ಗುರುವಾರ , ಫೆಬ್ರವರಿ 25, 2021
29 °C

ಡೇಟಿಂಗ್ ಸೈಟ್‌ ಆಗಿತ್ತು ಯೂಟ್ಯೂಬ್‌!

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಡೇಟಿಂಗ್ ಸೈಟ್‌ ಆಗಿತ್ತು ಯೂಟ್ಯೂಬ್‌!

ಯೂಟ್ಯೂಬ್‌ ಸ್ಥಾಪಕರಲ್ಲಿ ಒಬ್ಬರಾದ ಸ್ಟೀವ್‌ಚೆನ್‌ ಅವರು, ಒಮ್ಮೆ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಏರ್ಪಡಿಸಿದ್ದ ಔತಣಕೂಟದ ವಿಡಿಯೊವನ್ನು ಇಮೇಲ್‌ ಮೂಲಕ ಸ್ನೇಹಿತರಿಗೆ ಕಳುಹಿಸಲು ಪ್ರಯತ್ನಿಸಿ ವಿಫಲವಾದರು. ಅದೇ ರೀತಿ ಯೂಟ್ಯೂಬ್‌ನ ಮತ್ತೊಬ್ಬ ಸಹ ಸಂಸ್ಥಾಪಕ ಜಾವೇದ್ ಕರೀಂ ಅವರು, ತಮ್ಮ ಅಭಿಮಾನ ನಟ ಜಾನೆಟ್ ಜಾಕ್ಸನ್‌ ಅವರ ವಿಡಿಯೊಗಳಿಗಾಗಿ ಅಂತರ್ಜಾಲದಲ್ಲಿ ಎಷ್ಟು ಜಾಲಾಡಿದರೂ ಸಿಗಲಿಲ್ಲವಂತೆ. ಈ ಎರಡೂ ಸಂದರ್ಭಗಳು ಯೂಟ್ಯೂಬ್‌ ಆರಂಭಕ್ಕೆ ಒಂದು ರೀತಿಯಲ್ಲಿ ಕಾರಣವಾದವು.

ಪೇಪಾಲ್ ಸಂಸ್ಥೆಯನ್ನು ಈ ಈಬೆ ಸಂಸ್ಥೆ ಖರೀದಿಸಿದ ನಂತರ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಾರ್ಡ್‌ ಹಾರ್ಲೆ, ಸ್ವೀವ್ ಚೆನ್ ಮತ್ತು ಜಾವೇದ್‌ ಕರೀಂ ಅವರು ತಮ್ಮ ಪಾಲಿಗೆ ಬಂದ ಹಣವನ್ನು ಹೂಡಿಕೆ ಮಾಡಿ ಯೂಟ್ಯೂಬ್ ವಿನ್ಯಾಸಗೊಳಿಸಿದರು. 2005ರಲ್ಲಿ ಇದನ್ನು ಆರಂಭಿಸಿದರು. 2006ರಲ್ಲಿ ಗೂಗಲ್‌ ಇದನ್ನು ಸುಮಾರು ₹10,000 ಕೋಟಿಗೆ ಖರೀದಿಸಿತು.

ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿದ್ದ ಹಾಟ್‌ ಆರ್ ನಾಟ್ ಜಾಲತಾಣದಿಂದ ಪ್ರೇರಣೆ ಪಡೆದು ಮೊದಲಿಗೆ ಡೇಟಿಂಗ್ ವೆಬ್‌ಸೈಟ್ ರೀತಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ನಂತರ ಯೂಟ್ಯೂಬ್‌ ಆಗಿ ಬದಲಿಸಲಾಯಿತು.

ಆರಂಭದಲ್ಲಿ ಜನಪ್ರಿಯತೆ ಗಳಿಸುವುದಕ್ಕಾಗಿ ಇದರ ವ್ಯವಸ್ಥಾಪಕರು, ‘ಸುಂದರವಾದ ಹುಡುಗಿಯರು ಯಾರಾದರೂ ತಮ್ಮ ಬಗೆಗಿನ ವಿಷಯಗಳನ್ನು ವಿಡಿಯೊ ಮಾಡಿ ತಿಳಿಸಿದರೆ ನೂರು ಡಾಲರ್ ನಗದು ನೀಡುತ್ತೇವೆ’ ಎಂದು ಪ್ರಕಟಿಸಿದ್ದರು. ಆದರೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ.

ಯೂಟ್ಯೂಬ್‌ 61 ದೇಶಗಳಲ್ಲಿ 76 ಭಾಷೆಗಳಲ್ಲಿ ಲಭ್ಯವಿದೆ. ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ವಾಹಿನಿಗೆ ಯೂಟ್ಯೂಬ್ ಸಂಸ್ಥೆ ಬಟನ್ ಪ್ಲೇ ಪ್ರಶಸ್ತಿ ನೀಡುತ್ತದೆ. ವಾಹಿನಿಯೊಂದಕ್ಕೆ ಲಕ್ಷ ಮಂದಿ ಚಂದಾದಾರರು ಇದ್ದರೆ ಸಿಲ್ವರ್ ಪ್ಲೇ, 10 ಲಕ್ಷ ಮಂದಿ ಇದ್ದರೆ ಗೋಲ್ಡ್‌ ಪ್ಲೇ, ಕೋಟಿ ಮಂದಿ ಇದ್ದರೆ ಡೈಮಂಡ ಪ್ಲೇ, ಐದು ಕೋಟಿ ದಾಟಿದರೆ ರೂಬೆ ಪ್ಲೇ ಎಂದು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈವರೆಗೆ ಪ್ಯುಡಿಪೈ (pewdiepie) ಎಂಬ ವಾಹಿನಿಗೆ ಮಾತ್ರ ರೂಬೇ ಪ್ಲೇ ಪ್ರಶಸ್ತಿ ಲಭಿಸಿದೆ.

ವಿಶೇಷ

ಯೂಟ್ಯೂಬ್‌ನಲ್ಲಿರುವ ದೀರ್ಘವಾದ ವಿಡಿಯೊ ಅವಧಿ 571 ಗಂಟೆ, 1 ನಿಮಿಷ, 41 ಸೆಕೆಂಡ್ಸ್‌. ಇದು ಜೊನಾಥನ್‌ ಹ್ಯಾರ್ಕಿಕ್‌ ಎಂಬ ವಿಡಿಯೊ ಬ್ಲಾಗರ್ ಒಬ್ಬರು ಚಿಲಿ ಪ್ರವಾಸದ ಬಗ್ಗೆ ಮಾಡಿರುವ ವಿಡಿಯೊ ಇದು.

ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ 1,000 ವಾಹಿನಿಗಳ ಪೈಕಿ 600 ವಾಹಿನಿಗಳನ್ನು ಜರ್ಮನಿಯಲ್ಲಿ ನಿಷೇಧಿಸಲಾಗಿದೆ.

ಈವರೆಗೆ ಅತಿ ಹೆಚ್ಚು ಜನರು ಯೂಟ್ಯೂಬ್‌ನಲ್ಲಿ ಹುಡುಕಿದ್ದು ‘ ಹೌ ಟು ಕಿಸ್‌’ ಎಂಬ ವಿಷಯದ ಬಗ್ಗೆ!

ದಕ್ಷಿಣ ಕೊರಿಯಾದ ಪಾಪ್‌ ಗಾಯಕ ಪಿಎನ್‌ವೈ ಅವರು ಹಾಡಿದ ನಿರ್ಮಿಸಿದ ‘ಓಪನ್‌ ಗಂಗ್ನಮ್ ಸ್ಟೈಲ್‌’  ಹಾಡು ಈವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಾಡು. ಸುಮಾರು 100 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ ಮೊದಲ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.