ಮಂಗಳವಾರ, ಮಾರ್ಚ್ 9, 2021
23 °C

ನೀನು ಇನ್ನು ಸದಾ ನನ್ನ ಗುಲಾಬಿ

ಡಿ.ಎಂ. ಘನಶ್ಯಾಮ Updated:

ಅಕ್ಷರ ಗಾತ್ರ : | |

ನೀನು ಇನ್ನು ಸದಾ ನನ್ನ ಗುಲಾಬಿ

‘ನೋಡಪ್ಪಾ ಗಣೇಶ, ಇದೇ ನಂಬರ್‌ನಿಂದ ಕಾಲ್ ಬರಲಿ ಎಂದು ಒಂದು ಕಾಲಕ್ಕೆ ರಾತ್ರಿಯಿಡೀ ನಿದ್ದೆಗೆಟ್ಟು ಕಾಯ್ತಿದ್ದೆ. ಇದೇ ನಂಬರ್‌ ಜೊತೆ ಮಾತಾಡ್ತಾಮಾತಾಡ್ತಾ ಕನಸು ತಬ್ಬಿಕೊಂಡು ಮಲಗ್ತಿದ್ದೆ, ಆಮೇಲಾಮೇಲೆ ಈ ನಂಬರ್‌ನಿಂದ ಫೋನ್ ಬಂದ್ರೆ ಸಾಕು, ‘ಜೀವ ತಿಂತಾಳೆ’ ಅಂತ ಕಟ್ ಮಾಡ್ತಿದ್ದೆ. ಈಗ ಬೇಡಿಕೊಳ್ತೀನಿ ಸ್ವಾಮಿ, ಇನ್ನೊಂದ್ ಸಲ– ಒಂದೇ ಒಂದು ಸಲ ಈ ನಂಬರ್‌ನಿಂದ ಕಾಲ್ ಬರಲಿ. ನೀನು ಮನಸು ಮಾಡಿದ್ರೆ ಏನಾದ್ರೂ ಆಗುತ್ತೆ. ಏನಾದ್ರೂ ಮಾಡು ಪ್ಲೀಸ್‌...’

ಏಳಂತಸ್ತಿನ ಆಸ್ಪತ್ರೆ ಕಟ್ಟಡಕ್ಕೆ ದೊಡ್ಡ ಮುಂಬಾಗಿಲು. ರಿಸೆಪ್ಷನ್ ಎದುರು ಪುಟ್ಟ ಗಣಪನ ಡೊಳ್ಳೊಟ್ಟೆಯ ಮೇಲೆ ಚಿಣ್ಣಾಟವಾಡುತ್ತಿದ್ದ ಎಳೇ ಬಿಸಿಲುಕೊಲು. ಕೈಲಿ ಹಿಡಿದ ಫೋನ್ ಸ್ಕ್ರೀನ್ ನೋಡುತ್ತಾ ಅಳುತ್ತಿದ್ದ ರಾಜೀವನ ಹೆಗಲನ್ನು ಒಂದು ಕೈ ಸವರಿತು. ಕಣ್ಣೊರೆಸಿಕೊಂಡು ಅತ್ತ ತಿರುಗಿದವನಿಗೆ ಕಂಡಿದ್ದು ಐಸಿಯು ವೈದ್ಯರ ತಂಡ.

‘ನಥಿಂಗ್ ಟು ವರಿ ಬ್ರದರ್, ಶಿ ವಿಲ್ ಬಿ ಆಲ್ ರೈಟ್, ಪ್ರಜ್ಞೆ ಬಂದಿದೆ, ನರ್ಸ್‌ಗೆ ಹೇಳಿದೀನಿ, ಒಳಗೆ ಬಿಡ್ತಾರೆ, ನೀವು ನೋಡಬಹುದು’.

ರಾಕಿಂಗ್‌ಸ್ಟಾರ್ ಯಶ್ ಸ್ಟೈಲ್‌ನಲ್ಲಿ ಕೂದಲನ್ನು ಸ್ಪೈಕ್ ಮಾಡಿಕೊಂಡಿದ್ದ ಆ ಹುಡುಗನಿಗೆ ಡಾಕ್ಟರ್ ಎನಿಸಿಕೊಳ್ಳುವ ಯಾವ ಲಕ್ಷಣಗಳೂ ಇರಲಿಲ್ಲ. ಕೆಂಪು ಟೀಶರ್ಟ್ ಕಾಣಿಸುವಂತಿದ್ದ ಬಿಳಿಕೋಟ್, ಮುಂಗೈ ಮೇಲೆ ಆಟವಾಡುತ್ತಿದ್ದ ಸ್ಕೆತೊಸ್ಕೋಪ್ ಮಾತ್ರ, ‘ನನ್ನ ಮಾತುಗಳನ್ನು ನಂಬಬೇಕು’ ಎನ್ನುವಂತೆ ಒತ್ತಾಯಿಸುತ್ತಿದ್ದವು.

‘ನಿಮ್ಮ ವೈಫ್‌ನ ಎಷ್ಟೊಂದು ಲವ್ ಮಾಡ್ತೀರಿ’ ಅವಿವಾಹಿತ ವೈದ್ಯ ಕೆಣಕಿದ್ದ. ‘ಅದೂ ನನಗೂ ಈಗ ಗೊತ್ತಾಗ್ತಿದೆ ನೋಡ್ರಿ ಸರ್’ ವಿವಾಹಿತ ಆ ನೋವಿನಲ್ಲೂ ತುಸು ನಾಚಿದ್ದ.

***

ಆರ್.ಟಿ.ನಗರ ಡಿಪೊ ಹತ್ತಿರ ಮೊಬೈಲ್ ಕರೆನ್ಸಿ ಹಾಕುತ್ತಾ, ಪೇಪರ್ ಮಾರುತ್ತಾ ಜೀವನ ಮಾಡುತ್ತಿದ್ದವನಿಗೆ ಕರೆನ್ಸಿ ಹಾಕಿಸಿಕೊಳ್ಳಲೆಂದು ಬರುತ್ತಿದ್ದ ಇಂದುಮತಿ ಮನಸ್ಸು ತುಂಬಿಕೊಂಡಿದ್ದಳು. ಕರೆನ್ಸಿ ಹಾಕೋರು ಫೋನ್ ನಂಬರ್‌ಗೆ ಪರದಾಡಬೇಕಾ? ‘ನಿಮಗೆ ಫೋನ್ ಮಾಡಬಹುದಾ?’ ಒಂದು ಸಲ ಧೈರ್ಯ ಮಾಡಿ ವಾಟ್ಸ್ಯಾಪ್ ರವಾನಿಸಿದ್ದ. ‘ಯಾರು ನೀನು?’ ಮಾರುತ್ತರ ಬಂದಾಗ ಹಿರಿಹಿರಿ ಹಿಗ್ಗಿ ‘ಡಿಪಿ ನೋಡಿ’ ಅಂತ ರಿಪ್ಲೈ ಮಾಡಿದ. ಆ ಕಡೆಯಿಂದ ಬಂದದ್ದು ನಗುಹೊತ್ತ ಸ್ಮೈಲಿ.

ಅಖಿಲಾಂಡಕೋಟಿ ಬ್ರಹ್ಮಾಂಡದ ಎಲ್ಲ ಹುಡುಗರಂತೆ ಅವನೂ ಅನುನಯಿಸಿ, ಅನುಸರಿಸಿ, ಪರಿತಪಿಸಿ, ತಿರುಗಾಡಿಸಿ ಅಂತೂಇಂತೂ ಒಂದು ವ್ಯಾಲಂಟೈನ್ ಡೇಗೆ ಅವಳೆದುರು ಮಂಡಿಯೂರಿ ಕೆಂಗುಲಾಬಿ ಮುಂದಿಟ್ಟ. ‘ಹುಚ್ವು ನನ ಮಗನೆ ಇದು ಹೇಳೋಕೆ ಇಷ್ಟು ಸತಾಯಿಸಿದ್ಯಾ’ ಎನ್ನುತ್ತಾ ಅವಳು ಕಣ್ಣುಕೊಂಕಿಸಿ, ಗುಲಾಬಿ ಮುಡಿಸಿಕೊಂಡಳು. ಆಮೇಲೇನಾಯಿತು ಎನ್ನುವುದು ಎಲ್ಲರಿಗೂ ತಿಳಿಯುವ ಕಥೆ.

***

ಬೈಕುಗಳಿಗೆ ಸ್ಪೀಡೋಮೀಟರ್ ಸರಬರಾಜು ಮಾಡುವ ಕಾರ್ಖಾನೆಯಲ್ಲಿ ಅವನು ಕ್ವಾಲಿಟಿ ಕಂಟ್ರೋಲರ್. ಕೆಲಸ ಸಿಕ್ಕ ಆರು ತಿಂಗಳಿಗೆ ಮದುವೆ. ಬಡತನದ ಅವಮಾನಗಳನ್ನೆಲ್ಲಾ ಒಂದೇ ಸಲಕ್ಕೆ ದಾಟುವ ಕೆಚ್ಚಿನಿಂದ ದುಡಿಮೆ ಆರಂಭಿಸಿದ. ಎರಡೇ ವರ್ಷಗಳಿಗೆ ಪ್ರಮೋಷನ್ ಬಂತು. ಕೆಲಸದ ಕಿಚ್ಚು ಹೆಚ್ಚಾಯ್ತು. ಮನೆಯಲ್ಲೀಗ ಅವಳು ಒಬ್ಬಂಟಿ. ಹೊತ್ತು ಮೂಡುವ ಹೊತ್ತಿಗೆ ಮನೆಯಿಂದ ಹೊರಗೆ ಹೋಗುತ್ತಿದ್ದವ ಹೊತ್ತಿಳಿದು ತಾಸಾದರೂ ಮನೆ ಸೇರುತ್ತಿರಲಿಲ್ಲ. ಊಟ ಮಾಡುವಾಗಲೂ ತೂಕಡಿಕೆ, ಬಿಟ್ರೆ ಹಾಳಾದ ನ್ಯೂಸು. ಇಂದು ಮಾತಾಡಿದರೂ ರೇಗುತ್ತಿದ್ದ. ‘ನಿನಗಾಗಿ ದುಡೀತಾ ಇದೀನಿ. ನಾನು ಅನುಭವಿಸಿದ ಕಷ್ಟ ನಮ್ಮ ಮಕ್ಕಳಿಗೆ ಬರಬಾರದು’ ಅಂತ ಹಾರಾಡ್ತಿದ್ದ. ಅವಳ ಮಾತಿಗೆ ಕಿವಿಯಾಗುತ್ತಿದ್ದ ಹುಡುಗ ಸ್ಪೀಡೋಮೀಟರ್‌ನ ಮುಳ್ಳುಗಳಲ್ಲಿ ಕಳೆದುಹೋಗಿದ್ದ.

***

ಅದೊಂದು ದಿನ ಇವನು ಕೆಲಸಕ್ಕೆ ಹೋದ ನಂತರ ಇಂದುಮತಿ ತರಕಾರಿ ತರಲೆಂದು ಗಂಗಾನಗರಕ್ಕೆ ಹೋಗಿದ್ದಳು. ಸುಮಾರು 80 ಕಿ.ಮೀ. ವೇಗದಲ್ಲಿದ್ದ ಯಮಹಾ ಗಾಡಿಯನ್ನು ವ್ಹೀಲಿಂಗ್ ಮಾಡುತ್ತಾ ಬಂದ ಮೀಸೆ ಚಿಗುರದ ಹುಡುಗರು ನೇರವಾಗಿ ಇವಳಿಗೆ ಗುದ್ದಿಸಿದ್ದರು. ಕೆಳಗೆ ಬಿದ್ದವಳ ತಲೆಯಿಂದ ರಕ್ತ ಧಾರಾಕಾರ. ಚಪ್ಪಲಿ ಅಂಗಡಿ ಹುಡುಗರು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದರು. ಅವಳದೇ ಫೋನ್ ಕಾಲ್ ರೆಕಾರ್ಡ್ ನೋಡಿ, ‘ಜೀವ’ ಅಂತ ಸೇವ್ ಮಾಡಿಕೊಂಡಿದ್ದ ನಂಬರ್‌ಗೆ ಫೋನ್ ಮಾಡಿದರು. ಉಹುಂ ಕಾಲ್ ರಿಸೀವ್ ಆಗಲಿಲ್ಲ.

ರಾತ್ರಿ ಹಸಿದ ಹೊಟ್ಟೆ ಹೊತ್ತು ಮನೆಗೆ ಬಂದ ರಾಜೀವನಿಗೆ ಬೀಗ ನೋಡಿದ ತಕ್ಷಣ ಸಿಟ್ಟು ನೆತ್ತಿಗೇರಿತ್ತು. ‘ಎಲ್ಲಿ ಹಾಳಾಗಿ ಹೋದಳೋ’ ಎಂದುಕೊಂಡು ‘ತಲೆನೋವು’ ಎಂದು ಸೇವ್ ಮಾಡಿಕೊಂಡಿದ್ದ ನಂಬರ್‌ಗೆ ಕಾಲ್ ಮಾಡಿದ. ಅತ್ತಲಿಂದ ಫೋನ್ ತೆಗೆದವರು ಹಲೋ ಕೂಡಾ ಅನ್ನದೇ, ‘ನೀವೇನು ಮನುಷ್ರಾ, ದೆವ್ವಾನಾ’ ಅಂತ ಬೈಯಲು ಶುರು ಇಟ್ಟುಕೊಂಡರು. ಬೆಳಿಗ್ಗೆಯಿಂದ ‘ತಲೆನೋವು’ ಕಾಲ್ ಅಷ್ಟು ಸಲ ಬಂದಿದ್ದು ಯಾಕೆ ಅಂತ ಈಗ ಅರ್ಥವಾಗಿತ್ತು. ಆಸ್ಪತ್ರೆಯತ್ತ ಓಡಿದ.

‘ಐಸಿಯುಲಿ ಇದಾರೆ, ಇನ್ನೂ ಪ್ರಜ್ಞೆ ಬಂದಿಲ್ಲ. ಗಂಡನೇನ್ರೀ ನೀವು? ಇಷ್ಟೊತ್ತಿಗೇನ್ರೀ ಬರೋದು? ಎಮರ್ಜೆನ್ಸಿ ಆಪರೇಷನ್ ಮಾಡಬೇಕಿತ್ತು. ಕನ್ಸೆಂಟ್ ತಗೊಳೋಣ ಅಂತ ಎಷ್ಟು ಸಲ ಕಾಲ್ ಮಾಡಿದ್ರೂ ನೀವು ಫೋನ್ ತೆಗೀಲಿಲ್ಲ. ಏನಾಗುತ್ತೋ ಆಗ್ಲಿ, ಆಮೇಲೆ ನೋಡಿಕೊಳ್ಳೋಣ ಅಂತ ಡಾಕ್ಟರ್ ರಿಸ್ಕ್ ತಗೊಂಡು ಆಪರೇಷನ್ ಮಾಡಿಬಿಟ್ರು. ಏನ್ ಗಂಡಸ್ರೋ, ನಮ್ಮ ಹಣೆಬರಹ’ ನರ್ಸಮ್ಮಗಳು ನಾನ್ ಸ್ಟಾಪ್ ಬೈತಾ ಇದ್ರು. ಬಹುಶಃ ಅವರಿಗೂ ಅವರ ಗಂಡನ ನೆನಪಾಗಿರಬೇಕು.

***

ಐಸಿಯು ಎದುರಿನ ಪ್ಲಾಸ್ಟಿಕ್ ಚೇರಿನಲ್ಲಿ ಕುಳಿತವನಿಗೆ ರಾತ್ರಿ ಹೇಗೆ ಕಳೆಯಿತೋ? ಬೆಳಿಗ್ಗೆ ಮುಖ ತೊಳೆದವನ ತಲೆ ಧಿಂ ಅನ್ನುತ್ತಿತ್ತು. ಫ್ಯಾಕ್ಟರಿ ಕ್ಯಾಂಟೀನಿನಲ್ಲಿ ಸಂಜೆ ತಿಂಡಿ ಕೊಡ್ತಾರೆ. ಆದರೆ ಇವನು ಅರ್ಧಗಂಟೆ ಹಾಳಾಗುತ್ತೆ ಅಂತ ತಿನ್ನುತ್ತಲೇ ಇರಲಿಲ್ಲ.

‘ರೀ, ಏನಾದ್ರೂ ತಿಂದ್ರಾ’ ಅಂತ ಕೇಳೋದ್ಕೆ ಇಂದುಮತಿ ಪ್ರತಿ ಸಂಜೆ ಫೋನ್ ಮಾಡ್ತಿದ್ಳು. ಈಗ ನೆನಪಾಗಿ ನಗು ಬಂತು.‌ ಕಣ್ಣು ಮಂಜಾಯಿತು.

‘ರೀ ರಾಜೀವ್, ಬನ್ನಿ ಇಲ್ಲಿ’ ನರ್ಸ್ ಕರೆದಿದ್ದರು. ‘ಏನು ಸಿಸ್ಟರ್’ ಅಂತ ಓಡಿದವನಿಗೆ ‘ಡಾಕ್ಟರ್ ಬಂದಿದಾರೆ. ಈ ಔಷಧಿಗಳನ್ನು ತರಬೇಕಂತೆ. ಆಮೇಲೆ ಇನ್ನೊಂದು ಸಲ ಬಂದು ನೋಡ್ತಾರಂತೆ. ದುಡ್ಡು ತಂದಿಲ್ಲ ಅಂದ್ರೆ ಕ್ರೆಡಿಟ್ ಬರೆಸಬಹುದು ಅಂದಿದಾರೆ’ ಅನ್ನುತ್ತಾ ನರ್ಸಮ್ಮ ಒಂದು ದೊಡ್ಡ ಚೀಟಿ ಕೊಟ್ಟರು. ‘ಈ ಕಾಲದಲ್ಲೂ ಇಂಥ ಡಾಕ್ಟರ್ ಇರ್ತಾರಾ?’ ಅಂದುಕೊಂಡು ಮೆಟ್ಟಿಲು ಇಳಿದ ರಾಜೀವ. ಔಷಧಿಗಳನ್ನು ಹಿಡಿದು ಬರುವಾಗಲೇ ರಾಜೀವನಿಗೆ ಗಣೇಶನ ಪ್ರತಿಮೆ ಕಂಡಿದ್ದು. ಸ್ಪೈಕ್ ಹೇರ್ ಸ್ಟೈಲ್ ಡಾಕ್ಟರ್ ಅವನ ಹೆಗಲ ಮೇಲೆ ಕೈ ಇಟ್ಟಿದ್ದು.

***

ನರ್ಸಮ್ಮನ ಕೈಗೆ ಔಷಧ ಚೀಲ ಕೊಟ್ಟವನು ಒಳಗೆ ಹೋಗಲು ಮುಂದಾದ. ‘ರೀ ಚಪ್ಪಲಿ ಬಿಚ್ರೀ, ಮೊಬೈಲ್ ಡೆಪಾಸಿಟ್ ಮಾಡ್ರೀ’ ನರ್ಸ್ ಕಿರುಚಿದ್ದರು.

ಮೊಬೈಲ್ ಆಫ್ ಮಾಡುವ ಮೊದಲು ‘ತಲೆನೋವು’ ಎಂದು ಸೇವ್ ಮಾಡಿಕೊಂಡಿದ್ದ ನಂಬರ್ ಅನ್ನು ‘ಗುಲಾಬಿ’ ಎಂದು ಬದಲಿಸಿದ. ‘ನನಗೆ ರಜೆ ಬೇಕು. ಯಾವ ಎಮರ್ಜೆನ್ಸಿ ಇದ್ರೂ ಅದು ನಿಮ್ಮ ಹಣೆಬರಹ. ನಾನು ಫೋನ್ ಆಫ್ ಮಾಡಿರ್ತೀನಿ’ ಅಂತ ಮ್ಯಾನೇಜರ್‌ಗೆ ಮೆಸೇಜ್ ಮಾಡಿದ.

ಅಲ್ಲಿದ್ದ ನರ್ಸುಗಳು ಇನ್ನೂ ಇವನತ್ತ ನೋಡಿ ಬೈದುಕೊಳ್ಳುತ್ತಲೇ ಇದ್ದರು. ಆದರೆ ರಾಜೀವನ ಕಣ್ಣಲ್ಲಿ ಇಂದುಮತಿಯ ಬೆಳಕಿತ್ತು. ಆಸ್ಪತ್ರೆಯ ಫಿನಾಯಿಲ್ ವಾಸನೆಯಲ್ಲಿ ಅವನ ಮನಸು ನೊಂದಿತ್ತು, ಮಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.