ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೊಂದು ‘ದತ್ತ’ಸಂಹಿತೆ

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ

ಹಿಂದೀಮೂಲ: ವಿಜಯದತ್ತ ಶ್ರೀಧರ

ಕನ್ನಡಕ್ಕೆ: ಡಾ. ಜಿ. ಭಾಸ್ಕರ ಮಯ್ಯ

ಪ್ರಕಾಶಕರು: ಅಭಿನವ ಪ್ರಕಾಶನ ಬೆಂಗಳೂರು 

*

ಪತ್ರಕರ್ತರ ಬಗ್ಗೆ ಕವಿ ರಿಲ್ಕೆ ಒಂದು ವಿಶೇಷಣವನ್ನು ಬಳಸಿದ್ದಾನೆ: ‘ಅರ್ಧ ಕಲಾತ್ಮಕ ವೃತ್ತಿ’ (half-artistic profession). ಅವನ ಈ ನಿಲುವಿಗೆ ಕಾರಣ ಏನೋ, ನಮಗೆ ಗೊತ್ತಿಲ್ಲವೆನ್ನಿ! ಇಂಥ ‘ಅರ್ಧ ಕಲಾತ್ಮಕ ವೃತ್ತಿ’ಯಲ್ಲೂ ಪೂರ್ಣತೆಯನ್ನು ಸಾಧಿಸಿದವರ ಸಂಖ್ಯೆಗೂ ಕೊರತೆಯೇನಿಲ್ಲ. ಅಂಥವರ ಸಾಲಿನಲ್ಲಿ ಸೇರತಕ್ಕವರು ನಾರಾಯಣ ದತ್ತ (1929–2014).

ನಾರಾಯಣ ದತ್ತ ಅವರ ಪರಿಚಯ ಕರ್ನಾಟಕದ ಜನರಿಗೆ ಅಷ್ಟಾಗಿ ಇಲ್ಲ; ಅದಕ್ಕೆ ಕಾರಣ ಅವರ ವಿದ್ಯಾಭ್ಯಾಸ ಮತ್ತು ವೃತ್ತಿಜೀವನ– ಎರಡೂ ಕರ್ನಾಟಕದಿಂದ ಹೊರಗೇ ನಡೆದದ್ದು. ‘ಎಚ್. ವೈ. ಶಾರದಾ ಪ್ರಸಾದ್‌ ತಮ್ಮ ನಾರಾಯಣ ದತ್ತ’ – ಎಂದು ಅವರ ಪರಿಚಯವನ್ನು ಆರಂಭಿಸಬಹುದೆನಿಸುತ್ತದೆ. ಏಕೆಂದರೆ ನಾರಾಯಣ ದತ್ತರು ಶಾರದಾ ಪ್ರಸಾದರನ್ನು ತಮ್ಮ ಆದರ್ಶ ಪತ್ರಕರ್ತರನ್ನಾಗಿಸಿಕೊಂಡವರು.

ಹರಿದ್ವಾರದಲ್ಲಿ ಸ್ವಾಮಿ ಶ್ರದ್ಧಾನಂದ ಸ್ಥಾಪಿಸಿದ್ದ ‘ಕಾಂಗಡೀ ವಿಶ್ವವಿದ್ಯಾಲಯ’ದಲ್ಲಿ ಸಂಸ್ಕೃತ, ಹಿಂದಿ, ರಾಜ್ಯಶಾಸ್ತ್ರ ಮತ್ತು ಇತಿಹಾಸಗಳಲ್ಲಿ ಉನ್ನತ ಶಿಕ್ಷಣ ಪಡೆದು ‘ವಿದ್ಯಾಲಂಕಾರ’ ಪದವಿಯನ್ನು ಪಡೆದವರು ನಾರಾಯಣ ದತ್ತ. 1952ರಲ್ಲಿ ಮುಂಬೈಯಲ್ಲಿ ಹಿಂದಿಯ ‘ಸ್ಕ್ರೀನ್‌’ನ ಮೂಲಕ ಪತ್ರಿಕಾರಂಗವನ್ನು ಪ್ರವೇಶಿಸಿದರು.

‘ಧರ್ಮಯುಗ್‌’, ಭಾರತೀಯ ವಿದ್ಯಾ ಭವನದ ‘ಅಮೃತಭಾರತೀ’ ಮತ್ತು ‘ನವನೀತ’ ಮುಂತಾದ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಪಿಟಿಐನಲ್ಲಿ ಹಿಂದಿ ಫೀಚರ್‌ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಆ ಬಳಿಕವೇ ಅವರು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದು.

ನಾರಾಯಣ ದತ್ತರು ಹಿಂದಿ ಪತ್ರಿಕೋದ್ಯಮದಲ್ಲಿ ಮೂಡಿಸಿದ ಛಾಪು ಅನನ್ಯವಾದುದು. ಅವರು ಕರ್ನಾಟಕದವರು; ಮನೆ ಮಾತು ತೆಲುಗು; ಸಂಸ್ಕೃತ, ಇಂಗ್ಲಿಷ್‌, ಕನ್ನಡ, ಉರ್ದು, ಮರಾಠಿ, ಗುಜರಾತಿ ಮುಂತಾದ ಹಲವು ಭಾಷೆಗಳಲ್ಲಿ ಪಾಂಡಿತ್ಯ; ಕಾರ್ಯಕ್ಷೇತ್ರ ಹಿಂದಿ ಪತ್ರಿಕೋದ್ಯಮ. ಭಾರತೀಯ ಸಂಸ್ಕೃತಿಯ ವೈವಿಧ್ಯಕ್ಕೆ ಅವರು ನಡೆದಾಡುವ ಜ್ಞಾನಕೋಶದಂತಿದ್ದವರು.

ಅವರ ಹಿಂದೀಭಾಷೆಯ ಬಗ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ‘ನಾರಾಯಣ ದತ್ತ ನನಗಿಂತಲೂ ಒಳ್ಳೆಯ ಹಿಂದಿ ಮಾತನಾಡುತ್ತಾರೆ, ಬರೆಯುತ್ತಾರೆ’ ಎಂದು ಉದ್ಗರಿಸಿದ್ದರು. ನಾರಾಯಣ ದತ್ತರು ತಮ್ಮ ಕಾರ್ಯಕ್ಷಮತೆ ಮತ್ತು ವ್ಯಕ್ತಿತ್ವಗಳ ದೆಸೆಯಿಂದಾಗಿ ಹಿಂದಿ ಪತ್ರಿಕೋದ್ಯಮದ ಹಲವರ ಪಾಲಿಗೆ ಗುರುಗಳೇ ಆದರು.

ಮಧ್ಯಪ್ರದೇಶದ ಭೋಪಾಲದಲ್ಲಿರುವ ‘ಮಾಧವರಾವ್‌ ಸಪ್ರೆ ಸ್ಮೃತಿ ಸಮಾಚಾರ್‌ ಪತ್ರ ಸಂಗ್ರಹಾಲಯ ಹಾಗೂ ಶೋಧ ಸಂಸ್ಥಾನ’ ನಾರಾಯಣ ದತ್ತ ಅವರಿಗೆ ಅಭಿನಂದನ ಗ್ರಂಥವೊಂದನ್ನು ಅರ್ಪಿಸಿದೆ.

ವಿಜಯದತ್ತ ಶ್ರೀಧರ್ ಅದರ ಸಂಪಾದಕರು; ಅವರು ನಾರಾಯಣ ದತ್ತರ ಶಿಷ್ಯ. ‘ನಾರಾಯಣ ದತ್ತ – ಮನೀಷೀ ಸಂಪಾದಕ್‌’ – ಈ ಹಿಂದಿ ಕೃತಿಯ ಕನ್ನಡ ಅನುವಾದವೇ ‘ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’. ಇದರ ಅನುವಾದಕರು ಜಿ. ಭಾಸ್ಕರ ಮಯ್ಯ. ಪತ್ರಿಕೋದ್ಯಮದ ಆಸಕ್ತರೂ ಅಧ್ಯಾಪಕರೂ ವಿದ್ಯಾರ್ಥಿಗಳೂ ಖಂಡಿತವಾಗಿಯೂ ಓದಲೇಬೇಕಾದ ಕೃತಿಯಿದು. 

ಕನ್ನಡದಲ್ಲಿ ಪತ್ರಿಕಾರಂಗದ ಬಗ್ಗೆ ಕೆಲವು ಕೃತಿಗಳು ಪ್ರಕಟವಾಗಿವೆ. ಡಿ.ವಿ.ಜಿಯವರ ‘ವೃತ್ತಪತ್ರಿಕೆ’ಯೇ ಪ್ರಥಮ ಕೃತಿ ಎನಿಸುತ್ತದೆ. ಮಾತ್ರವಲ್ಲ, ಇದೊಂದು ಆಚಾರ್ಯ ಕೃತಿ. ಇದು ತೊಂಬತ್ತು ವರ್ಷಗಳ ಹಿಂದೆ (1928), ಅದು ಪತ್ರಿಕೋದ್ಯಮ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಕಾಲದಲ್ಲಿ ಪ್ರಕಟವಾದ ಪುಸ್ತಕವಾದರೂ ಇಂದಿಗೂ ಅದರ ಮಹತ್ವವನ್ನು ಕಳೆದುಕೊಂಡಿಲ್ಲ.

ಡಿ.ವಿ.ಜಿಯವರ ಕೃತಿ ಪರಂಪರೆಗೆ ಸಮರ್ಥ ಸೇರ್ಪಡೆ ‘ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’. ಇಂದು ಪತ್ರಿಕಾರಂಗ ಹಲವು ದೃಷ್ಟಿಗಳಿಂದ ಎಷ್ಟೋ ಬದಲಾವಣೆಗಳಿಗೆ ತುತ್ತಾಗಿದೆ. ಅದೊಂದು ಉದ್ಯಮವಾಗಿಯೂ ಬೆಳೆದಿದೆ. ಈಗ ಅದರ ಮೂಲ ಲಕ್ಷಣವನ್ನೂ ಆಶಯವನ್ನೂ ಉದ್ದೇಶವನ್ನೂ ಹೇಗೆ ಕಾಪಾಡುವುದು? ಹೀಗೆ ಕಾಪಾಡಬೇಕಾದವರು ಯಾರು? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ನಾರಾಯಣ ದತ್ತರ ಪುಸ್ತಕ ನಮ್ಮನ್ನು ಪ್ರೇರೇಪಿಸುತ್ತದೆ.

‘ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’ – ಈ ಕೃತಿ ಪ್ರಧಾನವಾಗಿ ಮೂರು ಭಾಗಗಳಲ್ಲಿ ವಿಂಗಡಣೆಯಾಗಿದೆ. ‘ಭಾಗ 1 – ವ್ಯಕ್ತಿತ್ವ’; ನಾರಾಯಣ ದತ್ತರನ್ನು ಕುರಿತು ಅವರನ್ನು ಬಲ್ಲವರಾಗಿದ್ದ ಮೂರು ಮಂದಿ ಇಲ್ಲಿ ಅವರ ವ್ಯಕ್ತಿತ್ವವನ್ನೂ ಸಾಧನೆಯನ್ನೂ ಆತ್ಮೀಯವಾಗಿ ಕಂಡರಿಸಿದ್ದಾರೆ. ‘ಭಾಗ 2 – ವಿಚಾರ–ವೀಥಿ’: ನಾರಾಯಣ ದತ್ತರ ಕೆಲವು ಲೇಖನಗಳು ಮತ್ತು ಉಪನ್ಯಾಸಗಳನ್ನು ಇಲ್ಲಿ ಸೇರಿಸಲಾಗಿದೆ.

ಅವರ ವಿದ್ವತ್ತು, ಆದರ್ಶ, ಚಿಂತನೆಗಳನ್ನು ಈ ಲೇಖನಗಳು ಸಮರ್ಥವಾಗಿ ಪ್ರಕಟಿಸುವಂಥವು. ‘ಭಾಗ 3 – ನಮ್ಮ ಪಾಠಶಾಲೆ’; ನಾರಾಯಣ ದತ್ತರ ಪ್ರೇರಣಾಪ್ರದ ಪತ್ರಗಳಲ್ಲಿ ಕೆಲವನ್ನು ಈ ಭಾಗದಲ್ಲಿ ಪ್ರಕಟಿಸಲಾಗಿದೆ. ಇದಲ್ಲದೆ ಕೊನೆಯಲ್ಲಿ ಅನುಬಂಧವನ್ನೂ ಕೊಡಲಾಗಿದ್ದು, ದತ್ತರ ಇಬ್ಬರು ಸಹೋದರರು ಅವರನ್ನು ಸ್ಮರಿಸಿಕೊಂಡಿದ್ದಾರೆ.

ಪತ್ರಕರ್ತನಿಗೆ ಇರಬೇಕಾದ ನೈತಿಕ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಕೃತಿಯ ಉದ್ದಕ್ಕೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮೀಮಾಂಸೆಯಿದೆ. ಪತ್ರಕರ್ತನಿಗೆ ಅತ್ಯಂತ ಆವಶ್ಯಕ ಶಕ್ತಿ ಎಂದರೆ ಭಾಷೆ. ನಾರಾಯಣ ದತ್ತರಿಗೆ ಭಾಷೆಯ ಅಗಾಧ ಪಾಂಡಿತ್ಯವೂ ಇತ್ತು; ಕಾಳಜಿಯೂ ಇತ್ತು. ಅವರ ಎಲ್ಲ ಬರಹಗಳಲ್ಲೂ ಇದು ಪ್ರತಿಫಲನಗೊಂಡಿದೆ. ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಭಾಷೆ ಮತ್ತು ವ್ಯಾಕರಣದಲ್ಲಿಯ ತಪ್ಪುಗಳ ಬಗ್ಗೆ ಅವರ ಈ ಮಾತುಗಳು ಉಲ್ಲೇಖಾರ್ಹ:

‘ಈ ಪತ್ರಿಕೆಗಳು ಅರ್ಧ ಶಿಕ್ಷಿತರಿಂದ ಕಾಲು ಭಾಗ ಶಿಕ್ಷಿತರಿಗಾಗಿ ಮುದ್ರಿಸಲ್ಪಡುತ್ತಿವೆಯೆ?’ ಬಹಳಷ್ಟು ಯುವಕ ಮಿತ್ರರು ಇದನ್ನು ಸ್ವಾತಂತ್ರ್ಯ ಮತ್ತು ವಿಕಾಸದ ಗುರುತೆಂದು ಹೇಳುತ್ತಾರೆ. ಆದರೆ ಇದು ಕೇವಲ ಬೌದ್ಧಿಕ ಆಲಸ್ಯದ ಪ್ರತೀಕ. ಸಂಪಾದಕ ತನ್ನೆಲ್ಲಾ ವೇಳೆಯನ್ನು ವ್ಯಾಕರಣ, ಕಾಗುಣಿತ ಮತ್ತು ನುಡಿಗಟ್ಟು, ಪಡೆನುಡಿಗಳ ಹಿಂದೆ ದೊಣ್ಣೆ ಹಿಡಿದು ತಿರುಗಲಿಕ್ಕಾಗುವುದಿಲ್ಲವೆಂಬುದು ನಿಜ.

ಆದರೆ ಯಾವುದೇ ಸಂಪಾದಕ ವ್ಯಾಕರಣ, ನುಡಿಗಟ್ಟು ಮತ್ತು ಕಾಗುಣಿತದ ತಪ್ಪು ಪ್ರಯೋಗಗಳು ಸಂವಹನಕ್ಕೆ ತೊಂದರೆಯನ್ನು ಉಂಟುಮಾಡುವುದಿಲ್ಲವೆಂದು ಭಾವಿಸಿದರೆ, ಅಂಥವರ ತಿಳಿವಳಿಕೆಯ ಬಗೆಗೆ ಮರುಕಪಡಬೇಕಾಗಿದೆ.’

ಹಿಂದಿಯಲ್ಲಿ ಜನಪ್ರಿಯ ವಿಜ್ಞಾನಕ್ಕೆ ನೆಲೆಯೊದಗಲು ನಾರಾಯಣ ದತ್ತರ ಆಸಕ್ತಿ– ಪರಿಶ್ರಮಗಳು ತುಂಬ ಮಹತ್ವದ ಪಾತ್ರವಹಿಸಿವೆ. ‘ಮೂಲ ವಿಷಯವನ್ನು ಗೌಣಗೊಳಿಸಿ, ರೋಚಕತೆಯ ಮೇಲೆ ತಮ್ಮೆಲ್ಲ ಧ್ಯಾನ ಶಕ್ತಿಯನ್ನು ಕೇಂದ್ರೀಕರಿಸುವ ಸುಬೋಧ ವಿಜ್ಞಾನ ಲೇಖಕರು ಅಥವಾ ವಿಜ್ಞಾನ ಸಂವಹನಗಾರರು ನಿಜಕ್ಕೂ ವಿಜ್ಞಾನದ ಪ್ರಸಾರ ಮಾಡುತ್ತಿದ್ದಾರೆಯೆ? ಅವರ ಲೇಖನ ಭಾಷಣಗಳಿಂದ ಓದುಗರಿಗೆ, ಕೇಳುಗರಿಗೆ ಎಷ್ಟು ಬೌದ್ಧಿಕ ಲಾಭವಾಗುತ್ತದೆ – ಈ ವಿಚಾರದಲ್ಲಿ ಇಂದು ಚಿಂತಿಸುವ ಅಗತ್ಯವಿದೆ’ ಎನ್ನುವ ಅವರು ಜನಪ್ರಿಯ ವಿಜ್ಞಾನ ಬರಹಗಳಿಗೆ ಒದಗಬಹುದಾದ ದೋಷದ ಬಗ್ಗೆ ಗಮನ ಸೆಳೆಯುತ್ತಾರೆ.

ಜಿ. ಭಾಸ್ಕರ ಮಯ್ಯ ಅವರ ಅನುವಾದ ಬಹುಪಾಲು ಯಶಸ್ವಿಯಾಗಿದೆ. ಕನ್ನಡ ವಾಙ್ಮಯಕ್ಕೆ ‘ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ’ ಮೌಲ್ಯಯುತ ಸೇರ್ಪಡೆ ಎಂಬುದು ನಿಸ್ಸಂದೇಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT