ಬುಧವಾರ, ಮಾರ್ಚ್ 3, 2021
25 °C

ರಾಜ್ಯ– ಕೇಂದ್ರ ಸರ್ಕಾರಗಳ ಸಾಧನೆ ಒರೆಗೆ

ಎಂ. ನವೀನ್ ಕುಮಾರ್‌ Updated:

ಅಕ್ಷರ ಗಾತ್ರ : | |

ರಾಜ್ಯ– ಕೇಂದ್ರ ಸರ್ಕಾರಗಳ ಸಾಧನೆ ಒರೆಗೆ

ಕಡಲ ಕಿನಾರೆಗಳ ಜಿಲ್ಲೆ ಉಡುಪಿಯಲ್ಲಿ ಚುನಾವಣೆ ಘೋಷಣೆಯ ಬಳಿಕ ಅಲೆಗಳೂ ಲೆಕ್ಕಾಚಾರ ಹಾಕಿ ದಡಕ್ಕೆ ಅಪ್ಪಳಿಸುತ್ತಿವೆಯೇ? ಐದೂ ವಿಧಾನಸಭಾ ಕ್ಷೇತ್ರಗಳನ್ನು ಸುತ್ತಾಡಿ ಮತದಾರನ ಮನಕ್ಕಿಳಿಯುವ ಪ್ರಯತ್ನ ಮಾಡಿದ ನಂತರ, ಸಮುದ್ರದ ಮೇಲೊಂದು ನೋಟ ಬೀರಿದಾಗ ಹೀಗನಿಸದಿರದು.

ಚುನಾವಣೆಯ ಸಿದ್ಧತೆಗಳು ಭರದಿಂದ ನಡೆಯುತ್ತಿರುವಂತೆಯೇ ಜನ ಸಹ ಒಂದು ಸುತ್ತಿನ ವಿಮರ್ಶೆಯನ್ನು ಪೂರ್ಣಗೊಳಿಸಿದ್ದಾರೆ. ಹಾಲಿ ಐದು ಮಂದಿ ಶಾಸಕರು ಹಾಗೂ ಅವರ ಎದುರಾಳಿಗಳ ಕಾರ್ಯವೈಖರಿ– ನಡವಳಿಕೆಯನ್ನು ಒರೆಗೆ ಹಚ್ಚುವ ಮೂಲಕ ಪ್ರಜಾಪ್ರಭುತ್ವಕ್ಕೆ ಹೊಳಪು ನೀಡುತ್ತಿದ್ದಾರೆ. ಅಮೂಲ್ಯವಾದ ಮತವನ್ನು ಯಾರಿಗೆ ನೀಡಬೇಕು ಎಂದು ಇನ್ನೂ ನಿರ್ಧರಿಸದಿದ್ದರೂ, ಆ ನಿಟ್ಟಿನಲ್ಲಿಯೇ ಲೆಕ್ಕಾಚಾರ ಮುಂದುವರಿದಿದೆ. ಬೇಡುವ ಸ್ಥಾನದಲ್ಲಿರುವ ಅಭ್ಯರ್ಥಿಗಳ ಮತ ಗಳಿಸುವ ಸಾಹಸ ಹಾಗೂ ನೀಡುವ ಮತದಾರನ ಮಂದಹಾಸ ಕಣ್ಣಿಗೆ ರಾಚುತ್ತದೆ.

ಉಡುಪಿ ಜಿಲ್ಲೆ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ಹೋರಾಟದ ಕಣ. ಹಿಂದಿನ ಚುನಾವಣೆಗಳಲ್ಲಿ ಈ ಎರಡು ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿ. ಕರಾವಳಿ ‘ಹಿಂದುತ್ವದ ಪ್ರಯೋಗ ಶಾಲೆ’ ಎಂದು ಸಾರಾಸಗಟಾಗಿ ಹೇಳುವುದುಂಟು. ಆದರೆ, ಫಲಿತಾಂಶವನ್ನು ವಿಶ್ಲೇಷಣೆ ಮಾಡಿದರೆ ಇಲ್ಲಿನ ಮತದಾರರು ಆಯಾ ಕಾಲ, ಸಂದರ್ಭಕ್ಕೆ ತಕ್ಕಂತೆ ಮತ ಚಲಾಯಿಸಿರುವುದು ಸ್ಪಷ್ಟವಾಗುತ್ತದೆ.

2008ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ 2013ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಪರಿಣಾಮವಾಗಿ, ಆಗ ಮತದಾರರಲ್ಲಿಯೂ ಈಗಿರುವಷ್ಟು ಗೊಂದಲ ಇರಲಿಲ್ಲ. ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಒಂದು ಬಿಜೆಪಿ, ಇನ್ನೊಂದು ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆ– ವೈಫಲ್ಯ, ಹಾಲಿ ಶಾಸಕರ ಕಾರ್ಯವೈಖರಿ ಹಾಗೂ ಪರ್ಯಾಯ ಆಯ್ಕೆಗೆ ಇರುವ ವ್ಯಕ್ತಿಯ ಸಾಮರ್ಥ್ಯ ಈ ಚುನಾವಣೆಯನ್ನು ಪ್ರಭಾವಿಸುತ್ತಿರುವುದನ್ನು ನೋಡಬಹುದು. ಕಾಂಗ್ರೆಸ್‌ ಪಕ್ಷದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕಾರ್ಕಳ ಶಾಸಕ ಬಿಜೆಪಿಯ ವಿ. ಸುನಿಲ್ ಕುಮಾರ್ ಅಭಿವೃದ್ಧಿ ಮಾಡಿದ್ದಾರೆಂದು ಜನರೇ ಒಪ್ಪಿಕೊಳ್ಳುತ್ತಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಗ್ಗೆ ಇಂತಹ ಅಭಿಪ್ರಾಯ ಇಲ್ಲ. ಸಾಧ್ಯವಾದಷ್ಟು ಮಾಡಿದ್ದಾರೆ ಎನ್ನುತ್ತಾರೆ.

ಬಿಜೆಪಿ ಹಾಗೂ ಸಂಘ ಪರಿವಾರದ ಸದಸ್ಯರ ಕೊಲೆ ಪ್ರಕರಣಗಳು, ಟಿಪ್ಪು ಸುಲ್ತಾನ್ ಜಯಂತಿ ವಿಷಯ ರಣಕಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದಾರೆ ಎಂದು ಕೆಲವರು ನೇರವಾಗಿಯೇ ಹೇಳುತ್ತಾರೆ. ಸಿ.ಎಂ ದಾರ್ಷ್ಟ್ಯದ ಮಾತುಗಳು ಹಿಡಿಸುವುದಿಲ್ಲ ಎನ್ನುವವರೂ ಇದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವೂ ಚಾಲ್ತಿಯಲ್ಲಿದೆ. ‘ಧರ್ಮವನ್ನು ಒಡೆಯುವ ಕೆಲಸವನ್ನು ಏಕೆ ಮಾಡಬೇಕು’ ಎಂದು ಉದ್ಯಾವರದ ಲಾರೆನ್ಸ್ ಪ್ರಶ್ನಿಸುತ್ತಾರೆ. ರಾಜ್ಯ ಸರ್ಕಾರದ ಸಾಧನೆ ಅಥವಾ ಆಡಳಿತ ವೈಫಲ್ಯದ ಬಗ್ಗೆ ಮಾತನಾಡುವವರು ತೀರಾ ಕಡಿಮೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ‘ಬ್ಯಾಂಕ್‌ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಹಾರಿ ಹೋಗುತ್ತಾರೆ ಎಂದರೆ ಕೇಂದ್ರ ಸರ್ಕಾರದ ನೆರವು ಇದೆ ಎಂದೇ ಅರ್ಥವಲ್ಲವೇ? ಕಮಿಷನ್ ಪಡೆದೇ ಅವರಿಗೆ ಸಹಾಯ ಮಾಡಿದ್ದಾರೆ’ ಎಂದು ಕಳತ್ತೂರಿನ ಬಾಬು ಶೆಟ್ಟಿಗಾರ್ ಹೇಳುತ್ತಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಸವಾರಿ ಮಾಡುತ್ತಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಈ ಬಾರಿ ಕಾಂಗ್ರೆಸ್‌ ಸಹ ಪೈಪೋಟಿ ನೀಡುತ್ತಿರುವುದು ಹೊಸ ಬೆಳವಣಿಗೆ. ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ರಾಕೇಶ್ ಮಲ್ಲಿ ಅಭ್ಯರ್ಥಿಯಾಗಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ, ಕಾಪು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನಗರ ಪ್ರದೇಶದ ಜನರಿಗೆ ಅವರು ಸ್ಪರ್ಧೆ ಮಾಡಿರುವ ವಿಷಯ ಹಾಗೂ ಗುರುತು (ಬೆಂಡೆಕಾಯಿ) ಗೊತ್ತಿದೆ. ಗ್ರಾಮೀಣ ಭಾಗದ ಹೆಚ್ಚಿನ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ.

ಕಾರ್ಕಳದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿಯ ವಿ. ಸುನಿಲ್ ಕುಮಾರ್ ಹಾಗೂ ಕಾಂಗ್ರೆಸ್‌ನ ಎಚ್‌. ಗೋಪಾಲ ಭಂಡಾರಿ ಮತ್ತೊಮ್ಮೆ ಎದುರು ಬದುರಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರಿಗೆ ಟಿಕೆಟ್ ನೀಡದಿರುವುದರ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿದೆ. ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿಯ ಕೆ. ರಘುಪತಿ ಭಟ್ ಅವರ ಮಧ್ಯೆ ಸ್ಪರ್ಧೆ ಇದೆ. ಶಾಲಾ ಸಹಪಾಠಿಗಳಾಗಿದ್ದ ಅವರು ರಾಜಕೀಯ ಅಖಾಡದಲ್ಲಿ ಕುಸ್ತಿಗಿಳಿದಿದ್ದಾರೆ. ಬೈಂದೂರಿನಲ್ಲಿ ಕಾಂಗ್ರೆಸ್‌ನ ಕೆ. ಗೋಪಾಲ ಪೂಜಾರಿ ಹಾಗೂ ಬಿಜೆಪಿಯ ಬಿ. ಸುಕುಮಾರ ಶೆಟ್ಟಿ ಮಧ್ಯೆ ಭಾರೀ ಪೈಪೋಟಿ ಇದೆ ಎಂಬುದು ಜನರ ಮಾತಿನಿಂದ ಗೊತ್ತಾಗುತ್ತದೆ. ಜೆಡಿಎಸ್ ಅಭ್ಯರ್ಥಿಗಳು ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ಜಿಲ್ಲೆಯ ಕ್ಷೇತ್ರಗಳಲ್ಲಿ ಗೆದ್ದವರು

ಕ್ಷೇತ್ರ 2008 2013

ಬೈಂದೂರು ಲಕ್ಷ್ಮೀನಾರಾಯಣ ಬಿಜೆಪಿ ಕೆ.ಗೋಪಾಲ ಪೂಜಾರಿ ಕಾಂಗ್ರೆಸ್

ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ

ಉಡುಪಿ ಕೆ. ರಘುಪತಿ ಭಟ್ ಬಿಜೆಪಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್

ಕಾಪು ಲಾಲಾಜಿ ಮೆಂಡನ್ ಬಿಜೆಪಿ ವಿನಯಕುಮಾರ್ ಸೊರಕೆ ಕಾಂಗ್ರೆಸ್

ಕಾರ್ಕಳ ಎಚ್‌. ಗೋಪಾಲ ಭಂಡಾರಿ ಕಾಂಗ್ರೆಸ್ ವಿ. ಸುನೀಲ್ ಕುಮಾರ್ ಬಿಜೆಪಿ

ಕಡಲ್ಕೊರೆತ, ಹಕ್ಕುಪತ್ರ ವಿತರಣೆಯಂತಹ ಸಮಸ್ಯೆಗಳು ಬಗೆಹರಿದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಇದ್ದರೂ ಯಾರೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಕೇವಲ ಭರವಸೆಗಳ ಮೇಲೆ ಚುನಾವಣೆ ಗೆಲ್ಲುತ್ತಿದ್ದಾರೆ.

-ಮಹೇಶ್, ಉಡುಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.