ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಘನತೆ ರಕ್ಷೆಣೆಗಾಗಿ ಹೋರಾಟ

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದೇಶದ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ನಡೆದಿರುವ ಸರಣಿ ಘಟನೆಗಳ ವಿದ್ಯಮಾನವನ್ನು ನಾವು ಬಣ್ಣಿಸುವುದಾದರೂ ಹೇಗೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಈ ಬಿಕ್ಕಟ್ಟನ್ನು ಹೇಗೆ ಎದುರಿಸಲಿದ್ದಾರೆ ಎನ್ನುವುದು ತುಂಬ ಕುತೂಹಲಕಾರಿಯಾಗಿದೆ. ನ್ಯಾಯಮೂರ್ತಿಗಳು ತಮ್ಮ ತಮ್ಮಲ್ಲೇ ವಾದ ಪ್ರತಿವಾದಗಳಲ್ಲಿ ತೊಡಗಿದ್ದಾರೆ. ನ್ಯಾಯಾಂಗದಲ್ಲಿ ಜನರು ಇಟ್ಟಿರುವ ವಿಶ್ವಾಸವೇ ಹರಿದು ಚಿಂದಿ ಚಿಂದಿಯಾಗುತ್ತಿದೆ. ಕಾರ್ಯಾಂಗವು ನ್ಯಾಯಾಂಗದ ಬೆನ್ನಿಗೆ ಕೊಡಲಿ ಏಟು ಕೊಡುತ್ತಿದೆ. ಕೆಲವರಿಗೆ ಈ ಎಲ್ಲ ಘಟನಾವಳಿಗಳು ಕೆಲಮಟ್ಟಿಗೆ ನಾಟಕೀಯ ಎನಿಸಬಹುದು. ಆ ಎಲ್ಲ ವಿದ್ಯಮಾನಗಳನ್ನು ನಾನು ಇಲ್ಲಿ ವಿವರಿಸಲು ಪ್ರಯತ್ನಿಸಿರುವೆ.

ಕೋರ್ಟ್‌ಗಳೇ ಇಲ್ಲದಿದ್ದರೆ ಬಡನಾಗರಿಕನೊಬ್ಬ ನ್ಯಾಯ ಕೇಳಿ ಹೋಗುವುದಾದರೂ ಎಲ್ಲಿಗೆ? ಸರ್ಕಾರವೊಂದು ತನ್ನ ಹಕ್ಕುಗಳನ್ನು ನಿರಾಕರಿಸಿದಾಗ ಅಥವಾ ಸರ್ಕಾರವೇ ಜನರ ಹಕ್ಕುಗಳ ಮೇಲೆ ಗದಾಪ್ರಹಾರ ನಡೆಸಿದಾಗ ಆತ ಸಾಮಾನ್ಯವಾಗಿ ಕೋರ್ಟ್‌ಗಳ ಬಾಗಿಲು ಬಡಿಯುತ್ತಾನೆ. ಸರ್ಕಾರದಿಂದ ತನಗೆ ರಕ್ಷಣೆ ನೀಡಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್‌ ಬಯಸಿದರೆ ನಾಗರಿಕನ ವಿಶ್ವಾಸಕ್ಕೆ ಭಾರಿ ಧಕ್ಕೆ ಒದಗಲಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ರಕ್ಷಣೆಗೆ ಕೇಂದ್ರ ಸರ್ಕಾರವೇ ಟೊಂಕಕಟ್ಟಿ ನಿಂತಿರುವುದನ್ನೂ ನಾವೀಗ ನೋಡುತ್ತಿದ್ದೇವೆ. ಈ ಘಟನಾವಳಿಗಳಲ್ಲಿ, ಮುಖ್ಯ ನ್ಯಾಯಮೂರ್ತಿಗಳ ಪಾತ್ರವೇ ತಲೆಕೆಳಗಾಗಿರುವುದು ನಾಟಕೀಯ ಎನಿಸುವುದಿಲ್ಲವೇ? ಕೇಂದ್ರದ ಕಾನೂನು ಸಚಿವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್‌ಗೆ ಹೊಸ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸು ಮಾಡಿದ್ದ ಎರಡು ಹೆಸರುಗಳ ಪೈಕಿ ಒಬ್ಬರ ಹೆಸರನ್ನು ಮರು ಪರಿಶೀಲನೆಗೆ ವಾಪಸ್‌ ಕಳಿಸಿದ್ದಾರೆ.

ಕೇರಳದಿಂದ ಅತಿ ಹೆಚ್ಚಿನ ನ್ಯಾಯಮೂರ್ತಿಗಳಿದ್ದಾರೆ ಮತ್ತು ಸೇವಾ ಹಿರಿತನದಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ಸರ್ಕಾರ ತನ್ನ ಆಕ್ಷೇಪಕ್ಕೆ ಕಾರಣ ನೀಡಿದೆ. ಸಂವಿಧಾನದಡಿ ಸಮಾನವಾಗಿ ಅಧಿಕಾರ ಹಂಚಿಕೆಯಾಗಿದ್ದರೂ, ಸ್ಪಷ್ಟ ಬಹುಮತ ಹೊಂದಿದ ಬಣದ ಮಾತೇ ಅಂತಿಮ ಎನ್ನುವುದನ್ನು ಸರ್ಕಾರವು ಈ ಪ್ರಕರಣದಲ್ಲಿ ಕೋರ್ಟ್‌ಗೆ ನೆನಪಿಸಿಕೊಟ್ಟಿದೆ.

ನ್ಯಾಯಮೂರ್ತಿಗಳು ರಾಜಕೀಯ ಬೆಂಬಲ ಕಳೆದುಕೊಂಡಿದ್ದಾರೆ ಎನ್ನುವುದು ರಾಜಕಾರಣಿಗಳಿಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ. ಇಂತಹ ಅವಕಾಶಗಳನ್ನು ಕಳೆದುಕೊಳ್ಳಲು ಇಷ್ಟಪಡದ ರಾಜಕಾರಣಿಗಳೂ ಅಂತಹ ಹುದ್ದೆಗಳನ್ನು ಆಕ್ರಮಿಸಿಕೊಂಡು ಕುಳಿತಿದ್ದಾರೆ. ಇದು ಆಡಳಿತಾರೂಢ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.

ತೀವ್ರವಾಗಿ ಬಳಲಿರುವ ನ್ಯಾಯಾಂಗವು, ಲೋಕಸಭೆಯಲ್ಲಿ ಶೇ 10ಕ್ಕಿಂತ ಕಡಿಮೆ ಸಂಖ್ಯೆಯ ಸಂಸದರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ಎಚ್ಚರಿಕೆ ಇಲ್ಲದ ಮತ್ತು ಅವಿವೇಕದ ವಾಗ್ದಂಡನೆ ವಿಧಿಸಲು ಮುಂದಾಗುವಂತೆ ಉತ್ತೇಜನ ನೀಡಿದೆ. ಈ ವಾಗ್ದಂಡನೆ ಗೊತ್ತುವಳಿ ಮಂಡನೆ ಪ್ರಸ್ತಾವವು ಯಾವುದೇ ರಾಜಕೀಯ ಉದ್ದೇಶ ಸಾಧಿಸಲು ಸಫಲವಾಗಿಲ್ಲ. ಇದು ಸುಪ್ರೀಂ ಕೋರ್ಟ್‌ ಮತ್ತು ಅದರಲ್ಲೂ ವಿಶೇಷವಾಗಿ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಇನ್ನಷ್ಟು ದುರ್ಬಲಗೊಳಿಸಿದೆಯಷ್ಟೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ದ್ವೇಷಿಸುತ್ತಿದ್ದರೂ, ನ್ಯಾಯಾಂಗದ ಮೇಲೆ ಸವಾರಿ ಮಾಡುವ ವಿಷಯದಲ್ಲಿ ಎರಡೂ ಪಕ್ಷಗಳು ಒಂದಾಗುತ್ತವೆ. ಉನ್ನತ ನ್ಯಾಯಾಂಗದ ಅಧಿಕಾರ ಮೊಟಕು ಮಾಡಲು ಅದರಲ್ಲೂ ವಿಶೇಷವಾಗಿ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂನ ಅಧಿಕಾರಕ್ಕೆ ಕತ್ತರಿ ಹಾಕಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿದ್ದವು. ಒಡೆದ ಮನೆಯಾಗಿರುವ ಸಂಸತ್ತು ಬಹುತೇಕ ಅವಿರೋಧವಾಗಿ ಮತ್ತು ಅತ್ಯಂತ ಕ್ಷಿಪ್ರವಾಗಿ ಕಾಯ್ದೆ ಅಂಗೀಕರಿಸಿ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ರಚಿಸುವ ಮೂಲಕ ನ್ಯಾಯಾಂಗದ ಪರಮಾಧಿಕಾರಕ್ಕೆ ಅಡ್ಡಿಪಡಿಸಿತ್ತು.

ಅದಕ್ಕೆ ಅಷ್ಟೇ ಚುರುಕಾಗಿ ಪ್ರತಿಕ್ರಿಯಿಸಿದ್ದನ್ಯಾಯಾಂಗವು, ಈ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿ ಎನ್‌ಜೆಎಸಿ ರಚಿಸುವುದನ್ನು ತಳ್ಳಿ ಹಾಕಿತ್ತು. ಇದಕ್ಕೆ ರಾಜಕೀಯ ಸಮುದಾಯವು ಸಿಡಿಮಿಡಿಗೊಂಡಿತ್ತು. ಈಗಲೂ ಈ ಪ್ರಮುಖ ರಾಜಕೀಯ ಪಕ್ಷಗಳು ಹೊರ ನೋಟಕ್ಕೆ ಪರಸ್ಪರ ಸೆಣಸುವ ನಟನೆ ಮಾಡುತ್ತಿವೆ. ಎರಡೂ ಪಕ್ಷಗಳು ತಮ್ಮ ಸಾಮಾನ್ಯ ಪ್ರತಿಸ್ಪರ್ಧಿ ನ್ಯಾಯಾಂಗವನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿವೆ.

ಎನ್‌ಜೆಎಸಿ ರಚಿಸುವುದನ್ನು ಐವರು ಸದಸ್ಯರ ಪೀಠವು 4–1 ಬಹುಮತದ ತೀರ್ಪಿನಿಂದ ತಳ್ಳಿ ಹಾಕಿತ್ತು. ಈ ಮೂಲಕ ನ್ಯಾಯಾಂಗವು, ಕಾರ್ಯಾಂಗದ ಮರ್ಜಿಯಲ್ಲಿ ಇರುವ ಸಾಧ್ಯತೆಯಿಂದ ಹೊರಬಂದಿತ್ತು.

ಕೊಲಿಜಿಯಂನ ಇತರ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಲೋಯಾ ಸಾವಿನ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಪ್ರಶ್ನಿಸುತ್ತಿರುವ ವಕೀಲರು, ವೈದ್ಯಕೀಯ ಕಾಲೇಜ್‌ ಪ್ರಕರಣ, ಕಾಂಗ್ರೆಸ್‌ನಿಂದ ವಾಗ್ದಂಡನೆ ಬೆದರಿಕೆ ಒಂದೆಡೆ ಇದೆ. ತಮ್ಮ ಬೆಂಬಲಕ್ಕೆ ನಿಂತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ಇದೆ. ಈ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಿಜೆಐ, ಸುಪ್ರೀಂ ಕೋರ್ಟ್‌ನ ಘನತೆ ಕಾಪಾಡಿಕೊಳ್ಳಲು ಹೋರಾಟ ನಡೆಸುವರೇ ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಸರ್ಕಾರವೇ ಅವರ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಅವರು ಈಗ ಸಿಲುಕಿಕೊಂಡಿದ್ದಾರೆ.

ನ್ಯಾಯಾಂಗದ ಹೊಸ ದೌರ್ಬಲ್ಯಗಳ ಬಗ್ಗೆ ರಾಜಕಾರಣಿಗಳು ಈಗ ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕೊಲಿಜಿಯಂ ಶಿಫಾರಸುಗಳನ್ನು ಜಾರಿಗೆ ತರಲು ವಿಳಂಬ ಮಾಡುವುದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಒಂದು ಪ್ರಕರಣದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರಿಗೆ ಕೊಲಿಜಿಯಂ ನೀಡಿದ ಸೇವಾವಧಿಯನ್ನು ಸರ್ಕಾರ ಬದಲಿಸಿದೆ. ಅದಕ್ಕೆ ಕೊಲಿಜಿಯಂ ಸಮ್ಮತಿಯ ಮುದ್ರೆ ಒತ್ತಿದೆ. ಇದರಿಂದ ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರವು, ಈಗ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರ ನೇಮಕಾತಿಯನ್ನು ಮರು ಪರಿಶೀಲಿಸುವಂತೆ ಶಿಫಾರಸನ್ನು ಕೊಲಿಜಿಯಂಗೆ ವಾಪಸ್‌ ಕಳಿಸಿದೆ. ಈ ಬಾರಿಯೂ ಕೊಲಿಜಿಯಂ, ಸರ್ಕಾರದ ಕೋರಿಕೆಗೆ ಮಣಿದರೆ ಅಥವಾ ತನ್ನೊಳಗೆ ಕಚ್ಚಾಟದಲ್ಲಿ ಮುಳುಗಿದರೆ ಸರ್ಕಾರ ಇನ್ನಷ್ಟು ಅಚಾತುರ್ಯದ ಕ್ರಮಕ್ಕೆ ಮುಂದಾಗಬಹುದು. ಅಂತಹ ಕ್ರಮ ಏನಾಗಿರಬಹುದು ಎನ್ನುವುದು ಸದ್ಯಕ್ಕೆ ಊಹಾತ್ಮಕ ವಿಷಯವಾಗಿದೆ.

ಸುಪ್ರೀಂ ಕೋರ್ಟ್‌ ಇದೇ ಬಗೆಯಲ್ಲಿ ದುರ್ಬಲವಾಗಿ ಉಳಿದರೆ, ಸರ್ಕಾರ ಸೇವಾ ಹಿರಿತನ ನಿಯಮ ಉಲ್ಲಂಘಿಸಬಹುದು. ಉತ್ತರಾಧಿಕಾರಿ ನಿಯಮಗಳನ್ನು ಗಾಳಿಗೆ ತೂರಬಹುದು ಮತ್ತು ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯಿ ಅವರನ್ನು ಮುಂದಿನ ಸಿಜೆಐ ಯನ್ನಾಗಿ ನೇಮಿಸಲೂ ಹಿಂದೇಟು ಹಾಕಬಹುದು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವು ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡಿದೆ ಎಂದು ಸರ್ಕಾರ ದೃಢವಾಗಿ ನಂಬಿದೆ. ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳ (ಪಿಐಎಲ್‌) ವಿಚಾರಣೆ ಕುರಿತು ತಳೆದಿರುವ ನಿಲುವು ಮತ್ತು ಇತರ ಮೊಕದ್ದಮೆಗಳು ಶಿಥಿಲಗೊಂಡಿರುವುದು ಜನರ ಗಮನ ಸೆಳೆಯುವಲ್ಲಿ ಸಫಲವಾಗಿವೆ.

ಎನ್‌ಜೆಎಸಿ ಪ್ರಸ್ತಾವವನ್ನು ಅವಸರದಲ್ಲಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್‌ನ ನಿಲುವು ಗಮನಿಸಿದರೆ, ನ್ಯಾಯಮೂರ್ತಿಗಳೂ ತಮ್ಮದೇ ಆದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತಾರೆ ಎನ್ನುವುದು ಸಾಬೀತಾಗುತ್ತದೆ. ಲೋಯಾ ಪ್ರಕರಣದ ತೀರ್ಪು ಟೀಕಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಗೆ ಸಿಜೆಐ ಪಟ್ಟು ಹಿಡಿದರೆ ಈ ಭಾವನೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ವಿಶಾಲ ಹೃದಯದಿಂದ ಇರಬೇಕಾದ ನ್ಯಾಯಾಂಗವು ತನಗಾಗಿಯೇ ಹೋರಾಟ ನಡೆಸುತ್ತಿದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ. ಈ ವಿದ್ಯಮಾನ ಮತ್ತು ನ್ಯಾಯಮೂರ್ತಿಗಳ ಮಧ್ಯೆ ಇರುವ ಅಪನಂಬಿಕೆಯು ನ್ಯಾಯಾಂಗದ ಘನತೆಗೆ ಇನ್ನಷ್ಟು ಕುಂದು ತರಲಿದೆ. ಜನರ ಜತೆಗಿನ ಅದರ ಬಾಂಧವ್ಯಕ್ಕೆ ಹಾನಿ ತಗುಲಲಿದೆ.

ನ್ಯಾಯಾಂಗದ ಘನತೆ ಉಳಿಸಿಕೊಳ್ಳಲು ಹೋರಾಟ ನಡೆಸಲು ಇದು ಸೂಕ್ತ ಸಮಯವಾಗಿದೆ. ಹಿರಿಯ ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳು ತಮ್ಮ ತಮ್ಮಲ್ಲೆ ಜಗಳ ಆಡುವ ಬದಲಿಗೆ ನ್ಯಾಯಾಂಗದ ಪಾವಿತ್ರ್ಯ, ವ್ಯವಸ್ಥೆ ಉಳಿಸಿಕೊಳ್ಳಲು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ.

ನ್ಯಾಯಾಂಗವು ಸದ್ಯಕ್ಕೆ ಎದುರಿಸುತ್ತಿರುವ ಬಿಕ್ಕಟ್ಟಿಗೆ ಸೂಕ್ತ ಉಪಮೆ ನೀಡಲು ಹೊರಟಾಗ, ನಮ್ಮ ಸ್ವಾತಂತ್ರ್ಯ ಹೋರಾಟದ ಆರಂಭಿಕ ದಿನಗಳಲ್ಲಿ ನಡೆದ ವಿದ್ಯಮಾನವೊಂದು ನನಗೆ ನೆನಪಿಗೆ ಬಂದಿತು. 1906– 07ರಲ್ಲಿ ಬ್ರಿಟಿಷ್‌ ಸರ್ಕಾರವು ತನ್ನ ಪಾಳೆಗಾರಿಕೆಯ ಮಸೂದೆಯೊಂದನ್ನು ಜಾರಿ ಮಾಡಿ, ಭೂಮಾಲೀಕರ ಆಸ್ತಿಗಳ ಮೇಲೆ ಅಧಿಕಾರ ಚಲಾಯಿಸಲು ಪರಮಾಧಿಕಾರ ಪಡೆದುಕೊಂಡಿತ್ತು.

ರೈತರಿಗೆ ಸೇರಿದ್ದ ಯಾವುದೇ ಭೂಮಿಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಅತ್ಯಂತ ಕಠಿಣ ನಿಯಮ ಈ ಮಸೂದೆಯಲ್ಲಿತ್ತು.

ಲಾಲಾ ಲಜಪತ್‌ ರಾಯ್‌ ಮತ್ತು ಭಗತ್ ಸಿಂಗ್‌ ಅವರ ಚಿಕ್ಕಪ್ಪ ಅಜಿತ್‌ ಸಿಂಗ್‌ ಅವರು ಈ ಕ್ರೂರ ಮಸೂದೆಯ ವಿರುದ್ಧ ನಡೆದ ಚಳವಳಿಯ ನೇತೃತ ವಹಿಸಿದ್ದರು. ಚಳವಳಿಗೆ ಸ್ಫೂರ್ತಿ ನೀಡುವ ಗೀತೆಯೊಂದನ್ನು (ರೈತನೇ ನಿನ್ನ ಮುಂಡಾಸು ರಕ್ಷಿಸಿಕೊ, ಇಲ್ಲದಿದ್ದರೆ ನಿನ್ನ ಸಂಪತ್ತು ಮತ್ತು ಆತ್ಮಗೌರವ ಲೂಟಿ ಮಾಡಿ ಬಿಡುತ್ತಾರೆ...’) ರಚಿಸಲಾಗಿತ್ತು. ಇತಿಹಾಸದ ಪುಟಗಳಲ್ಲಿ ಇದು, ‘ಪಗಡಿ ಸಂಭಾಳ್‌ ಜಟ್ಟಾ ಚಳವಳಿ’ ಎಂದೇ ದಾಖಲಾಗಿದೆ. ಪಂಜಾಬ್‌ನಲ್ಲಿ ರೈತರನ್ನು ಜಟ್ಟಾ ಎಂದು ಕರೆಯುತ್ತಾರೆ. ಈ ಚಳವಳಿಯ ನೇತೃತ್ವ ವಹಿಸಿದ್ದಕ್ಕೆ ಲಾಲಾ ಲಜಪತ್‌ ರಾಯ್‌ ಮತ್ತು ಅಜಿತ್‌ ಸಿಂಗ್‌ ಅವರನ್ನು ಬ್ರಿಟಿಷರು ಗಡಿಪಾರು ಮಾಡಿದ್ದರು.

ಸದ್ಯಕ್ಕೆ ದೇಶಿ ನ್ಯಾಯಾಂಗ ವ್ಯವಸ್ಥೆಯು ಕೂಡ ‘ಪಗಡಿ ಸಂಭಾಳ್‌ ಜಟ್ಟಾ’ ಚಳವಳಿಯಂತಹ ಪರಿಸ್ಥಿತಿ ಎದುರಿಸುತ್ತಿದೆ. ನಾನು ಈ ಮಾತನ್ನು ಸಾಕಷ್ಟು ಎಚ್ಚರಿಕೆ ವಹಿಸಿ, ಸಾರಾಸಾರ ವಿಚಾರ ಮಾಡಿ, ಜಾಗರೂಕತೆಯಿಂದಲೇ ಬರೆದಿರುವೆ.

ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರಾವಧಿಯ 1973ರ ನಂತರದ ದಿನಗಳಲ್ಲಿ ನ್ಯಾಯಾಂಗವನ್ನು ದಮನಿಸಲು ನಡೆಸಿದ ಪ್ರಯತ್ನಗಳ ನಂತರ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಇದಾಗಿದೆ.

ಕೊಲಿಜಿಯಂ ವ್ಯವಸ್ಥೆ ಜಾರಿಗೆ ತಂದ ನಂತರ ತನಗೆ ಶಾಶ್ವತವಾಗಿ ಸುರಕ್ಷತೆ ಲಭಿಸಿದೆ ಎಂದು ನ್ಯಾಯಾಂಗವು ದೃಢವಾಗಿ ಭಾವಿಸಿದ ನಂತರದ ದಿನಗಳಲ್ಲಿ ಈ ಬಿಕ್ಕಟ್ಟು ಎದುರಾಗಿದೆ. ಈ ಸುರಕ್ಷಿತ ಭಾವನೆಯನ್ನು ನ್ಯಾಯಾಂಗವೇ ದುರ್ಬಲಗೊಳಿಸಲು ತಪ್ಪು ಹೆಜ್ಜೆ ಇರಿಸಿದೆ. ನೇಮಕಾತಿಗಳಲ್ಲಿ ಜಾಗರೂಕತೆ ವಹಿಸದಿರುವುದು, ಸುಧಾರಣಾ ಕ್ರಮಗಳನ್ನು ಜಾರಿಗೆ ತರದಿರುವುದು, ನ್ಯಾಯದಾನ ವಿಳಂಬದಿಂದಾಗಿ ಜನರಲ್ಲಿ ಮಡುಗಟ್ಟಿದ ಅಸಹನೆಯನ್ನು ತಿಳಿದುಕೊಳ್ಳಲು ವಿಫಲವಾಗಿರುವುದು, ‘ಪಿಐಎಲ್‌’ಗಳಿಗೆ ಮನ್ನಣೆ ನೀಡಿ ಪ್ರಚಾರ ಗಿಟ್ಟಿಸಲು ಹೊರಟಿರುವುದು... ಈ ಎಲ್ಲ ಕಾರಣಗಳಿಗೆ ನಾವು ನ್ಯಾಯಾಂಗವನ್ನು ಮೌಖಿಕವಾಗಿ ಟೀಕಿಸುತ್ತೇವೆ.

ಅದೇ ಹಳೆಯ ಕಾರಣಗಳನ್ನು ಮುಂದಿಟ್ಟುಕೊಂಡು ವಾದ ಮಾಡಲು ಇದು ಸೂಕ್ತ ಸಮಯವಲ್ಲ. ಒಂದು ವೇಳೆ ನ್ಯಾಯಾಂಗವು ಈ ಹೋರಾಟದಲ್ಲಿ ಸೋತು ಹೋದರೆ, ಆ ಉನ್ನತ ಸಂಸ್ಥೆಯು ಸರಿಪಡಿಸಲಾಗದ ಹಾನಿಗೆ ಗುರಿಯಾಗಲಿದೆ. ಶಾಶ್ವತವಾಗಿ ಅಪಾಯಕ್ಕೆ ಸಿಲುಕಲಿದೆ. ಇದರಿಂದ ನಾಗರಿಕರ ಹಿತಾಸಕ್ತಿಗೂ ತೀವ್ರ ಧಕ್ಕೆ ಒದಗಲಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯು ಇಷ್ಟಪಡಲಿ ಬಿಡಲಿ ಅವರೀಗ ಹಠಾತ್ತಾಗಿ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಸುಪ್ರೀಂ ಕೋರ್ಟ್‌ನ ಘನತೆ ಮತ್ತು ಕೊಲಿಜಿಯಂ ವ್ಯವಸ್ಥೆ ಪರವಾಗಿ ಅವರೇ ಮುಂದೆ ನಿಂತು ಹೋರಾಟ ನಡೆಸಬೇಕಾಗಿ ಬಂದಿದೆ. ತಮ್ಮ ಸ್ವಂತಕ್ಕೆ ಅಥವಾ ಸುಪ್ರೀಂ ಕೋರ್ಟ್‌ನ ಹಿತಾಸಕ್ತಿ ರಕ್ಷಣೆಗಾಗಿ ಹೋರಾಟ ನಡೆಸುವ ವಿಷಯದಲ್ಲಿ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ನನಗೆ ಇಷ್ಟ ಇಲ್ಲ. ತಮ್ಮ ಸಹೋದ್ಯೋಗಿ ನ್ಯಾಯಮೂರ್ತಿಗಳ ಪರ ನಿಲ್ಲಲು ಅವರಿಗೆ 1973 –77ರ ಇತಿಹಾಸ ನೆನಪಾದರೆ ಸಾಕು.

ಇಂದಿರಾ ಗಾಂಧಿ ಅವರ ದಮನ ನೀತಿಯಿಂದಾಗಿ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದರು ಎನ್ನುವುದನ್ನು ಯಾರೊಬ್ಬರೂ ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಆದರೆ, ಅಧಿಕಾರಸ್ಥರು ತೆಗೆದುಕೊಳ್ಳುವ ನ್ಯಾಯಯುತವಲ್ಲದ ನಿರ್ಧಾರಗಳ ಪ್ರತಿಭಟನಾರ್ಥ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದವರು ನ್ಯಾಯಾಂಗದ ಘನತೆ ರಕ್ಷಿಸಿದ ಖ್ಯಾತನಾಮರ ಪಟ್ಟಿಯಲ್ಲಿ ದಾಖಲಾಗಿರುತ್ತಾರೆ. ಅಂತಹವರು ಈಗ ಮತ್ತೆ ಎದುರಾಗಿರುವ ಪರೀಕ್ಷೆಯ ಮುಂಚೂಣಿಯಲ್ಲಿ ಇರಬಹುದು.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT