4

ಪ್ರಧಾನಿ ಟೀಕೆಗೆ ಟ್ವೀಟ್‌ನಲ್ಲೇ ಟಾಂಗ್‌!

Published:
Updated:
ಪ್ರಧಾನಿ ಟೀಕೆಗೆ ಟ್ವೀಟ್‌ನಲ್ಲೇ ಟಾಂಗ್‌!

ಬೆಂಗಳೂರು: ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ಮಾಡುತ್ತಿರುವ ‍ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ 1.30ರಿಂದ ‘ಮೋದಿಹಿಟ್‌ವಿಕೆಟ್‌’ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ದಾಳಿ ಆರಂಭಿಸಿದ ಅವರು, ಪ್ರಚಾರದ ವೇಳೆ ಮೋದಿ ಪ್ರಸ್ತಾಪಿಸುವ ವಿಷಯಗಳಿಗೆ ಆಗ್ಗಿಂದಾಗೆ ಉತ್ತರಿಸುತ್ತಲೇ ಅವರ ಜೊತೆಜೊತೆಗೆ ಇವರೂ ಟ್ವಿಟರ್‌ನಲ್ಲಿ ಪ್ರಚಾರ ನಡೆಸಿದರು.

ಬಳ್ಳಾರಿ ಸಮಾವೇಶ ಆರಂಭಗೊಳ್ಳುವುದಕ್ಕೂ ಮುನ್ನ ಟ್ವೀಟ್‌ ಮಾಡಿದ ಸಿದ್ದರಾಮಯ್ಯ, ‘ಬಳ್ಳಾರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ನೀವಾಡುವ ಮಾತುಗಳನ್ನೇ ಎದುರು ನೋಡುತ್ತಿದ್ದೇವೆ. ರೆಡ್ಡಿ ಸಹೋದರರ ₹35,000 ಕೋಟಿ ಹಗರಣದ ಬಗ್ಗೆ ಮಾತನಾಡಲು ಮರೆಯಬೇಡಿ. ಜೊತೆಗೆ ಯಡ್ಡಿ–ರೆಡ್ಡಿ ಜೋಡಿಯ ತಾರಾ ಆಟಗಾರರ ನೆರವಿನಿಂದ ನಿಮಗೆ ಕರ್ನಾಟಕದಲ್ಲಿ 60 ಸ್ಥಾನಗಳು ಮಾತ್ರವೇ ದೊರೆಯಲಿದೆ’ ಎಂದು ತಿವಿದರು.

ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಕುರಿತ ಮೋದಿ ಮಾತಿಗೆ, ‘ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ನಮ್ಮ ಹೆಮ್ಮೆ ಹಾಗೂ ಕರ್ನಾಟಕದ ಪುತ್ರ. ಅವರ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಸವಾಲು ಹಾಕಿದರು.

‘ಕನ್ನಡ ಧ್ವಜಕ್ಕೆ ನೀವು ಮಾನ್ಯತೆ ನೀಡುತ್ತೀರಾ?, ಬ್ಯಾಂಕಿಂಗ್ ನೇಮಕಾತಿ ನಿಯಮವನ್ನು ನೀವು ಬದಲಾಯಿಸಲು ಸಿದ್ಧರಿದ್ದೀರಾ, ಕರ್ನಾಟಕದಲ್ಲಿ ಬ್ಯಾಂಕಿಂಗ್ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲು ತಯಾರಿದ್ದೀರಾ?, ಬಿಇಎಂಎಲ್‌ನ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಿರಾ?,ಎಚ್‌ಎಎಲ್‌ನಿಂದ ರಫೇಲ್‌ ಯೋಜನೆ ತಪ್ಪಿಸಿರುವ ಅನ್ಯಾಯವನ್ನು ಸರಿಪಡಿಸಲು ತಯಾರಿದ್ದೀರಾ? ಪ್ರಶ್ನೆಗಳ ಪಟ್ಟಿ ಇನ್ನೂ ದೊಡ್ಡದಿದೆ. ಇವುಗಳ ಬಗ್ಗೆ ನೀವು ಕ್ರಮಕೈಗೊಳ್ಳಬೇಕೆಂದರೆ ನಿಮಗೆ ನಮ್ಮ ರಾಜ್ಯದ ಮೇಲೆ ಕಾಳಜಿ ಇರಬೇಕು. ಆದರೆ, ನೀವು ಯಾವುದೇ ಪರಿಸ್ಥಿತಿಯಲ್ಲೂ ಚುನಾವಣೆ ಗೆಲ್ಲಬೇಕು ಎಂಬುದಕ್ಕಷ್ಟೇ ಇಲ್ಲಿದ್ದೀರಿ’ ಎಂದು ಟ್ವೀಟ್ ಮಾಡಿದರು.

‘ಬಳ್ಳಾರಿ ಜನತೆಯನ್ನು ಕಾಂಗ್ರೆಸ್ ಅವಮಾನಿಸಿದೆ. ಇಲ್ಲಿನ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂಬ ಮೋದಿ ಹೇಳಿಕೆಗೂ ತಿರುಗೇಟು ನೀಡಿರುವ ಅವರು, ‘ಬಳ್ಳಾರಿಗೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ತಂದ ಮೈನಿಂಗ್‌ ಮಾಫಿಯಾದ ಕಿಂಗ್‌ಪಿನ್‌ ಜಿ.ಜನಾರ್ದನ ರೆಡ್ಡಿಯ ಸೋದರನ ಪರವಾಗಿ ಮತ ಯಾಚಿಸುತ್ತಿದ್ದೀರಿ ಮತ್ತು ಕಾಂಗ್ರೆಸ್‌ನಿಂದ ಬಳ್ಳಾರಿಗೆ ಅವಮಾನವಾಗಿದೆ ಎಂದು ಹೇಳುತ್ತಿದ್ದೀರಿ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು!’ ಎಂದು ಟ್ವೀಟಿಸಿದ್ದಾರೆ.

‘ಯೋಗಿ ರಾಜ್ಯ ಬಿಜೆಪಿಗೆ ಬೇಕಿದೆ’

ಉತ್ತರ ಪ್ರದೇಶದಲ್ಲಿ ಬಿರುಗಾಳಿಗೆ ಜನ ಮೃತಪಟ್ಟಿರುವ ಸಂದರ್ಭದಲ್ಲೇ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದಕ್ಕೆ ವ್ಯಂಗ್ಯವಾಡಿರುವ ಸಿದ್ದರಾಮಯ್ಯ, ‘ಉತ್ತರ ಪ್ರದೇಶದಲ್ಲಿ ಬಿರುಗಾಳಿಗೆ ಕನಿಷ್ಠ 64 ಜನ ಮೃತಪಟ್ಟಿದ್ದಾರೆ. ಆ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ, ನಿಮ್ಮ ಮುಖ್ಯಮಂತ್ರಿ ಕರ್ನಾಟಕ ಬಿಜೆಪಿಗೆ ಬೇಕಾಗಿದ್ದಾರೆ. ಅವರು ಶೀಘ್ರದಲ್ಲೇ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳುವರು’ ಎಂದು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry