ಶುಕ್ರವಾರ, ಫೆಬ್ರವರಿ 26, 2021
20 °C

‘ಪ್ರಶ್ನೆಯೆಂಬ ಇಂಧನದೊಂದಿಗೆ ಸಾಗುವ ಭರವಸೆಯ ಬಂಡಿ’

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

‘ಪ್ರಶ್ನೆಯೆಂಬ ಇಂಧನದೊಂದಿಗೆ ಸಾಗುವ ಭರವಸೆಯ ಬಂಡಿ’

‘ಸುವರ್ಣ’ ವಾಹಿನಿಗೆ ಹೊಸ ಗರಿ ತಂದುಕೊಟ್ಟಿದ್ದ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ಈಗ ಮೂರನೇ ಆವೃತ್ತಿಗೆ ಸಜ್ಜಾಗಿದೆ. ‘ವೀಕೆಂಡ್‌ ವಿತ್‌ ರಮೇಶ್‌’ ಖ್ಯಾತಿಯ ರಮೇಶ್‌ ಅರವಿಂದ್ ಈ ಆವೃತ್ತಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ‘ಸ್ಟಾರ್ ಸುವರ್ಣ’ ವಾಹಿನಿ ಈಚೆಗೆ ಸುದ್ದಿಗೋಷ್ಠಿ ಆಯೋಜಿಸಿತ್ತು.

‘ಜೀವನ ಕೇಳುವ ಸಾವಿರಾರು ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇರಲಿಕ್ಕಿಲ್ಲ. ಆದರೆ ನಾವು ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೆ, ನಿಮ್ಮ ಜೀವನವೇ ಬದಲಾಗುತ್ತದೆ’ ಎನ್ನುತ್ತ ಮಂದಸ್ಮಿತರಾಗಿ ವೇದಿಕೆ ಪ್ರವೇಶಿಸಿದ ರಮೇಶ್‌ ಅವರ ಕಂಗಳಲ್ಲಿ ಹೊಸ ಹೊಳಪಿತ್ತು. ಹೊಸ ಕಾರ್ಯಕ್ರಮದ ನಿರೂಪಣೆಯ ಉತ್ಸಾಹವಿತ್ತು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ತಮ್ಮ ಖುಷಿ ಹಂಚಿಕೊಂಡಿದ್ದು ಇಲ್ಲಿದೆ.

* ‘ಕನ್ನಡದ ಕೋಟ್ಯಾಧಿಪತಿ’ ನಿರೂಪಕರಾಗಿ ಹೇಗನಿಸುತ್ತಿದೆ?

ಖಂಡಿತಾ ಖುಷಿ ಆಗುತ್ತಿದೆ. ಇದು ನನಗೆ ಮತ್ತಷ್ಟು ವಿನಯ ಕಲಿಸಿದೆ. 120 ದೇಶಗಳಲ್ಲಿ 80ಕ್ಕೂ ಹೆಚ್ಚು ಭಾಷೆಗಳಲ್ಲಿ ಯಶಸ್ಸು ಗಳಿಸಿರುವ ಈ ಕಾರ್ಯಕ್ರಮ ಒಂದು ಭರವಸೆಯ ಬಂಡಿ. ಈ ಬಂಡಿಗೆ ಪ್ರಶ್ನೆಗಳೇ ಇಂಧನ. ಪ್ರಶ್ನೆಗಳಿಗಿರುವ ಶಕ್ತಿಯೇ ಅಂಥದ್ದು. ವಿಜ್ಞಾನದ ಎಲ್ಲ ಆವಿಷ್ಕಾರಗಳು, ಮಾನವ ಜಗತ್ತಿನ ಎಲ್ಲ ಪ್ರಗತಿಯೂ ಒಂದು ಪ್ರಶ್ನೆಯಿಂದಲೇ ಆರಂಭವಾದದ್ದು. ಈ ಕಾರ್ಯಕ್ರಮದ ಜನಪ್ರಿಯತೆಗೂ ಪ್ರಶ್ನೆಯೇ ಕಾರಣ. ನಮ್ಮ ಅಗತ್ಯಗಳನ್ನು ಪೂರೈಸುವಷ್ಟು ಸಂಪಾದಿಸುತ್ತೇವೆ. ಆದರೆ ನಮ್ಮ ಕನಸು ನನಸಾಗಿಸಲು ಹೆಚ್ಚಿನ ಧನಮೂಲದ ಅಗತ್ಯವಿರುತ್ತದೆ. ಕನ್ನಡದ ಕೋಟ್ಯಾಧಿಪತಿ ಇಂತಹ ಅವಕಾಶಗಳ ಕಿಂಡಿ. ಇಂತಹ ಭರವಸೆಯ ಬಂಡಿಯ ಸಾರಥಿಯಾಗಿರುವುದರಲ್ಲಿ ಸಂತೋಷವಿದೆ.

* ಹಾಟ್‌ಸೀಟ್‌ನಲ್ಲಿ ಮೊದಲ ಸ್ಪರ್ಧಿಯಾಗಿ ಯಾರನ್ನು ನೋಡಬಯಸುತ್ತೀರಾ?

ಸೂಕ್ತ ವ್ಯಕ್ತಿಗೆ ಅವಕಾಶ ಸಿಗಲೇಬೇಕು. ಕಾರ್ಯಕ್ರಮಕ್ಕೆ ಅರ್ಹನಲ್ಲದ ವ್ಯಕ್ತಿ ಯಾವ ಕಾರಣಕ್ಕೂ ಹಾಟ್‌ಸೀಟ್‌ನಲ್ಲಿ ಕೂರಬಾರದು. ಇದು ನನ್ನ ಹಾಗೂ ತಂಡದ ಧ್ಯೇಯ. ವೀಕೆಂಡ್‌ ವಿತ್ ರಮೇಶ್‌ ಕಾರ್ಯಕ್ರಮದಲ್ಲಿಯೂ ಮೊದಲ ಅತಿಥಿಯಾಗಿದ್ದ ಪುನೀತ್ ರಾಜ್‌ಕುಮಾರ್‌ ಅವರನ್ನೇ ಇಲ್ಲಿಯೂ ಮೊದಲ ಸ್ಪರ್ಧಿಯಾಗಿ ನೋಡಬಯಸುತ್ತೇನೆ.

*ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆಗೆ ನೀವು ಒಪ್ಪಿಕೊಳ್ಳಲು ಪ್ರಮುಖ ಕಾರಣ?

‘ಕೋಟ್ಯಾಧಿಪತಿ’ ಕನ್ನಡಕ್ಕೆ ಮೊದಲು ಪರಿಚಯವಾಗುವಾಗ ನಾನು ಅದರ ನಿರೂಪಕನಾಗುವ ತೀರ್ಮಾನ ಆಗಿತ್ತು. ಅಮಿತಾಭ್‌ ಬಚ್ಚನ್ ಹಿಂದಿಯಲ್ಲಿ ನಿರೂಪಿಸಿದ್ದ ಕಾರ್ಯಕ್ರಮವನ್ನು ನಾನು ನಿರೂಪಿಸಬೇಕು ಎನ್ನುವುದು ನನ್ನಲ್ಲೂ ಕುತೂಹಲ ಮೂಡಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಲವು ಬದಲಾವಣೆಗಳು ಆದವು. ನಾನು ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ ಸಾರಥ್ಯ ವಹಿಸಿದೆ. ಅದಾದ ನಂತರ ಈಗ ಮೂರನೇ ಆವೃತಿಯಲ್ಲಿ ನನಗೆ ಅವಕಾಶ ಒದಗಿಬಂದಿದೆ. ಹಾಗಾಗಿ ತಿರಸ್ಕರಿಸಲು ಕಾರಣವೇ ಇರಲಿಲ್ಲ. ಸಂತೋಷದಿಂದ, ಉತ್ಸಾಹದಿಂದ ಒಪ್ಪಿಕೊಂಡೆ.

*ಈಗಾಗಲೇ ಪುನೀತ್‌ ನಿರೂಪಿಸಿರುವ ಕಾರ್ಯಕ್ರಮವಾದ ಕಾರಣ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಜನರ ನಿರೀಕ್ಷೆ ತಲುಪಲು ನಿಮಗಿರುವ ಸವಾಲುಗಳೇನು?

ಪುನೀತ್ ಮಾತ್ರವಲ್ಲ. ಇದುವರೆಗೆ ವಿಶ್ವದೆಲ್ಲೆಡೆ 120 ನಿರೂಪಕರು ಈ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಿದ್ದಾರೆ. ಅವರೆಲ್ಲರೂ ಅವರ ಸಹಜ ಶೈಲಿಯಿಂದಲೇ ವೀಕ್ಷಕರ ಮನಗೆದ್ದವರು. ಜನಸಂಪರ್ಕ, ಪ್ರಶ್ನೆ ಹಾಗೂ ಜ್ಞಾನ ನನ್ನ ನೆಚ್ಚಿನ ಕ್ಷೇತ್ರಗಳು. ಈ ಮೂರರ ಸಮಾಗಮ ಈ ಶೋನಲ್ಲಿರುವುದರಿಂದ ಯಾವುದೂ ಸವಾಲು ಎಂದೆನಿಸಲಿಲ್ಲ.

* ವೀಕೆಂಡ್‌ ವಿತ್‌ ರಮೇಶ್‌ ‌ಪ್ರತಿಭೆಗಳ ಅನಾವರಣ. ಕೋಟ್ಯಧಿಪತಿ ಪ್ರತಿಭೆಗಳ ಶೋಧ ಎರಡರ ನಡುವೆ ಯಾವ ವ್ಯತ್ಯಾಸ ಗುರುತಿಸುತ್ತೀರಾ?

ವೀಕೆಂಡ್‌ ವಿತ್ ರಮೇಶ್‌ ಯಶಸ್ಸಿಗೆ ಭಾವನಾತ್ಮಕ ವಿಷಯಗಳು ಕಾರಣವಾದವು. ಆದರೆ ಇದು ಹೃದಯ ಮತ್ತು ಮಿದುಳು ಎರಡಕ್ಕೂ ಸಂಬಂಧಿಸಿದ ಆಟ. ಭಾವನೆ, ಬುದ್ಧಿಯೊಂದಿಗೆ ಆಡಬೇಕಾದ ಆಟವಿದು. ನಮ್ಮಲ್ಲಿನ ತಾಳ್ಮೆಗೂ ಇದು ಒಂದು ಪರೀಕ್ಷೆ. ಒಂದು ಕೋಟಿ ರೂಪಾಯಿಗೆ ಸಂಬಂಧಿಸಿ ಪ್ರಶ್ನೆಯನ್ನು ಕೇಳುವಾಗ ನಿರೂಪಕನಾಗಿ ನಾನೂ ಅಷ್ಟೇ ತಾಳ್ಮೆಯಿಂದಿರಬೇಕು.

*ಕಳೆದ ಸರಣಿಗಳಿಗಿಂತ ಹೇಗೆ ಭಿನ್ನ?

ಆಟದೊಂದಿಗೆ ಜ್ಞಾನ ಪಡೆಯುತ್ತಾ ಕುಟುಂಬದ ಸದಸ್ಯರೆಲ್ಲರೂ ನೋಡಬಹುದಾದ ಕಾರ್ಯಕ್ರಮ. ಅಪರಿಚಿತರ ಗೆಲುವನ್ನು ಸಂಭ್ರಮಿಸುವ, ಗೆಲುವಿಗಾಗಿ ಹಾರೈಸುವ ಏಕೈಕ ಕಾರ್ಯಕ್ರಮ ಇದು. ಮೊದಲೆರಡು ಆವೃತ್ತಿಗಳ ಚಿತ್ರೀಕರಣ ಚೆನ್ನೈನಲ್ಲಿ ನಡೆದಿತ್ತು. ಈ ಬಾರಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಯುವುದರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ವೀಕ್ಷಕರು ಕನ್ನಡಿಗರಾಗಿರುತ್ತಾರೆ. ಮನೆಯಲ್ಲಿಯೇ ಆಡುವವರಿಗೆ ವಿವಿಧ ಬಹುಮಾನಗಳಿರುತ್ತವೆ.

*ಸೆಲೆಬ್ರಿಟಿಗಳನ್ನು ಹಾಟ್‌ ಸೀಟ್‌ನಲ್ಲಿ ನೋಡಬಹುದೆ?

ಸದ್ಯಕ್ಕಂತೂ ಸಾಮಾನ್ಯ ಜನರಿಂದಲೇ ಕಾರ್ಯಕ್ರಮ ಆರಂಭವಾಗುತ್ತಿದೆ. ಆಗಾಗ್ಗೆ ಅತಿಥಿಗಳನ್ನು ಕರೆಸುವ ಕುರಿತು ಮುಂದಿನ ದಿನಗಳಲ್ಲಿ ಯೋಚಿಸಲಾಗುತ್ತದೆ. ಅದರೆ ಸೆಲೆಬ್ರಿಟಿಗಳಿಂದಾಗಿ ಸಾಮಾನ್ಯ ಜನ ಅವಕಾಶ ವಂಚಿತರಾಗಬಾರದು.

*ಕಾರ್ಯಕ್ರಮದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹೇಗೆ?

ಕಾರ್ಯಕ್ರಮದ ಪ್ರತಿ ಹಂತವೂ ಅತ್ಯಂತ ಪಾರದರ್ಶಕವಾಗಿರುತ್ತದೆ. ಆಯ್ಕೆಯಿಂದ ಹಾಟ್‌ ಸೀಟ್‌ವರೆಗೂ ಯಾವುದೂ ನಮ್ಮ ಗಮನಕ್ಕೆ ಬರುವುದಿಲ್ಲ. ಪ್ರತಿಷ್ಠಿತ ಕಂಪೆನಿಗಳು ಈ ಎಲ್ಲ ಟಾಸ್ಕ್‌ಗಳನ್ನು ನಿರ್ವಹಿಸುತ್ತವೆ. ಇಲ್ಲಿ ಮ್ಯಾಚ್‌ ಫಿಕ್ಸಿಂಗ್ ಅಸಾಧ್ಯ. ಅಂತಹ ಸಾಧ್ಯತೆ ಇದ್ದಿದ್ದರೆ, 120 ದೇಶಗಳಲ್ಲಿ ಒಮ್ಮೆಯಾದರೂ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ ಅಂತಹ ಯಾವ ಲೋಪವೂ ಇದುವರೆಗೆ ಕಾಣಿಸಿಕೊಂಡಿಲ್ಲ. ಯಾರಿಗೂ ಹಿಂದಿನ ಬಾಗಿಲಿನಿಂದ ಪ್ರವೇಶವಿಲ್ಲ.

*ನಿಮ್ಮ ಸಿದ್ಧತೆ ಹೇಗಿದೆ?

ಮೇ 7 ರಿಂದ 10 ದಿನ ತರಬೇತಿ ಪಡೆದುಕೊಳ್ಳುತ್ತೇನೆ. ನಂತರ ಕಾರ್ಯಕ್ರಮ ಆರಂಭವಾಗುವ ಮೊದಲು ಮತ್ತೆ ತರಬೇತಿ ಪಡೆದುಕೊಳ್ಳುತ್ತೇನೆ. ಮಾನಸಿಕವಾಗಿ ನಿತ್ಯವೂ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

*ಕೆಲವು ವಾಹಿನಿಗಳು ವಿವಿಧ ರಿಯಾಲಿಟಿ ಶೋಗಳ ಮೂಲಕ ನಟರನ್ನು ಕಟ್ಟಿಹಾಕುತ್ತಿವೆ ಅನಿಸುತ್ತಿದೆಯೇ?

ನನಗೆ ಹಾಗನಿಸುತ್ತಿಲ್ಲ. ನಾನು ಎಲ್ಲ ವಾಹಿನಿಗಳಿಗೂ ಮುಕ್ತವಾಗಿದ್ದೇನೆ. ಎಲ್ಲ ವಾಹಿನಿಗಳಿಗೂ ಕಾರ್ಯಕ್ರಮ ನೀಡುತ್ತಿದ್ದೇನೆ. ಇದು ಹೊಸ ಹೊಸ ಗೆಳೆತನಕ್ಕೆ ಕಾರಣವಾಗುತ್ತದೆಯೇ ಹೊರತು ಕಟ್ಟಿಹಾಕುವ ಯಾವ ಪ್ರಶ್ನೆಯೂ ಇಲ್ಲ.

* ನಟರು ಕಿರುತೆರೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವ ಅಸಮಾಧಾನವೊಂದು ಚಿತ್ರರಂಗದಲ್ಲಿದೆಯಲ್ಲಾ?

ನಮಗೆ ಗೊತ್ತಿರುವ ವಿಷಯಗಳು ಹಾಗೂ ಪ್ರತಿಭೆಯ ಪ್ರದರ್ಶನಕ್ಕೆ ನಮಗೆ ಪೂರ್ಣ ಅವಕಾಶ ಕೊಡಬೇಕು. ನಾನು ನಟಿಸಬಲ್ಲೆ, ನಿರ್ದೇಶಿಸಬಲ್ಲೆ. ನಿರೂಪಣೆ ಮಾಡಬಲ್ಲೆ. ಆ ಮೂರರಲ್ಲಿಯೂ ಸಮವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.