ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಭಾರತದ ವಿದ್ಯುದೀಕರಣ ಸಾಗಬೇಕಾದ ಹಾದಿ ಇನ್ನೂ ಇದೆ

Last Updated 3 ಮೇ 2018, 19:40 IST
ಅಕ್ಷರ ಗಾತ್ರ

ದೇಶದ ಎಲ್ಲಾ 5,97,464 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಮೂಲಕ, ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಿದಂತಾಗಿದೆ ಎಂದು ಮೋದಿ ಅವರು ಪ್ರತಿಪಾದಿಸಿಕೊಂಡಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾದ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ. ವಾಸ್ತವವಾಗಿ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾದ ಒಟ್ಟು ಗ್ರಾಮಗಳ ಸಂಖ್ಯೆ ಕೇವಲ 19,727. ಯುಪಿಎ ಸರ್ಕಾರದ ಅವಧಿಯಲ್ಲೂ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ  ಜಾರಿಯಲ್ಲಿತ್ತು.  2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ಗದ್ದುಗೆ ಏರಿದಾಗ, ಅಷ್ಟರಲ್ಲಾಗಲೇ 5,79,012 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳ ಸಂಖ್ಯೆ 18,452 ಇತ್ತು. ಆ ನಂತರ ಮತ್ತೆ ವಿದ್ಯುತ್ ಸಂಪರ್ಕ ಇಲ್ಲದ 1,275 ಗ್ರಾಮಗಳು ಹೆಚ್ಚುವರಿಯಾಗಿ ಪತ್ತೆಯಾಗಿದ್ದವು. ಮೊನ್ನೆ ಮಣಿಪುರದ ಲೈಸಾಂಗ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದರೊಂದಿಗೆ ರಾಷ್ಟ್ರದ ಎಲ್ಲಾ ಗ್ರಾಮಗಳಿಗೂ ವಿದ್ಯುತ್  ಸೌಲಭ್ಯ ಸಿಕ್ಕಿದಂತಾಗಿದೆ. ಪ್ರತಿವರ್ಷ 12,030 ಗ್ರಾಮಗಳಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ವಿದ್ಯುತ್ ನೀಡಲಾಗಿದೆ. ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ 4,842 ಗ್ರಾಮಗಳಿಗೆ  ವಿದ್ಯುತ್ ನೀಡಲಾಗಿದೆ. ಪರಿಸ್ಥಿತಿ ಹೀಗಿರುವಾಗ, ಎಲ್ಲಾ ಗ್ರಾಮಗಳಿಗೆ ತ್ವರಿತಗತಿಯಲ್ಲಿ ಎನ್‍ಡಿಎ ಸರ್ಕಾರ ವಿದ್ಯುತ್ ಸೌಲಭ್ಯ ಕಲ್ಪಿಸಿದೆ ಎಂದು ಬಿಂಬಿಸಿಕೊಳ್ಳುವುದು ವಿವಾದಾಸ್ಪದ.

ಮೂಲಸೌಕರ್ಯ ವಲಯದಲ್ಲಿ ಈ ಸಾಧನೆ ಸದ್ಯಕ್ಕೆ ಒಂದು ಮೈಲುಗಲ್ಲು ಎಂಬುದೇನೋ ನಿಜ. ಆದರೆ ವಿದ್ಯುತ್ ವಲಯದಲ್ಲಿ ಆಗಬೇಕಿರುವ ಸುಧಾರಣೆಗಳು ಇನ್ನೂ ಬೆಟ್ಟದಷ್ಟಿವೆ. ಈಗಿನ ವಿದ್ಯುದೀಕರಣ ಮಾನದಂಡಗಳ ಪ್ರಕಾರ, ಒಂದು ಗ್ರಾಮದಲ್ಲಿ ಶೇ 10ರಷ್ಟು ಮನೆಗಳು ಹಾಗೂ ಶಾಲೆ, ಆರೋಗ್ಯ ಕೇಂದ್ರ, ಪಂಚಾಯಿತಿ ಕಚೇರಿಯಂತಹ ಸಾರ್ವಜನಿಕ ಬಳಕೆಯ ಕೇಂದ್ರಗಳಿಗೆ ವಿದ್ಯುತ್ ಇದ್ದಲ್ಲಿ ಆ ಗ್ರಾಮವನ್ನು ವಿದ್ಯುತ್ ಜಾಲದಲ್ಲಿರುವ ಗ್ರಾಮವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ರಾಷ್ಟ್ರದ ಎಲ್ಲಾ ಮನೆಗಳಿಗೂ ಇನ್ನೂ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ ಎಂಬುದನ್ನು ಮರೆಯುವುದು ಹೇಗೆ? ರಾಷ್ಟ್ರದ ಮೂರು ಕೋಟಿಗೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕಕ್ಕಾಗಿ ಇನ್ನೂ ಕಾಯುತ್ತಿವೆ. ಅದರಲ್ಲೂ ಉತ್ತರಪ್ರದೇಶ, ಜಾರ್ಖಂಡ್‍ನಂತಹ ರಾಜ್ಯಗಳಲ್ಲಿ ವಿದ್ಯುತ್ ಇಲ್ಲದ ಮನೆಗಳ ಪ್ರಮಾಣ ಶೇ 40ಕ್ಕೂ ಹೆಚ್ಚಿದೆ. ಹೀಗಾಗಿ ಸಾರ್ವತ್ರಿಕ ವಿದ್ಯುದೀಕರಣವನ್ನು ಸಾಧಿಸಬೇಕಾದಂತಹ ದೊಡ್ಡ ಸವಾಲು ನಮ್ಮ ಮುಂದೆ ಇನ್ನೂ ಇದೆ. ಅತಿ ಹೆಚ್ಚು ವಿದ್ಯುತ್ ಕೊರತೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ನೈಜೀರಿಯಾ ಹಾಗೂ ಭಾರತವನ್ನು ಕಳೆದ ವರ್ಷದ ವಿಶ್ವಬ್ಯಾಂಕ್ ವರದಿಯಲ್ಲಿ ಸೇರಿಸಲಾಗಿದೆ ಎಂಬುದನ್ನೂ ಸ್ಮರಿಸಬೇಕು. ಅಷ್ಟೇ ಅಲ್ಲ, 24 ಗಂಟೆಗಳ ಕಾಲ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಸವಾಲು ನಮ್ಮ ಮುಂದೆ ದೊಡ್ಡದಾಗೇ ಇದೆ. ಇದು ಸಾಧ್ಯವಾದಾಗ ಮಾತ್ರ ವಿದ್ಯುದೀಕರಣದ ಲಾಭ ಎಲ್ಲರಿಗೂ ಸಿಕ್ಕಂತಾಗುತ್ತದೆ.

ಸಮಸ್ಯೆಗಳಿಂದ ಆವೃತವಾಗಿರುವ ವಿದ್ಯುತ್ ವಲಯದ ಸುಧಾರಣೆಯು ಆದ್ಯತೆಯ ಸಂಗತಿಯಾಗಬೇಕು. ವಿದ್ಯುತ್ ಸಾಗಣೆ, ವಿತರಣೆ ಸಮಸ್ಯೆ, ನಷ್ಟ, ವಿದ್ಯುತ್ ಮಂಡಳಿಗಳಲ್ಲಿನ ದುರಾಡಳಿತದಂತಹ ಸಮಸ್ಯೆಗಳ ವರ್ತುಲಗಳಲ್ಲಿ ವಿದ್ಯುತ್ ವಲಯ ಸಿಲುಕಿದೆ. ವಿದ್ಯುತ್ ಇಲ್ಲದೆ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಈ ಕುರಿತಾದ ನೈಜ ಕಾಳಜಿಯನ್ನು ಸರ್ಕಾರ ಪ್ರದರ್ಶಿಸಲಿ. ಎನ್‍ಡಿಎ ಸರ್ಕಾರ ತನ್ನ ಅಧಿಕಾರ ಅವಧಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಹೀಗಾಗಿ ಸಾಧನೆಗಳನ್ನು ಪಟ್ಟಿ ಮಾಡುವ ಅದರ ಆತುರ ಅರ್ಥವಾಗುವಂತಹದ್ದೇ. ಆದರೆ ಸಾಧನೆಗಳನ್ನು ಸಾರಿಕೊಳ್ಳುವ ಭರದಲ್ಲಿ ವಾಸ್ತವಾಂಶಗಳನ್ನು ಮರೆಯಬಾರದು. ಜೊತೆಗೆ ಸಾಧನೆಗೆ ಕಾರಣರಾದ ಎಲ್ಲರನ್ನೂ ಮರೆಯದಿರುವುದು ಭಾರತೀಯ ಸಭ್ಯತೆಯ ಮೂಲಸ್ರೋತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT