ಅರರೆ... ಟೆರೇರಿಯಂ ಗಾರ್ಡನ್‌!

7

ಅರರೆ... ಟೆರೇರಿಯಂ ಗಾರ್ಡನ್‌!

Published:
Updated:
ಅರರೆ... ಟೆರೇರಿಯಂ ಗಾರ್ಡನ್‌!

ಆ ಹಾಲ್‌ನಲ್ಲಿ ಮಹಿಳೆಯರ ಗದ್ದಲವೇ ತುಂಬಿತ್ತು. ವೃತ್ತಾಕಾರದ, ಅಗಲ ಬಾಯಿಯ ಗಾಜಿನ ಕಂಟೇನರ್‌ಗಳಲ್ಲಿ ಹಂತಹಂತವಾಗಿ ಮರಳು, ಮಣ್ಣು ತುಂಬಿಸಿ, ಅದರಲ್ಲಿ ಸಣ್ಣ ಗಿಡಗಳನ್ನು ನೆಟ್ಟು, ಸ್ವಲ್ಪ ಸ್ವಲ್ಪ ನೀರು ಚಿಮುಕಿಸುತ್ತಿದ್ದರು. ಗಿಡ ನೆಟ್ಟಿದ್ದು ಸರಿಯಾಗಿದೆ ಎಂದು ಖಾತರಿಪಡಿಸಿಕೊಂಡು ಬಣ್ಣದ ಕಲ್ಲುಗಳಿಂದ ಅದರ ಬುಡವನ್ನು ಅಲಂಕರಿಸುವುದರಲ್ಲಿ ನಿರತರಾಗಿದ್ದರು.

ಈಚೆಗೆ ರಿಲಯನ್ಸ್ ರಿಟೇಲ್ಸ್‌ನ ಜಯನಗರದ ಪ್ರಾಜೆಕ್ಟ್ ಈವ್ ಮಳಿಗೆಯಲ್ಲಿ ಮಹಿಳೆಯರಿಗಾಗಿ ಎಕ್ಸ್‌ಕ್ಲೂಸಿವ್‌ ಟೆರೇರಿಯಂ ಕಾರ್ಯಾಗಾರ ‘ದಿ ಶಿ ಸೆಶನ್ಸ್’ನಲ್ಲಿ ಕಂಡುಬಂದ ನೋಟಗಳಿವು.

ಬೆಂಗಳೂರಿನಂತಹ ನಗರದಲ್ಲಿ ವೇಗದ ಜೀವನ. ಹಾಗೇ ಮನೆಯೊಳಗೆ ಸ್ಥಳಾವಕಾಶವೂ ಕಡಿಮೆ. ಮನೆ ಒಳಾಂಗಣ ಅಲಂಕಾರ, ಹೂತೋಟದ ಬಗ್ಗೆ ಆಸಕ್ತಿ ಇದ್ದರೂ ಕಾಂಕ್ರಿಟ್‌ ನಗರದಲ್ಲಿ ಸ್ಥಳದ ಅಭಾವ. ಇಂತಹವರಿಗಾಗಿ ಟೆರೆರಿಯಂ ಗಾರ್ಡನ್‌ ಉತ್ತಮ ಆಯ್ಕೆ. ಮನೆಯ ಒಳಗಡೆ ಗಾಜಿನ ಕಂಟೇನರ್‌ಗಳಲ್ಲಿ ಅಲಂಕಾರಿಕ ಗಿಡ ಬೆಳೆಯಬಹುದು.

ಈ ಟೆರೇರಿಯಂ ಗಾರ್ಡನ್‌ ಪರಿಕಲ್ಪನೆ ಬೆಂಗಳೂರಿಗೆ ಹೊಸದೇನಲ್ಲ. ಟೆರೇರಿಯಂ ಎಂಬುದು ಒಂದು ಆವರಣ ಹೊಂದಿರುವ, ಒಳಾಂಗಣ ಗಾರ್ಡನ್. ಗಾಜಿನ ಪಾತ್ರೆಗಳಲ್ಲಿ ಮಣ್ಣು ಹಾಗೂ ಮರಳು ತುಂಬಿ ಅದರಲ್ಲಿ ಸಕ್ಯುಲಂಟ್‌, ಕಳ್ಳಿ ಗಿಡಗಳು ಅಥವಾ ಆಲಂಕಾರಿಕ ಗಿಡಗಳನ್ನು ಬೆಳೆಸಬಹುದು.

ಈ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದು ಅಶ್ವಿನಿ ಹಳೆಮನೆ. ಟ್ರೆಮೆಂಡಸ್‌ ಕಂಪನಿಯಲ್ಲಿ ಇನೊವೇಟಿವ್‌ ಡಿಸೈನರ್‌ ಆಗಿರುವ ಅವರು ಕಳೆದ 2 ವರ್ಷಗಳಿಂದ ಟೆರೆರಿಯಂ ಗಾರ್ಡನ್‌ ಮಾಡುತ್ತಿದ್ದಾರೆ. ಸುಮಾರು 3–4 ಗಂಟೆ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಹಿಳೆಯರು ಆಸಕ್ತಿಯಿಂದ ತಾವೇ ಸ್ವತಃ ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹಾಕಿ, ಅವುಗಳನ್ನು ಬೆಳೆಸುವ ಬಗ್ಗೆ ತಿಳಿದುಕೊಳ್ಳುತ್ತಿದ್ದರು.

‘ಈ ಗಿಡಗಳು ಯಥೇಚ್ಛವಾಗಿ ಆಮ್ಲಜನಕವನ್ನು ಹೊರ ಹಾಕುತ್ತವೆ. ಈ ಗಿಡಕ್ಕೆ ಹೆಚ್ಚು ಆರೈಕೆಯೂ ಅಗತ್ಯವಿಲ್ಲ. ಎರಡು– ಮೂರು ದಿನಗಳಿಗೊಮ್ಮೆ ನೀರು ಹಾಕಿದರೆ ಸಾಕು. ಇದರಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ಎಂದು ಮಣ್ಣನ್ನು ನೋಡಿದಾಗ ಗೊತ್ತಾಗುತ್ತದೆ. ಆಗ ನೀರು ಚಿಮುಕಿಸಿದರೆ ಆಯಿತು’ ಎಂದು ಗಿಡದ ಆರೈಕೆ ಬಗ್ಗೆ ಹೇಳುತ್ತಾರೆ ಅಶ್ವಿನಿ.

ಇದನ್ನು ವಿವಿಧ ವಿನ್ಯಾಸದ ಗಾಜುಗಳಲ್ಲಿ ಬೆಳೆಯಬಹುದು. ಇದು ‘ಮಿನಿ ಗಾಡರ್ನ್‌ ಇನ್‌ ಗ್ಲಾಸ್‌ ಕಂಟೇನರ್‌’ ಎಂದು ಟೆರೆರಿಯಂ ಬಗ್ಗೆ ಒಂದೇ ವಾಕ್ಯದಲ್ಲೇ ವಿವರಿಸುತ್ತಾರೆ ಅಶ್ವಿನಿ.

‘ಗ್ಲಾಸ್‌ ಕಂಟೇನರ್‌ ಕೆಳಭಾಗದಲ್ಲಿ ಮರಳು, ಅದರ ಮೇಲೆ ಮಣ್ಣು (ಗೊಬ್ಬರ, ಕೆಂಪು ಮಣ್ಣು ಮಿಶ್ರಿತ), ಅದರ ಮೇಲೆ ಗಿಡ ನೆಡಬೇಕು. ನಂತರ ಅದರ ಮೇಲೆ ಬಣ್ಣದ ಕಲ್ಲುಗಳಿಂದ ಅಲಂಕಾರ ಮಾಡಬೇಕು. ಈ ಗಿಡಗಳನ್ನು ಸೂರ್ಯನ ಬೆಳಕು ನೇರ ಬೀಳುವ ಜಾಗದಲ್ಲಿ ಇಡಬಾರದು. ಆದರೆ ಸೂರ್ಯನ ಬೆಳಕು ಇದಕ್ಕೆ ಬೇಕಾಗುತ್ತೆ. ಮನೆಯೊಳಗೆ ಬೆಳಕು ಬರುವಂತಿರಬೇಕು’ ಎಂದು ಗಿಡ ನೆಡುವ ಮಾಹಿತಿ ನೀಡುತ್ತಾರೆ ಅವರು.

‘ಟೆರರಿಯಂ ಗಾರ್ಡನ್‌ ಅನ್ನು ಆಸಕ್ತಿ ಇದ್ದರೆ ಯಾರೂ ಬೇಕಾದರೂ ಮಾಡಬಹುದು. ಗಿಡಗಳ ಬೆಳೆಸುವ ಬಗ್ಗೆ ಸ್ವಲ್ಪ ಮಾಹಿತಿ ಇರಬೇಕು. ಅದರ ಬೆಳವಣಿಗೆ ಬಗ್ಗೆ ಗಮನ ನೀಡಲು ಸಮಯ ಇದ್ದರೆ ಸಾಕು. ಅದರ ಪಾಡಿಗೆ ಅದು ಬೆಳೆಯುತ್ತಿರುತ್ತದೆ. ಅಲಂಕಾರಿಕ ಕಳ್ಳಿ ಗಿಡಗಳು ಬೆಳೆಯುವುದು ನಿಧಾನ. ಹಾಗಾಗಿ ಟೆರರಿಯಂ ಗಾಡರ್ನ್‌ಗೆ ಈ ಗಿಡಗಳು ಸೂಕ್ತ. ಒಂದು ವರ್ಷದ ಗಿಡಗಳನ್ನು ಟ್ರಿಮ್‌ ಮಾಡಬಹುದು’ ಎನ್ನುತ್ತಾರೆ ಅಶ್ವಿನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry