ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನದಿ’ಯಲ್ಲೊಂದು ಸಂಭ್ರಮ, ಹೊಸ ಜ್ಯೋತಿಯಾಗಿ ಅರ್ಚನಾ

ಅಕ್ಷರ ಗಾತ್ರ

ನದಿಯೊಂದು ಎಲ್ಲೋ ಹುಟ್ಟಿ ಎಲ್ಲೋ ಹರಿದು ಮತ್ತೆಲ್ಲೋ ಸಾಗರ ಸೇರುತ್ತದೆಯಲ್ಲ? ಅದೇ ರೀತಿ ಪ್ರತಿ ವ್ಯಕ್ತಿಯ ಬದುಕಿನಲ್ಲೂ ಜೀವನದಿಯ ಒಂದಂಶವಿರುತ್ತದೆ. ನದಿ ನೂರೆಂಟು ತಿರುವು ಪಡೆಯುವಂತೆ ಬದುಕು ಕೂಡ. ‘ಉದಯ ಟಿವಿ’ಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗುವ ‘ಜೀವನದಿ’ ಧಾರಾವಾಹಿ ಕೂಡ ನೂರೆಂಟು ತಿರುವುಗಳನ್ನು ಪಡೆಯುತ್ತಾ 250 ಕಂತುಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈಗ ಈ ಜೀವನದಿಯು ಮತ್ತೊಂದು ತಿರುವು ಪಡೆಯುತ್ತಿದೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಬದುಕಿನ ಎಲ್ಲ ಕಷ್ಟಗಳನ್ನು ಸಹಿಸಿ, ಅಸಾಮಾನ್ಯವಾಗಿ ಬೆಳೆಯುವ ಮಹಿಳೆಯ ರೋಚಕ ಕಥೆಯೇ ಜೀವನದಿ. ಇನ್ನೂರೈವತ್ತು ಕಂತುಗಳ ಸಂಭ್ರಮದಲ್ಲಿರುವ ಈ ಕಥೆ ಇನ್ನು ಮುಂದೆ ಹೊಸ ನಾಯಕಿಯೊಂದಿಗೆ ಹೊಸ ರೂಪದಲ್ಲಿ ವೀಕ್ಷಕರ ಮುಂದೆ ಬರಲಿದೆ.

ಜ್ಯೋತಿ ಪಾತ್ರಕ್ಕೆ ಜೀವ ತುಂಬಿದ್ದ ದೀಪಿಕಾ ವೆಂಕಟೇಶ್ ನಿಜ ಬದುಕಿನಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದರಿಂದಾಗಿ ಕಿರುತೆರೆಯ ಕೆಲಸಗಳಿಗೆ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಹೊಣೆಗಾರಿಕೆಯನ್ನು ಈಗ ಕಿರುತೆರೆ ಮತ್ತು ರಂಗಭೂಮಿ ಎರಡಲ್ಲೂ ಛಾಪು ಮೂಡಿಸಿರುವ ಅರ್ಚನಾ ಹೆಗಲಿಗೇರಿಸಿಕೊಂಡಿದ್ದಾರೆ.

ಉದಯ ಟಿವಿಯಲ್ಲೇ ಪ್ರಸಾರವಾಗುತ್ತಿದ್ದ ‘ಬಂಗಾರ’ ಧಾರಾವಾಹಿಯ ‘ಸೇವಂತಿ’ಯಾಗಿ, ‘ಅವನು ಮತ್ತು ಶ್ರಾವಣಿ’ಯಲ್ಲಿ ಬಿಂದಾಸ್ ಹುಡುಗಿಯಾಗಿ ವೀಕ್ಷಕರ ಮನಸ್ಸಿನಲ್ಲಿ ಒಂದು ಜಾಗ ಪಡೆದಿದ್ದರು ಅರ್ಚನಾ.

ಜ್ಯೋತಿ ಮಧ್ಯಮ ವರ್ಗದಲ್ಲಿ ಜನಿಸಿದ ಸಾಮಾನ್ಯ ಹೆಣ್ಣುಮಗಳು. ಓದಬೇಕು, ಸಾಧಿಸಬೇಕು, ತನಗೆ ಜನ್ಮ ಕೊಟ್ಟ ನೆಲಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲವಿರುವ ದಿಟ್ಟೆ. ಆದರೆ, ತನ್ನ ತಾಯಿಯ ದುರಾಸೆಯ ಕಾರಣದಿಂದ ಓದುವ ವಯಸ್ಸಿನಲ್ಲಿ ಮದುವೆಯಾಗಿ ಪಡಬಾರದ ಪಾಡು ಪಡುತ್ತಾಳೆ.

ಒಂದು ಮಗುವಿನ ತಾಯಿಯಾಗಿ, ತವರು ಮನೆಗೂ ಬೇಡದವಳಾಗಿ, ಗಂಡನಿಂದಲೂ ಪರಿತ್ಯಕ್ತಳಾಗಿ ಏಕಾಂಗಿ ಬದುಕು ಸಾಗಿಸುತ್ತಾಳೆ. ನಾಲ್ಕು ಗೋಡೆಯ ನಡುವೆ ಕಣ್ಣೀರು ಹಾಕಿದರೂ, ಸಮಾಜದ ಮುಂದೆ ಧೃತಿಗೆಡದೆ ದಿಟ್ಟತನದಿಂದ ಬದುಕು ಮುನ್ನಡೆಸುವ ಛಲಗಾತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಹೊಟ್ಟೆಪಾಡಿಗಾಗಿ ಹೂವು, ತರಕಾರಿ ಮಾರಾಟ, ಕೇಟರಿಂಗ್, ಆಟೋ ಚಾಲನೆ ಕೆಲಸ ಮಾಡುತ್ತಾಳೆ.

ಹೊಸ ‘ಜ್ಯೋತಿ’ಯಾಗಿ ಪಾತ್ರ ನಿಭಾಯಿಸಲಿರುವ ಅರ್ಚನಾ, ‘ಜ್ಯೋತಿ ಉರಿಯುವುದು ಮಾತ್ರವಲ್ಲ. ನಂದಾದೀಪವಾಗಿ ಬೆಳಗುತ್ತದೆ ಕೂಡ. ಜ್ಯೋತಿ ಪಾತ್ರಕ್ಕೆ ನ್ಯಾಯ ಸಲ್ಲಿಸುವ ದೊಡ್ಡ ಜವಾಬ್ದಾರಿ ಇದೆ’ ಎನ್ನುತ್ತಾರೆ.

‘ಇದೇ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಪ್ರೇಕ್ಷಕರು ಯಾವ ರೀತಿ ಸ್ವೀಕಾರ ಮಾಡುತ್ತಾರೋ ಎನ್ನುವ ಅಳುಕು ಇದ್ದೇ ಇದೆ. ಆದರೆ, ತ್ರಿವೇಣಿ, ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಓದಿಕೊಂಡಿರುವುದು ನನ್ನ ಅಭಿನಯಕ್ಕೆ ನೆರವಾಗುವ ವಿಶ್ವಾಸವಿದೆ. ಪಾತ್ರವನ್ನು ಒಂದು ಸವಾಲಾಗಿ ಸ್ವೀಕರಿಸಿದ್ದೇನೆ. ನಿರ್ದೇಶಕ ಸಯ್ಯದ್ ಅಶ್ರಫ್ ಅವರ ಮಾರ್ಗದರ್ಶನದಲ್ಲಿ ಇದನ್ನು ನಿಭಾಯಿಸುವುದರಲ್ಲಿ ಖಂಡಿತಾ ಸಫಲಳಾಗುತ್ತೇನೆ’ ಎನ್ನವುದು ಅವರ ಮಾತು.

ಜ್ಯೋತಿಯನ್ನು ಸಂಕಷ್ಟಕ್ಕೆ ದೂಡುವುದು ಅವಳ ಗಂಡ ನಾಣಿ (ನಾರಾಯಣ). ಈ ಪಾತ್ರಧಾರಿ ವಿನಯ್ ‘ಮಹಾಸತಿ’ ಧಾರಾವಾಹಿಯಲ್ಲಿ ಆದರ್ಶ ಪುತ್ರ, ಆದರ್ಶ ಗಂಡ. ಆದರೆ, ಜೀವನದಿಯಲ್ಲಿ ಅದಕ್ಕೆ ಅವರದ್ದು ತದ್ವಿರುದ್ಧ ಪಾತ್ರ. 250 ಕಂತುಗಳ ಪೈಕಿ ಸುಮಾರು 150 ಕಂತುಗಳಲ್ಲಿ ಕಾಣಿಸಿಕೊಂಡಿರುವ ನಾಣಿ ನಿಧಾನಕ್ಕೆ ಪ್ರೇಕ್ಷಕರ ಮನಸ್ಸನ್ನು ತನ್ನ ‘ವಿಲನ್ ಪತಿ’ ಕ್ಯಾರೆಕ್ಟರ್ ಮೂಲಕವೇ ಆವರಿಸಿಕೊಂಡಿದ್ದಾರೆ.

‘ಮಹಾಸತಿಯಲ್ಲಿ ಮೃದು ಸ್ವಭಾವದ ಪಾತ್ರದಲ್ಲಿ ನನ್ನನ್ನು ಗುರುತಿಸಿದ್ದ ಪ್ರೇಕ್ಷಕರು ಆರಂಭದಲ್ಲಿ ನಾಣಿ ಪಾತ್ರದಲ್ಲಿ ನನ್ನನ್ನು ನೋಡಲಾಗದೆ ಬಯ್ದು ಫೇಸ್‍ಬುಕ್‌ನಲ್ಲಿ ಕಮೆಂಟ್ ಹಾಕಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ನೆಗೆಟಿವ್ ಪಾತ್ರದಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಿದ್ದೇನೆ ಅಂದುಕೊಂಡಿದ್ದೀನಿ’ ಎನ್ನುತ್ತಾರೆ ವಿನಯ್.

ಕ್ರೂರಿ ಗಂಡನಾಗಿಯೇ ನಾಣಿ ಉಳಿಯುತ್ತಾನಾ, ಪತ್ನಿ ಮತ್ತು‌ ಮಕ್ಕಳ ಮೇಲೆ ಪ್ರೇಮ ಉಕ್ಕಿ ಜೀವನದಲ್ಲಿ ಬದಲಾಗುತ್ತಾನಾ ಎನ್ನುವ ಕುತೂಹಲವನ್ನು ‘ಜೀವನದಿ’ ಬಿಚ್ಚಿಡುತ್ತಾ ಹರಿಯಲಿದ್ದಾಳೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT