ಶುಕ್ರವಾರ, ಮಾರ್ಚ್ 5, 2021
21 °C

‘ಸಿದ್ದರಾಮಯ್ಯ ಜಿಹಾದಿ ಶಕ್ತಿಗಳ ಪೋಷಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿದ್ದರಾಮಯ್ಯ ಜಿಹಾದಿ ಶಕ್ತಿಗಳ ಪೋಷಕ’

ಶಿರಸಿ/ಬಾಳೆಹೊನ್ನೂರು/ ಸಾಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಿಹಾದಿ ಶಕ್ತಿಗಳನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಗುರುವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಅವರು, ಕರ್ನಾಟಕವು ಕಾಂಗ್ರೆಸ್‌ ಮುಕ್ತವಾದರೆ, ದೇಶವು ಜಿಹಾದಿಗಳಿಂದ ಮುಕ್ತವಾಗಲಿದೆ ಎಂದರು.

ಕರ್ನಾಟಕವನ್ನು ಕಾಂಗ್ರೆಸ್‌ ಎಟಿಎಂ ರೀತಿಯಲ್ಲಿ ಬಳಸಿಕೊಂಡು ಹಣ ಲೂಟಿ ಮಾಡುತ್ತಿದೆ. ಈ ಬಗ್ಗೆ ಜನತೆ ಎಚ್ಚರಿಕೆ ವಹಿಸಬೇಕು. ಬಿಜೆಪಿ ಎಲ್ಲರನ್ನೂ ಒಂದುಗೂಡಿಸಲು ಮತ್ತು ಜನರಿಗೆ ಕಾನೂನು ಸುವ್ಯವಸ್ಥೆ ಒದಗಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಿದೆ ಎಂದರು.

ಧರ್ಮ, ಜಾತಿಗಳ ನಡುವೆ ಒಡಕು ಮೂಡಿಸುವ, ರೈತರನ್ನು ನಿರ್ಲಕ್ಷಿಸುವ ಕಾಂಗ್ರೆಸ್‌ ಸರ್ಕಾರದ ಆಡಳಿತ ಕೊನೆಗೊಳಿಸಬೇಕು ಎಂದರು.

ಕೃಷಿ ಆಧಾರಿತ ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರವೇ ಕಾರಣ. ಇಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ಸಿಗರು ಹತ್ಯೆಗೆ ಉದಾಹರಣೆ ನೀಡಲು ಉತ್ತರ ಪ್ರದೇಶದ ಹೆಸರು ಬಳಸುತ್ತಾರೆ. ಅಲ್ಲಿ ಹಿಂದೂಗಳ ಹತ್ಯೆಯೂ ಆಗಿಲ್ಲ, ರೈತರ ಆತ್ಮಹತ್ಯೆಯೂ ನಡೆದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯೂ ಅಲ್ಲಿ ಇಲ್ಲ. ಆದರೆ, ಇಲ್ಲಿ ಪರಿಸ್ಥಿತಿ ತಲೆಕೆಳಗಾಗಿದೆ ಎಂದು ಟೀಕಿಸಿದರು.

‘ಉತ್ತರಪ್ರದೇಶದಲ್ಲಿ 68 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. ಸಿದ್ದರಾಮಯ್ಯ ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು’ ಎಂದು ಯೋಗಿ ಪ್ರಶ್ನಿಸಿದರು.

ಸಾಗರದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಜತೆ ಮಾತುಕತೆ ನಡೆಸಿ, ಮಠವು ಕೈಗೊಂಡಿರುವ ಗೋ ಸಂರಕ್ಷಣೆ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.