ನೇತ್ರದಾನದ ವಿನೂತನ ಕ್ರಮ

7

ನೇತ್ರದಾನದ ವಿನೂತನ ಕ್ರಮ

Published:
Updated:
ನೇತ್ರದಾನದ ವಿನೂತನ ಕ್ರಮ

ಶುಭಾ ಪೂಂಜ ಅಭಿನಯದ, ಶ್ರೀನಿ ನಿರ್ದೇಶನದ ‘ಕೆಲವು ದಿನಗಳ ನಂತರ’ ಚಿತ್ರತಂಡ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸುದ್ದಿಗಾರರನ್ನು ಆಹ್ವಾನಿಸಿತ್ತು. ಆದರೆ, ಆ ಕಾರ್ಯಕ್ರಮದಲ್ಲಿ ಹಾಡುಗಳ ಬಿಡುಗಡೆಗಿಂತ ಹೆಚ್ಚಿನ ಮಹತ್ವದ ವಿಚಾರ ಇನ್ನೊಂದಿತ್ತು. ಚಿತ್ರತಂಡದ ನೂರು ಜನ ಸದಸ್ಯರು ತಮ್ಮ ಕಣ್ಣುಗಳನ್ನು ದಾನ ಮಾಡುವ ವಾಗ್ದಾನ ನೀಡಿರುವುದನ್ನು ತಂಡ ಅಲ್ಲಿ ತಿಳಿಸಿತು.

‘ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಾವು ನೂರು ಜನ ನಮ್ಮ ಕಣ್ಣುಗಳನ್ನು ಡಾ. ರಾಜ್‌ಕುಮಾರ್‌ ನೇತ್ರ ನಿಧಿಗೆ ದಾನ ಮಾಡುತ್ತಿದ್ದೇವೆ’ ಎಂದು ಶ್ರೀನಿ ತಿಳಿಸಿದರು.

‘ಇಂದು ಸಮಾಜದಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಹಾಸ್ಯ ಮತ್ತು ಹಾರರ್ ಪಾಕ ಇರುವ ಸಿನಿಮಾ ಇದು. ಎಲ್ಲರಿಗೂ ಉಪಯುಕ್ತ ಆಗುವ ಸಂದೇಶವೊಂದು ಸಿನಿಮಾದಲ್ಲಿ ಇದೆ. ಚಿಕ್ಕಮಗಳೂರು, ಸಾವನದುರ್ಗ, ಮಾಲೂರು, ಮಾಗಡಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ’ ಎಂದೂ ಅವರು ಹೇಳಿದರು. ತ್ರಿಡಿ ತಂತ್ರಜ್ಞಾನ ಬಳಸಿ ತೆರೆಯ ಮೇಲೆ ಆರು ತಿಂಗಳ ಮಗುವೊಂದನ್ನು ಸೃಷ್ಟಿಸಲಾಗಿದೆಯಂತೆ. ಇಂಥದ್ದೊಂದು ಪ್ರಯತ್ನ ಮಾಡಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು ಎಂದು ಚಿತ್ರತಂಡ ಹೇಳಿಕೊಂಡಿದೆ.

ಎಚ್.ಪಿ. ಮುತ್ತುರಾಜ್, ವಸಂತ ಕುಮಾರ್ ಬಿ.ಎಂ., ಟಿ.ಸಿ. ಚಂದ್ರಕುಮಾರ್ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ‘ಕಳೆದ ವರ್ಷ ಅಣ್ಣಾವ್ರ ಹುಟ್ಟಿದ ದಿನ ಸಿನಿಮಾ ಮುಹೂರ್ತ ಆಗಿತ್ತು. ಸಿನಿಮಾ ಚೆನ್ನಾಗಿದೆ’ ಎಂದರು ವಸಂತ ಕುಮಾರ್. ‘ಸಮಾಜಕ್ಕೆ ಬೇಕಿರುವ ಸಂದೇಶವನ್ನು‌ ರಂಜನೆಯ ಮೂಲಕವೇ ರವಾನಿಸಲಾಗಿದೆ’ ಎಂದು ಹೇಳಿ ಮಾತು ಮುಗಿಸಿದರು ಚಂದ್ರಕುಮಾರ್.

‘ಹಾರರ್ ಸಿನಿಮಾ ಮೂಲಕವೇ ಇಂದಿನ ಯುವಕರಿಗೆ ಅಗತ್ಯವಿರುವ ಸಂದೇಶವೊಂದನ್ನು ನೀಡಲಾಗಿದೆ ಇದರಲ್ಲಿ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ’ ಎಂದರು ಶುಭಾ. ರಾಕಿ ಸೋನು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ನಾನೊಂದು ಸಣ್ಣ ಪಾತ್ರ ಮಾಡಿದ್ದೇನೆ. ಅದು ಹೋಟೆಲ್ ಸರ್ವರ್ ಪಾತ್ರ. ವೀಕ್ಷಕರನ್ನು ನಗಿಸುತ್ತಲೇ ದುರಂತಮಯ ಅಂತ್ಯ ಕಾಣುವ ಪಾತ್ರ ಅದು’ ಎಂದರು ಪವನ್. ಚಿತ್ರತಂಡವು ನೇತ್ರದಾನ ಮಾಡಿದ್ದು ನಾರಾಯಣ ನೇತ್ರಾಲಯದ ಎಂ.ಕೆ. ಕೃಷ್ಣ ಅವರ ಪ್ರಶಂಸೆಗೆ ಪಾತ್ರವಾಯಿತು.

ಬೆನ್ನು ತಟ್ಟಿದ ರಾಘಣ್ಣ

ಚಿತ್ರತಂಡದ ಸದಸ್ಯರು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿರುವ ಕಾರಣ, ಅವರ ಬೆನ್ನುತಟ್ಟಲು ರಾಘವೇಂದ್ರ ರಾಜ್‌ಕುಮಾರ್ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಮಾತಿಗೆ ನಿಂತಿದ್ದು ಕಾರ್ಯಕ್ರಮದ ಕೊನೆಯಲ್ಲಿ.

‘ನಾವು ಸತ್ತ ನಂತರ ನಮ್ಮ ಕಣ್ಣು ಅಗತ್ಯ ಇರುವವರಿಗೆ ಸೇರುತ್ತದೆಯೇ ಎಂಬುದು ಬಹಳ ಮುಖ್ಯ. ಹಾಗಾಗಿ, ನಾವು ನಮ್ಮ ಕುಟುಂಬದ ವತಿಯಿಂದ ಪ್ರತಿ ಜಿಲ್ಲೆಗೂ ಒಂದು ವ್ಯಾನ್ ಕೊಡುತ್ತಿದ್ದೇವೆ. ನೇತ್ರದಾನ ಮಾಡಿದ ವ್ಯಕ್ತಿ ಮೃತಪಟ್ಟ ಆರು ತಾಸಿನ ಒಳಗೆ ಆತನ ಕಣ್ಣುಗಳನ್ನು ಪಡೆದುಕೊಳ್ಳಲು ಈ ವ್ಯಾನ್‌ ನೆರವಾಗುತ್ತದೆ’ ಎಂದು ತಿಳಿಸಿದರು ರಾಘಣ್ಣ.

‘ಕೆಲವು ದಿನಗಳ ನಂತರ’ದ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ ರಾಘಣ್ಣ, ‘ಚಿತ್ರದ ಟ್ರೇಲರ್ ಚೆನ್ನಾಗಿದೆ. ನಮ್ಮ ಪಾಲಿನ ಕೆಲಸ ಮಾಡೋಣ, ಫಲ ನೀಡುವುದನ್ನು ದೇವರಿಗೆ ಬಿಟ್ಟುಬಿಡೋಣ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry