ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಕಾಲಘಟ್ಟದ ಮಹಿಮೆ..

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಚುನಾವಣೆಗಳು ಬಂದಾಗ ಪರಿಸ್ಥಿತಿಗಳು ಹೇಗೆಲ್ಲ ಬದಲಾಗುತ್ತವೆ ಎಂಬುದಕ್ಕೆ ಸಚಿವ ಎಂ.ಬಿ. ಪಾಟೀಲರು ಈಚೆಗೆ ಸಾಕ್ಷಿಯಾದರು.

ಪಾಟೀಲರು ಜಿಲ್ಲೆಗೆ ಭೇಟಿ ಕೊಡುತ್ತಾರೆ ಎಂದರೆ ಇಡೀ ಜಿಲ್ಲಾಡಳಿತ ಸಜ್ಜಾಗಿ, ಅವರನ್ನು ಸ್ವಾಗತಿಸಲು ಮುಂದಾಗುತ್ತಿತ್ತು. ಇದು ಕಳೆದ ಐದು ವರ್ಷಗಳಲ್ಲಿ ಕಾಣಿಸುತ್ತಿದ್ದ ಸಾಮಾನ್ಯ ಚಿತ್ರಣ. ಚುನಾವಣೆ ಘೋಷಣೆಯಾಗಿದ್ದೇ ತಡ, ಈ ಚಿತ್ರಣ ಬದಲಾಯಿತು. ಸಚಿವ ಪಾಟೀಲರೇ ಈಚೆಗೆ ಮನವಿಯೊಂದನ್ನು ಸಲ್ಲಿಸಲು ಜಿಲ್ಲಾಧಿಕಾರಿಗಾಗಿ ಕಾಯುವ ಸ್ಥಿತಿ ಬಂತು.

‘ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲ ಸ್ವಾಮೀಜಿಗಳು ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ’ ಎಂದು ದೂರು ನೀಡಲು, ಎಂ.ಬಿ. ಪಾಟೀಲರು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.

ಅದಕ್ಕೂ ಮುನ್ನವೇ ಪಾಟೀಲರ ಪಟಾಲಂ ಪತ್ರಕರ್ತರಿಗೆ ಹಾಗೂ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಗೆ ಆ ಕುರಿತು ಮಾಹಿತಿ ನೀಡಿತ್ತು. ಮಾಧ್ಯಮದವರು ಮುಂಚಿತವಾಗಿ ಬಂದಿದ್ದರು, ಪಾಟೀಲರ ಬೆಂಬಲಿಗರೂ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಕುಳಿತಿದ್ದರು. ಪಾಟೀಲರು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಕೊಠಡಿಯೊಳಗೆ ಹೋದರು.

ಕೆಲ ಕ್ಷಣಗಳಲ್ಲೇ ಹೊರ ಬಂದ ಸಹಾಯಕ, ‘ಸಾಹೇಬ್ರು ಚುನಾವಣಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಭಾಷಣ ಬ್ಯಾಡ ಅಂದಿದ್ದಾರೆ’ ಎಂದರು. ‘ನಾವು ಮನವಿ ಕೊಡ್ತೀವಿ ಅಷ್ಟೇ, ಭಾಷಣ ಮಾಡಲ್ಲ’ ಎಂದು ಪಾಟೀಲರ ಬೆಂಬಲಿಗರು ಹೇಳಿದರು. ಮತ್ತೆ ಒಳಗೆ ಓಡಿದ ಸಹಾಯಕ, ಜಿಲ್ಲಾಧಿಕಾರಿಗೆ ಆ ಮಾಹಿತಿಯನ್ನೂ ಕೊಟ್ಟರು. ಅಷ್ಟಾಗಿಯೂ ಕೆಲವು ನಿಮಿಷಗಳ ಕಾಲ ಜಿಲ್ಲಾಧಿಕಾರಿ ಹೊರಬಂದಿಲ್ಲ. ಸಚಿವರು ಅವರಿಗಾಗಿ ಕಾಯುತ್ತಿದ್ದರು. ಸುಮಾರು ಹತ್ತು ನಿಮಿಷದ ಬಳಿಕ ಕೊಠಡಿಯಿಂದ ಹೊರ ಬಂದ ಜಿಲ್ಲಾಧಿಕಾರಿ ಸಚಿವರತ್ತ ಮುಗುಳ್ನಗೆ ಬೀರಿ ಮನವಿ ಪಡೆದರು. ಇಡೀ ಪ್ರಸಂಗವನ್ನು ನೋಡುತ್ತಿದ್ದ ಹಿರಿಯ ಪತ್ರಕರ್ತರೊಬ್ಬರು ‘ನೋಡ್ರೀ ಬದಲಾದ ಕಾಲಘಟ್ಟದ ಮಹಿಮೆಯನ್ನು’ ಎಂದು ಹೇಳಿಕೊಳ್ಳುತ್ತ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT