ಮಂಗಳವಾರ, ಮಾರ್ಚ್ 2, 2021
30 °C

ರಜನಿ 165ನೇ ಚಿತ್ರಕ್ಕೆ ₹65 ಕೋಟಿ ಸಂಭಾವನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜನಿ 165ನೇ ಚಿತ್ರಕ್ಕೆ ₹65 ಕೋಟಿ ಸಂಭಾವನೆ?

ಸೂಪರ್‌ಸ್ಟಾರ್ ರಜನಿಕಾಂತ್‌ ನಟನೆಯ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತವೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ಬಿಡುಗಡೆಗೂ ಮುನ್ನವೇ ಅವರ ಚಿತ್ರಗಳ ವ್ಯಾಪಾರ ಜೋರಾಗಿರುತ್ತದೆ. ಬಿಡುಗಡೆಗೆ ಸಿದ್ಧವಾಗಿರುವ ರೋಬೊ 2.0 ಚಿತ್ರದ ಸ್ಯಾಟಲೈಟ್‌ ಹಕ್ಕುಗಳೂ ಕೋಟ್ಯಂತರ ರೂಪಾಯಿಗೆ ಮಾರಾಟವಾಗಿವೆ.

ಮತ್ತೊಂದೆಡೆ ‘ಕಾಲಾ’ ಚಿತ್ರದ ಮೇಲಿನ ನಿರೀಕ್ಷೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 1.2ಕೋಟಿ ನೆಟ್‌ ಬಳಕೆದಾರರು ವೀಕ್ಷಿಸಿ ದಾಖಲೆ ನಿರ್ಮಿಸಿದೆ.

ಈ ಎರಡೂ ಚಿತ್ರಗಳ ಚಿತ್ರೀಕರಣ ಮುಕ್ತಾಯಗೊಂಡಿರುವುದರಿಂದ, ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸಲು ರಜನಿಕಾಂತ್ ಸಿದ್ಧತೆ ನಡೆಸುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಸನ್‌ಪಿಕ್ಚರ್ಸ್‌, ಈ ಚಿತ್ರವನ್ನು ನಿರ್ಮಿಸುತ್ತಿದೆ. ಸೇತುಪತಿ ಖಳನಾಯಕನಾಗಿ ರಜನಿ ಎದುರು ಅಬ್ಬರಿಸಲು ಸಜ್ಜಾಗಿದ್ದಾರೆ.

ಇದು ರಜನಿ ವೃತ್ತಿ ಬದುಕಿನ 165ನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ಅವರು ಸುಮಾರು ₹65 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಕಾಲಿವುಡ್‌ ಅಂಗಳದಲ್ಲಿ ಪ್ರಚಾರ ನಡೆಯುತ್ತಿದೆ. ಈ ಒಂದು ಚಿತ್ರಕ್ಕಾಗಿಯೇ ರಜನಿ 40 ದಿನಗಳ ಕಾಲ್‌ಶೀಟ್‌ ಮೀಸಲಿಟ್ಟಿದ್ದಾರೆ. ಅನಿರುದ್ಧ ರವಿಚಂದರ್ ಈ ಚಿತ್ರದ ಹಾಡುಗಳನ್ನು ಸಂಯೋಜನೆ ಮಾಡುತ್ತಿದ್ದಾರೆ.

ಪ‍್ರಸ್ತುತ ವೈದ್ಯಕೀಯ ಪರೀಕ್ಷೆಗಳಿಗಾಗಿ ರಜನಿ ಅಮೆರಿಕಕ್ಕೆ ತೆರಳಿದ್ದು, ಸದ್ಯದಲ್ಲೇ ಚೆನ್ನೈನಲ್ಲಿ ನಡೆಯಲಿರುವ ‘ಕಾಲಾ’ ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಪಾ ರಂಜಿತ್ ನಿರ್ದೇಶನದ ಈ ಚಿತ್ರ ಜೂನ್‌ ಏಳರಂದು ತೆರೆಕಾಣಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.