‘ಹೊಂದಾಣಿಕೆ’ ರಾಜಕಾರಣದಲ್ಲಿ ಪಕ್ಷ ಗೌಣ

7

‘ಹೊಂದಾಣಿಕೆ’ ರಾಜಕಾರಣದಲ್ಲಿ ಪಕ್ಷ ಗೌಣ

Published:
Updated:
‘ಹೊಂದಾಣಿಕೆ’ ರಾಜಕಾರಣದಲ್ಲಿ ಪಕ್ಷ ಗೌಣ

ಪಾಟೀಲ– ಗೌಡರ ಜಿದ್ದಾಜಿದ್ದಿ ಅಖಾಡದಲ್ಲಿ ‘ಹೊಂದಾಣಿಕೆ ರಾಜಕಾರಣ’ದ್ದೇ ಮೇಲುಗೈ. ಹೈಕಮಾಂಡ್‌ಗಳ ಕಟ್ಟುನಿಟ್ಟಿನ ಸೂಚನೆ ನಡುವೆಯೂ, ಜಿಲ್ಲೆಯಲ್ಲಿ ಮೇಲ್ನೋಟಕ್ಕಷ್ಟೇ ಪ್ರಬಲ ಪೈಪೋಟಿಯ ಚಿತ್ರಣವಿದೆ. ಒಳಗೊಳಗೇ ‘ನಮಗೆ ನೀವು, ನಿಮಗೆ ನಾವು’ ಎಂಬ ಒಂದಂಶದ ಸೂತ್ರ ಪಾಲನೆ ಆಗುತ್ತಿದೆ.

ಮತದಾನದ ದಿನ ಸಮೀಪಿಸುತ್ತಿದ್ದಂತೆ ಇದುವರೆಗಿನ ಲೆಕ್ಕಾಚಾರಗಳೆಲ್ಲ ಬುಡಮೇಲು ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಸ್ಪರ್ಧಾ ಕಣದಲ್ಲಿ ಪಕ್ಷದ ಹೆಸರು ನೆಪ ಮಾತ್ರಕ್ಕೆ ಎಂಬಂತಾಗಿದೆ. ಜಾತಿ ಹಾಗೂ ಉಪ ಜಾತಿಯ ಅಬ್ಬರವೇ ಬಿರುಸುಗೊಂಡಿದೆ. ಆಮಿಷಗಳ ಸುರಿಮಳೆಯೂ ಲೆಕ್ಕಕ್ಕೆ ಸಿಗದಾಗಿದೆ.

ಚುನಾವಣಾ ಪ್ರಚಾರದಿಂದಾಗಿ, ಈ ಬಾರಿಯ ಬೇಸಿಗೆಯ ರಾತ್ರಿಗಳಿಗೆ ಬೇರೆ ಬಣ್ಣ ಬಂದಿದೆ. ಎಲ್ಲೆಡೆ ಆಣೆ, ಪ್ರಮಾಣದ ಚಟುವಟಿಕೆ ಹೆಚ್ಚಿದೆ. ಭಂಡಾರ, ಬೇವಿನ ಸೊಪ್ಪು, ಕಂಬಳಿ, ವಿವಿಧ ದೇವರುಗಳು ಮಾತ್ರವಲ್ಲದೆ ಗೃಹಿಣಿಯರ ಕೊರಳಲ್ಲಿನ ‘ಮಾಂಗಲ್ಯ’ದ ಮೇಲೂ ಪ್ರಮಾಣಗಳು ನಡೆದಿವೆ. ವಾಮಾಚಾರ ನಡೆಸಿದ ಬಗ್ಗೆಯೂ ಇತ್ತೀಚೆಗೆ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ಶಾಸಕ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪುತ್ರ ಡಾ. ಗೋಪಾಲ ಕಾರಜೋಳ ಅವರು ಜಿಲ್ಲೆಯ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ, ಅವಳಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ತಂದೆ– ಮಗ ಇಬ್ಬರೂ ಸ್ಪರ್ಧಿಸಿದ್ದು ಕುಟುಂಬ ರಾಜಕಾರಣದ ‘ಕುಡಿಯೂ’ ಚಿಗುರೊಡೆದಿದೆ.

ಬಂಡಾಯದ ತಳಮಳ:

ಎಂಟು ಕ್ಷೇತ್ರಗಳ ಪೈಕಿ ಆರರಲ್ಲಿ ಬಂಡಾಯದ ಬಿಸಿ ಎದುರಿಸುತ್ತಿರುವ ಬಿಜೆಪಿ, ಮೋದಿ ಜಪ ನಡೆಸಿದೆ. ಮೇ 8ರಂದು ವಿಜಯಪುರದಲ್ಲಿ ಪ್ರಧಾನಿ ಕಾರ್ಯಕ್ರಮ ನಿಗದಿಯಾಗಿದ್ದು, ಇದರ ನಂತರ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂಬ ಆಶಾಭಾವನೆ ಕಮಲ ಪಾಳಯದ ಕಾರ್ಯಕರ್ತರದ್ದು.

ವಿಜಯಪುರ ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಇಂಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರವಿಕಾಂತ ಪಾಟೀಲ, ಪಕ್ಷದ ಹಾಲಿ ಅಭ್ಯರ್ಥಿ ದಯಾಸಾಗರ ಪಾಟೀಲ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡುವ ಪ್ರಯತ್ನ ನಡೆಸಿದ್ದಾರೆ.

ಬಸವನಬಾಗೇವಾಡಿಯಲ್ಲಿ ಬಿಜೆಪಿ ಟಿಕೆಟ್‌ ವಂಚಿತ ಎಸ್‌.ಕೆ.ಬೆಳ್ಳುಬ್ಬಿ ಜೆಡಿಎಸ್‌ಗೆ ಬೆಂಬಲ ಘೋಷಿಸಿರುವುದು ಹಾಗೂ ವಿಜಯಪುರದಿಂದ ಆ ಪಕ್ಷದಿಂದಲೇ ಅಖಾಡಕ್ಕಿಳಿದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ದೇವರಹಿಪ್ಪರಗಿ, ಮುದ್ದೇಬಿಹಾಳ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳಾಗಿರುವವರು ಸಹ ಬಿಜೆಪಿಯ ಬಂಡಾಯಗಾರರೇ. ಇನ್ನು, ನಾಗಠಾಣ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿರುವುದು ಬಿಜೆಪಿಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಠ್ಠಲ ಕಟಕದೊಂಡ. ಈ ಆರು ಕ್ಷೇತ್ರಗಳಲ್ಲಿ ಬಿಜೆಪಿಯ ಶರವೇಗಕ್ಕೆ ಕಮಲ ಪಾಳಯದ ಬಂಡಾಯಗಾರರೇ ಅಡ್ಡಿಯಾಗಿದ್ದಾರೆ. ಇದು ಕೆಲವೆಡೆ ಕಾಂಗ್ರೆಸ್‌, ಉಳಿದೆಡೆ ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ವಿಜಯಪುರ ನಗರ, ದೇವರಹಿಪ್ಪರಗಿ, ಸಿಂದಗಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ‘ಕೈ’ ಪಡೆ ಎಡವಟ್ಟು ಮಾಡಿಕೊಂಡಿದೆ ಎಂಬ ಆಕ್ಷೇಪ ಕಾಂಗ್ರೆಸ್‌ ಕಾರ್ಯಕರ್ತರದ್ದಾಗಿದೆ. ವಿಜಯಪುರ ನಗರ ಕ್ಷೇತ್ರದ ಚುನಾವಣೆ ಧರ್ಮಾಧಾರಿತ ವಿಷಯಕ್ಕೆ ತಿರುಗಿದ್ದರಿಂದ ಕಾಂಗ್ರೆಸ್ ಸ್ಥಿತಿ ಕೊಂಚ ಸುಧಾರಿಸಿದೆ. ಜೆಡಿಎಸ್‌, ಬಿಜೆಪಿಗೆ ಅನುಕೂಲ ಮಾಡಿಕೊಡಲಿಕ್ಕಾಗಿಯೇ ಇಂಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂಬ ಆರೋಪ ಕಾಂಗ್ರೆಸ್ಸಿಗರಿಂದಲೇ ಕೇಳಿ ಬರುತ್ತಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿಗಾಗಿ ಸೆಣಸಾಟ ನಡೆಸಿದೆ.

ಅಭ್ಯರ್ಥಿಗಳ ವೈಯಕ್ತಿಕ ಸಾಮರ್ಥ್ಯದಿಂದ ಹಿಂದೆ ಎರಡು ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಜೆಡಿಎಸ್‌, ಈ ಬಾರಿ ಖಾತೆ ತೆರೆಯುವ ಉಮೇದು ಹೊಂದಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚಿತ್ರಣವೇ ಬದಲಾಗಿದೆ. ಏಳು ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ನೀಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಬಿಜೆಪಿಯೊಂದಿಗೆ ನೇರ ಹಣಾಹಣಿಗಿಳಿದಿದೆ.

ತ್ರಿಕೋನ– ಚತುಷ್ಕೋನ ಸ್ಪರ್ಧೆ

ವಿಜಯಪುರ ನಗರ, ಮುದ್ದೇಬಿಹಾಳ, ಬಸವನಬಾಗೇವಾಡಿ, ಸಿಂದಗಿ, ನಾಗಠಾಣ, ದೇವರಹಿಪ್ಪರಗಿ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಪೈಪೋಟಿಯಿದ್ದರೆ, ಇಂಡಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ರವಿಕಾಂತ ಪಾಟೀಲ ಚತುಷ್ಕೋನ ಸ್ಪರ್ಧೆಗೆ ಕಾರಣರಾಗಿದ್ದಾರೆ.

ಮುದ್ದೇಬಿಹಾಳದಲ್ಲಿ ಅಪ್ಪಾಜಿ ನಾಡಗೌಡರ ಭದ್ರಕೋಟೆಗೆ, ಎ.ಎಸ್‌.ಪಾಟೀಲ ನಡಹಳ್ಳಿ ಅವರ ಮೂಲಕ ಲಗ್ಗೆ ಹಾಕಲು ಬಿಜೆಪಿ ಮುಂದಾಗಿದೆ. ನಾಡಗೌಡ ಸಹೋದರ ಗಂಗಾಧರ ನಾಡಗೌಡ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಇಲ್ಲಿಂದಲೇ ಸ್ಪರ್ಧಿಸಿದ್ದು ಅಪ್ಪಾಜಿಗೆ ತೊಡಕಾಗಿದೆ. ನಡಹಳ್ಳಿ ಅವರಿಗೆ ಬಿಜೆಪಿಯ ಕೆಲ ಮುಖಂಡರ ಬೆಂಬಲ ಸಿಕ್ಕಿಲ್ಲ. ಪ್ರತಿಸ್ಪರ್ಧಿಗಳಿಗೆ ಪ್ರತಿತಂತ್ರ ಹೆಣೆಯುವ ಪ್ರಯತ್ನವಾಗಿ, ನಾಡಗೌಡ ಅವರು ಈ ಬಾರಿ ಕುಟುಂಬ ಸಮೇತ, ಮನೆ ಮನೆಗೆ ಎಡತಾಕುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಕ್ಷೇತ್ರಗಳಲ್ಲಿ ಗೆದ್ದವರು

ಕ್ಷೇತ್ರ;2008;ಪಕ್ಷ;2013;ಪಕ್ಷ

ಮುದ್ದೇಬಿಹಾಳ;ಸಿ.ಎಸ್‌.ನಾಡಗೌಡ;ಕಾಂಗ್ರೆಸ್‌;ಸಿ.ಎಸ್‌.ನಾಡಗೌಡ;ಕಾಂಗ್ರೆಸ್‌

ದೇವರಹಿಪ್ಪರಗಿ;ಎ.ಎಸ್‌.ಪಾಟೀಲ ನಡಹಳ್ಳಿ;ಕಾಂಗ್ರೆಸ್‌;ಎ.ಎಸ್‌.ಪಾಟೀಲ ನಡಹಳ್ಳಿ;ಕಾಂಗ್ರೆಸ್‌

ಬಸವನಬಾಗೇವಾಡಿ;ಎಸ್‌.ಕೆ.ಬೆಳ್ಳುಬ್ಬಿ;ಬಿಜೆಪಿ;ಶಿವಾನಂದ ಪಾಟೀಲ;ಕಾಂಗ್ರೆಸ್‌

ಬಬಲೇಶ್ವರ;ಎಂ.ಬಿ.ಪಾಟೀಲ;ಕಾಂಗ್ರೆಸ್‌;ಎಂ.ಬಿ.ಪಾಟೀಲ;ಕಾಂಗ್ರೆಸ್‌

ವಿಜಯಪುರ ನಗರ;ಅಪ್ಪಾಸಾಹೇಬ ಪಟ್ಟಣಶೆಟ್ಟಿ;ಬಿಜೆಪಿ;ಡಾ.ಮಕ್ಬೂಲ್‌ ಎಸ್‌ ಬಾಗವಾನ;ಕಾಂಗ್ರೆಸ್‌

ನಾಗಠಾಣ;ವಿಠ್ಠಲ ಕಟಕದೊಂಡ;ಬಿಜೆಪಿ;ಪ್ರೊ.ರಾಜು ಆಲಗೂರ;ಕಾಂಗ್ರೆಸ್

ಇಂಡಿ;ಡಾ.ಸಾರ್ವಭೌಮ ಬಗಲಿ;ಬಿಜೆಪಿ;ಯಶವಂತರಾಯಗೌಡ ಪಾಟೀಲ;ಕಾಂಗ್ರೆಸ್‌

ಸಿಂದಗಿ;ರಮೇಶ ಭೂಸನೂರ;ಬಿಜೆಪಿ;ರಮೇಶ ಭೂಸನೂರ;ಬಿಜೆಪಿ

ಬಬಲೇಶ್ವರದಲ್ಲಷ್ಟೇ ‘ಲಿಂಗಾಯತ’ದ ಬಿಸಿ!

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಜಿಲ್ಲೆಯ ಚುನಾವಣಾ ಅಖಾಡದಲ್ಲಿ ವಿಷಯವೇ ಆಗಿಲ್ಲ. ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕಷ್ಟೇ ಸೀಮಿತ. ಅದು ಕೂಡ ಪಂಚಪೀಠಾಧೀಶ್ವರರು, ಹೋರಾಟದಲ್ಲಿ ಪಾಲ್ಗೊಂಡಿದ್ದ ಕೆಲ ಸ್ವಾಮೀಜಿಗಳು ಪದೇ ಪದೇ ಬಬಲೇಶ್ವರಕ್ಕೆ ಭೇಟಿ ನೀಡಿದ್ದರಿಂದ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್‌ ಮುಖಂಡರೊಬ್ಬರು.

ಕ್ಷೇತ್ರದಲ್ಲಿ ಇರುವುದು ಕಾಂಗ್ರೆಸ್‌–ಬಿಜೆಪಿ ನಡುವಿನ ಹಣಾಹಣಿಯಷ್ಟೆ. ‘ಹೊಂದಾಣಿಕೆ ರಾಜಕಾರಣ’ದ ಫಲವಾಗಿ ಜೆಡಿಎಸ್‌ ಈ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟು ‘ಕೈ’ ತೊಳೆದುಕೊಂಡಿತ್ತು. ಆದರೆ ಬಿಎಸ್‌ಪಿ ಅಭ್ಯರ್ಥಿ ಯಾಗಿದ್ದ ಬಿಎಲ್‌ಡಿಇ ಸಂಸ್ಥೆಯ ನೌಕರ ಅಡಿವೆಪ್ಪ ಸಾಲಗಲ್ಲ ನಾಮಪತ್ರ ವಾಪಸ್‌ ಪಡೆದಿದ್ದಾರೆ.

****

ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಎಂಬುದು ಭರವಸೆಯಾಗಿಯೇ ಉಳಿದಿದೆ. ಜಗದ್ವಿಖ್ಯಾತ ಗೋಳಗುಮ್ಮಟವಿದ್ದರೂ ಪ್ರವಾಸೋದ್ಯಮದ ಬೆಳವಣಿಗೆ ಅಷ್ಟಕ್ಕಷ್ಟೆ. ಮೂರು ನದಿಗಳು ಹರಿದರೂ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿಯಾಗಿಲ್ಲ

-ಶಾಂತಪ್ಪ ಸಜ್ಜನ, ವ್ಯಾಪಾರಿ, ಬಸವನಬಾಗೇವಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry