ಶನಿವಾರ, ಫೆಬ್ರವರಿ 27, 2021
28 °C

ಜೆಡಿಎಸ್‌ ಕೋಟೆಗೆ ಕಾಂಗ್ರೆಸ್‌ ಕಾವಲು!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಜೆಡಿಎಸ್‌ ಕೋಟೆಗೆ ಕಾಂಗ್ರೆಸ್‌ ಕಾವಲು!

ಶಾಸಕ ಅಂಬರೀಷ್‌ ಈ ಬಾರಿಯ ಚುನಾವಣಾ ರಂಗದಿಂದ ಹಿಂದೆ ಸರಿದ ನಂತರ ವರ್ಣರಂಜಿತ ರಾಜಕಾರಣ ತಗ್ಗಿದಂತೆ ಕಂಡರೂ, ಕಣದಲ್ಲಿ ಅಬ್ಬರ ಕಡಿಮೆಯಾಗಿಲ್ಲ.

ರಾಜ್ಯದಲ್ಲೇ ಅತೀ ಹೆಚ್ಚು ರೈತರ ಆತ್ಮಹತ್ಯೆ, ರೋಗಗ್ರಸ್ತವಾಗಿರುವ ಸಕ್ಕರೆ ಕಾರ್ಖಾನೆಗಳು, ಹೆಚ್ಚುತ್ತಿರುವ ವಲಸೆ ಇವೇ ಮೊದಲಾದ ಸಮಸ್ಯೆಗಳ ಸುಳಿಯಲ್ಲಿ ಜಿಲ್ಲೆ ನಲುಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿಕೊಂಡು ಕಣಕ್ಕಿಳಿದಿರುವ ಅಭ್ಯರ್ಥಿಗಳು ಜಾತಿ ಪ್ರೀತಿ, ಕುಟುಂಬ ರಾಜಕಾರಣವನ್ನು ಮುನ್ನೆಲೆಗೆ ತಂದು ಮತ ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಒಕ್ಕಲಿಗರು ಬಹುಸಂಖ್ಯಾತರಾಗಿರುವ ಜಿಲ್ಲೆಯಲ್ಲಿ ಮಳವಳ್ಳಿ ಮೀಸಲು ಕ್ಷೇತ್ರ ಹೊರತುಪಡಿಸಿ, ಪ್ರಮುಖ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.

‘ಎಚ್‌.ಡಿ. ದೇವೇಗೌಡ ಅವರ ಇನ್ನೊಂದು ಕಣ್ಣು’ (ಹಾಸನ ಒಂದು ಕಣ್ಣು) ಎಂದು ಕರೆಸಿಕೊಳ್ಳುವ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಆದರೆ ಜೆಡಿಎಸ್‌ ಜಿಲ್ಲಾ ನಾಯಕರಾಗಿದ್ದ ಎನ್‌.ಚಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣದ ಪ್ರಬಲ ಜೆಡಿಎಸ್‌ ಮುಖಂಡರಾಗಿದ್ದ ರಮೇಶ್‌ ಬಂಡಿ ಸಿದ್ಧೇಗೌಡ ಅವರು ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರ ನಾಯಕತ್ವ ಬಳಸಿಕೊಂಡು ಜೆಡಿಎಸ್‌ ಭದ್ರಕೋಟೆಗೆ ಲಗ್ಗೆ ಇಡಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಅಧಿಕಾರ ಅನುಭವಿಸಿ ಪಕ್ಷ ತ್ಯಜಿಸಿದ ಭಿನ್ನ ನಾಯಕರಿಗೆ ಬುದ್ಧಿ ಕಲಿಸಲು ಹೊರಟಿರುವ ಎಚ್‌.ಡಿ. ದೇವೇಗೌಡರು ಶತಾಯಗತಾಯ ಇಬ್ಬರನ್ನೂ ಸೋಲಿಸಲೇಬೇಕು ಎಂದು ಟೊಂಕಕಟ್ಟಿ ನಿಂತಿದ್ದಾರೆ. ಭಿನ್ನರಿಗೆ ಬುದ್ಧಿ ಕಲಿಸುವು

ದಾಗಿ ಹಲವು ಸಭೆಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ನಾಯಕರನ್ನೇ ಕರೆತಂದು ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದಾರೆ. ನಾಗಮಂಗಲದಲ್ಲಿ ಸುರೇಶ್‌ ಗೌಡ, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಅಭ್ಯರ್ಥಿಗಳಾಗಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದೆ.

ಆರು ತಿಂಗಳಿಗಳಿಂದ ನಾಗಮಂಗಲಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುವ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ

ಪ್ರತಿಷ್ಠೆಯನ್ನು ಪಣಕ್ಕಿಟ್ಟು, ಭಿನ್ನಮತೀಯ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ನಿರಂತರ ಅಮಾವಾಸ್ಯೆ ಪೂಜೆ ಸೇರಿದಂತೆ ಹಲವು ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವುದೂ ಕೂತೂಹಲಕ್ಕೆ ಕಾರಣವಾಗಿದೆ.

ಎಸ್‌.ಎಂ. ಕೃಷ್ಣ ಅಸಮಾಧಾನ: ಮದ್ದೂರು ಕ್ಷೇತ್ರದಲ್ಲಿ ಅರ್ಜಿ ಹಾಕದೇ ಇದ್ದ ಸಾಮಾನ್ಯ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ನೀಡಿರುವ ಕಾರಣ, ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಒಳಒಪ್ಪಂದ ಏರ್ಪ‌ಟ್ಟಿದೆ ಎಂಬ ಮಾತು ಹರಿದಾಡುತ್ತಿದೆ. ಬೀಗರೂ ಆಗಿರುವ ಜೆಡಿಎಸ್‌ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ಅವರನ್ನು ಗೆಲ್ಲಿಸಿಕೊಳ್ಳಲು ಎಚ್‌.ಡಿ. ದೇವೇಗೌಡರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂಬ ಮಾತು ಗೋಪ್ಯವಾಗಿ ಉಳಿದಿಲ್ಲ. ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ ಅವರ ಮಾತಿಗೂ ಬೆಲೆ ಕೊಡದೆ ದುರ್ಬಲ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ತಮ್ಮಣ್ಣ– ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ನಡೆಗೆ ಬೇಸರ ವ್ಯಕ್ತಪಡಿಸಿರುವ ಎಸ್‌.ಎಂ. ಕೃಷ್ಣ ಬೆಂಬಲಿಗರು, ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದಾರೆ. ಕೃಷ್ಣ ಹುಟ್ಟೂರು ಸೋಮನಹಳ್ಳಿಯಿಂದಲೇ ಪ್ರಚಾರ ಆರಂಭಿಸಿ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ಜೆಡಿಎಸ್‌ಗೆ ತಲೆನೋವಾದ ಬಂಡಾಯ: ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಕೈತಪ್ಪಿದ ಕಾರಣ, ಐದು ರೂಪಾಯಿ ವೈದ್ಯ ಡಾ. ಎಸ್‌.ಸಿ. ಶಂಕರೇಗೌಡ ಹಾಗೂ ಎನ್‌.ಶಿವಣ್ಣ ಪಕ್ಷ ತ್ಯಜಿಸಿದ್ದಾರೆ. ಶಂಕರೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಎನ್‌.ಶಿವಣ್ಣ ಬಿಜೆಪಿಯಿಂದ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂಬರೀಷ್‌ ಎದುರು ಸೋಲು ಕಂಡ ಮಾಜಿ ಶಾಸಕ ಎಂ.ಶ್ರೀನಿವಾಸ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಅಂಬರೀಷ್‌ ಕಣದಿಂದ ನಿರ್ಗಮಿಸಿದ ನಂತರ ಯುವ ಮುಖಂಡ ಗಣಿಗ ಪಿ. ರವಿಕುಮಾರ್‌ ಗೌಡ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎಸ್‌. ಪುಟ್ಟರಾಜು ಹಾಗೂ ಸ್ವರಾಜ್‌ ಇಂಡಿಯಾ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ ಅವರ ನಡುವೆ ನೇರ ಪೈಪೋಟಿ ಇದೆ. ಮುಂದೆ ಜೆಡಿಎಸ್‌ ಸರ್ಕಾರ ಬಂದರೆ ಪುಟ್ಟರಾಜು ಸಚಿವರಾಗುತ್ತಾರೆ ಎಂದೇ ಅವರ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರ ಇಡೀ ಕುಟುಂಬ ಪುಟ್ಟರಾಜು ಬೆನ್ನಿಗೆ ನಿಂತಿದೆ. ಇನ್ನೊಂದೆಡೆ, ದರ್ಶನ್‌ ಪರವಾಗಿ ಪುಟ್ಟಣ್ಣಯ್ಯ ಸಾವಿನ ಅನುಕಂಪದ ಅಲೆಯೂ ಪ್ರಭಾವ ಬೀರಿದೆ. ಹಲವು ಸಂಘಟನೆಗಳು, ಸಾಹಿತಿ, ಕಲಾವಿದರು ದರ್ಶನ್‌ ಬೆಂಬಲಕ್ಕೆ ಬಂದಿದ್ದಾರೆ.

ಕಮಲ ಅರಳಿಸುವ ತವಕ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ತವರು ಜಿಲ್ಲೆಯಲ್ಲಿ ಕಮಲ ಅರಳಿಸುವ ತವಕದಲ್ಲಿದ್ದಾರೆ. ಜೆಡಿಎಸ್‌ನಿಂದ ಬಂದ ಎನ್‌.ಶಿವಣ್ಣ ಅವರಿಗೆ ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದಾರೆ. ಸರಳ, ಸೌಮ್ಯ ಸ್ವಭಾವದ ಶಿವಣ್ಣ ಅವರ ಮೇಲೆ ಜನರಿಗೆ ಅಪಾರ ಪ್ರೀತಿ ಇದೆ. ಆದರೆ ಪ್ರೀತಿ ಮತವಾಗಿ ಪರಿವರ್ತನೆಯಾದರೆ ಮಾತ್ರ ಇಲ್ಲಿ ಕಮಲ ಅರಳುತ್ತದೆ. ಜಿಲ್ಲೆಗೆ ಬಂದಾಗಲೆಲ್ಲಾ ಯಡಿಯೂರಪ್ಪ ‘ಒಂದು ಕ್ಷೇತ್ರದಲ್ಲಾದರೂ ಗೆಲ್ಲಿಸಿಕೊಡಿ. ತವರಿನ ಋಣ ತೀರಿಸಲು ಅವಕಾಶ ಮಾಡಿಕೊಡಿ’ ಎಂದು ಬೇಡುವುದು ಸಾಮಾನ್ಯವಾಗಿದೆ.

ಜಿಲ್ಲೆಯ ಕ್ಷೇತ್ರಗಳಲ್ಲಿ ಗೆದ್ದವರು

ಕ್ಷೇತ್ರ          2008                2013

ಮಂಡ್ಯ ಎಂ.ಶ್ರೀನಿವಾಸ್‌ (ಜೆಡಿಎಸ್‌), ಅಂಬರೀಷ್‌ (ಕಾಂಗ್ರೆಸ್‌)

ಮದ್ದೂರು ಎಂ.ಎಸ್‌.ಸಿದ್ಧರಾಜು (ಜೆಡಿಎಸ್‌), ಡಿ.ಸಿ.ತಮ್ಮಣ್ಣ (ಜೆಡಿಎಸ್‌)

(2008 ಡಿಸೆಂಬರ್‌ನಲ್ಲಿ ಉಪ ಚುನಾವಣೆ– ಕಲ್ಪನಾ ಸಿದ್ಧರಾಜು (ಜೆಡಿಎಸ್‌)

ಶ್ರೀರಂಗಪಟ್ಟಣ ರಮೇಶ್‌ ಬಂಡಿಸಿದ್ಧೇಗೌಡ (ಜೆಡಿಎಸ್‌), ರಮೇಶ್‌ ಬಂಡಿಸಿದ್ಧೇಗೌಡ (ಜೆಡಿಎಸ್‌)

ಮೇಲುಕೋಟೆ ಸಿ.ಎಸ್‌.ಪುಟ್ಟರಾಜು (ಜೆಡಿಎಸ್‌), ಕೆ.ಎಸ್‌.ಪುಟ್ಟಣ್ಣಯ್ಯ (ಸರ್ವೋದಯ ಪಕ್ಷ)

ಕೆ.ಆರ್‌.ಪೇಟೆ ಕೆ.ಬಿ.ಚಂದ್ರಶೇಖರ್‌ (ಕಾಂಗ್ರೆಸ್‌), ಕೆ.ಸಿ.ನಾರಾಯಣಗೌಡ (ಜೆಡಿಎಸ್‌)

ನಾಗಮಂಗಲ ಸುರೇಶ್‌ ಗೌಡ (ಕಾಂಗ್ರೆಸ್‌), ಎನ್‌.ಚಲುವರಾಯಸ್ವಾಮಿ (ಜೆಡಿಎಸ್‌)

ಮಳವಳ್ಳಿ ಪಿ.ಎಂ. ನರೇಂದ್ರ ಸ್ವಾಮಿ (ಪಕ್ಷೇತರ), ಪಿ.ಎಂ.ನರೇಂದ್ರ ಸ್ವಾಮಿ (ಕಾಂಗ್ರೆಸ್‌)

******

ಮಂಡ್ಯ ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಜನರು ಪಕ್ಷಕ್ಕಿಂತ ವ್ಯಕ್ತಿಗೆ ಮನ್ನಣೆ ನೀಡಬೇಕು. ಅಧಿಕಾರ ನಡೆಸಿರುವ ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳು ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಈಗ ಜಿಲ್ಲೆ ಹೊಸ ಬದಲಾವಣೆಗೆ ತೆರೆದುಕೊಂಡಿದೆ

–ಡಾ.ಎಸ್‌.ಸಿ.ಶಂಕರೇಗೌಡ (₹ 5 ವೈದ್ಯ), ಪಕ್ಷೇತರ ಅಭ್ಯರ್ಥಿ, ಮಂಡ್ಯ ಕ್ಷೇತ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.