ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಕ್ಕೇ ಸಿಗದ ಎಂಎಲ್ಎ!

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ತನ್ನ ವಿಚಿತ್ರ ನಡವಳಿಕೆಯಿಂದಲೇ ಸುದ್ದಿಯಾಗಿ, ಬಿಗ್‌ಬಾಸ್‌ ರಿಯಾಲಿಟಿ ಷೋನಲ್ಲಿ ಗೆದ್ದಿದ್ದ ಪ್ರಥಮ್‌, ಸಿನಿಮಾ ಮೂಲಕ ‘ಎಂಎಲ್‌ಎ’ ಆಗಹೊರಟಿದ್ದು ಹಳೆ ಸುದ್ದಿ. ಎಂಎಲ್‌ಎ ಅಂದರೆ ಜನಪ್ರತಿನಿಧಿ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ನಡೆದ ಈ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಇದಕ್ಕಿರುವ ಇನ್ನೊಂದು ಅರ್ಥವನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಮೌರ್ಯ.

ಅವರ ಪ್ರಕಾರ ಎಂಎಲ್‌ಎ ಇದು ಪೂರ್ತಿರೂಪ ‘ಮದರ್ ಪ್ರಾಮಿಸ್‌ ಲೆಕ್ಕಕ್ಕೇ ಸಿಗ್ದೋನು’ ಎಂದು! ಇದೇನು ಪ್ರಥಮ್‌ನ ನೈಜಗುಣಗಳಿಗೂ ಅನ್ವಯವಾಗುವಂತಿದೆಯಲ್ಲಾ ಎಂದರೆ ಅದಕ್ಕೂ ಹೌದು ಎಂದು ತಲೆಯಾಡಿಸುತ್ತಾರೆ ನಿರ್ದೇಶಕರು. ‘ವಾಸ್ತವವಾಗಿ ನೀವು ಪ್ರಥಮ್‌ನನ್ನು ಹೇಗೆ ನೋಡುತ್ತೀರೋ, ಈ ಚಿತ್ರದಲ್ಲಿಯೂ ಹಾಗೆಯೇ ನೋಡುತ್ತೀರಿ. ನಿಜಜೀವನದ ಪ್ರಥಮ್‌ನೇ ತೆರೆಯ ಮೇಲೂ ಕಾಣಿಸಿಕೊಳ್ಳುತ್ತಾರೆ’ ಎಂದು ಅವರು ಹೇಳುತ್ತಾರೆ.

ಧ್ವನಿಸುರಳಿ ಬಿಡುಗಡೆ ಮಾಡಿದ್ದು ದರ್ಶನ್‌. ಈ ಕಾರ್ಯಕ್ರಮದಲ್ಲಿಯೂ ತಮ್ಮ ನಾಟಕೀಯ ಗುಣಗಳಿಂದಲೇ ಪ್ರಥಮ್‌ ಮೇಳೈಸುತ್ತಿದ್ದರು. ‘ಚಾಲೆಂಜಿಂಗ್ ಸ್ಟಾರ್‌ ಜತೆ ಚಾಲಾಕಿ ಸ್ಟಾರ್‌’ ಎಂದು ತಮಗೆ ತಾವೇ ಬಿರುದುಗಳನ್ನೂ ಕೊಟ್ಟುಕೊಂಡರು. ಕಾರ್ಯಕ್ರಮದುದ್ದಕ್ಕೂ ಬೇರೆಯವರ ಮಾತಿನ ನಡುವೆ ಮೂಗು ತೂರಿಸುವ ಕೆಲಸ ಮಾಡುತ್ತಲೇ ಇದ್ದರು. ‘ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಪ್ರಥಮ್ ಎನ್ನುವ ಹುಡುಗನ ಬದುಕಿನಲ್ಲಾಗುವ ಘಟನೆಗಳೇ ಕಥಾವಸ್ತು. ಎಲ್ಲದಕ್ಕೂ ಕೊಂಚ ಅತಿರೇಕದಲ್ಲಿಯೇ ಪ್ರತಿಕ್ರಿಯಿಸುವ ಹುಡುಗ ಅವನು. ಇದನ್ನು ಹಾಸ್ಯರೂಪದಲ್ಲಿಯೇ ಹೇಳುತ್ತ ಹೋಗಿದ್ದೇವೆ’ ಎಂಬುದು ನಿರ್ದೇಶಕರ ಅಂಬೋಣ.

ಮೈಸೂರು, ಬೆಂಗಳೂರು, ಚಾಮರಾಜನಗರ, ಉಡುಪಿ, ಶೃಂಗೇರಿಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚುನಾವಣೆಯ ಸಂದರ್ಭದಲ್ಲಿಯೇ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಅವರಿಗಿತ್ತು. ಆದರೆ ಈ ಚಿತ್ರದಲ್ಲಿ ಎಚ್‌.ಎಂ.ರೇವಣ್ಣ ಮುಖ್ಯಮಂತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈ ಬಾರಿ ಚುನಾವಣೆಗೆ ನಿಂತಿರುವುದರಿಂದ ನೀತಿಸಂಹಿತೆ ಉಲ್ಲಂಘನೆ ಆಗುತ್ತದೆ ಎಂಬ ಕಾರಣಕ್ಕೆ ಮೇ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

’ಈ ಸಿನಿಮಾದ ಮೂಲಕ ನನ್ನ ನಾಲೆಡ್ಜ್‌ ಸಾಕಷ್ಟು ಬೆಳೆದಿದೆ’ ಎಂದರು ನಾಯಕಿ ಸೋನಲ್ ಮೊಂತೆರೊ. ಅವರು ಹಾಡುಗಳನ್ನು ವಿಶೇಷವಾಗಿ ಸ್ಮರಿಸಿಕೊಂಡರು. ವಿಕ್ರಮ್‌ ಸುಬ್ರಹ್ಮಣ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ ರೆಡ್ಡಿ ಹಣ ಹೂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT