ಜೆಡಿಎಸ್‌ ಕಾಂಗ್ರೆಸ್‌ ನಡುವೆ ಹಣಾಹಣಿ

7

ಜೆಡಿಎಸ್‌ ಕಾಂಗ್ರೆಸ್‌ ನಡುವೆ ಹಣಾಹಣಿ

Published:
Updated:
ಜೆಡಿಎಸ್‌ ಕಾಂಗ್ರೆಸ್‌ ನಡುವೆ ಹಣಾಹಣಿ

ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ‘ಬಡವರ ಊಟಿ’ ಹಾಸನ ಜಿಲ್ಲೆಯಲ್ಲಿ ಸದ್ಯಕ್ಕೆ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಈ ಬಾರಿ ಗೆಲುವಿನ ಖಾತೆ ತೆರೆಯಲು ಬಿಜೆಪಿಯೂ ಪೈಪೋಟಿಗೆ ಇಳಿದಿದೆ.

ಏಳು ಕ್ಷೇತ್ರಗಳಿರುವ ಜಿಲ್ಲೆಯಲ್ಲಿ 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಸನ, ಅರಸೀಕೆರೆ, ಹೊಳನರಸೀಪುರ, ಶ್ರವಣಬೆಳಗೊಳ, ಸಕಲೇಶಪುರ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಜೆಡಿಎಸ್‌ ಕಸರತ್ತು ನಡೆಸುತ್ತಿದೆ. ಅರಕಲಗೂಡು, ಬೇಲೂರು ಕ್ಷೇತ್ರವನ್ನು ಆಡಳಿತ ವಿರೋಧಿ ಅಲೆಯ ನಡುವೆಯೂ ಕಾಂಗ್ರೆಸ್‌ ಗೆಲ್ಲಲೇಬೇಕೆಂಬ ಶತಪ್ರಯತ್ನ ನಡೆಸುತ್ತಿದೆ. ಏಳು ಕ್ಷೇತ್ರಗಳ ಪೈಕಿ ಕನಿಷ್ಠ ಎರಡರಲ್ಲಿ ಖಾತೆ ತೆರೆಯಲು ಬಿಜೆಪಿ ಪ್ರಯತ್ನ ಚುರುಕುಗೊಳಿಸಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೇ ಪಕ್ಷಕ್ಕೆ ಸ್ಟಾರ್‌ ಪ್ರಚಾರಕರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಚಾರ ನಡೆಸಿದ್ದಾರೆ.

ನನೆಗುದಿಯಲ್ಲೇ ಉಳಿದ ನೀರಾವರಿ ಯೋಜನೆ, ಕಾಫಿ–ಕೊಬ್ಬರಿ ಬೆಲೆ ಕುಸಿತ, ಅಕ್ರಮ ಗಣಿಗಾರಿಕೆ, ಮರಳು ಲೂಟಿ, ಕಾಡಾನೆ ಹಾವಳಿ... ಇವೆಲ್ಲ ಚುನಾವಣೆಯಲ್ಲಿ ಪ್ರಮುಖ ವಿಷಯಗಳೇ ಆಗಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಜೆಡಿಎಸ್‌ನ ಭದ್ರಕೋಟೆ ಎಂದೇ ಹೆಸರಾಗಿರುವ ಹಾಸನ ಜಿಲ್ಲೆಯಲ್ಲಿ ಹಾಲಿ ಶಾಸಕರ ವಿರುದ್ಧ ಪಕ್ಷದೊಳಗೆ ಸೃಷ್ಟಿಯಾಗಿರುವ ಅಸಮಾಧಾನಗಳು ತನ್ನ ಗೆಲುವಿಗೆ ಪೂರಕವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ತೊಡಗಿದೆ.

ಹಾಸನ ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿರುವ ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಕಾಶ್, ಕಳೆದ ಬಾರಿ ಪರಾಭವಗೊಂಡಿರುವ ಕಾಂಗ್ರೆಸ್‌ನ ಎಚ್.ಕೆ.ಮಹೇಶ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ಸ್ಪರ್ಧಿಸಿದ್ದಾರೆ. ಮೂವರು ಅಭ್ಯರ್ಥಿಗಳು ದಾಸ ಒಕ್ಕಲಿಗ ಗೌಡ ಸಮುದಾಯದವರು.

ಹಾಸನದಲ್ಲಿ ಒಕ್ಕಲಿಗರಲ್ಲೇ ದಾಸಗೌಡ ಮತ್ತು ಮುಳ್ಳುಗೌಡ ಎಂಬ ಉಪಜಾತಿಗಳ ನಡುವೆ ರಾಜಕೀಯ ಕಾದಾಟ ನಡೆಯುತ್ತಿದೆ. ಇದು ಹಾಸನ ತಾಲ್ಲೂಕಿಗೆ ಮಾತ್ರ ಸೀಮಿತ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ದಾಸಗೌಡ ಸಮುದಾಯದವರನ್ನೇ ಕಣಕ್ಕಿಳಿಸುತ್ತಾ ಬಂದಿವೆ. ಇಲ್ಲಿ ದೇವೇಗೌಡರ ನಾಮಬಲದ ಮೇಲೆ ಮುಳ್ಳುಗೌಡರು ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವುದರಿಂದ ಪ್ರಕಾಶ್ ಗೆಲುವು ಸಾಧ್ಯವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಕಲೇಶಪುರದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ.ಸಿದ್ದಯ್ಯ, ಬಿಜೆಪಿಯಿಂದ ಉದ್ಯಮಿ ಜಿ.ಸೋಮಶೇಖರ್‌ ಕಣದಲ್ಲಿದ್ದಾರೆ. ಹೊರಗಿನವರನ್ನು ಕಣಕ್ಕಿಳಿಸಿರುವುದಕ್ಕೆ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದಾರೆ. ಈ ಅಸಮಾಧಾನದ ಲಾಭ ಪಡೆಯಲು ಜೆಡಿಎಸ್ ಯತ್ನಿಸುತ್ತಿದೆ.

‘ಹೊಳೆನರಸೀಪುರದಲ್ಲಿ ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು’ ಎಂಬ ನಿಲುವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ವಹಿಸಿ ಕಣಕ್ಕಿಳಿಸಿರುವ ನಿವೃತ್ತ ಅಧಿಕಾರಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ.ಮಂಜೇಗೌಡ ಅವರಿಗೆ ಜೆಡಿಎಸ್ ಅಭ್ಯರ್ಥಿ ರೇವಣ್ಣ ದೊಡ್ಡ ಸವಾಲಾಗಿದ್ದಾರೆ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ, ಕೊಡಿಸಿದ ಉದ್ಯೋಗ ಗೆಲುವಿಗೆ ನೆರವು ಎನ್ನಲಾಗುತ್ತಿದೆ.

ಕ್ಷೇತ್ರಕ್ಕೆ ಹೊರಗಿವನರು ಎಂಬ ಭಾವನೆ, ಸ್ಥಳೀಯ ಮುಖಂಡರ ವಿರೋಧ ಮಂಜೇಗೌಡರಿಗೆ ತೊಡಕಾಗುವ ಸಾಧ್ಯತೆ ಹೆಚ್ಚು. ಸಂಪನ್ಮೂಲ ಕ್ರೋಡೀಕರಣ, ಸಿದ್ದರಾಮಯ್ಯ ಕ್ಷೇತ್ರದತ್ತ ಆಸಕ್ತಿ ವಹಿಸಿರುವುದು ಕಾಂಗ್ರೆಸ್‌ ಪರ ಗಾಳಿ ಬೀಸಲು ನೆರವಾಗಬಹುದು ಎಂಬ ಆಶಾಭಾವನೆ ಇದೆ.

ಬೇಲೂರಿನ ಮಾಜಿ ಶಾಸಕ ದಿವಂಗತ ವೈ.ಎನ್.ರುದ್ರೇಶ್‌ಗೌಡ ಸಾವಿನ ಅನುಕಂಪದ ಅಲೆಯ ಲಾಭ ಪಡೆಯಲು ಕಾಂಗ್ರೆಸ್, ಅವರ ಪತ್ನಿ ಎಂ.ಎನ್.ಕೀರ್ತನಾ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಲಿಂಗಾಯತ ಸಮುದಾಯದ ಕೆ.ಎಸ್.ಲಿಂಗೇಶ್ ಅಭ್ಯರ್ಥಿ.

ಮೃದು ಸ್ವಭಾವ, ಮಿತಭಾಷಿ ಗುಣಗಳಿಂದ ರುದ್ರೇಶ್‌ಗೌಡ ಗುರುತಿಸಿಕೊಂಡಿದ್ದರು. ಆದರೆ, ಅಭಿವೃದ್ಧಿ ವಿಚಾರದಲ್ಲೂ ಅದೇ ಮೃದು ಭಾವನೆ ಪ್ರದರ್ಶಿಸಿದರು ಎಂಬ ಆರೋಪ ಇದೆ. ಇದು ಕಾಂಗ್ರೆಸ್‌ ಪಾಲಿಗೆ ‘ಮೈನಸ್’ ಪಾಯಿಂಟ್‌ ಎನಿಸಿದೆ. ಕೀರ್ತನಾ ಗೆಲುವಿಗೆ ಅವರ ಮೈದುನರು ಮತ್ತು ಮಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಪ್ರತಿನಿಧಿಸುತ್ತಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರ ಈ ಬಾರಿ ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗಲಿದೆ. ‘ಪ್ರಾಮಾಣಿಕ ರಾಜಕಾರಣಿ’ ಎಂದೇ ಗುರುತಿಸಿಕೊಂಡಿರುವ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್ ಕಣಕ್ಕಿಳಿದಿದ್ದಾರೆ.

ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ, ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮಂಜು ನೆಚ್ಚಿಕೊಂಡಿದ್ದಾರೆ. ಆದರೆ, ‘ಆಡಳಿತ ವಿರೋಧಿ ಅಲೆ’ ಗೆಲುವಿಗೆ ತೊಡಕಾಗುವ ಸಂಭವ ಇದೆ.

ಎರಡು ಅವಧಿಯ ಸೋಲಿನ ಅನುಕಂಪ ಗೆಲುವಿನ ದಡ ಸೇರಿಸಬಹುದು ಎಂಬ ಲೆಕ್ಕಾಚಾರ ಜೆಡಿಸ್‌ನದ್ದು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸಿ.ಎನ್.ಬಾಲಕೃಷ್ಣ ಹಾಗೂ ಕಾಂಗ್ರೆಸ್‌ನಿಂದ ಸಿ.ಎಸ್.ಪುಟ್ಟೇಗೌಡ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. 2013ಕ್ಕೆ ಮೊದಲು ಇಬ್ಬರೂ ಜೆಡಿಎಸ್ ನಲ್ಲಿದ್ದ ಕಾರಣದಿಂದ ಕೆಲವು ಮುಖಂಡರು ಇಬ್ಬರೊಂದಿಗೂ ವಿಶ್ವಾಸದಲ್ಲಿದ್ದಾರೆ.

ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ಮೂರನೇ ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯ, ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಮರಿಸ್ವಾಮಿ ಸ್ಪರ್ಧಿಸಿದ್ದಾರೆ. ಇವರಿಗೆ ಕ್ಷೇತ್ರದ ಪರಿಚಯ ಸಂಪೂರ್ಣ ತಿಳಿದಿಲ್ಲ. ಇಲ್ಲೂ ಹೊರಗಿನವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯ ಮುಖಂಡರ ಅಸಮಾಧಾನ ಇದೆ. ಕಾಂಗ್ರೆಸ್‌ನಲ್ಲಿ ಹೊಸಬರಿಗೆ ಅವಕಾಶ ನೀಡಿದ್ದು, ಲಿಂಗಾಯತ ಸಮುದಾಯದ ಜಿ.ಬಿ.ಶಶಿಧರ್ ಸ್ಪರ್ಧಿಸಿದ್ದಾರೆ.

ಒಟ್ಟಾರೆ ಜಡಿಎಸ್ ಭದ್ರಕೋಟೆ ಸಡಿಲ ಮಾಡಲು ಕಾಂಗ್ರೆಸ್ ತನ್ನ ಕೋಟೆ ಭದ್ರಪಡಿಸುವ ಕೆಲಸದಲ್ಲಿ ತೊಡಗಿದೆ.

ಜಿಲ್ಲೆಯ ಕ್ಷೇತ್ರಗಳಲ್ಲಿ ಗೆದ್ದವರು

ಕ್ಷೇತ್ರ                2008                           2013

ಶ್ರವಣಬೆಳಗೊಳ– ಸಿ.ಎಸ್.ಪುಟ್ಟೇಗೌಡ (ಜೆಡಿಎಸ್), ಕೆ.ಎನ್‌.ಬಾಲಕೃಷ್ಣ (ಜೆಡಿಎಸ್‌)

ಅರಸೀಕೆರೆ– ಕೆ.ಎಂ.ಶಿವಲಿಂಗೇಗೌಡ (ಜೆಡಿಎಸ್), ಕೆ.ಎಂ.ಶಿವಲಿಂಗೇಗೌಡ (ಜೆಡಿಎಸ್‌)

ಬೇಲೂರು– ವೈ.ಎನ್‌.ರುದ್ರೇಶ್‌ ಗೌಡ (ಕಾಂಗ್ರೆಸ್‌), ವೈ.ಎನ್‌.ರುದ್ರೇಶ್‌ ಗೌಡ (ಕಾಂಗ್ರೆಸ್‌)

ಹಾಸನ– ಎಚ್‌.ಎಸ್‌.ಪ್ರಕಾಶ್‌ (ಜೆಡಿಎಸ್‌), ಎಚ್‌.ಎಸ್‌.ಪ್ರಕಾಶ್‌ (ಜೆಡಿಎಸ್‌)

ಹೊಳೆನರಸೀಪುರ– ಎಚ್‌.ಡಿ.ರೇವಣ್ಣ (ಜೆಡಿಎಸ್‌), ಎಚ್‌.ಡಿ.ರೇವಣ್ಣ (ಜೆಡಿಎಸ್‌)

ಅರಕಲಗೂಡು– ಎ.ಮಂಜು (ಕಾಂಗ್ರೆಸ್‌), ಎ.ಮಂಜು (ಕಾಂಗ್ರೆಸ್‌)

ಸಕಲೇಶಪುರ– ಎಚ್‌.ಕೆ.ಕುಮಾರಸ್ವಾಮಿ (ಜೆಡಿಎಸ್‌), ಎಚ್‌.ಕೆ.ಕುಮಾರಸ್ವಾಮಿ (ಜೆಡಿಎಸ್‌)

ಜಿಲ್ಲೆಯಲ್ಲಿ ಮಳೆಯಿಲ್ಲದೆ ಅಪಾರ ಪ್ರಮಾಣದ ಆಲೂಗೆಡ್ಡೆ, ತೆಂಗು, ಅಡಿಕೆ ಬೆಳೆ ನಾಶವಾಗಿದೆ. ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ

-ರಾಮೇಗೌಡ, ಕೃಷಿಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry