ಮಹಾನಾರಾಯಣೋಪನಿಷತ್‌’ನ ಈ ಮಾತುಗಳು ಉಲ್ಲೇಖಾರ್ಹವಾದವು:

‘ತಸ್ಮೈವಂ ವಿದುಷೋ ಯಜ್ಞಸ್ಯಾತ್ಮಾ ಯಜಮಾನಃ ಶ್ರದ್ಧಾಃ ಪತ್ನೀ ಶರೀರಮಿಧ್ಮಂ ... ಹೃದಯಂ ಯೂಪಃ ... ಯದಶ್ನಾತಿ ತದ್ದವಿರ್ಯತ್ಪಿಬತಿ ತದಸ್ಯ ಸೋಪಮಾನಂ ಯದ್ರಮತೇ ತದುಪಸದೋ ಯತ್ಸಂಚರತ್ಯುಪವಿಶತ್ಯುತ್ತಿಷ್ಠತೇ ಚ ಸ ಪ್ರವರ್ಗ್ಯೋ ... ಯನ್ಮರಣಂ ತದವಭೃಥ ... ಏತದ್ವೈ ಜರಾಮರ್ಯಮಗ್ನಿ ಹೋತ್ರಂ ಸತ್ರಂ ||’

(ವಿದ್ವಾಂಸನಾದವನು ಮಾಡುವ ಯಜ್ಞಕ್ಕೆ ಅವನ ಅಂತರಾತ್ಮವೇ ಯಜಮಾನ (ಕರ್ತ); ಅವನ ಶ್ರದ್ಧೆಯೇ ಯಜಮಾನಿ! ಅವನ ದೇಹವೇ ಸಮಿತ್ತು; ಅವನ ಎದೆಯೇ ಬಲಿಸ್ತಂಭ; ಅವನು ತಿಂದು ಕುಡಿಯುವುದೆಲ್ಲ ಸೋಮರಸ; ಅವನು ಪಡುವ ಎಲ್ಲ ಸುಖಗಳೂ ಉಪಸದವೆಂಬ ಕರ್ಮ; ಅವನು ಕುಳಿತು ಎದ್ದು ಓಡಾಡುವುದೆಲ್ಲವೂ ಪ್ರವರ್ಗ್ಯವೆಂಬ ಕರ್ಮ; ಸಾವು ಅವನ ಅವಭೃಥಸ್ನಾನ; ಇಂತಹುದು ಅವನ ಯಜ್ಞ.)
(ಅನುವಾದ: ಡಿವಿಜಿ)

ಯಜ್ಞಕ್ರಿಯೆಯಲ್ಲಿ ವಿನಿಯೋಗವಾಗುವ ಎಲ್ಲ ಕಲಾಪಗಳನ್ನೂ ಕರ್ತ, ಎಂದರೆ ‘ನಮ್ಮಲ್ಲಿಯೇ’ ಕಾಣಿಸಿರುವುದು ಮನನೀಯವಾಗಿದೆ. ಬಹಿರಂಗದಲ್ಲಿ ಎಷ್ಟೆಲ್ಲ ಯಾಗಗಳನ್ನೂ ಮಾಡಿದರೂ, ಕೊನೆಗೆ ಅದು ಸಾರ್ಥಕ್ಯವನ್ನು ಕಾಣಬೇಕಾದುದು ಅಂತರ್ಯಜ್ಞದಲ್ಲಿಯೇ ಹೌದು ಎಂಬ ಸಂದೇಶವನ್ನು ಕೂಡ ವೇದವಾಙ್ಮಯವೇ ನೀಡಿದೆ. ಹೀಗಾಗಿಯೇ ಯಜ್ಞವನ್ನು ಅದು ಅತ್ಯಂತ ಶ್ರೇಷ್ಠವಾದ ಕರ್ಮ (ಯಜ್ಞೋ ಹಿ ಶ್ರೇಷ್ಠತಮಂ ಕರ್ಮ) – ಎಂದಿರುವುದು. ಮಾತ್ರವಲ್ಲ, ಯಜ್ಞದಿಂದಲೇ ಸೃಷ್ಟಿಚಕ್ರದ ಚಲನೆ ನಡೆಯುವುದು. ಇದನ್ನೇ ಗೀತೆ ಹೀಗೆಂದಿರುವುದು:

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ||
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್‌ |
ತಸ್ಮಾತ್‌ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್‌ ||

‘ಅನ್ನದ ದೆಸೆಯಿಂದಲೇ ಜೀವಿಗಳ ಹುಟ್ಟು; ಅನ್ನವು ಮಳೆಯಿಂದ ಆಗುತ್ತದೆ; ಯಜ್ಞಗಳಿಂದ ಮಳೆ ಸಾಧ್ಯವಾಗುತ್ತದೆ; ಯಜ್ಞವು ಕರ್ಮದಿಂದ ಹುಟ್ಟುತ್ತದೆ; ಕರ್ಮ ಹುಟ್ಟುವುದು ಬ್ರಹ್ಮದಿಂದ; ಬ್ರಹ್ಮವು ಅಕ್ಷರದಿಂದ ಹುಟ್ಟುತ್ತದೆ; ಬ್ರಹ್ಮವು ನಿತ್ಯವೂ ನಿಂತುಕೊಂಡಿರುವುದು ಯಜ್ಞದಲ್ಲಿಯೇ.)

ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಯಾಗದ ಹೊಗೆಯ ಕಾರಣದಿಂದಾಗಿ ಮೋಡಗಳು ನಿರ್ಮಾಣವಾಗಿ, ಅದರಿಂದ ಮಳೆಯಾಗುತ್ತದೆ – ಎಂಬ ‘ವೈಜ್ಞಾನಿಕತೆ’ಯನ್ನು ಇಲ್ಲಿ ಗೀತೆಯ ವಾಕ್ಯಗಳಿಗೆ ಆರೋಪಿಸುವುದು ವಿಪರೀತಾರ್ಥವಾಗುತ್ತದೆಯಷ್ಟೆ! ಯಜ್ಞ ಎನ್ನುವುದು ನಿರಂತರ ಸೃಷ್ಟಿಶೀಲತೆ; ಇದು ಸೃಷ್ಟಿ, ಸ್ಥಿತಿ ಮತ್ತು ಲಯಗಳ ವ್ಯಕ್ತಾವ್ಯಕ್ತ ರೂಪ – ಎನ್ನುವುದರ ಸಾಂಕೇತಿಕತೆಯನ್ನೂ ಧ್ವನಿ‍ಪೂರ್ಣತೆಯನ್ನೂ ನಾವಿಲ್ಲಿ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT